Tuesday, September 15, 2026
Homeಸೂರ್ಯಗಗನI ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ...

I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I

I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I

ಶಿವಮೊಗ್ಗ,: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಶನಿವಾರದಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಮೆಡಿಸಿನ್ ಜನರಲ್ ವಾರ್ಡ್ ಗೆ ಭೇಟಿ ನೀಡಿ, ಮಹಿಳಾ ಒಳರೋಗಿಗಳೊಂದಿಗೆ ಮಾತನಾಡಿ, ಅಲ್ಲಿನ ನೈರ್ಮಲ್ಯ ಹಾಗೂ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಮತ್ತು ಅವರ ಸಂಬಂಧಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಉಚಿತ ಔಷಧ ಸರಬರಾಜು, ವೈದ್ಯರ ಲಭ್ಯತೆ ಹಾಗೂ ಸಿಬ್ಬಂದಿಯ ನಡೆ-ನುಡಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಹೊರಗಿನಿಂದ ಔಷಧಿಗಳನ್ನು ತರಲು ಬರೆದುಕೊಡುತ್ತಾರಾ? ಉಚಿತವಾಗಿ ಕೊಡ್ತಾರಾ? ಕುಡಿಯುವ ನೀರು ಲಭ್ಯವಿದೆಯಾ, ಶೌಚಾಲಯದಲ್ಲಿ ನೀರು ಹಾಗೂ ಸ್ವಚ್ಚತೆ ಇದೆಯಾ ಎಂದು ಒಳರೋಗಿಗಳೊಂದಿಗೆ ವಿಚಾರಿಸಿದರು. ಸಿಬ್ಬಂದಿಗಳು, ಸ್ವಚ್ಚತಾ ಸಿಬ್ಬಂದಿಗಳ ವೇತನ, ಸೌಲಭ್ಯಗಳ ಬಗ್ಗೆ, ಎಬಿಎಆರ್ ಕೆ ಸೌಲಭ್ಯದ ಬಗ್ಗೆ ಪರಿಶೀಲಿಸಿದರು. ದುಡಿಯುವ ಮಗ ತೀರಿಕೊಂಡಿದ್ದು, ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಗಿದ್ದು ಇದರಿಂದ ತಾಯಿಯವರ ಡಯಾಲಿಸಿಸ್ ಮಾಡಿಸುವುದು ಕಷ್ಟ ಆಗುತ್ತಿರುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದ ಮಹಿಳೆ ಕುರಿತು, ಆಹಾರ ಇಲಾಖೆಯ ಉಪ ನಿರ್ದೇಶಕ ರೊಂದಿಗೆ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಅನುಕೂಲ ಮಾಡುವಂತೆ ತಿಳಿಸಿದರು.

ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ: ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಗರ್ಭಿಣಿಯರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ತಡೆಯಲು, ನೋಂದಣಿ ಹಾಗೂ ಚಿಕಿತ್ಸಾ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈ ಹಿಂದೆಯೇ ಸೂಚಿಸಿದ್ದೆ ಎಂದು ಕೌಂಟರ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ರೋಗಿಗಳಿಗೆ ತೊಂದರೆಯಾಗದಂತೆ ಆಸ್ಪತ್ರೆಯ ಆಡಳಿತದಲ್ಲಿ ಉತ್ತರದಾಯಿತ್ವ ತರಲು ಹಾಗೂ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ವೇಳೆ ಒಳರೋಗಿಗಳು, ಮತ್ತು ಅವರ ಕಡೆಯವರು ರೋಗಿಗಳ ಕೈಯಲ್ಲೇ ಲ್ಯಾಬ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗುತ್ತದೆ.‌ ಪರೀಕ್ಷೆಗಳ ವರದಿ ಸಿಗುವುದು ತುಂಬಾ ತಡ ಮತ್ತು ಸಾಕಷ್ಟು ಓಡಾಟ ಆಗಿ ಕಷ್ಟವಾಗುತ್ತಿದೆ ಎಂದು ದೂರಿದಾಗ, ವರದಿಗಳನ್ನು ಡಿಜಿಟಲೈಜ್ ಮಾಡಿಸುವ ಬಗ್ಗೆ, ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶೀಘ್ರವಾಗಿ ನೀಡುವ ಬಗ್ಗೆ ಸೂಚನೆಗಳನ್ನು ನೀಡಿ, ರೋಗಿಗಳಿಗೆ ನೀಡುವ ಮೊಟ್ಟೆ, ಬಾಳೆಹಣ್ಣು, ಆಹಾರ ಹಾಗೂ ಶೌಚಾಲಯ ಕುರಿತು ವಿಚಾರಿಸಿ ಮಾಹಿತಿ ಪಡೆದುಕೊಂಡರು.

