I ಕಾಂಗ್ರೆಸ್ ಪಕ್ಷದ I ಸಂಘಟಿತ ವೃದ್ದಿಗೆ I ಎಂ.ಶ್ರೀಕಾಂತ್ ಜಿಲ್ಲಾಧ್ಯಕ್ಷರಾಗಲಿ I ಬಹುತೇಕರ ಅಭಿಮತ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕಾಂಗ್ರೆಸ್ ಪಕ್ಷದ I ಸಂಘಟಿತ ವೃದ್ದಿಗೆ I ಎಂ.ಶ್ರೀಕಾಂತ್ ಜಿಲ್ಲಾಧ್ಯಕ್ಷರಾಗಲಿ I ಬಹುತೇಕರ ಅಭಿಮತ I
ಈ ಹೊತ್ತಿನ ರಾಜ್ಯ ರಾಜಕೀಯದಲ್ಲಿ ಯಾವ ತತ್ವ ಸಿದ್ದಾಂತಗಳು ಉಳಿದಿಲ್ಲ, ಕೇವಲ ರಾಜಕೀಯ ಸ್ಥಿತ್ಯಂತರಗಳ ಅಂದಣದ ಮಜಲಿನಲಿ ಸಾಗಿರುವುದು ಇದೀಗ ನಾಗರೀಕ ವಲಯದಲ್ಲಿ ಚರ್ಚಿತವಾಗುತ್ತಿರುವ ಸಂಗತಿಯಾಗಿದೆ, ಹೀಗಾಗಿ ಬಿಜೆಪಿ ಆಗಿರಬಹುದು, ಕಾಂಗ್ರೆಸ್, ಜೆಡಿಎಸ್ ಪಕ್ಷವೇ ಆಗಿರಬಹುದು ಆಯಾ ಕಾಲಘಟ್ಟದ ಸಾಂದರ್ಭಿಕತೆಗೆ ತಕ್ಕಂತೆ ತನ್ನ ನಿಲುವುಗಳನ್ನು ಹೊಂದಿರುತ್ತದೆ. ಇಂತಹ ಅಸಲಿ ವಿದ್ಯಮಾನಗಳನ್ನು ನಾಯಕತ್ವದ ಪರೀಧಿಯಲ್ಲಿದ್ದರವರು ಅರಿತುಕೊಳ್ಳಬೇಕಾದ ಜರೂರತ್ತಿದೆ, ಜಾತ್ಯಾತೀತವಾದ ಪ್ರಗತಿಪರ ತಳಹದಿಗಳು ಒಮ್ಮೊಮ್ಮೆ ಒಂದೇ ಧರ್ಮದ ಬಲಪಂಥೀಯ ಮೆರಗಿನ ಅಜೆಂಡಾಗಳಲ್ಲಿ ತೂರಿಕೊಂಡಿರುವುದು, ಬಲಪಂಥೀಯ ವಾದಗಳು ಜಾತ್ಯಾತೀತ ನಿಲುವುಗಳಲ್ಲಿ ಸಮಾಗಮವಾಗಿರುವ ಜೀವಂತ ಉದಾಹರಣೆಗಳತ್ತ ಚಿತ್ತವರಿಸಿದರೆ ಮಾತ್ರವೇ ರಾಜಕೀಯ ರಂಗದಲ್ಲಿ ಒಂದಿಷ್ಟು ಯಶಸ್ಸು ಸಾಧಿಸಲು ಸಾಧ್ಯವೆನ್ನುವ ಈ ಟಿಪ್ಪಣಿಯೊಂದಿಗೆ ಮೇಲಿನ ತಲೆಬರಹದ ಲಗತ್ತಿನಂತೆ ಮುಂದಿನ ವಾಸ್ತವವನ್ನು ವಿಸ್ತೃತಗೊಳಿಸುತ್ತಿದ್ದೇನೆ.
ನೋಡಿ ಶಿವಮೊಗ್ಗದ ನೆಲೆ ಅನೇಕ ಹೋರಾಟಗಳು ಅರಳಿಸಿದ ಮಲೆನಾಡಿನ ಹೆಬ್ಬಾಗಿಲು, ಸಮಾಜವಾದ, ರೈತ, ದಲಿತ, ಸಾಂಸ್ಕೃತಿಕ ಚಳುವಳಿಗಳು ಕಟ್ಟಿ ಮುನ್ನುಡಿ ಬರೆದ ಊರು, ಇತ್ತೀಚೆಗೆ ಹಳೆಬೇರು ತೆರೆಯ ಮರೆಗೆ ಸರಿದಂತೆ ಹೊಸಬೇರುಗಳು ತನ್ನ ವೃದ್ದಿಗಾಗಿ ಕಪಟ ಮಾನಸೀಕತೆಯನ್ನು ಬಿತ್ತು ಹಳಬರ ಹೆಜ್ಜೆ ಗುರುತುಗಳಿಗೆ ಕಪ್ಪು ಮಾರ್ಕ್ ತಂದೊಡ್ಡಿದೆ, ಇಂತಿವ ನಿಜ ವ್ಯಾದಿಗಳನ್ನು ಅರಿಯದೇ ಜೆಡಿಎಸ್ ಪಕ್ಷದಲ್ಲಿದ್ದು ಸೋಲಿನ ಸರಪಳಿಯಲ್ಲಿದ್ದರೂ ಪಕ್ಷಾತೀತವಾಗಿ ಮಾತೃ ಹೃದಯ ಮೆರೆದ ಎಂ.ಶ್ರೀಕಾಂತ್ ಮಾಜೀ ಪ್ರಧಾನಮಂತ್ರಿ ಹೆಚ್.ಡಿ ದೇವೆಗೌಡರ ಮಾನಸ ಪುತ್ರರಾಗಿಯೇ ಬಿಂಬಿತವಾಗಿದ್ದರು. ಇಲ್ಲೇನೋ ರಾಜಕೀಯವಾಗಿರುವ ಗೌರವಕ್ಕೆ ದಕ್ಕೆಯಾಗಿರಲಿಲ್ಲ, ಬದಲಿಗೆ ಎಲ್ಲಾ ರೀತಿಯ ಪೊಲೀಟಿಕಲ್ ಸ್ವತಂತ್ರತೆ ಇತ್ತು, ಆದರೆ ಶಿವಮೊಗ್ಗದ ಬದಲುಗೊಳ್ಳುವ ರಾಜಕೀಯ ದಾಟಿ, ದಾಳಗಳರಿಯದ ಮುಗ್ಧತೆಯ ಜೀವಪರ ನಿಲುವುಳ್ಳ ಎಂ.ಶ್ರೀಕಾಂತ್‌ರವರಿಗೆ ಕಳೆದ ಐದು ವರುಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಮಾಡಿದ ಎಲ್ಲಾ ಪ್ರಯತ್ನಗಳಲ್ಲಿ ಮೊದಲಿಗೆ ಆರ್.ಎಂ.ಮಂಜುನಾಥ್ ಗೌಡ್ರು, ಎನ್.ರಮೇಶ್, ದಿನೇಶ್, ಆಯನೂರು ಮಂಜುನಾಥ್, ಮಧು ಬಂಗಾರಪ್ಪ ಸೇರಿದಂತೆ ಇತರರು ಪಕ್ಷಾಂತರಕ್ಕೆ ಮನ ಒಲಿಸುವಲ್ಲಿ ಯಶಸ್ವಿಯಾಗಿ ಅದರಂತೆ ಬೆಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಎಂ.ಶ್ರೀಕಾಂತ್ ಸೇರ್ಪಡೆಗೊಂಡರು.
