ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ವ್ಯಾಪಾರೀಕರಣದ ಕೇಂದ್ರ ಬಿಂದುವಾದ I ಅಲ್ಲಮ ಪ್ರಭು ಫ್ರೀಡಂ ಪಾರ್ಕ್ I
ಇದೇನು ಡೇಂಜರಸ್ ಗೇಮ್ ಅದೆಷ್ಟು ಸುರಕ್ಷಿತ ಎನ್ನುವುದು ಜಿಲ್ಲಾಡಳಿತವೇ ಹೇಳಲಿ..
ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯ ಎಂಬುವ ಮನುಷ್ಯ ಮಾತ್ರದೊಳಗಿನ ಅಹಂಕಾರಗಳ ಅಳಿಸಿ, ಸೊನ್ನೆಯತ್ತ ಸೂಚಿಸುವ ಈ ಸಾಲು, ೧೨ನೇ ಶತಮಾನದಲ್ಲಿನ ಶರಣ ಚಳುವಳಿಯ ಹರಿಕಾರರು, ಭಾರತೀಯ ಆಧ್ಯಾತ್ಮಿಕ ಪ್ರತಿಪಾದಕರು ಅಲ್ಲದೆ ವಚನ ಸಾಹಿತ್ಯದ ಶಾಸನವೂ ಆಗಿರುವ ಅಲ್ಲಮ ಪ್ರಭು ಅವರು ಕ್ರಾಂತಿಯ ಅಲೆ ಎಬ್ಬಿಸಿದವರು, ಇಂತಿವ ಮಹಾತ್ಮರ ಹೆಸರನ್ನು ರಾಜ್ಯ ಸರ್ಕಾರವು ನಾಮಾಂಕಿತಗೊಳಿಸಿದ್ದು ಸ್ವಾಗತಾರ್ಹ ಸಂಗತಿಯಾದರು, ಇಲ್ಲಿ ಯಾವ ಸಂದೇಶವನ್ನು, ಅರಿವನ್ನು ಬಿತ್ತಿ ಬೆಳೆಯಬೇಕಾಗಿತ್ತೋ.. ಸಾಂಸ್ಕೃತಿಕ, ಸಾಹಿತ್ಯ, ಕನ್ನಡ ಹಾಗೂ ನೆಲದ ಪರಂಪರೆಯ ಕಾರ್ಯಕ್ರಮಗಳಿಗೆ ಮೀಸಲುಗೊಳಿಸಬೇಕಾಗಿತ್ತೋ..?! ಅಂತಹ ಯಾವ ಕೈಂಕರ್ಯಗಳಿಗೆ ಅಣಿಗೊಳಿಸಲು ಮುಂದಾಗದೆ ಇರುವ ಶಿವಮೊಗ್ಗ ಜಿಲ್ಲಾಡಳಿತ ವ್ಯಾಪಾರೀಕರಣ ಮಾಡಲೊರಟಿರುವುದು ದುರಂತದ ಸಂಗತಿಯಾಗಿದೆ ಅಲ್ಲದೆ ಅಲ್ಲಮ ಪ್ರಭುಗಳ ಹೆಸರನ್ನು ನಿತ್ಯ ಕೊಲೆಗೈಯುವ ಹಂತಕ್ಕೆ ಮುಂದಾಗಿರುವುದು ಸಮಂಜಸವಲ್ಲವಾದುದ್ದು, ಹೀಗಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರು ಅಲ್ಲಮ ಪ್ರಭು ಗಳ ಹೆಸರಿನ ಬದಲಿಗೆ ಕಮರ್ಷಿಯಲ್ ಗ್ರೌಂಡ್ಸ್ ಎಂದು ಸೂಚಿಸಲಿ ಎನ್ನುವುದಾಗಿದೆ.
