I ಬಂಗಾರಪ್ಪನವರ ಮನೆಯಲ್ಲಿ ನಾನು ಪೇಯ್ಡ್ ಸರ್ವೆಂಟ್ ಆಗಿರಲಿಲ್ಲ I ಹರತಾಳು ಹಾಲಪ್ಪ I
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮನೆಯಲ್ಲಿ ನಾನು ಎಂದಿಗೂ ಪೇಯ್ಡ್ ಸರ್ವೆಂಟ್ ಆಗಿ ಕೆಲಸ ಮಾಡಿಲ್ಲ. ರಾಜಕೀಯ ಕಾರ್ಯಕರ್ತನಾಗಿ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಅವರೊಂದಿಗೆ ಒಡನಾಟ ಹೊಂದಿದ್ದೆ. ಅವರಿಂದ ಎಂದಿಗೂ ಹಣ ಪಡೆದು ಕೆಲಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲೆಯ ಅಭಿವೃದ್ಧಿ, ವಿಮಾನ ನಿಲ್ದಾಣ ಹಾಗೂ ರಾಜಕೀಯ ವಿಚಾರಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿ, ಬಂಗಾರಪ್ಪ ಅವರ ಮನೆಯಲ್ಲಿ ಹಾಲಪ್ಪ ನೆಲ ಒರೆಸುವ ಕೆಲಸ ಮಾಡುತ್ತಿದ್ದ ಎಂದು ಹೇಳಿರುವುದು ಅವಿವೇಕದ ಮತ್ತು ತಿಳುವಳಿಕೆ ಇಲ್ಲದ ಹೇಳಿಕೆ ಎಂದು ಆಕ್ಷೇಪಿಸಿದರು.
ಕಾಲೇಜು ದಿನಗಳಿಂದಲೇ ಬಂಗಾರಪ್ಪ ಅವರ ಅಭಿಮಾನಿಯಾಗಿದ್ದೆ. 1985ರಲ್ಲಿ ಪದವಿ ಪೂರ್ಣಗೊಳಿಸುವ ವೇಳೆಗೆ ಕಾಲೇಜು ವಿದ್ಯಾರ್ಥಿ ನಾಯಕನಾಗಿದ್ದೆ. 1987ರಲ್ಲಿ ಸ್ವಂತವಾಗಿ ಮಾರುತಿ ಕಾರು ಖರೀದಿಸಿ ಬಂಗಾರಪ್ಪ ಅವರ ಮನೆಗೆ ಹೋಗುತ್ತಿದ್ದೆ. ರಾಜಕೀಯ ನಾಯಕನ ಮೇಲಿನ ಅಭಿಮಾನದಿಂದ ಅವರೊಂದಿಗೆ ಒಡನಾಟ ಹೊಂದಿದ್ದೆ. ಅವರ ಮನೆಯಲ್ಲಿ ಕೆಲಸಗಾರನಾಗಿ ಎಂದಿಗೂ ಇರಲಿಲ್ಲ. ಬಂಗಾರಪ್ಪ ಅವರಿಂದ ನನಗೆ ಯಾವುದೇ ಹಣ ಅಥವಾ ವೈಯಕ್ತಿಕ ಅನುಕೂಲ ಪಡೆದಿಲ್ಲ. ಬದಲಿಗೆ, ಅನೇಕ ಸಂದರ್ಭಗಳಲ್ಲಿ ಇತರರಿಗೆ ಹಣ ಕೊಡಿಸಲು ಮತ್ತು ಪಡೆದ ಹಣವನ್ನು ವಾಪಸ್ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದರು.
ನಾವು ಮುಳುಗಡೆ ಸಂತ್ರಸ್ತ ಕುಟುಂಬದಿಂದ ಬಂದವರು. ಆರಂಭದಲ್ಲಿ ಉಪ್ಪಳ್ಳಿಯ ಗಣೇಶರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿದ್ದೇನೆ. ಕಾಲೇಜಿಗೆ ಹೋಗುವಾಗಲೂ ಕೆಲಸ ಮಾಡುತ್ತಿದ್ದೆ. ಅಂದು ದಿನಕ್ಕೆ ₹3 ಕೂಲಿ ಪಡೆಯುತ್ತಿದ್ದೆ. ಆದರೆ ಬಂಗಾರಪ್ಪ ಅವರ ಮನೆಯಲ್ಲಿ ಪೇಯ್ಡ್ ಸರ್ವೆಂಟ್ ಆಗಿದ್ದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರ ನಡುವಿನ ವ್ಯತ್ಯಾಸವನ್ನೂ ತಿಳಿಯದೆ ಮಾತನಾಡುವುದು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಬಂಗಾರಪ್ಪ ಅವರ ರಾಜಕೀಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಅವರ ನ್ಯಾಯಾಲಯದ ಪ್ರಕರಣಗಳ ಸಂದರ್ಭದಲ್ಲಿಯೂ ಹಲವು ಬಾರಿ ಅವರೊಂದಿಗೆ ತೆರಳಿದ್ದೇನೆ. ಪ್ರಕರಣಗಳಿಗಾಗಿ ವರ್ಷಗಟ್ಟಲೆ ಓಡಾಡಿದ್ದೇನೆ. ಆದರೆ ಸಚಿವ ಮಧು ಬಂಗಾರಪ್ಪ ಅವರು ಎಷ್ಟು ಬಾರಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂಬುದನ್ನು ತಿಳಿಸಲಿ. ನನ್ನ ವಿರುದ್ಧದ ಪ್ರಕರಣವೊಂದರಲ್ಲಿ ದೂರುದಾರರಿಗೆ ಬಂಗಾರಪ್ಪ ಮನೆಯಿಂದ 192 ಬಾರಿ ಕರೆ ಮಾಡಿರುವ ದೂರವಾಣಿ ದಾಖಲೆಗಳಿವೆ ಎಂದು ಹೇಳಿದರು.
ಬಂಗಾರಪ್ಪ ಅವರ ಕುಟುಂಬದೊಂದಿಗೆ ಹಣಕಾಸಿನ ವ್ಯವಹಾರಗಳೂ ನಡೆದಿದ್ದವು. ತಮಗೆ ಬರಬೇಕಿದ್ದ ಹಣವನ್ನು ಮಧು ಬಂಗಾರಪ್ಪ ಅವರು ಹಿಂದಿರುಗಿಸಿದ್ದರು. ಇದನ್ನು ಮರೆಮಾಚಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ಬಂಗಾರಪ್ಪ ಅವರ ಜನ್ಮದಿನವನ್ನು ಪ್ರತಿ ವರ್ಷ ಸ್ನೇಹಿತರೊಂದಿಗೆ ಆಚರಿಸುತ್ತಿದ್ದು, ಇದಕ್ಕೆ ಹಲವು ವರ್ಷಗಳ ಹಿಂದಿನ ಛಾಯಾಚಿತ್ರಗಳೇ ಸಾಕ್ಷಿ. ರಾಜಕೀಯ ಪಕ್ಷದಲ್ಲಿದ್ದರೂ ಬಂಗಾರಪ್ಪ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಅವರ ಬಗ್ಗೆ ಗೌರವ ಮತ್ತು ಅಭಿಮಾನ ಹೊಂದಿರುವುದನ್ನು ಯಾರಿಂದಲೂ ಕಲಿಯಬೇಕಿಲ್ಲ. ಸಚಿವರು ತಮ್ಮ ರಾಜಕೀಯ ಹಿನ್ನೆಲೆ ಮತ್ತು ಹೋರಾಟದ ಬಗ್ಗೆ ಮಾತನಾಡುವ ಮೊದಲು ತಮ್ಮ ಹಿಂದಿನ ಇತಿಹಾಸವನ್ನು ಅರಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಈಗ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಕಾಲ ಬಂದಿದೆ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಹೋರಾಟದ ರಾಜಕಾರಣಕ್ಕೆ ಮಹತ್ವವಿತ್ತು. ಯಡಿಯೂರಪ್ಪ ಅವರ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಿತು. ಈಗಿನ ಶಾಸಕರು ಮತ್ತು ಸಚಿವರು ವೈಯಕ್ತಿಕ ಟೀಕೆಗಳನ್ನು ಬದಿಗಿಟ್ಟು ಜಿಲ್ಲೆಯ ಅಭಿವೃದ್ಧಿ, ವಿಮಾನಯಾನ ಸೇವೆ ಸೇರಿದಂತೆ ಜನರ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಸಚಿವರಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ವೈಯಕ್ತಿಕ ಟೀಕೆಗಳಿಗೆ ಇಳಿಯುವುದು ಸರಿಯಲ್ಲ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಟಿ. ಡಿ. ಮೇಘರಾಜ್, ಪ್ರಶಾಂತ್ ಕುಗ್ವೆ, ದರ್ಶನ್,ಪೆರಿಮಳ್, ರವಿಕುಮಾರ್, ಕೇಶವ್, ಅರುಣ್ ಕುಗ್ವೆ, ಚಂದ್ರಶೇಖರ್, ಶರತ್ ಕಲ್ಯಾಣಿ, ದಿನೇಶ್ ಆಚಾರ್ಯ ಇದ್ದರು.