ಸ್ವಚ್ಛತೆಯ ಕೊರತೆ: ಆಸ್ಪತ್ರೆಯ ವಾರ್ಡ್‌ಗಳಲ್ಲಿ ಮತ್ತು ಶೌಚಾಲಯಗಳಲ್ಲಿ ಸೂಕ್ತ ಸ್ವಚ್ಛತೆ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಹಾಗೂ ವಾರ್ಡ್‌ಗಳ ಹಿಂಭಾಗದ ಕಿಟಕಿಗಳು ಮುರಿದುಬಿದ್ದಿದ್ದು, ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಬೆಡ್ ಹಾಗೂ ವಾರ್ಡ್‌ಗಳ ಸುತ್ತಲೂ ವಿಪರೀತ ಧೂಳು ತುಂಬಿದ್ದು, ತಕ್ಷಣವೇ ಇವುಗಳನ್ನು ಸರಿಪಡಿಸಲು ಸೂಚಿಸಿದ್ದೇನೆ ಎಂದರು.
ಔಷಧಗಳ ವಿತರಣೆ: ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬರೆದುಕೊಡಬಾರದು, ಆಸ್ಪತ್ರೆಯ ಈ-ಫಾರ್ಮಸಿಯಲ್ಲೇ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ: ಎಲ್ಲ ವಾರ್ಡ್‌ಗಳಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು. ತಾಯಿ ಮತ್ತು ಮಕ್ಕಳಿಗಾಗಿ ನಿರ್ಮಿಸಲಾಗಿರುವ ನೂತನ ಎಂಸಿ ಹೆಚ್ ಆಸ್ಪತ್ರೆಯನ್ನು ಶೀಘ್ರದಲ್ಲೇ ಆರಂಭಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಶೌಚಾಲಯ ಮತ್ತು ಕುಡಿಯುವ ನೀರಿನ ನೈರ್ಮಲ್ಯವನ್ನು ಪ್ರಥಮ ಆದ್ಯತೆಯಾಗಿ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಂತರ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯಲ್ಲಿ ಮಹಿಳೆಯರಿಗೆ ಲಭ್ಯವಿರುವ ಮೂಲಸೌಕರ್ಯಗಳು, ದೂರುಗಳ ಸ್ವೀಕಾರ ಮತ್ತು ನಿರ್ವಹಣೆ, ಮಹಿಳೆಯರ ನಾಪತ್ತೆ ಪ್ರಕರಣಗಳು ಹಾಗೂ ಕ್ರಿಮಿನಲ್ ಪ್ರಕರಣಗಳ ತನಿಖೆಯ ಸ್ಥಿತಿಗತಿಗಳನ್ನು ಅವರು ಪರಿಶೀಲಿಸಿದರು. ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ವಯ ಆಂತರಿಕ ದೂರು ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆ ನಡೆಸಿ, ಮಹಿಳಾ ಸಿಬ್ಬಂದಿಗೆ ಸುರಕ್ಷಿತ ಕಾರ್ಯನಿರ್ವಹಣೆಯ ವಾತಾವರಣ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಿ, ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಪ್ರವೇಶ ದ್ವಾರದಲ್ಲೇ ಎಲ್ಲಾ ಸಹಾಯ ವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು ಹಾಗೂ ಸಹಾಯವಾಣಿ ಕ್ಯು ಆರ್ ಕೋಡ್ ನ್ನು ದೊಡ್ಡದಾಗಿ ಹಾಕುವಂತೆ ತಿಳಿಸಿದರು. ತಿಂಗಳಿಗೆ ದಾಖಲಾಗುವ ಪ್ರಕರಣಗಳ ಬಗ್ಗೆ ಪರಿಶೀಲಿಸಿದರು. ‌ ಭೇಟಿ ವೇಳೆ ಸಿಮ್ಸ್ ನಿರ್ದೇಶಕ ಡಾ.ರಮೇಶ್ ಬಾಬು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಡಿಹೆಚ್ ಓ ಡಾ.ನಟರಾಜ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಣಕಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news