ಅವರಿಗೆ ರಾಜಕೀಯವಾಗಿ ಜೆಡಿಎಸ್‌ನಲ್ಲಿ ಬೆಳೆವುದಕ್ಕೆ ಶಿವಮೊಗ್ಗದಲ್ಲಿ ಸಾಧ್ಯವಿಲ್ಲ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಇಲ್ಲಿ ಅಲ್ಪಸಂಖ್ಯಾತ ವರ್ಗದವರ ಬೆಂಬಲ ಇರುತ್ತದೆ, ಜೊತೆಗೆ ಸಾರ್ವತ್ರಿಕ ಕಾಂಗ್ರೆಸ್ ಬೆಂಬಲಿತ ನಾಗರೀಕ ಸಮೂಹವಿದೆ, ನೀವು ೨೦೦೨ ರಿಂದ ೨೦೨೪ರವರೆಗೆ ಸತತ ೨೨ ವರುಷ ಜೆಡಿಎಸ್‌ನಲ್ಲಿದ್ರಿ, ಎರಡು ಭಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೂ ತಮಗೆ ಯಾವ ನಿಗಮ ಮಂಡಳಿಗಳ ಸ್ಥಾನಕ್ಕೂ ಗುರುತಿಸಲಿಲ್ಲ, ಎಂಎಲ್‌ಸಿ ಆಯ್ಕೆಯಲ್ಲೂ ಪರಿಗಣಿಸಲಿಲ್ಲ, ಇನ್ನೂ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮುಗಿದ ಅಧ್ಯಾಯವಾಗಿದ್ದು ಬನ್ನಿ ಕಾಂಗ್ರೆಸ್ ಪಕ್ಷಕ್ಕೆ ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದಿದ್ದು, ಹೇಳಿದ್ದು ಬಹಳಷ್ಟು, ಇಂತಹ ದುರೀಣದ ಮಹನೀಯರ ಮಾತು ನಂಬಿ ಮಾಜೀ ಪ್ರಧಾನಮಂತ್ರಿ ಹೆಚ್.ಡಿ ದೇವೆಗೌಡರ ಮಡಿಲಿನಿಂದ ಹೊರ ಬಂದ ಕೂಸಿನಂತೆ ಎಂ.ಶ್ರೀಕಾಂತ್ ಕಾಂಗ್ರೆಸ್ ಸೂರಿನತ್ತ ಬಂದರು, ಇದಕ್ಕೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರು ಸಹ ಇವರ ಆಗಮನಕ್ಕೆ ಸ್ವಾಗತಿಸಿ ಇಲ್ಲಿ ಸ್ಥಾನ-ಮಾನಗಳು ನೀಡುವುದಾಗಿ ಭರವಸೆ ಇತ್ತಿದ್ದರು.
ಆದರೆ ಏನಾಯ್ತು..? ಶಿವಮೊಗ್ಗ ಕಾಂಗ್ರೆಸ್ ಪಕ್ಷದಲ್ಲಿ ಎಂ.ಶ್ರೀಕಾಂತ್‌ರವರಂತಹ ಸೇವೋನ್ಮುಖಿ ಮನಸು ಅವರು ಈ ಮಲೆನಾಡಿಗೆ ನೀಡಿದ ಸೇವಾ ಕೊಡುಗೆಗಳು ಅನನ್ಯ, ಯಾರು ಕೂಡ ಊಹಿಸಲಾಗದ ಪಕ್ಷಾತೀತ ನಿಲುವಿನಲ್ಲಿ ಜನಸಾಮಾನ್ಯರ ಸಂಪರ್ಕದಲ್ಲಿ ಇಂದಿಗೂ ಇದ್ದಾರೆ, ಅಚ್ಚರಿ ಎಂದರೆ ಯಾರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯಿಸಿದ್ದರೋ ಅವರೆಲ್ಲಾ ಇತ್ತಲ ಕಡೆ ನಿಂತಿದ್ದಾರೆ, ತಮಗೆ ಏನು ಲಾಭವಿದಿಯೋ.. ಅದಷ್ಟೆ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ, ಇನ್ನೂ ದೊ-ಕ್ಲಾಸ್ ವೈಟ್ ಕಾಲರ್‌ಗಳು, ತತ್ಕಾಲ್ ಪೊಲೀಟಿಕಲ್ ಹಿಂಬಾಲಕರು ಅಗ್ರಮುಖಿಗೆ ಬಂದು ಎಂ.