I ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ I ₹1 ಕೋಟಿ ವಿಮಾ ಪರಿಹಾರ ವಿತರಣೆ I
ಶಿವಮೊಗ್ಗ: ರಾಜ್ಯ ಮೀಸಲು ಪೊಲೀಸ್ (KSRP) 8ನೇ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅಕಾಲಿಕ ನಿಧನರಾದ ಪೇದೆ ಚಂದ್ರಶೇಖರ್ ಎಲ್. ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ವತಿಯಿಂದ ₹1 ಕೋಟಿ ಮೊತ್ತದ ಅಪಘಾತ ವಿಮಾ ಪರಿಹಾರದ ಚೆಕ್ ಅನ್ನು ಶನಿವಾರ ಹಸ್ತಾಂತರಿಸಲಾಯಿತು.
ಘಟನೆಯ ಹಿನ್ನೆಲೆ: ಕೆ.ಎಸ್.ಆರ್.ಪಿ 8ನೇ ಪಡೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್ ಅವರು ಭದ್ರಾ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಮೃತರ ಬ್ಯಾಂಕ್ ಖಾತೆಯು ಭಾರತೀಯ ಸ್ಟೇಟ್ ಬ್ಯಾಂಕ್ ವೇತನ ಪ್ಯಾಕೇಜ್ ಅಡಿಯಲ್ಲಿ ಇದ್ದುದರಿಂದ, ಬ್ಯಾಂಕ್ ವಿಶೇಷ ವಿಮಾ ಯೋಜನೆಯಡಿ ಅವರ ಕುಟುಂಬಕ್ಕೆ ಈ ವಿಮಾ ಸೌಲಭ್ಯ ಲಭ್ಯವಾಗಿದೆ.
ಚೆಕ್ ಹಸ್ತಾಂತರ : ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳೂರು ಆಡಳಿತ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಮೋಹನ ಮುಚ್ಚರ್ಲ ಮತ್ತು ಶಿವಮೊಗ್ಗದ ಪ್ರಾದೇಶಿಕ ವ್ಯವಸ್ಥಾಪಕರಾದ ವಿಜಯ ಸಾಯಿ ಮಾಡುಗುಲ ಅವರು ಮೃತರ ಕುಟುಂಬದ ಸದಸ್ಯರಿಗೆ ₹1 ಕೋಟಿ ಮೊತ್ತದ ವಿಮಾ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಕೆ.ಎಸ್.ಆರ್.ಪಿ 8ನೇ ಪಡೆಯ ಕಮಾಂಡೆಂಟ್ ಎಸ್. ಯುವಕುಮಾರ್, ಎಸ್.ಬಿ.ಐ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಪುಷ್ಪಲತಾ ಕೆ, ಪ್ರಕಾಶ್ ಕುಮಾರ್, ಶಶಿಕುಮಾರ್, ಪ್ರದೀಪ್ ಕುಮಾರ್ ಹಾಗೂ ಕೆ.ಎಸ್.ಆರ್.ಪಿ 8ನೇ ಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

