I ಕಳೆದ ಇಪ್ಪತ್ತು ವರುಷದ I ನಿರಂತರ ಬರಹದ I ಹಾದಿಯ ಅಭಿವ್ಯಕ್ತಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕಳೆದ ಇಪ್ಪತ್ತು ವರುಷದ I ನಿರಂತರ ಬರಹದ I ಹಾದಿಯ ಅಭಿವ್ಯಕ್ತಿ I

ಓದುಗರ ಎದೆಚಿತ್ತಗಳಿಗೆ ಎನ್ನೊಳಗಿನ ಕನ್ನಡದ ಮನಸಿನ ಅನಂತ, ಅನಂತ ಕೃತಜ್ಞತೆಗಳನ್ನು ತಿಳಿಸ ಬಯಸುವೆ, ಹಾಗೆಯೇ ಪ್ರೋತ್ಸಾಹಿಸುವ ಹಿತ ಮನಸುಗಳಿಗೆ ಈ ಬರಹದ ನಮನಗಳನ್ನು ತಿಳಿಸುವೆ, ಹೀಗೊಂದು ಶಿರ ಬಾಗುವಿಕೆಯೊಂದಿಗೆ ತಮ್ಮೊಂದಿಗೆ ಒಂದಿಷ್ಟು ವಾಸ್ತವ ಸಂಗತಿಗಳನ್ನು ಇಲ್ಲಿ ತೆರೆದಿಡುತ್ತೇನೆ. ೨೦೦೫ರ ಸಾಲಿನಿಂದ ಸೂರ್ಯಗಗನ ಕನ್ನಡ ದಿನಪತ್ರಿಕೆಯ ಸಂಪಾದಕನಾಗಿ ಸುಧೀರ್ಘವಾಗಿ ಜನ ಜಗಲಿಯಲ್ಲಿ ಸುದ್ದಿ ಕೈಂಕರ್ಯದೊಂದಿಗೆ ಸಾವಿರಾರು ಲೇಖನಗಳನ್ನು ಬರೆದು ಬಿತ್ತರಿಸಿ ಸಮಾಜಮುಖಿಯಾಗಿ ಮುನ್ನಡೆದಿದ್ದು ಆತ್ಮತೃಪ್ತಿ ತಂದಿದೆ, ಆದರೆ ಬಲು ಆಚ್ಚರಿಯ ಸಂಗತಿ ಎಂದರೆ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಯನ್ನು ಯಾಕೆ ೪೮ ಪುಟಗಳ ಮಾಸಿಕ ಮ್ಯಾಗಜಿನ್ ಆಗಿ ಪರಿವರ್ತಿಸಿದಿಯಾ..?! ಎನ್ನುವ ಸಣ್ಣದೊಂದು ಮನುಷ್ಯ ಮಾತ್ರದ ದನಿ ಪತ್ರಿಕಾ ಸಹಾಯವನ್ನು ಪಡೆದ ಬಹುತೇಕರಿಂದ ಕೇಳಿ ಬರಲಿಲ್ಲ, ಆದರೆ ಇಲ್ಲಿಯು ಈ ಕುರಿತಂತೆ ಕಾಳಜಿ ಇರುವ ಪತ್ರಿಕಾ ಸ್ನೇಹಿತರು ಖುದ್ದು ಕಛೇರಿಗೆ ಬಂದು ಮಾತಾಡಿಸಿ ನಿಮ್ಮ ಬರಹಗಳನ್ನು ಎಂದಿಗೂ ನಿಲ್ಲಿಸದಿರಿ ಮಾಸಿಕ ಮ್ಯಾಗಜಿನ್ ಲೋಕದಲ್ಲಿ ಅತೀವ ಸಂಚಲನ ಹುಟ್ಟು ಹಾಕುತ್ತೀರಾ ಎನ್ನುವ ನಂಬುಗೆ ಇದೆ ಎಂದು ಅಭಿಪ್ರಾಯಿಸಿದಾಗ ಎನ್ನೊಳಗಿನ ಆತ್ಮಸ್ಥೆರ್ಯಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯ್ತು, ಹಾಗೂ ಎನಗೊತ್ತಿಲ್ಲದಂತೆ ಬಿಸಿಗಂಬನಿಗಳು ತುಂಬಿ ತೊಟ್ಟಿಕ್ಕಿಸಿತ್ತು,

