ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಹಾದು ಹೋಗುತ್ತಿದ್ದ I ಮಹಿಳೆ ಕೈ ಮುಗಿದು ನಿಂತಳು..I
ಭಾರತದಲ್ಲಿ ಸಂವಿಧಾನದ ಹೊರತಾಗಿ ಬದುಕು ಕಟ್ಟಿ ಕೊಳ್ಳುವುದಕ್ಕೆ ಸಾಧ್ಯವೇ..?! ಸಂವಿಧಾನದೊಳಗೆ ನಾವಿದ್ದರೂ ಪಂಥಿಯ ವಾದಗಳು, ಮತೀಯ ವಾದಗಳು, ಅಧಿಕಾರ ಹಪಾಹಪಿತನಗಳು ಶ್ರೀ ಸಾಮಾನ್ಯರಿಗೆ ಕಡುಶಾಪವಾಗಿ ಕಾಡುತ್ತಲೇ ಇದೆ, ಆದರೆ ಯಾವ ಬದುಕಿಗೆ ಸಾಂವಿಧಾನಿಕ ಅರಿವು, ಓದು, ತಿಳುವಳಿಕೆ ಇರುತ್ತದೋ ಅಂತಹ ಬದುಕು ಇಂತಿವುಗಳನ್ನು ಪ್ರಶ್ನಿಸುತ್ತದೆ, ಹೋರಾಟವೂ ನಡೆಸುತ್ತದೆ, ಹೀಗಾಗಿಯೇ ಡಾ.ಬಿ.ಆರ್ ಅಂಬೇಡ್ಕರ್ ರವರು ಜನಸಾಮಾನ್ಯರ ‘ ಬದುಕಿನ ಧಾತ ‘ ಎಂದೇ ಬಿಂಬಿತವಾಗುತ್ತಾರೆ, ಈ ಟಿಪ್ಪಣಿಯೊಂದಿಗೆ ಇಂದು ಬೆಳ್ಳಂ ಬೆಳಿಗ್ಗೆ ಸಾಕ್ಷಾತ್ ದರ್ಶಿಸಿಕೊಂಡ ಒಂದು ಸಂಗತಿಯನ್ನು ಇಲ್ಲಿ ಲಗತ್ತಿಸುತ್ತೇನೆ,.
ಇಂದು ಸುಮಾರು 8 ಗಂಟೆಯ ಸಮಯ ಕಾರ್ಯನಿಮಿತ್ತವಾಗಿ ಮಹಾನಗರ ಪಾಲಿಕೆಯ ಮುಂಭಾಗದ ಇಕ್ಕೆಲದಲ್ಲಿ ನಿಂತಿದ್ದೆ, ಅಲ್ಲಿ ಓರ್ವ ಮಹಿಳೆ ಹಾದು ಹೋಗುತ್ತಿದ್ದರು, ಅವರು ಪಾಲಿಕೆಯ ಧ್ವಾರಬಾಗಿಲಿಗೆ ಅಲಂಕರಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ದಿನಮಾನದ ಹೂವಿನ ತೋರಣಗಳು, ಭಾವಚಿತ್ರ ನೋಡಿ ಒಮ್ಮೆಲೆ ಬೆರಗು ಆಗುವಂತೆ ದಿಟ್ಟಿಸಿದಳು, ಹಾಗೇಯೇ ಏನನ್ಮೋ ನೆನೆದವಳಂತೆ ವರ್ತಿಸಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಕೃತಜ್ಞತಾ ಭಾವದಿಂದ ಕೈ ಮುಗಿದು ನಿಂತು, ನಮಸ್ಕರಿಸಿದಳು,
ತುಸು ಹೊತ್ತು ಅದೇ ಧನ್ಯತಾ ಭಾವದೊಳು ಮುಂದೆ ಸಾಗಿ ಹೋಗುತ್ತಿದ್ದನ್ನು ಕಂಡು ವಿಡಿಯೋ ಮಾಡಿದೆ, ಹಾಗೇ ಆ ದಾರಿ ಹೋಕ ಮಹಿಳೆಯ ಬದುಕಿಗೆ ಸಂವಿಧಾನಿಕ ರಕ್ಷಣೆ ಸಿಕ್ಕಿದೆ ಎಂದೆನಿಸಿತು, ಮಹಿಳೆಯ ಮತ ಮೌಲ್ಯಗಳ ಹಕ್ಕುಗಳನ್ಮು ಸಾಂವಿಧಾನಿಕವಾಗಿ ತಂದು ಕೊಟ್ಟ ಅಂಬೇಡ್ಕರ್ ಪ್ರಸ್ತುತ ಸಮಾಜದ ಅವಧೂತ ಎಂದೇ ಈ ಸಂದರ್ಭದಲ್ಲಿ ಭಾವಿಸುತ್ತೇನೆ, ಈ ಸಮಾಜದ ಎಲ್ಲಾ ಬದುಕುಗಳು ಸಂವಿಧಾನದ ಓದು ನಿರಂತರವಾಗಿರಲಿ, ಈ ಮೂಲಕ ಬದುಕಿನ ಭದ್ರತೆ, ದೇಶದ ಸಮಗ್ರತೆಗೆ ಕಾರಣವಾಗಲಿ ಎಂಬುದು ನನ್ನಯ ಅಂಬೋಣ.