ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಗುರುವಾಗಿ ಕಾಪಿಟ್ಟುಕೊಂಡ I ಹನುಮಂತನೊಂದಿಗೆ I ಅಲೌಕಿಕ ಬಲದ ಒಡನಾಟವೂ..I
ಜೀವನದಲ್ಲಿ ಘಟಿಸುವ ಘಟನೆಗಳಲ್ಲಿ ಕೆಲವೊಂದು ವಿವರಿಸಬಹುದು ಅದು ಸಾಮಾನ್ಯವಾಗಿದ್ದರೆ, ಲೌಕಿಕ ಸಂಗತಿಗಳ ಸಾಂಗತ್ಯದಲ್ಲಿದ್ದರೆ ಮಾತ್ರ ಅಂತಹ ಘಟನೆಗಳನ್ನು ಆಲಿಸುವ ಕಿವಿಗಳು ಆಲಿಸಿ ಪ್ರತ್ಯುತ್ತರದಿ ಚರ್ಚಿಸಿ ತಾತ್ವಿಕವಾಗಿ ತರ್ಕಿಸುತ್ತದೆ, ಯಾಕೆಂದರೆ ಬಾಹ್ಯ ಘಟನೆಗಳು ಪ್ರತಿ ಬದುಕಿನ ಬವಣೆಗಳನ್ನು ಒಂದಿಷ್ಟು ತಾಳೆ ಹಾಕಿ ಬಿಡುತ್ತದೆ ಎನ್ನುವ ಕಾರಣಕ್ಕಾಗಿ, ಆದರೆ ಅಲೌಕಿಕ ಘಟನೆಗಳು ಅದರ ಸದ್ದುಗಳ ಅಗೋಚರತೆಗಳ ಕುರಿತಾಗಿ ಮನುಷ್ಯ ಗುಣದಿ ಹೇಳಲೊರಟರೆ ಸಾಕು ಅದು ವ್ಯಂಗ್ಯಗಳಿಗೆ ಗುರಿ ಮಾಡಿ ಬಿಡುತ್ತದೆ, ಇಲ್ಲವೇ ಪಂಥಿಯನುಸಾರದಿ ತೂಗಿ ಬಿಡುತ್ತದೆ, ಇನ್ನೂ ಒಂದೆಜ್ಜೆ ಮುಂದಡಿ ಇದೊಂದು ಭೌದ್ದಿಕ ದಿವಾಳಿತನದ ಪರಮಾವದಿ ಎಂದಾಗುತ್ತದೆ, ಅಥವಾ ಇವ್ಯಾವು ಇಲ್ಲದೊಡೆ ಇದೊಂದು ಆಸ್ಥಿಕ ಹಾಗೂ ನಾಸ್ಥಿಕ ಚರ್ಚೆಗೆ ಗ್ರಾಸವಾಗಿ ಬಿಡುತ್ತದೆ. ಏನೇ ಆಗಲಿ ಓರ್ವ ಪತ್ರಕರ್ತನಾಗಿ ಅನೇಕನೇಕ ಲೇಖನಗಳು, ಸುದ್ದಿಗಳು, ಭಾವುಕತೆಯ ಬರಹಗಳಿಗೆ ಮುಂದಾಗಿ ಅದನ್ನು ಸಮಗ್ರವಾಗಿ ಸಾರಸ್ವತಾ ಲೋಕಕ್ಕೆ ಸಮರ್ಪಿಸಿದ ಅನುಭವಗಳ ಅನುಭೂತಿ ಹಾಗೂ ತರ್ಕಕ್ಕೆ ಅಥವಾ ಕೆಲವರ ವ್ಯಂಗ್ಯಕ್ಕೂ ತುತ್ತಾಗಬಹುದಾದ ವೈಜ್ಞಾನಿಕವಾಗಿ ಸವಾಲು ಎಸೆಯಬಹುದಾದ ಅಂದಿನ ಒಂದು ಘಟನೆಯನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ.