ಹೌದು ವ್ಯಥಾ ಅನ್ಯರನ್ನು ಆರೋಪಿಸದೆ, ಈ ಕ್ಲಿಷ್ಟಕರ ಕವಲಿನಲಿ ನಡೆವ ಮನಸುಗಳ ನಡುವೆ ಯಾರು ಮಾಡದಿರುವ ಪತ್ರಿಕಾ ಸಾಧನೆಯನ್ನು ಮಾಡಿಯೇ ಬರೆಯುತ್ತಾರೆ ಗಾರಾ,ಶ್ರೀನಿವಾಸ್ ಎನ್ನುವ ಹೆಸರು ಶಾಶ್ವತಗೊಳಿಸುತ್ತಿದ್ದೇನೆ, ಇಂದಿಗೂ ಸಾವಿರಾರು ಸಾಮಾಜಿಕ ಮನಸುಗಳು, ಸಂಘಟನೆಗಳು ನಿರಂತರತೆಯಲ್ಲಿ ಪ್ರೋತ್ಸಾಹಿಸುತ್ತಿವೆ ಇದು ಇನ್ಯಾವ ಪತ್ರಕರ್ತನಿಗೂ ಸಿಗದೆ ಇರುವ ಮತ, ಪಂಥಗಳಿಲ್ಲದ ಪ್ರಜಾಶಕ್ತಿ ಎಂದೇ ಭಾವಿಸುವೆ,

ಇರಲಿ ಸಾಂದರ್ಭಿಕವಾಗಿ ಬದಲುಗೊಳಿಸಿದ್ದೇನೆ, ಅನಿವಾರ್ಯವಾದ ಕಾರಣಗಳಿಂದಾಗಿ ಹಾಗೂ ಮತ್ತೊಂದು ಬಗೆಯ ಬರಹಗಳಿಗಾಗಿ ಮಾಸಿಕ ಮ್ಯಾಗಜಿನ್ ಎನ್ನನ್ನು ಬರಪೂರವಾಗಿ ಆಹ್ವಾನಿಸಿದೆ, ಈ ಲೋಕದಲ್ಲಿ ನಾನು ನಿಮಿತ್ತನಷ್ಟೆ ಯಾವುದೋ ಅಗೋಚರ ಶಕ್ತಿಯೊಂದು ಇತ್ತಕಡೆ ಚಿತ್ತವರಿಸುವಂತೆ ಮಾಡಿದೆ, ಹೀಗಾಗಿ ಇದನ್ನು ಕ್ಷೀಣಸ್ಥಿತಿಯೋ..? ಕ್ಲಿಷ್ಟಕರ ಸಾಂದರ್ಭಿಕವೋ..? ಎಂದು ತರ್ಕಿಸದೇ ಮಾಸಿಕ ಮ್ಯಾಗಜಿನ್ ಲೋಕದಲ್ಲಿ ಹೊಸತೊಂದು ಇತಿಹಾಸ ಬರೆಯಲಿದ್ದೇನೆ ಎಂದಷ್ಟೆ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಈ ನಡುವೆ ಸೂರ್ಯಗಗನ.ಕಾಂ ಎನ್ನುವ ವಿನೂತನ ವೆಬ್‌ಸೈಟ್ ಆರಂಭಿಸಲಾದ ಕೆಲವೇ ದಿನಮಾನಗಳಲ್ಲಿ ಲಕ್ಷದ ಸಂಖ್ಯೆಯಲ್ಲಿ ಓದುಗರ ಸಂಖ್ಯೆಯನ್ನು ಸೃಷ್ಠಿಸಿಕೊಂಡಿದೆ, ಇದಕ್ಕೆ ವಿವಿಧ ಶೈಲಿಗಳಲ್ಲಿ ಅಭಿವ್ಯಕ್ತಿಸಲಾಗುತ್ತಿರುವ ಬರಹದ ಸಾಮರ್ಥ್ಯ ಎಂದೇ ಭಾವಿಸುವೆ,

