I ಸಂಘ-ಸಂಸ್ಥೆಗಳು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲು I ಸಮಾಜಮುಖಿ ಕಾರ್ಯಕ್ರಮಗಳೇ ಕಾರಣ I ಅಧ್ಯಕ್ಷೆ ಗೌರಿ ಶ್ರೀನಾಥ್ I
ಶಿವಮೊಗ್ಗ:ಯಾವುದೇ ಸಂಘ-ಸಂಸ್ಥೆಗಳು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲು ಮತ್ತು ಸಾರ್ಥಕ ಎನಿಸಿಕೊಳ್ಳಲು ಸಮಾಜಮುಖಿ ಕಾರ್ಯಕ್ರಮಗಳೇ ಕಾರಣ ಎಂದು ವಾಸವಿ ಮಹಿಳಾ ಸಂಘದ ನೂತನ ಅಧ್ಯಕ್ಷೆ ಗೌರಿ ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಮೊಗ್ಗ ವಾಸವಿ ಮಹಿಳಾ ಸಂಘದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಸಂಘಟನೆ ಮತ್ತು ಮಹಿಳೆಯರಿಗಾಗಿ ಸರ್ಕಾರಗಳು ಅನೇಕ ಯೋಜನೆಗಳು ರೂಪುಗೊಳಿಸಿದ್ದು, ವಿವಿಧ ಯೋಜನೆಗಳ ಮೂಲಕ ಅದರ ಲಾಭವನ್ನು ನಮ್ಮ ವಾಸವಿ ಮಹಿಳೆಯರು ಸಹ ಪಡೆದುಕೊಳ್ಳಬೇಕೆಂದು ಹೇಳಿದರು. ಅದರಂತೆ, ವಾಸವಿ ಮಹಿಳಾ ಸಂಘಟನೆ ವತಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪುವಂತಹ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದರು.
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೇತ್ರದಾನ ಕಾರ್ಯಕ್ರಮ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ದಾರಿಯಾಗುವ ನಿರೀಕ್ಷೆ ಸಹ ಇಟ್ಟುಕೊಳ್ಳಲಾಗಿದ್ದು, ಇದಕ್ಕೆ ನಮ್ಮ ಆರ್ಯವೈಶ್ಯ ಸಮಾಜದವರೆಲ್ಲರ ಸಹಕಾರದಿಂದ ಕಾರ್ಯಕ್ರಮ ಯೋಜಿಸಲಾಗುವುದು ಎಂದರು. ಈಗಾಗಲೇ ಕೇಂದ್ರ ಸರ್ಕಾರದಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ನಾರಿ ಶಕ್ತಿ ಮೂಲಕ ದೇಶದ ಮಹಿಳೆಯರ ಅಭ್ಯುದಯಕ್ಕೆ ನಾಂದಿ ಹಾಡಿದ್ದು, ಇದೇ ದಿಕ್ಕಿನಲ್ಲಿ ನಾವು ಕೂಡ ಸಾಗುವ ವಾಗ್ದಾನ ಮಾಡಿದರಲ್ಲದೇ, ಮುಂದಿನ ದಿನಗಳಲ್ಲಿ ಶಿವಮೊಗ್ಗದ ಆರ್ಯವೈಶ್ಯ ಮಹಿಳೆಯರಿಗೆ ಮಡಲಕ್ಕಿ ತುಂಬುವ ವಿನೂತನ ಯೋಜನೆ ಸಹ ರೂಪಿಸಲಾಗಿದೆ ಎಂದರು. ಅಲ್ಲದೇ, ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ದಿನಗಳಲ್ಲಿ ವಿಶೇಷ ಪೂಜೆಗಳ ಮೂಲಕ ನಾಡಿಗಾಗಿ ಪ್ರಾರ್ಥಿಸಿ, ಸರ್ವರಿಗೂ ಒಳಿತಾಗುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳುವುದಾಗಿ ಹೇಳಿದರು. ಇದೇವೇಳೆ ಅವರು, ವಾಸವಿ ಮಹಿಳಾ ಸಂಘ ಶಿವಮೊಗ್ಗದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದು, ಇದನ್ನು ಮುನ್ನಡೆಸುವ ನಿಟ್ಟಿನಲ್ಲಿ ಆರ್ಯವೈಶ್ಯ ಸಮಾಜ ಬಂಧುಗಳ ಬೆಂಬಲ, ಪ್ರೋತ್ಸಾಹಕ್ಕೆ ಮನವಿ ಮಾಡಿಕೊಂಡರು.
ಇದಕ್ಕೂ ಮುನ್ನ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅರುಣ್ ಮಾತನಾಡಿ, ಕಳೆದ ವರ್ಷ ಪೂರ್ತಿ ತಮ್ಮ ಅಧಿಕಾರವಧಿಯಲ್ಲಿ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ವರ್ಷಪೂರ್ತಿ ಉತ್ತಮ ಕಾರ್ಯಕ್ರಮ ನಡೆಸಲು ಸಹಕರಿಸಿದ್ದಕ್ಕಾಗಿ ಸರ್ವರನ್ನೂ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಅಂಗಸಂಸ್ಥೆ ಹಾಗೂ ಸಂಘ-ಸಂಸ್ಥೆಗಳ ಮಹಿಳೆಯರು ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಗೆ ಗೌರವ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರದ ಕನ್ಯಕಾ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕಿ ದೀಪ್ತಿ ಚೇತನ್, ಬಹುಮಾನ ವಿತರಕರಾಗಿ ಆಶಾ ರಾಜಶೇಖರ್ ಪಾಲ್ಗೊಂಡಿದ್ದರು. ವಾಸವಿ ಮಹಿಳಾ ಸಂಘದ ನೂತನ ಕಾರ್ಯದರ್ಶಿ ಸುನಿತಾ ಚೇತನ್, ಉಪಾಧ್ಯಕ್ಷರಾದ ಸುಮಾ ಗುರುನಾಥ್, ನಮ್ರತಾ ಪ್ರಶಾಂತ್, ಸಹ ಕಾರ್ಯದರ್ಶಿ ಸೌಮ್ಯ ರವಿ, ಖಜಾಂಚಿ ರಚಿತಾ ಚೇತನ್ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