ಹೌದು ಸರಿ ಸುಮಾರು ಇಪ್ಪತ್ತು ವರುಷದ ಹಿಂದಿನ ಮಾತು, ಮಾರುತಿ ಜ್ಯುವೆಲರ್‍ಸ್ ಅಂಡ್ ಪಾನ್ ಬ್ರೋಕರ್‍ಸ್ ಎನ್ನುವ ಸಂಸ್ಥೆಯನ್ನು ಒಮ್ಮೆಲೆ ಮುಚ್ಚಿ ನಿಂದ ಸಮಯ, ಇನ್ನೊಂದೆಡೆ ಪಾಲುದಾರಿಕೆಯಲ್ಲಿದ್ದ ಶಿವಗಂಗೆ ಪೈನಾನ್ಸ್ ನಿಂದಲೂ ಹೊರಬಂದು ಆರ್ಥಿಕ ಸ್ಥಿತಿಯಲ್ಲಿ ನಿಕಾಲಿಯಾಗಿ ಓಡಾಡಲು ಇದ್ದ ಬೈಕ್ ಮಾರಿಕೊಂಡು ಪುಟ್ಪಾತ್‌ನಲ್ಲಿ ಏಕಾಂಗಿಯಾಗಿ ನಡೆದು ಹೋಗುತ್ತಿದ್ದ ಸಂದರ್ಭವದು, ಸಣ್ಣ ವಯಸ್ಸು ಹದಿಹರೆಯದ ಎದೆಬಾಗಿಲು ತೆರೆದು ವಯಸ್ಕನಾಗಿ ಗುರುತಿಸಿಕೊಳ್ಳುವ ಒಂದೆರೆಡು ವರುಷ ಜತೆಯಲ್ಲಿದ್ದ ಗೆಳೆಯರು ನಕ್ಕು ದೂರ ಸರಿಯುತ್ತಿದ್ದ ಕಾಲಮಾನಗಳ ಹೆಪ್ಪುಗಟ್ಟುವಿಕೆಯನ್ನು ಕರಗಿಸಿಕೊಂಡಿಯೇ ನಡೆಯುವ ದುಸ್ಸಾಹಸ ಓದು ಮುಗಿಸಿದ ವಯಸ್ಸಿನಲ್ಲಿ ಬ್ಯುಸಿನೆಸ್ ಮಾಡಲೊರಟಿ ಸೋಲು ಅನುಭವಿಸಿದ ಪರಿಗೆ ವ್ಯಂಗ್ಯದ ಮಾತುಗಳು ಕಿವಿಗಪ್ಪಳಿಸುತಿತ್ತು, ಇವ್ಯಾವ ನಡೆತೆಗಳತ್ತ ಚಿತ್ತವರಿಸಿದೆ ಕೇವಲ ೯ನೇ ತರಗತಿಯಲ್ಲಿಯೇ ಖರಿದಿಸಿದ್ದ ನಿವೇಶನ ಇದಕ್ಕೆ ತುಸು ದೂರದಲ್ಲಿಯೇ ಇದ್ದ ಈದ್ಗಾ ಮೈದಾನ ಹಾಗೂ ಮಸ್ಜಿದ್ ಸಮಿತಿಗೆ ತುಂಬು ಮನಸಿನಿಂದಲೇ ಬಿಟ್ಟುಕೊಟ್ಟು ಸಬ್ಕಾ ಮಾಲೀಕ್ ಏಕ್ ಹೈ.. ಎಂದವನು, ಅಂತಹದೊಂದು ವಿಚಾರಗಳನ್ನು ಮೇಳೈಸಿಕೊಂಡೇ ಸಲ್ಲದ ಸಂಗತಿಗಳ ದರ್ಶಿಸಿಯೇ ಮೌನವಾಗಿ ನಡೆಸಿದ್ದು ಎನ್ನೊಳಗಿನ ಧ್ಯಾನವೇ ಹೌದು.
ಹೀಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸೋಲುಗಳನ್ನು ಬೆನ್ನಿಗೆ ಕಟ್ಟಿಕೊಂಡು ಮೊದಲ ವಹಿವಾಟುಗಳು ನೆಲದ ತಳ ಹಿಡಿದಿದ್ದನ್ನು ಅವಲೋಕಿಸಿಕೊಂಡು ಒಂಟಿಯಾಗಿಯೇ ಸಾಗುವ ಅವಸರ, ಅಂದು ಯಥಪ್ರಕಾರ ಪೂರ್ವ ಸಂಘಟನೆಯ ಕರ್ಮಭೂಮಿ, ನೆಲೆ ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ದುರ್ವಾಸ ಮುನಿಗಳ ಕ್ಷೇತ್ರಕ್ಕೆ ಹೋಗಿ ಹನುಮಪ್ಪನ ಜೊತೆ ಒಂದಿಷ್ಟು ಮಾತಾಡಿಕೊಂಡು ಅಲ್ಲಿಯೇ ಬಳಿಯಿದ್ದ ಶೆಟ್ಟರ ಮಂಡಕ್ಕಿ ಅಂಗಡಿಗೆ ಹೋಗಿ ಒಣಕಾರ ಮಂಡಕ್ಕಿ ಕೊಡಿ ಎಂದೇ ಅವರು ಕೂಡ ಪ್ರೀತಿಯಾಗಿಯೇ ಮಾತಾಡಿಸಿ ಮಂಡಕ್ಕಿ ಕೊಡುವ ಒಡನಾಟ, ಒಣಕಾರದ ಮಸಾಲೆ ಮಂಡಕ್ಕಿಯ ಸ್ವಾದ ಸವಿಯುತ್ತಲಿ ಮಂಡಕ್ಕಿ ಖಾಲಿಯಾಗಿತ್ತು ಆದರೆ ಕೊಬ್ಬರಿಎಣ್ಣೆಯಲ್ಲಿ ಮಿಂದಿದ್ದ ಮಸಾಲೆ ಅಳಿದುಳಿದ ಚೂರುಗಳ ನಡುವೆ ಸೆಳೆದ ಸಾಲುಗಳು, ಚಿತ್ರವೊಂದು ಹೊತ್ತಿದ್ದ ತುಂಡು ಪೇಪರ್ ಕೊಡವಿ ಓದಿದೆ, ಆ ಓದು ಮತ್ತಷ್ಟು ಓದಿಸಿತು, ಕುತೂಹಲವೂ ಮೂಡಿಸಿತು, ಎನ್ನೊಳಗಿನ ಧಾವಂತಗಳಿಗೆ ಸರಿಯಾದ ಮಾರ್ಗ ಇಲ್ಲಿ ಸಿಗಬಹುದು ಎಂದು ಉಹಿಸಿಕೊಂಡು ಶೆಟ್ರು ಕೊಟ್ಟಿದ್ದ ಮಂಡಕ್ಕಿ ಪೊಟ್ಟಣದ ತುಂಡು ಪೇಪರ್ ಮಡಚಿಟ್ಟುಕೊಂಡು ಮನೆಯ ಕಡೆ ದಾರಿಯ ಇಕ್ಕೆಲದಿ ನಡೆದು ಹೋದೆ, ಹೋಗುವ ಪ್ರತಿ ಕ್ಷಣಗಳೂ ಈ ಪೇಪರ್‌ನಲ್ಲಿದ್ದ ಸಂಗತಿಯಲ್ಲಿ ಮುಳುಗಿದೆ, ಹೇಗೆ ದಟ್ಟವಾದ ಸುಡು ಮರಳು ಹಾದಿಯಲ್ಲಿ ನೀರು ಸಿಕ್ಕೊಡೆ ಮನಸು,ಕಾಯಗಳು ಪುನಶ್ಚೇತನಗೊಳ್ಳುತ್ತದೋ ಹಾಗೆಯೇ ಆ ಹೊತ್ತಿನ ಸ್ಥಿತಿ ಆಗಿತ್ತು,
ಮನೆಗೆ ಹೋಗಿ ಅಪ್ಪ-ಅವ್ವನ ಬಳಿ ಹೇಳಿದೆ, ಪೇಪರ್‌ನಲ್ಲಿದ್ದ ಸಂಗತಿಯನ್ನು ತಿಳಿಸಿ ನಾಳೆ ಮುಂಜಾನೆಯೇ ಅಲ್ಲಿಗೆ ಹೋಗುತ್ತೇನೆ ಎಂದು ಅವಲತ್ತುಕೊಂಡೇ ಏನೇ ಆಗಲಿ ಅಪ್ಪನು ಕೂಡ ಹನುಮಪ್ಪನ ಪರಮ ಅನುಯಾಯಿ, ಹೋಗಿ ಬಾ ಎಂದು ಮುನ್ನೂರು ರೂಪಾಯಿ ಕೊಟ್ಟರು, ಹಾಕಿದ್ದ ಪ್ಯಾಂಟು ಅಂಗಿ ಕಿಸೆಗಳ ಹುಡುಕಿದೆ ನೂರೈವತ್ತು ಇತ್ತು, ಒಟ್ಟು ನಾನೂರೈವತ್ತು ರೂಪಾಯಿಗಳು ಸೇರಿಸಿಕೊಂಡು ಮಲಗಿದೆ, ರಾತ್ರಿ ಮಡುಗಟ್ಟುತ್ತಿದ್ದರು ನಿದುರೆ ಬಂದಿರಲಿಲ್ಲ, ಬೆಳಕರಿಯುವುದನ್ನೇ ಕಾದು ಹಾಸಿಗೆಯಲ್ಲಿ ಮಗ್ಗಲು ಬದಲಿಸುತ್ತಿದ್ದೆ, ಇದ್ದಕ್ಕಿದ್ದಂತೆ ಕಣ್ಣು ನಿದುರೆಯ ಮಂಪರಿಗೆ ಜಾರಿತ್ತು, ಯಾಕೋ ಪೂರ್ವ ನಿಶ್ವಿತವೆಂಬಂತೆ ಒಡೆದೆಬ್ಬಿಸಿದಂತೆ ಭಾಸವಾಗಿ ಥಟ್ ಎಂದು ಎಚ್ಚರಗೊಂಡೆ ಬಡ-ಬಡ ಸ್ನಾನ ಮುಗಿಸಿ ದೇವರ ಮನೆಯಲ್ಲಿ ದೀಪ ಹಚ್ಚಿ ಅಪ್ಪ-ಅವ್ವನಿಗೆ ತಿಳಿಸಿ ಕಾಲಿಗೆ ಬಿದ್ದು ಹೊರಟಿದ್ದೆ, ಅದಾಗಲು ಮರೆಯದೇ ಶೆಟ್ರು ಕಟ್ಟಿದ್ದ ಮಂಡಕ್ಕಿ ಪೊಟ್ಟಣದ ತುಂಡು ಪೇಪರ್ ಜೋಪಾನವಾಗಿರಿಸಿಕೊಂಡು ಈ ಪೇಪರ್‌ನಲ್ಲಿದ್ದ ಊರು ಎಲ್ಲಿ ಬರುತ್ತದೆ ಯಾವಕಡೆಯಿಂದ ಹೋದರೆ ಹತ್ತಿರವಾಗಬಹುದೆಂದು ವಿಚಾರಿಸಿದೆ, ಖಾಸಗಿ ಬಸ್ಟಾಪ್‌ನಲ್ಲಿದ್ದ ಏಜೆಂಟನೋರ್ವ ತಿಳಿಸಿ ಹೇಳಿದ ಕಾರ್ಕಳಕ್ಕೆ ಹೋಗಿ ಅಲ್ಲಿಂದ ಬಿಸಿ.ರೋಡ್ ಬಂಟ್ವಾಳದಲ್ಲಿಳಿದು ಕೇಳು ಹತ್ತಿರವಾಗುತ್ತದೆ ಎಂದು ತಿಳಿಸಿದ ಆತ ಹೇಳಿದಂತೆ ಬಿ.ಸಿ ರೋಡ್ ಬಂಟ್ವಾಳಕ್ಕೆ ಬಂದಿಳಿದೆ, ಅಲ್ಲಿಯೂ ಇದ್ದ ಬಸ್ ಏಜೆಂಟರನ್ನು ವಿಚಾರಿಸಿದಾಗ ಅವರು ಪುತ್ತೂರಿಗೆ ಹೋಗಿ ಅಲ್ಲಿಂದ ವಿಟ್ಲದಲ್ಲಿ ಇಳಿದುಕೊಳ್ಳಿ ಅಲ್ಲಿ ಜೀಪ್ ಸಿಗುತ್ತದೆ ಹತ್ತಿರವಾಗುತ್ತದೆ ಎಂದರು ಇವರು ಹೇಳಿದಂತೆಯೇ ಪುತ್ತೂರಿಗೆ ಬಂದು ಜೀಪ್ ಹತ್ತಿದೆ ಅಷ್ಟರೊಳಗೆ ಸಂಜೆಗತ್ತಲು ಆವರಿಸಿತ್ತು, ಎಲ್ಲಿ ಊಟ ಮಾಡಿದರೆ ಇರುವ ದುಡ್ಡು ಖರ್ಚಾಗಿ ಬಿಡುತ್ತದೆ ಎನ್ನುವ ಲೆಕ್ಕಾಚಾರ ಹೀಗಾಗಿ ಪಾರ್ಲೆಜಿ ಬಿಸ್ಕತ್ತು ಅಲ್ಲಲ್ಲಿ ಹೋಟೆಲ್ಗೆ ಹೋಗಿ ನೀರು ಉಚಿತ ಅಲ್ವಾ ನೀರು ಹೊಟ್ಟೆಗೆ ತುಂಬಿಸಿಕೊಂಡಿದ್ದೆ, ಈ ಪಯಣದುದ್ದಕ್ಕೂ ಇದ್ದದ್ದು ಒಂದೇ ಏಕತೆಯ ಮನಸು ಅಲ್ಲಿಗೆ ಹೋಗಲೇ ಬೇಕು ಎನ್ನುವುದಾಗಿತ್ತು.
ಕೊನೆಗೂ ಆ ಗಳಿಗೆ ಎದುರಾಗಿತ್ತು ಆದರೆ ಹತ್ತಿಸಿಕೊಂಡಿದ್ದ ಜೀಪು ಕನ್ಯಾಗ್ರಾಮದ ಬಳಿಯಿದ್ದ ಒಡಿಯೂರು ಹೆಬ್ಬಾಗಿಲಿಗೆ ಬಿಟ್ಟು ಇಲ್ಲಿಂದ ನಡೆದು ಹೋಗಿ, ಒಬ್ಬರಿಗಾಗಿ ಬರುವುದಕ್ಕೆ ಆಗುವುದಿಲ್ಲ ಎಲ್ಲಾ ಪ್ರಯಾಣಿಕರು ಇಲ್ಲಿ ಇಳಿದಿದ್ದಾರೆ ಒಡಿಯೂರಿಗೆ ಬರುವವರು ಯಾರು ಇಲ್ಲ ಎಂದರು, ಇನ್ನೇನು ಅನ್ಯದಾರಿಗಾಣದೇ ಒಡಿಯೂರು ಹೆಬ್ಬಾಗಿಲಿನೊಳಗೆ ಹೆಜ್ಜೆಗಳಾಕುವುದಕ್ಕೆ ಶುರು ಮಾಡಿದೆ, ಅದಾಗಲೇ ಕತ್ತಲು ಆವರಿಸಿತ್ತು ಕಾಡ ಸದ್ದಿನಂತೆ ಕ್ರಿಮಿ ಕೀಟಗಳ ಸದ್ದು ಬೆನ್ನಟ್ಟಿತ್ತು, ಆತಂಕದ ಛಾಯೇ ಮೂಡಿರಲಿಲ್ಲ, ಜನರ ನೆರಳಿಲ್ಲದ ಕಗ್ಗತ್ತಲಿನಲ್ಲಿ ಹೆಜ್ಜೆಗಳು ಸಾಗುತ್ತಲಿ ಅದರ ಸದ್ದು ಕಿವಿಗಪ್ಪಳಿಸುವಂತೆ ಮಾಡುತ್ತಿತ್ತು, ಗಟ್ಟಿಯಾಗಿ ನಡೆಯುತ್ತಲೇ ಇದ್ದೆ, ಒಂದೆರೆಡು ಕಿ.