ಅಲ್ಲಮ ಪ್ರಭು ರವರ ಶಾಸನ ಹೆಜ್ಜೆಗಳನ್ನು ಅಪಮಾನಿಕರಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್ ಇದೀಗ ವ್ಯಾಪಾರೀಕರಣದ ಕೇಂದ್ರ ಬಿಂದುವಾಗಿದ್ದು ಸ್ಥಳೀಯ ನಗರ ಶಾಸಕರಾದ ಎಸ್.ಎನ್ ಚೆನ್ನಬಸಪ್ಪನವರು ಇದು ಅನಾದಿಯ ಆಧ್ಯಾತ್ಮಿಕ ಜಗಲಿಯ ಶ್ರದ್ಧತೆಯ ಸಾಂಗತ್ಯವಾಗಿರುವ ಅಲ್ಲಮ ಪ್ರಭುವಿನ ವಿಚಾರ, ಆಚಾರ, ಅರಿವುಗಳ ಮೇಲಿನ ದಾಳಿ ಎನ್ನಬಹುದಾಗಿದೆ ಎನ್ನುವುದು ಮನನ ಮಾಡಿಕೊಳ್ಳಬೇಕಾಗಿದೆ,
ಹೆಸರನ್ನು ನಾಮಾಂಕಿತಗೊಳಿಸುವುದು ಮುಖ್ಯವಲ್ಲ, ಅದರಂತೆ ವಾತಾವರಣ, ಮೂಲೋದ್ದೇಶಗಳನ್ನು ಕಾಪಿಟ್ಟು ಕೊಳ್ಳಬೇಕಲ್ಲವೇ, ಇದು ಈ ಹೊತ್ತಿನ ಕಾಲಘಟ್ಟದವರೆಗೆ ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಅಲ್ಲಮ ಪ್ರಭುವಿನ ಹೆಸರಿನ ಮೇಲೆ ವ್ಯವಸ್ಥಿತವಾಗಿ ಮಸಿ ಬಳಿಯುವ ಬದಲು ಮಹಾತ್ಮರ ಹೆಸರನ್ನು ಗೌರವಯುತವಾಗಿ ಇರಿಸಲು ಫ್ರೀಡಂ ಪಾರ್ಕ್ಗೆ ಕಮರ್ಷಿಯಲ್ ಗ್ರೌಂಡ್ಸ್ ಎಂದೇ ಶಿವಮೊಗ್ಗದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನಾಮಾಂಕಿತಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿ, ಇದುವೆ ಸಾಮಾಜಿಕ ಹಾಗೂ ಆಧ್ಯಾತ್ಮಿಕ ನ್ಯಾಯವಾಗಿದೆ, ಮೊನ್ನೆಯಷ್ಟೆ ರಾಷ್ಟ್ರ ಮಟ್ಟದ ಕಾಳಗ ದ ಕಾರ್ಯಕ್ರಮ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟು ಇದೇ ಅಲ್ಲಮ ಪ್ರಭುವಿನ ಹೆಸರನ್ನು ದೇಣಿಗೆ ಲೆಕ್ಕಚಾರಗಳ ಕಾಳಗದೊಳು ತಗುಲಿ ಹಾಕಿ ಕೊಂಡಿತ್ತು,
