I ನಗರದ ಜನರ ಹಿತರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆ I ಶಾಸಕ ಚೆನ್ನಬಸಪ್ಪ I
ಶಿವಮೊಗ್ಗ : ವಿಧಾನಸಭೆ ಅಧಿವೇಶನದಲ್ಲಿ ಕೊಳಚೆ ಪ್ರದೇಶಗಳ ಹಾಗೂ ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆದಿದ್ದೆ. ಅದರ ಮುಂದುವರಿದ ಭಾಗವಾಗಿ, ಮಾನ್ಯ ಸಭಾಧ್ಯಕ್ಷರ ಸೂಚನೆಯಂತೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ಮಬಸಪ್ಪನವರು ಸಭೆ ನಡೆಸಿದರು,
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಖಾರಾಬು ಕಟ್ಟೆ, ಕೆರೆ ಹಾಗೂ ವಿವಿಧ ಸರ್ಕಾರಿ ಜಮೀನುಗಳಲ್ಲಿನ 6 ಘೋಷಿತ ಕೊಳಚೆ ಪ್ರದೇಶಗಳಲ್ಲಿ ದಶಕಗಳಿಂದ ನೆಲೆಸಿರುವ ಬಡ ಕುಟುಂಬಗಳಿಗೆ ಕಾನೂನುಬದ್ಧ ಭದ್ರತೆ ಒದಗಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಜಮೀನು ವರ್ಗಾವಣೆ ಪ್ರಕ್ರಿಯೆಯಲ್ಲಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ, ಅರ್ಹ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸುವ ಕುರಿತು ಹಾಗೂ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣವನ್ನು ತ್ವರಿತಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿದ್ದ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಲಿಕಟ್ಟಿ ಅವರು ಜಮೀನು ಲಭ್ಯತೆ ಮತ್ತು ಜಿಲ್ಲಾಡಳಿತದ ಮುಂದಿರುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಸಚಿವರಿಗೆ ವಿಸ್ತೃತ ಮಾಹಿತಿ ನೀಡಿದರು. ವಸತಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಕೊಳಗೇರಿ ಮಂಡಳಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು. ಬಡವರ ಸ್ವಂತ ಮನೆಯ ಕನಸನ್ನು ನನಸು ಮಾಡುವವರೆಗೂ ನಮ್ಮ ಈ ಹೋರಾಟ ಮತ್ತು ಪ್ರಯತ್ನ ನಿರಂತರವಾಗಿರಲಿದೆ ಎಂದು ವಿವರಿಸಿದರು