ಮೀ ಏರಿಳಿತಗಳ ಕಲ್ಲಿನ ಹಾದಿಯಲ್ಲಿ ಕ್ರಮಿಸಿದ ತರುವಾಯ ದೂರದಲ್ಲಿ ದೇವರನಾಮ ಭಜನೆಗಳು ಕೇಳಿಸಿದವು, ಒಂದು ರೀತಿಯಲ್ಲಿ ಸಂತಸದ ಬುಟ್ಟಿ ತೆರೆದಿಟ್ಟು ಮತ್ತಷ್ಟು ವೇಗವಾಗಿ ನಡೆದು ಸಾಗಿ ಹೋದೆ, ಅದಾಗ ದರ್ಶಿಸಿದ್ದು ಅದೇ ತುಂಡು ಪೇಪರ್‌ನಲ್ಲಿದ್ದ ಸಂಗತಿಯ ದೇವಳ. ಒಳ ಪ್ರವೇಶಿಸಿದೆ ಸ್ನಾನದ ಕೊಠಡಿಗಳಿದ್ದವು ಸ್ನಾನ ಮುಗಿಸಿ ಮೊದಲು ಒಡಿಯೂರಿನ ವೀರಾಂಜನೇಯನನ್ನು ನೋಡಿ ಒಂದಿಷ್ಟು ಸಮಯ ಏನನ್ನು ಪ್ರಾರ್ಥಿಸದೇ ಮೌನವಾಗಿ ನಿಂದೆ, ಭಕ್ತಿಯಿಂದ ನಮಿಸಿದೆ, ಸ್ವಾಮೀಜಿಯವರನ್ನು ಬೇಟಿ ಮಾಡಬೇಕು ಎಂದು ಅವರ ಶಿಷ್ಯರ ಬಳಿ ಕೇಳಿಕೊಂಡೆ, ಅವರು ಅನುವು ಮಾಡಿಕೊಟ್ಟರು ಅಲ್ಲಿಯೇ ನೆಲಮಾಳಿಗೆಯಂತಿದ್ದ ಸ್ಥಳದಲ್ಲಿ ಸ್ವಾಮೀಜಿ ಇದ್ದರು ಹೋಗಿ ಅವರ ಪಾದಗಳಿಗೆ ನಮಸ್ಕರಿಸಿ ಎರಡು ಕೈಗಳನ್ನು ಮುಗಿದು ಕುಳಿತು ಕಣ್ಣುಮುಚ್ಚಿಕೊಂಡೇ ಏನೋ ಬಿಸಿಗಂಬನಿಗಳು ತೊಟ್ಟಿಕ್ಕಿಸಿತು, ಅವರು ಸೂಕ್ಷ್ಮವಾಗಿ ಗಮನಿಸಿ ಹೇಳಿದರು, ಇಲ್ಲಿಗೆ ನೀನು ಯಾತಕ್ಕಾಗಿ ಬಂದಿದ್ದಿ, ಎಂದರು ನನಗೆ ಮರು ಮಾತಾಡುವುದಕ್ಕೆ ಆಗಲಿಲ್ಲ, ಅತೀ ಗದ್ಗಧಿತನಾಗಿದ್ದೆ, ಅವರು ಮಾತು ಮುಂದುವರೆಸಿದರು ನಿನ್ನ ಹಿಂದೆಯೇ ಹನುಮನಿದ್ದಾನೆ, ಇದು ಪೂರ್ವಫಲ ಎಂದರು, ಯಾರು ನಿನಗೇನು ಮಾಡಿಯಾರು..? ಒಂದಿಷ್ಟು ಸಮಯದಲ್ಲಿ ಎಲ್ಲವೂ ಸರಿಯಾಗುತ್ತದೆ, ಇದೀಗ ನೀನು ನಾನು ಹೇಳಿದಂತೆ ಮಾಡು ಬೆಳಿಗ್ಗೆ ನಿನ್ನೊಂದಿಗೆ ಮತ್ತೆ ಮಾತಾಡುತ್ತೇನೆ ಎಂದು ಆಶಿರ್ವಾದಿಸಿ ಕಳುಹಿಸಿದರು, ಸ್ವಾಮೀಜಿ ಹೇಳಿದಂತೆ ಅವರೇ ಕೊಟ್ಟಿದ್ದ ತೆಂಗಿನಕಾಯಿಯೊಂದನ್ನು ಬಳಿಯಲ್ಲಿಟ್ಟುಕೊಂಡು ಹೊರಬಂದೆ ಆ ದೇವಳದಲ್ಲಿ ಬಂದ ಭಕ್ತಾದಿಗಳಿಗೆ ಉಚಿತ ಊಟವಿರುತ್ತದೆ, ಆ ಊಟದ ಆವರಣಕ್ಕೆ ವಜ್ರಮಾತಾ ಅನ್ನಛತ್ರ ಎಂದಿತ್ತು, ಹೋದೆ ಬಾಯ್ಲ್ಟ್ ರೈಸ್ ಸಾಂಬಾರು ಫಲ್ಯಾದಿಗಳನ್ನು ಸೇವಿಸಿದೆ, ನಿದುರೆಯ ಸಮಯ ಬಂದ ಭಕ್ತಾದಿಗಳೆಲ್ಲಾ ಅಲ್ಲಲ್ಲಿ ಮಲಗುವುದಕ್ಕೆ ಶುರು ಮಾಡಿಕೊಂಡಿದ್ದರು ಆದರೆ ಎನ್ನೊಳಗಿನ ಮನಸು ಕೇಳಲಿಲ್ಲ ಹನುಂತನ ಗುಡಿಯ ಹಿಂಬದಿಯಲ್ಲಿ ಒಂದಿಷ್ಟು ಜನರು ಮಲಗಿದ್ದರು ಅಲ್ಲಿಗೆ ಕೊನೆಯ ಕಂಬಿಯನ್ನು ತಗುಲಿಕೊಂಡು ತಂದಿದ್ದ ಬಟ್ಟೆಯ ಬ್ಯಾಗ್ ತಲೆದಿಂಬಾಗಿಸಿ ನಿದುರೆಗೆ ಒಮ್ಮೆಲೆ ಜಾರಿ ಹೋದೆ,
ಇದಾದ ನಡುಮುಂಜಾನೆ ಎಚ್ಚರವಾಯ್ತು, ಮಲಗಿದ್ದವರ ಸಾಲಿನ ಕೊನೆಯಲ್ಲಿ ಕಂಬಿಗಳಿಗೆ ತಗುಲಿಕೊಂಡೇ ಮಲಗಿದ್ದವನನ್ನು ಸರಿಸಿದಂತೆ ಆಗಿತ್ತು, ಅದೇ ಕಂಬಿಯ ಬಳಿ ಶ್ವೇತವಸ್ತ್ರಧಾರಿಯಾಗಿ ಪ್ರಜ್ಷಲಿಸುವ ಬೆಳಕಿನ ನಡುವೆ ನನ್ನ ಮುಖಕ್ಕೆ ಮೊಗವೊಡ್ಡಿ ಅನಂತಪದ್ಮನಾಭನ ಶೈಲಿಯಲ್ಲಿ ಮಲಗಿಕೊಂಡು ನಗುತ್ತಿರುವವನನ್ನು ಗದರಿಸಿದೆ, ಇಲ್ಲಿ ಮಲಗುವುಕ್ಕೆ ಸ್ಥಳವೇ ಇಲ್ಲ ನನ್ನನ್ನು ದೂಡಿಕೊಂಡೇ ಮಲಗಿದ್ದಲ್ಲದೆ ಮತ್ತೆ ನಗುತ್ತಿರಲ್ಲ ಏನ್ರೀ ನೀವು ಎಂದೆ, ಮತ್ತೆ ಆ ನಗು ನಿಲ್ಲಲೇ ಇಲ್ಲ, ನಾ ಏಳುವುದಕ್ಕೆ ಆಗಲೂ ಇಲ್ಲ, ಕೈ-ಕಾಲುಗಳು ಸ್ಥಬ್ಧ ಚಿತ್ರದಂತಾಗಿತ್ತು, ಮಗ್ಗುಲಾಗುವುದಕ್ಕೂ ಪ್ರಯತ್ನಿಸಿದೆ ಅದು ಆಗಲಿಲ್ಲ, ಸಿಟ್ಟು ಆವರಿಸಿತ್ತು ಮತ್ತೆ ಗದರಿಸಿದೆ, ನಗುವುದನ್ನು ನಿಲ್ಸಿ ಮೊದಲು ಆ ಕಡೆ ಎದ್ದು ಹೋಗಿ ಎಂದೆ, ಆದರೆ ಅಲ್ಲಿ ಆ ಪ್ರಜ್ವಲಿಸುವ ಶುಭ್ರ ಬೆಳಕಿನಲ್ಲಿ ಕಾಣುತ್ತಿದ್ದ ಅಜಾನುಬಾಹು ಶರೀರ ಚಂದ್ರನಂತೆ ಹೊಳುಪುತ್ತಿದ್ದ ಮೊಗ ಪೂರ್ಣ ಕಾಣದಿದ್ದರೂ ಯಾರು ಓರ್ವ ವ್ಯಕ್ತಿ ಬಂದು ಮಲಗಿದ್ದಾನೆ ಎನ್ನುವ ಆ ಕ್ಷಣದ ಭಾವದಲ್ಲಿ ಮುಳುಗಿ ಹೋಗಿದ್ದೆ, ಸುಮಾರು ಒಂದಿಪ್ಪತ್ತು ನಿಮಿಷ ಅನಿಸುತ್ತೇ ಅವರು ಹಾಗೆಯೇ ಅಂತರ್ಧನಾಗಿದ್ದರು, ಅದಾಗ ನಾ ಮೇಲೆಳುವುದಕ್ಕೆ ಆಗಿತ್ತು, ಸುತ್ತಲು ಒಮ್ಮೆ ಕಣ್ಣಾಯಿಸಿದೆ ಎಲ್ಲರೂ ಇದ್ಯಾವ ಪರಿವೇ ಇಲ್ಲದಂತೆ ಮಲಗಿ ನಿದುರಿಸುತ್ತಿದ್ದರು, ಆಚ್ಚರಿಯಾಯಿತು, ಕನಸಾಗಿದ್ದರೆ ಅದೊಂದು ಕನಸು ಎನ್ನಬಹುದಿತ್ತು ಆದರೆ ಅದು ಕನಸಾಗಿರಲಿಲ್ಲ, ಆ ಅಸಾಧರಣ ವ್ಯಕ್ತಿಯೊಂದಿಗೆ ವಾಗ್ವಾದಕ್ಕೆ ಬಿದ್ದ ಸಮಯವಾಗಿತ್ತು, ಎಚ್ಚರಗೊಂಡಿದ್ದಾಗಲೇ ಮುಸುಮುಂಜಾನೆ ಮಲಗಿಕೊಂಡು ದರ್ಶನ ನೀಡಿ ಕಣ್ಮರೆಯಾಗಿದ್ದು ಹನುಮಂತನೇ ಎಂದೆನಿಸಿತು, ಕೂಡಲೇ ನೆನಪಾದದ್ದು ಸ್ವಾಮೀಜಿ ಹೇಳಿದ್ದು ಕೊಟ್ಟಿದ್ದ ತೆಂಗಿನಕಾಯಿ ಹಿಡಿದು ಗುಡಿಯ ಸುತ್ತಾ ಮೂರು ಸುತ್ತು ಬಂದೆ, ನಂತರ ಎದುರಿನ ಭಾಗದಲ್ಲಿ ಒಡೆದು ಪಕ್ಕದಲ್ಲಿಯೇ ಹರಿಯುತ್ತಿದ್ದ ದೊಡ್ಡದೊಂದು ನದಿಯ ಕಾಲುವೆಯ ಬಳಿ ಸ್ನಾನ ಮುಗಿಸಿ ಬರುವ ಹೊತ್ತಿಗೆ ಎಂದಿನಂತೆ ಒಡಿಯೂರು ವೀರಾಂಜನೇಯನ ಕ್ಷೇತ್ರದಲ್ಲಿ ಹಾಡುಗಳು ಮೊಳಗಿತ್ತು, ಗಂಟೆಯ ನಾದಗಳು ಸದ್ದು ಮಾಡುತಿತ್ತು, ಮತ್ತೇ ಹನುಮಂತನ ದರ್ಶನ ಮಾಡಿಕೊಂಡು ಸ್ವಾಮೀಜಿಗೆ ಈ ಘಟನೆಯನ್ನು ತಿಳಿಸುವ ತವಕದಿ ಕಾದು ನಿಂದಿದ್ದೆ, ನನ್ನ ಸರತಿ ಬಂದಿತ್ತು ಹೋದೆ ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿ ಕುಳಿತೆ ಅವರು ಕೈಯಲ್ಲಿ ತುಳಸಿ ಮಾಲೆ ಹಿಡಿದು ಜಪಿಸುತ್ತಿದ್ದರು, ನನ್ನ ನೋಡಿ ನಕ್ಕರು, ನಿನ್ನೆಯೇ ಹೇಳಿದ್ದೆ ಹನುಮಂತನೇ ನಿನ್ನ ಹಿಂದೆ ಇದ್ದಾನೆ ನೀನು ನಿಮಿತ್ತನಷ್ಟೆ, ಸಂಕಟದ ಕಾಲದಲ್ಲಿ ಇದ್ದೇ ಇರುತ್ತಾನೆ ಇದು ಪೂರ್ವಫಲ ಎಂದು ಮತ್ತೇ ಪುನರುಚ್ಚರಿಸಿದರು ಆಚ್ಚರಿಯಾದೇ ಸಾಕ್ಷಾತ್ ಹನುಮಂತನೇ ಮುಂಜಾನೆ ದರ್ಶನ ಕೊಟ್ಟನೇ ಎಂದು ಭಕ್ತಿಭಾವದಿ ಪರವಶನಾಗಿ ಸ್ವಾಮೀಜಿಯ ಅಪ್ಪಣೆ ಪಡೆದು ಊರಿಗೆ ಅದೇ ಅನುಭವ ಕಟ್ಟಿಕೊಂಡು ವಾಪಾಸ್ಸಾದೆ,