ಹೀಗೆ ಹೇಳಿಕೊಂಡಿದ್ದೇನೆಂದು ಯಾರ ಅನುಕಂಪವೂ ನನ್ನ ಬರಹದ ಲೋಕಕ್ಕೆ ಅಗತ್ಯವಿಲ್ಲ, ಶಿವಮೊಗ್ಗದಂತಹ ಕೋಮುಮಿಶ್ರಿತ ಮನೋಭಾವದ ರಾಜಕೀಯದ ದುಪ್ಪಟದಲ್ಲಿ ಮನುಷ್ಯ ಮಾನವೀಯತೆಗಳು, ಮೌಲ್ಯಗಳು ಸಿಲುಕಿಕೊಂಡಿವೆ, ಬಕೆಟ್ ಹಿಡಿವ ಮನಸ್ಥಿತಿ, ಬ್ಯಾಲೆನ್ಸ್ ತುಲನೆಯಲ್ಲಿರುವ ಯಾವ ಕ್ಷೇತ್ರದಲ್ಲಿರುವವರು ಸಹ ಬೆಳೆದು ಬಿಡುವುದು, ಇಂತಹ ದಯನೀಯತೆಗಳು ನನ್ನ ಬದುಕಿನಲ್ಲಿ ಇಲ್ಲವಾಗಿದೆ, ಸ್ವಾಭಿಮಾನದಿ ಬರಹದ ಸುದ್ದಿ ಲೋಕದ ಸದ್ದುಗಳಿಗೆ ಸದಾ ಅಮರಿಕೊಂಡಿಯೇ ಅಭಿವ್ಯಕ್ತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ಮುಂದೆಯು ಬರಹಗಳು ಅಚಲವಾಗಿರುತ್ತದೆ,

ಮಾಸಿಕ ಮ್ಯಾಗಜಿನ್‌ನಲ್ಲಿಯು ಹೊಸತೊದು ಇತಿಹಾಸ ಬರೆದು ಅದನ್ನು ಇದೇ ಚಳುವಳಿಗಳ ನೆಲೆಯಿಂದಲೇ ಶಾಶ್ವತೀಕರಣಗೊಳಿಸುತ್ತೇನೆ. ಸಾಂವಿಧಾನಿಕವಾದ ನಡಿಗೆಗಳಿಗೆ ಬರಹದ ಜೀವದುಂಬಿ ನಾಗರೀಕ ಬದುಕುಗಳಲ್ಲಿ ಸಾಕ್ಷೀಕರಿಸುವುದು ಅದೆಷ್ಟು ಮನಸುಗಳು ಮಾಡುತ್ತಿವೆ ಎನ್ನುವುದು ಲೆಕ್ಕಾಚಾರಗಳಿಗೆ ಯಾರು ಕೂಡ ತೆರಳಲಾರರು..!? ಏನೇ ಆಗಲಿ ಇಲ್ಲಿಗೆ ಇಪ್ಪತ್ತು ವರುಷಗಳ ನಂತರ ದಿನವಹಿ ಪಯಣವನ್ನು ೪೮ ಪುಟಗಳ ವರ್ಣರಂಜಿತವಾದ ಮಾಸಿಕ ಮ್ಯಾಗಜಿನ್‌ನತ್ತ ಬದಲುಗೊಳಿಸಿದ್ದೇನೆ, ಮಲೆನಾಡಿನ ಮುಖೇನವೇ ಮಾಸಿಕ ಮ್ಯಾಗಜಿನ್ ಸುದ್ದಿ ಸಾಮ್ರಾಜ್ಯವನ್ನು ಅಗ್ರಮುಖಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಇದಕ್ಕಾಗಿ ಹಿತಮನಸುಗಳಾದ ನೀವುಗಳು ಈ ಮಾಸಿಕ ಮ್ಯಾಗಜಿನ್‌ನ ವಾರ್ಷಿಕ ಚೆಂದಾದಾರಿಕೆ ೧೦೦೦ ( ಒಂದು ಸಾವಿರ ರೂ ) ಪಡೆದು ಪ್ರೋತ್ಸಾಹಿಸಿ ಎಂಬುದಷ್ಟೇ ನನ್ನದೊಂದು ವಿನಂತಿಯಾಗಿದೆ. ಇದಲ್ಲದೆ ದಿನವಹಿ ವಿಭಿನ್ನ ಸುದ್ದಿದೌತಣಕ್ಕಾಗಿ ಸೂರ್ಯಗಗನ.ಕಾಂ ಸೇರಿದಂತೆ ವಿಮರ್ಶಾತ್ಮಕವಾದ ಹದಿನಾರು ಪುಟದ ಕ್ರೈಂ ಪಾಕ್ಷಿಕ ಇತ್ಯಾದಿ ರಾಜ್ಯದಾದ್ಯಂತ ಪ್ರಚುರದಲ್ಲಿದೆ,

ಈ ಅಭಿವ್ಯಕ್ತಿಯ ಕೊನೆತುದಿಯಲ್ಲಿ ಸಮಗ್ರ ಸಗಟಿನ ಸುದ್ದಿ ಜಗಲಿಯ ಪಯಣಕ್ಕೆ ನಿಮ್ಮಗಳ ಬರಪೂರ ಹಾರೈಕೆಗಳಿರಲಿ ಎನ್ನುವುದು ನನ್ನಯ ಅಂಬೋಣ.