I ರಾಷ್ಟ್ರ ಭಕ್ತ ಬಳಗದಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ I ಮನೆಮನೆ ಭೇಟಿ I ಕೆ. ಎಸ್. ಈಶ್ವರಪ್ಪ I
ಶಿವಮೊಗ್ಗ: ಚುನಾವಣಾ ಆಯೋಗ ಮತದಾನದ ಹಕ್ಕು ಅರ್ಹರಿಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತಪಟ್ಟವರು ಹಾಗೂ ವಲಸೆ ಹೋದವರ ಹೆಸರುಗಳನ್ನು ಹೊರತುಪಡಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ ಎಂದರು. ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ 297 ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗಿದೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಹೆಸರುಗಳು ಹಾಗೂ ವ್ಯತ್ಯಾಸಗಳನ್ನು ಸರಿಪಡಿಸಲು ಸಹಕರಿಸಲಿದ್ದಾರೆ. ಮುಂದಿನ 10 ದಿನಗಳಲ್ಲಿ 2ಲಕ್ಷಕ್ಕೂ ಹೆಚ್ಚು ಮತದಾರರನ್ನು ಕಾರ್ಯಕರ್ತರು ತಲುಪಲಿದ್ದಾರೆ ಎಂದು ತಿಳಿಸಿದರು.
ಪರಿಷ್ಕರಣೆ ವೇಳೆ ಯಾವುದೇ ಸಮಸ್ಯೆ ಕಂಡುಬಂದರೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೂಲಕ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದರು.
ರಾಜ್ಯ ಸರ್ಕಾರ ಪಿಆರ್ ಸಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಿಆರ್ಸಿ ನೀಡುವುದು ಸೂಕ್ತವಲ್ಲ. ಹಿಂದಿನ ಚುನಾವಣೆಗಳಲ್ಲಿ ಮತದಾರರು ಇದ್ದರೆ ಬೇರೆ ಕಡೆಯಿಂದ ದಾಖಲೆ ನೀಡುವ ವ್ಯವಸ್ಥೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು, ಮತದಾನದ ಹಕ್ಕಿನ ದುರುಪಯೋಗಕ್ಕೆ ಅವಕಾಶ ನೀಡಬಾರದು. ಕೆಲವರು ಷಡ್ಯಂತ್ರ ನಡೆಸುವ ಸಾಧ್ಯತೆಯಿದ್ದು, ಈ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಈ. ವಿಶ್ವಾಸ್, ರಾಜು, ಕಾಚಿನಕಟ್ಟೆ ಸತ್ಯಣ್ಣ, ಮಂಜುನಾಥ, ಕುಬೇರ ಇದ್ದರು.
I ‘ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಪ್ರಕರಣ ದಾಖಲಿಸಿ’ I ಕೆ.ಎಸ್. ಈಶ್ವರಪ್ಪI
ಶಿವಮೊಗ್ಗ: ‘ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಗಳಿಗೆ ಹೋಗುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನೀಡಿರುವ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅಯೋಗ್ಯರ ಕೈಯಲ್ಲಿ ಉನ್ನತ ಶಿಕ್ಷಣ ಖಾತೆ ಸಿಕ್ಕಿದೆ. ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ರಾಯರಡ್ಡಿ ಹೇಳಿದ್ದಾರೆ. ಇವರಿಗೆ ಮಠ-ಮಂದಿರಗಳಿಗೆ ಹೋಗುವಂತೆ ಹೇಳಿದವರು ಯಾರು? ಹಿಂದೂ ಧರ್ಮದ ಬಗ್ಗೆ ಇವರಿಗೆ ಗೊತ್ತಿದೆಯೇ?’ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂತಹ ಧರ್ಮದ ಬಗ್ಗೆ ಟೀಕೆ ಮಾಡುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು ಎಂದು ಈಶ್ವರಪ್ಪ ಪ್ರಶ್ನಿಸಿದರು. ‘ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸಬೇಡಿ’ ಎಂದು ಎಚ್ಚರಿಕೆ ನೀಡಿದರು.
ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಬಸವರಾಜ ರಾಯರಡ್ಡಿ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.