ಇದೀಗ ಇಂಡಿಯನ್ ಎಂಟರ್ಟೈನರ್ ಎಂಬುವ ಖಾಸಗಿ ಸಂಸ್ಥೆಯೊಂದು ಮಲೆನಾಡು ಉತ್ಸವದ ಹೆಸರಿನಲ್ಲಿ ಪಕ್ಕಾ ಕಮರ್ಷಿಯಲ್ ದಂಧೆಗೆ ಮುಂದಾಗಿದ್ದು ಡೇಂಜರಸ್ ಹಾಗೂ ಬ್ಯಾನ್ ಆಗಿರುವ ಅನಾಹುತಕಾರಿ ಗೇಮ್ಸ್ಗಳನ್ನು ಇನ್ಸ್ಟಾಲೇಶನ್ ಮಾಡಿದೆ, ಭಾರಿ ಬೃಹತ್ ರೈಡ್ಗಳನ್ನು ಅಮ್ಯೂಸ್ಮೆಂಟ್ ಪಾರ್ಕ್ ನೇಮ್ನಲ್ಲಿ ಮಕ್ಕಳಿಗಾಗಿ ಭಾರಿ ಟವರ್ಗಳನ್ನು ಅಳವಡಿಸಿದ್ದು ಒಮ್ಮೆಲೆ ನೂರಾರು ಜನರು ಕೂತು ಡೇಂಜರಸ್ ಮ್ಹೂಮೆಂಟ್ಗಳನ್ನು ಸುರಕ್ಷಿತವಾಗಿ ಸಂಭ್ರಮಿಸಬಹುದು ಎಂದು ಖಾಸಗಿ ಜಾಹಿರಾತುಗಳನ್ನು ಕೂಡ ಶಿವಮೊಗ್ಗದಲ್ಲಿ ಹಂಚಿದ್ದಾರೆ, ಇನ್ನೂ ಜಾಹಿರಾತು ನೋಡಿದವರು ಅದೆಷ್ಟು ಸುರಕ್ಷಿತ ಎಂದು ಭಾವಿಸಬಹುದು, ಇಂತಹ ರೈಡ್, ಟವರ್, ಗೇಮ್ಸ್ಗಳು ಕಳಚಿ ಬಿದ್ದು ಧಾರುಣ ಸಾವುಗಳು ಸಂಭವಿಸಿರುವುದನ್ನು ಇಂದಿಗೂ ಯೂಟ್ಯೂಬ್ನಲ್ಲಿ ನೋಡಬಹುದಾಗಿದೆ, ಇದು ಸುರಕ್ಷಿತ ಎಂದು ಜಿಲ್ಲಾಡಳಿತ ಅನುಮತಿ ಕೊಟ್ಟಿರುವುದು, ದುರ್ಗಿಗುಡಿಯ ಕರ್ನಾಟಕ ವಿದ್ಯುತ್ ಪರಿವೀಕ್ಷಕರ ಇಲಾಖೆಯ ಅಧಿಕಾರಿಗಳು ಖುದ್ದು ಪರಿಶೀಲಿಸಿ ಪರವಾನಿಗೆ ಕೊಟ್ಟಿರುವುದು, ಮೆಸ್ಕಾಂ ಇಲಾಖೆ ತತ್ಕಾಲ್ ವಿದ್ಯುತ್ ಸರಬರಾಜು ಮಾಡಿರುವುದು, ನೋಡಿದರೆ ಇದೊಂದು ಅಧಿಕಾರಿಗಳ ಅಧಿಕಾರ ನ್ಯೂನ್ಯತೆ ಅಲ್ಲದೆ ಮತ್ತೇನು..?! ಇನ್ನೊಂದು ಸಂಗತಿ ಎಂದರೆ ಈಗಾಗಲೇ ಅನುಮತಿ, ಪರವಾನಿಗೆ ಪಡೆದ ಇಂಡಿಯನ್ ಎಂಟರ್ಟೈನರ್ ಸಂಸ್ಥೆ ಅಲ್ಲಮ ಪ್ರಭು ಫ್ರೀಡಂ ಪಾರ್ಕ್ನಲ್ಲಿ ಇನ್ನೂ ಮುಂದಿನ ಐವತ್ತು ದಿನಗಳ ತನಕ ಕೋಟ್ಯಾಂತರ ರೂಪಾಯಿ ದುಡಿಯಲು ಶುರುವಿಟ್ಟುಕೊಂಡಿದ್ದಾರೆ.
