I ಸೃಜನಶೀಲ ಕಲಿಕೆಗೆ I ಕಾವ್ಯ ಸಂಭ್ರಮ ಮಾದರಿ I ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ I
ಶಿವಮೊಗ್ಗ :-ಶಿಕ್ಷಣ ವ್ಯವಸ್ಥೆಯು ದಿನನಿತ್ಯದ ಕಲಿಕೆಯಾದರೆ ಆಷಾಡದ ಕಾವ್ಯ ಸಂಭ್ರಮದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಾಹಿತ್ಯ ಮತ್ತು ಶಿಕ್ಷಣದ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ಜುಲೈ 20 ರಂದು ಭಾನುವಾರ ಸಂಜೆ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ವೃಂದಗಾನದಲ್ಲಿ ಕವಿ ಕಾವ್ಯ ನಮನ, ಆಷಾಡದ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹಳ ಸಂಖ್ಯೆಯಲ್ಲಿ ಮಕ್ಕಳು, ಪೋಷಕರು ಬಂದಿರುವಿರಿ. ಶಾಲೆಗಳ ಸೀಮಿತ ಕಲಿಕೆಯಿಂದ ಹೊರಬಂದು ಮತ್ತಷ್ಟು ಕಲಿಸುವಲ್ಲಿ, ಕವಿ, ಕಾವ್ಯ ಪರಿಚಯವಾಗುವಲ್ಲಿ ಸಹಕಾರಿಯಾಗಲಿದೆ ಎಂದು ರಮೇಶ್ ವಿವರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಅನನ್ಯ ಶಿಕ್ಷಣ ಸಂಸ್ಥೆ ಸ್ಥಾಪಕರಾದ ಅನನ್ಯ ಗಿರೀಶ್ ಅವರು ಕಸಾಪ ವೇದಿಕೆಯು ವರ್ಷವಿಡಿ ಶಿಕ್ಷಕರು, ಮಕ್ಕಳಿಗೆ ಶೈಕ್ಷಣಿಕ ಪೂರಕವಾದ ಅತ್ಯಂತ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಂಡು ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿರುವುದನ್ನು ಶ್ಲಾಘಿಸಿದರು.
ಸನ್ ಸಿಟಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್. ಬಸಪ್ಪ ಅವರು ಮಳೆಗಾಲದ ಈ ದಿನಗಳಲ್ಲಿ ಮನಸ್ಸು ಚಟುವಟಿಕೆಯಿಲ್ಲದೆ ಜಡವಾಗಿರುತ್ತೆ. ನಮ್ಮ ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇಂತಹ ಕಾರ್ಯಕ್ರಮ ಉತ್ತಮವಾಗಿದೆ ಎಂದರು.
ಜನಪದ ಗಾಯಕ ಕಡದಕಟ್ಟೆ ತಿಮ್ಮಪ್ಪ ಅವರು ಗಾದೆಗಳನ್ನು ಆಧರಿಸಿದ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಮತ್ತು ಒಡಪುಗಳ ಒಳಗೊಂಡ ಗಡಿಯಾರ ಎನ್ನುವುದು ಟಿಕ್.ಟಿಕ್ ಎನ್ನುವ ಎರಡು ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ಮಳೆಗಾಲದ ಈ ಸಂದರ್ಭದಲ್ಲಿ ಆಷಾಡದ ಕಾವ್ಯ ಸಂಭ್ರಮ ಕಾರ್ಯಕ್ರಮ ರೂಪಿಸಿದೆವು. ನಮ್ಮ ವಿದ್ಯಾರ್ಥಿಗಳು ಕವಿಗಳು ಬರೆದ ಕವನಗಳನ್ನು ಹಾಡಲು ಕಲಿತರೆ ಮುಂದೆ ಅವರಲ್ಲೂ ಸಾಹಿತ್ಯ ಆಸಕ್ತಿ ಬೆಳೆಯಬಹುದು. ಕಸಾಪ ವರ್ಷದ ಎಲ್ಲಾ ಕಾಲದಲ್ಲೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತೆ. ಸಾಹಿತ್ಯ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ. ಉತ್ತಮ ಗ್ರಂಥಾಲಯ ವ್ಯವಸ್ಥೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಅನುಕೂಲ ಆಗುವಂತಹ ಸಾವಿರಾರು ಪುಸ್ತಕಗಳಿವೆ. ಬಳಸಿಕೊಳ್ಳಿ ಎಂದು ವಿವರಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಶಿಕ್ಷಣ ಸಂಯೋಜಕರಾದ ಶಶಿರೇಖಾ ಉಪಸ್ಥಿತರಿದ್ದರು.
ದುರ್ಗಿಗುಡಿ, ಮಿಳಘಟ್ಟ, ವಿನೋಬನಗರ ಸರ್ಕಾರಿ ಪ್ರೌಢಶಾಲಾ, ರಾಮಕೃಷ್ಣ ವಿದ್ಯಾನಿಕೇತನ, ಅನನ್ಯ ಪಬ್ಲಿಕ್ ಶಾಲೆ, ಕಸ್ತೂರಬಾ ಬಾಲಿಕಾ, ಶ್ರೀ ಆದಿಚುಂಚನಗಿರಿ, ಶಿವಮೊಗ್ಗ ಪಬ್ಲಿಕ್ ಶಾಲೆ, ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್, ಸನ್ ಸಿಟಿ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ. ನವೀನ್ ಕುಮಾರ್ ಸ್ವಾಗತಿಸಿದರು. ಎಸ್. ಷಣ್ಮುಖಪ್ಪ ವಂದಿಸಿದರು. ಎಂ. ಎಂ. ಸ್ವಾಮಿ ವಂದಿಸಿದರು.

