September 22, 2026

I ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಆದ್ಯತೆ I ಎಂ.ಎಸ್.ಸಂತೋಷ್ I

0
09-03-2026 women day news 2

I ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಆದ್ಯತೆ I ಎಂ.ಎಸ್.ಸಂತೋಷ್ I

ಶಿವಮೊಗ್ಗ: ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಹೆಚ್ಚಿನ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ಅಂಚೆ ಅಧಿಕಾರಿಗಳ ಸಂಘದ ಸಿ ಗ್ರೂಪ್ ನೌಕರರು ಮತ್ತು ವಿವಿಧ ಸಂಘಗಳ ವತಿಯಿಂದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ತಮಗೆ ಆದಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಅತ್ಯಂತ ಸರಳವಾಗಿ ಇರುವ ಕಾನೂನು ವಿಚಾರಗಳನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ನೌಕರರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಏನಾದರೂ ಲೈಂಗಿಕ ಕಿರುಕುಳ ಕಂಡು ಬಂದರೆ ಹೇಗೆ ದೂರು ನೀಡಬೇಕು ಮತ್ತು ದೂರು ನೀಡುವಾಗ ಯಾವ ಸಂಗತಿಗಳನ್ನು ಪರಿಗಣಿಸಬೇಕು ಎಂಬುದರ ಬಗ್ಗೆ ಮಾಹಿತಿ ಹೊಂದಿರಬೇಕು. ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಅಲ್ಲಿನ ಮುಖ್ಯಸ್ಥರು ಅಥವಾ ಸಹೋದ್ಯೋಗಿಗಳು ಏನಾದರೂ ಲೈಂಗಿಕ ಕಿರುಕುಳ ನೀಡಿದರೆ ಕಿರುಕುಳಕ್ಕೆ ಒಳಪಟ್ಟ ಮಹಿಳೆಯು ಕಡ್ಡಾಯವಾಗಿ ಬರವಣಿಗೆಯಲ್ಲಿ ದೂರು ನೀಡಬೇಕಾಗುತ್ತದೆ ಎಂದು ಹೇಳಿದರು.

ಆಂತರಿಕ ದೂರು ಸಮಿತಿಗೆ ವಿಚಾರಣೆ ನಡೆಸುವ ಅಧಿಕಾರವಿದೆ. ಮುಂದಿನ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರವು ಈ ಆಂತರಿಕ ದೂರು ಸಮಿತಿಗೆ ಇರುವುದರಿಂದ ಸಮಸ್ಯೆಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಭಾರತ್ ನ್ಯಾಯ ಸಮಿತಿ ಮತ್ತು ಪೋಕ್ಸೋ ಕಾಯ್ದೆಯ ಸಂಪೂರ್ಣ ವಿವರಗಳನ್ನು ತಿಳಿಸಿದರು. ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿಯಂತ್ರಣ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಮಹಿಳೆಯರು ಸಮಾಜದ ಎಲ್ಲ ರಂಗಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಅಂಚೆ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ನೌಕರರಿದ್ದಾರೆ ಎಂದರು.
ಅಖಿಲ ಭಾರತ ಅಂಚೆ ಅಧಿಕಾರಿಗಳ ಸಂಘದ ರೂಪಾ, ಕ್ರಿಸ್ಟಿನಾ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!