ನನ್ನ ಬಳಿಯಿದ್ದ ಹಣ ಮತ್ತೇ ಊರಿಗೆ ಹಿಂತಿರುಗುವಷ್ಟಿತ್ತು, ಸಡಗರದಿ ಮನೆಗೆ ಬಂದು ಆದ ಘಟನೆಯನ್ನು ಅಪ್ಪ-ಅವ್ವನಿಗೆ ತಿಳಿಸಿದೆ, ಅವರು ಸಂಭ್ರಮಿಸಿದರು ಮೊದಲೇ ಹನುಮಪ್ಪನ ಒಡನಾಡಿ ಪರಮ ಭಕ್ತನಾಗಿದ್ದ ಅಪ್ಪ ದೇವರ ಪೋಟೋ ಬಳಿ ನಿಂದು ಕೈ-ಮುಗಿದು ನೀನು ದೊಡ್ಡವನಪ್ಪ ಎಂದು ಹನುಮಪ್ಪನ ಕೊಂಡಾಡಿದರು, ಹೋಗು ನಿನ್ನ ಸಂಕಟಗಳೆಲ್ಲಾ ಕಳೆಯಿತು ಎಂದು ತಿಳಿದುಕೊ.,, ಎಂದರು ನಿಜಕ್ಕೂ ಬದಲಾಯಿತು ಮತ್ತೆ ಬದುಕು, ಬಜರಂಗದಳ ಬಿಟ್ಟ ವರುಷವೂ ಅದಾಗಿತ್ತು, ಬಿಜೆಪಿಗೆ ಸೇರುವುದಕ್ಕೆ ಕರೆ ಕೂಡ ಎದುರಾಗಿತ್ತು ಆದರೆ ಯಾವ ಪಕ್ಷಗಳೂ ಬೇಡ, ಮತ-ಪಂಥಗಳೂ ಬೇಡ, ಆಧ್ಯಾತ್ಮವನ್ನು ಅನುಸರಿಸಿಕೊಂಡೇ ಈ ಜೀವನ ಮುಗಿಸಿ ಬಿಡಬೇಕು ಎಂದು ನಿರ್ಧರಿಸಿಕೊಂಡಾಗಲೇ ಪತ್ರಕರ್ತನಾಗಿ ಎಲ್ಲರಲ್ಲಿಯೂ ಆ ಹನುಮಂತನನ್ನು ನೋಡುವ ಅರಿವು ಈ ಘಟನೆ ಎಡೆಮಾಡಿಕೊಟ್ಟಿತ್ತು, ಮತ್ತೇ ಈ ಪೆನ್ನಿನ ಹಾದಿ ಬಿಟ್ಟು ಬಿಡಬೇಕು ಎಂದೆನಿಸಿದರು ಅದು ಬಿಡಲೊಪ್ಪಲು ಬಿಡಲಿಲ್ಲ ಬಲವಾಗಿ ಅಪ್ಪಿಕೊಂಡಿತ್ತು, ಹಾಗೆಯೇ ಆ ತುಂಡು ಪೇಪರಿನಲ್ಲಿದ್ದ ಸ್ಥಳಕ್ಕೆ ಹೋಗಿ ಬಂದಿದ್ದು ಹಾಗೂ ಆ ಅಗೋಚರ ವ್ಯಕ್ತಿಯನ್ನು ಸಂದಿಸಿದ್ದು ಮಾತ್ರ ಈ ಸಾಲಿನಲ್ಲಿ ತಿಳಿಸಿ ಈ ಸ್ಥಳದ ಪವಾಡ ಸದೃಶ್ಯಗಳನ್ನು ಮತ್ತೊಮ್ಮೆ ತಿಳಿಸುತ್ತೇನೆ, ಈ ನಂತರ ನನ್ನ ಮಾತು ನಂಬಿ ಒಂದು ಬಸ್ ಮಾಡಿಕೊಂಡು ಬಂದಿದ್ದ ಸ್ನೇಹಿತರು ಬೆರಗಾಗಿ ಹೋದರು, ಪ್ರತಿ ಸಂಕ್ರಮಣದ ಕಾಲದಿ ಆಗುವ ದರ್ಶನ, ಪವಾಡಗಳನ್ನು ಕಣ್ಣಾರೆಯು ಕಂಡರು, ಅಂದು ಸ್ವಾಮೀಜಿಯ ಮುಖ, ಕೈ-ಕಾಲುಗಳು ಹಿಗ್ಗಿ ನಿಂದ ಸಮಯದಲ್ಲಿ ತುಳಸಿ ಹಾರ ಹಾಕುವ ಸೌಭಾಗ್ಯ ಬಂದೊದಗಿತ್ತು, ಮತ್ತೆ ಆ ವ್ಯಕ್ತಿಯನ್ನು ನಾ ನೋಡದಿದ್ದರೂ ಚಿತ್ರ-ವಿಚಿತ್ರ ಘಟನೆಗಳಲ್ಲಿ ಆ ಅಗೋಚರ ವ್ಯಕ್ತಿಯು ಎನ್ನೊಂದಿಗೆ ನಿಲ್ಲುವ ನೆರಳು ನೋಡುತ್ತಿದ್ದೇನೆ, ಹೇಳಿ ಇದು ಯಾವ ಉತ್ಪ್ರೇಕ್ಷೆಗಾಗಿ ಇಲ್ಲಿ ಲಗತ್ತಿಸಿಲ್ಲ, ನನ್ನ ನಿಜದ ಜೀವನದಲ್ಲಾದ ಈ ರೀತಿಯ ಅನೇಕ ಘಟಿತ ಘಟನೆಗಳಲ್ಲಿ ಇದೊಂದನ್ನು ವಿವರಿಸಲು ಎನ್ನೊಳಗಿನ ಗುರುವಿನ ಅಣತಿಯಂತೆ ಮನಸು ಮುಂದಡಿಯಾಗಿದೆ,



