I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I
ಶಿವಮೊಗ್ಗ: ನಗರದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವುದರ ಜತೆಗೆ, ಈಗಿರುವ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿ ಮಲೆನಾಡು ಕನ್ನಡ ಪಡೆಯ ಕಾರ್ಯಕರ್ತರು ಶನಿವಾರ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಜನಸಂಖ್ಯೆ ಹಾಗೂ ಸಾರ್ವಜನಿಕರ ಸಂಚಾರ ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರಾರು ಜನರು ವಿವಿಧ ಕೆಲಸಗಳಿಗಾಗಿ ನಗರಕ್ಕೆ ಬರುತ್ತಾರೆ. ಆದರೆ, ಅಗತ್ಯಕ್ಕೆ ತಕ್ಕಂತೆ ಸಾರ್ವಜನಿಕ ಶೌಚಾಲಯಗಳ ಸೌಲಭ್ಯ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಗಾಂಧಿ ಬಜಾರ್, ದುರ್ಗಿಗುಡಿ, ಕುವೆಂಪು ರಸ್ತೆ, ವಿನೋಬನಗರ, ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ಉದ್ಯಾನವನಗಳ ಬಳಿ ಶೌಚಾಲಯ ನಿರ್ಮಿಸಬೇಕು. ಶೌಚಾಲಯಗಳಲ್ಲಿ ನೀರು, ವಿದ್ಯುತ್, ಬೆಳಕು ಹಾಗೂ ಸ್ವಚ್ಛತಾ ಸಿಬ್ಬಂದಿಯ ವ್ಯವಸ್ಥೆ ಕಲ್ಪಿಸಬೇಕು. ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಸೌಲಭ್ಯ ಒದಗಿಸಬೇಕು. ಈಗಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಿ, ನಿರಂತರ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪಡೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶೃತಿ ಯು. ಶೇಟ್, ಮನೋಹರ್ ಮರಡಿ, ಅಶ್ವಿನಿ ಪಿ., ಪ್ರಮೋದ್, ಅನುಸೂಯ, ಸಂಧ್ಯಾ ಇದ್ದರು.