ಇಂತಿವುಗಳ ಬರಪೂರತೆಗಳು ನೋಡಿದಾಗ ಯಾವುದು ಬೇಡವೋ..? ಅದಕ್ಕೆ ಅನುಮತಿ ನೀಡುವ ಜಿಲ್ಲಾಡಳಿತ ಒಮ್ಮೆಲೆ ಯೋಚಿಸಬಹುದಿತ್ತಲ್ಲವೇ ಎನ್ನುವುದು ಪ್ರಶ್ನಾರ್ಹ ಸಂಗತಿಯಾಗಿದೆ, ಅಂದಿನ ಅನುಭವ ಮಂಟಪದೊಳು ಯಾವ ಜಾತಿಯತೆಯ ವಿಷವರ್ತುಲ, ವರ್ಗೀಕರಣ, ವರ್ಗಬೇದಗಳನ್ನು ಅಲ್ಲಗಳಿದು ಮನುಕುಲದ ಸಮಾನತೆಗೆ, ಸಹಭಾಳ್ವೆಗೆ ಕ್ರಾಂತಿಯ ಅಲೆ ಎಬ್ಬಿಸಿ ಅದಕ್ಕಾಗಿ ತ್ಯಾಗ, ಬಲಿದಾನಗಳ ಮಾಡಿದ್ದರೋ ಅಂತಹವರ ಹೆಸರಿನ ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಇದೀಗ ಜಾತಿಯತೆಯನ್ನು ಬಿಂಬಿಸುವ, ಪ್ರಚೋದಿಸುವ, ವರ್ಗೀಕರಣದ ಕಾರ್ಯಕ್ರಮಗಳಿಗೆ ಅಣಿಗೊಳಿಸಲು, ಅನುಮತಿಗಳನ್ನು ಕೊಡುತ್ತಿರುವುದು ದುರಂತದ ಪರಮಾವಧಿಯಲ್ಲದೆ ಮತ್ತೇನು..?!
ಇನ್ನೂ ತರಾವರಿ ಹಸಿ ಮಾಂಸಗಳಲ್ಲಿ ಸಿದ್ದತೆಗೊಳಿಸುವ ವಿವಿಧ ಬಗೆಯ ಖಾಧ್ಯಗಳ ಸಾಲು ಅಂಗಡಿಗಳು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಗೋಡೆ ಹಾಗೂ ಪುಟ್ಬಾತ್ಗಳನ್ನು ಅಕ್ರಮಿಸಿಕೊಂಡಿದೆ, ಇಲ್ಲಿನ ಹಾಸುಗಲ್ಲುಗಳು ಖಾಧ್ಯಗಳನ್ನು ತಿನ್ನುವುದಕ್ಕೆ ಬಳಕೆಯಾಗುತ್ತಿದ್ದರೆ ಒಳ ಆವರಣದಲ್ಲಿ ನಿಲ್ಲಿಸುವ ವಾಹನಗಳಲ್ಲಿ, ನಿತ್ಯ ಮದ್ಯಪಾನ ನಡೆಯುತ್ತಿರುವುದು ಮತ್ತೊಂದು ದುರಂತವಾಗಿದೆ,
ಇಂತಹ ಪರಮಾವಧಿಗಳ ಅತಿರೇಕಗಳಿಗೆ ಗುರಿಯಾಗುತ್ತಿರುವ ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಇವೆಲ್ಲವುದರಿಂದ ಮುಕ್ತಗೊಳ್ಳಲಿ ಅನುಮತಿ ಹಾಗೂ ಪರವಾನಿಗೆಗಳನ್ನು ನೀಡುವ ಇಲಾಖೆಗಳಿಗೆ ಒಂದಿಷ್ಟು ಈ ಕುರಿತಾಗಿ ನಿಚ್ಚಳ ಅರಿವು, ಕನಿಷ್ಟ ಜ್ಞಾನಗಳಿರಲಿ, ಈಗಾಗಲೇ ಕೊಟ್ಟಿರುವ ಅನುಮತಿಗಳನ್ನು ಹಿಂಪಡೆದು ಸಾಂಸ್ಕೃತಿಕ, ಸಾಹಿತ್ಯ ಹಾಗೂ ನೆಲದ ಪರಂಪರೆ, ಅನಾಹುತಕಾರಿಗಳಲ್ಲದ ಮನರಂಜನೆ, ಮನುಷ್ಯಮತದ ಕಾರ್ಯಕ್ರಮಗಳಿಗೆ ಮೀಸಲುಗೊಳಿಸಬೇಕೆನ್ನುವುದು ಈ ವರದಿಯ ಉದ್ದೇಶವಾಗಿದೆ.




