ಶಿವಮೊಗ್ಗ : ಈ ಹೊತ್ತಿನ ಕಾಲಘಟ್ಟದಲ್ಲಿ ನಾಗರೀಕ ಸಮುದಾಯಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ರವರ ಓದು, ಪ್ರಾಥಮಿಕ ಹಂತದ ತಿಳುವಳಿಕೆ ಅತ್ಯಗತ್ಯವಾಗಿದೆ ಎಂದು ಯುವ ವಕೀಲರು ಹಾಗೂ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂನ ನಿರ್ದೇಶಕರಾಗಿರುವ ರೇಖೇಶ್ ಮಾನೆ ತಿಳಿಸಿದರು. ಅಂದಿನ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ತಾರತಮ್ಯಗಳ ನೀತಿಗಳ ವಿರುದ್ದ ಸಮಗ್ರ ದನಿಯಾಗಿ ಶಿಕ್ಷಣ ಎಂಬುವ ಜ್ಞಾನಸಾಗರದ ಮೂಲಕ ಈ ದೇಶವಾಸಿಯ ಕಟ್ಟೆ ಕಡೆಯ ಶ್ರೀ ಸಾಮಾನ್ಯನ ಸೂರಿಗೂ ಪ್ರಜಾಸತ್ತಾತ್ಮಕವಾದ ಸಾಂವಿಧಾನಿಕ ನ್ಯಾಯವನ್ನು ತಲುಪಿಸುವಲ್ಲಿ ಶ್ರಮಿಸಿದವರು, ಅದಾಗ ಅವರೇ ಹೇಳುವಂತೆ ಸಾಂವಿಧಾನಿಕ ತೇರು ನಿಮ್ಮಗಳ ಮನೆ ಜಗಲಿನ ತಲುಪಿಸಿದ್ದೇನೆ, ಇದನ್ನು ಯಾವುದೇ ಕಾರಣಕ್ಕೂ ಮುಂದೆ ಎಳೆದೊಯ್ಯದಿದ್ದರೂ ಪರವಾಗಿಲ್ಲ ಹಿಂದೆ ಮಾತ್ರ ಏಳೆಯದಿರಿ, ಸಮಾನತೆ, ಸಾಮರಸ್ಯ ಸಹಭಾಳ್ವೆಗಳನ್ನು ತಳೆಯಿರಿ, ನಿಮ್ಮ ಹಕ್ಕುಗಳನ್ನು ನೀವೆ ಗುರುತಿಸಿಕೊಂಡು ಸಾಂವಿಧಾನವನ್ನು ಕಾಪಾಡಿಕೊಳ್ಳಿ ಎನ್ನುವ ಜನ ಸಮುದಾಯದ ಕಾಳಜಿ ಇಂದಿಗೂ ಪ್ರತಿಧ್ವನಿಸುತ್ತಲೇ ಇದೆ, ಈ ಕುರಿತಂತೆ ನಾಗರೀಕವಾಗಿ ಸಾಂವಿಧಾನಿಕ ಅರಿವು ಮೂಡಿಸುವ ಪ್ರಯತ್ನ ಸಂಘ ಸಂಸ್ಥೆಗಳಿಂದ ನಿರಂತರವಾಗಿರಲಿ ಎಂದು ರೇಖೇಶ್ ಮಾನೆ ಈ ಸಂದರ್ಭದಲ್ಲಿ ಅಭಿಪ್ರಾಯಿಸಿದರು.
ಈ ಮೊದಲು ಶಿವಮೊಗ್ಗ ನಗರದ ಸೂರ್ಯಗಗನ ಪತ್ರಿಕೆಯ ಆವರಣದಲ್ಲಿ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ನಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆಯನ್ನು ಪುಷ್ಪವನ್ನು ಅರ್ಪಿಸುವುದರ ಮುಖೇನ ಅಧ್ಯಕ್ಷರಾದ ಗಾರಾ.ಶ್ರೀನಿವಾಸ್ ಚಾಲನೆ ನೀಡಿದರು,
ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಮಾತನಾಡಿ ಶಿಕ್ಷಣದ ತಾರತಮ್ಯದ ಸಂದರ್ಭದಲ್ಲಿ ಶಿಕ್ಷಣವನ್ನು ಜೀವಾಳು ಆಗಿಸಿಕೊಂಡು ಅನೇಕ ಪದವಿಗಳನ್ನು ಪಡೆದು ಅದರ ಜ್ಞಾನವನ್ನು ಸಂವಿಧಾನದ ಮೂಲಕ ಸಮತೆಯ ಬಿತ್ತಿದ ಮಹಾಪುರುಷ, ಈ ದೇಶಕ್ಕೆ, ಪ್ರಜೆಗಳಿಗೆ ಬದುಕುವ ಸಮಾನತೆಯ ಹಕ್ಕುಗಳ ಗ್ರಂಥವನ್ನು ಅರ್ಪಣೆ ಮಾಡಿ ಜೀವಪರ ನಿಲುವುಗಳನ್ನು ಎತ್ತಿ ಹಿಡಿದರು ಎಂದು ತಿಳಿಸಿದರು.
ಸಂಸ್ಥೆಯ ಕಾನೂನು ಮಾರ್ಗದರ್ಶಕರಾದ ಗೀತಾ ಮಾನೆ ಅವರು ರಂಗೋಲಿಯನ್ನು ಚಿತ್ರಿಸುವುದರ ಮುಖೇನ ಈ ಆಚರಣೆಗೆ ಮೆರಗು ತಂದುಕೊಟ್ಟರು ಅಲ್ಲದೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂನ ಮುಖ್ಯ ಉದ್ದೇಶವಾಗಿರುವ ಟ್ಯಾಗ್ ಲೈನ್ ಆಗಿರುವ ಅನಾದಿ ಕಾಲದ ಕನ್ನಡದ ಪಂಪರವರ ಘೋಷ ವಾಕ್ಯವಾದ ಮನುಷ್ಯ ಜಾತಿ ತಾನೋಂದೆ ವಲಂ ಎನ್ನುವ ಕನ್ನಡದ ಅಕ್ಷರಗಳನ್ನು ರಂಗೋಲಿಯಲ್ಲಿಯೇ ಬರೆದು ಗಮನ ಸೆಳೆದರು. ಈ ಘೋಷಿತ ವಾಕ್ಯವು ಈ ನೆಲದ ಪ್ರತಿ ಮನೆಗೆ ತಲುಪಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಲ್.ಕೆ ಪರಮೇಶ್, ನಿರ್ದೇಶಕರಾದ ಚಿರಂಜೀವಿ ಬಾಬು, ಅನಿಲ್ ಕುಮಾರ್ ಹೆಚ್.ಎಲ್, ಭರತ್ ಗುತ್ತಿ, ಯೋಗೇಶ್ ಮಾನೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.