ಶ್ರೀಕಾಂತ್ ಪರ ಮಾತಾಡುವಲ್ಲಿ ತಮ್ಮ ನೈತಿಕ ಸ್ಥೆರ್ಯ ಕಳೆದುಕೊಂಡು ಹೋಟೆಲ್‌ಗಳಲ್ಲಿ, ಅನ್ಯ ಸ್ಥಳಗಳಲ್ಲಿ ಯಾರಿಗೂ ತಿಳಿಯದಂತೆ ಬೇಟಿ ಆಗಿ, ಅಣ್ಣಾ ನಮಸ್ಕಾರ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಬೂಬು ಹೇಳಿ, ಈ ಕಾರ್ಯಕ್ರಮಕ್ಕೆ ಇಷ್ಟು, ಆ ಕಾರ್ಯಕ್ರಮಕ್ಕೆ ಅಷ್ಟು ಬಜೆಟ್ ಬೇಕಿತ್ತು ಎಂದು ಇಂದಿಗೂ ಅವಲತ್ತುಕೊಳ್ಳುವ ಬಿಡಾಡಿ ಅವಕಾಶವಾದಿಗಳು ಎಂ.ಶ್ರೀಕಾಂತ್‌ರವರನ್ನು ರಾಜಕೀಯವಾಗಿ ವಂಚಿಸುತ್ತಲೇ ಇದ್ದಾರೆ ಎನ್ನುವುದೇ ದುರಂತವಾಗಿದೆ.
ಒಟ್ಟಿನಲ್ಲಿ ಎಂ.ಶ್ರೀಕಾಂತ್‌ರವರಂತಹ ಮಾತೃ ಮನಸಿಗೆ ರಾಜಕೀಯದ ಅವಕಾಶವಾದದ ದಾಳ ಎರಚಿರುವುದು ಬಲು ಅನ್ಯಾಯವೇ ಆಗಿದೆ, ಇನ್ನೂ ಅವರನ್ನು ಗೌರವದಿಂದ ಕಾಣದೆ ಕಾಂಗ್ರೆಸ್ ಪಕ್ಷವು ತನ್ನ ಪಿತ್ರಾರ್ಜಿತ ಆಸ್ತಿ ಎಂದೇ ಮೈದಡವಿಕೊಂಡಿರುವವರ ಕೆಲ ಅಫೀಮಿನಂತಿರುವವರ ನಡುವೆ, ಎಂ.ಶ್ರೀಕಾಂತ್‌ರವರ ಅಗಾಧವಾದ ಜನಸ್ನೇಹಿ ವರ್ಚಸ್ಸು ಕಳೆದು ಹೋಗದಂತೆ ತಡೆವುದು, ಬದಲಾದ ರಾಜಕೀಯದಲ್ಲಿ ಹೊಸತೊಂದು ಸೇತುವೆ ನಿರ್ಮಿಸಲು ಕಾಂಗ್ರೆಸ್ ಸಂಘಟಿತ ಬಲವರ್ಧನೆಗೆ ಎಂ.ಶ್ರೀಕಾಂತ್‌ರವರನ್ನು ಬೇಷರತ್ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುವುದರಿಂದ ಮಲೆನಾಡಿನ ಹೆಬ್ಬಾಗಿಲಿಗೆ ಮತ್ತೊಂದು ಪೊಲಿಟಿಕಲ್ ಮೈಲಿಗಲ್ಲು ದರ್ಶಿಸಿಕೊಳ್ಳಬಹುದಾಗಿದೆ, ಹೀಗಾದರೆ ಮಾತ್ರ ಅಂದಿನ ಕನ್ನಡದ ಅನಾದಿ ಕವಿ ಪಂಪ ಹೇಳಿದಂತೆ “ಮನುಷ್ಯ ಜಾತಿ ತಾನೋಂದೇ ವಲಂ” ಎನ್ನುವ ಘೋಷಿತ ವಾಕ್ಯಕ್ಕೆ ಅರ್ಥ ಬರುತ್ತದೆ ಎನ್ನುವುದು ನನ್ನಯ ಅಂಬೋಣ.
