I ರಾಜ್ಯದೊಳು ಅನಾಹುತಕಾರಿ ಆತ್ಮರತಿ ಪತ್ರಕರ್ತರ ದಂಡಿದೆ ಗೊತ್ತೇ..?! I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ರಾಜ್ಯದೊಳು ಅನಾಹುತಕಾರಿ ಆತ್ಮರತಿ ಪತ್ರಕರ್ತರ ದಂಡಿದೆ ಗೊತ್ತೇ..?! I ಈ ಹೊತ್ತಿನಲಿ ಒಂದು ಪ್ಲೆಕ್ಸಿಗಿರುವ ಬೆಲೆ ಸ್ಥಳೀಯ ಪತ್ರಿಕೆಗಳಿಗಿಲ್ಲ ಗೊತ್ತೇ..? I
ಪತ್ರಿಕೆ ಎಂಬುದು ರಾಷ್ಟ್ರದ ನಾಲ್ಕನೇ ಅವಿಭಾಜ್ಯ ಅಂಗ, ಇದೊಂದು ಜನಮೌಲ್ಯಧಾರಿತ ಅಭಿವ್ಯಕ್ತಿಗಳ ಜರೂರಿಗೊಳಿಸುವುದು, ಆಡಳಿತಷಾಯಿಯ ವೇದಿಕೆ ವಿರುದ್ದ ವಿಪಕ್ಷೀಯ ಸ್ಥಾನಗಳಲ್ಲಿ ಕೂತು ಪ್ರಶ್ನಿಸುವುದು, ಸುದ್ದಿಯ ರೂಪದಲಿ ಎಚ್ಚರಿಸುವುದು, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದು, ಹೀಗೆ ಹೇಳಿಕೊಳ್ಳುವುದಕ್ಕೆ ನೂರು ಪದ ಪುಂಜಗಳ ಸಗಟುಗಳಿದೆ, ಹಿಂದೊಮ್ಮೆ ಓರ್ವರು ಬರೆದಂತೆ ಪತ್ರಕರ್ತರು ಪತ್ರಕರ್ತರನ್ನೆ ಶೋಷಣೆಗೈಯುತ್ತಿದ್ದಾರೆ ಎನ್ನುವ ಉವಾಚ ಪ್ರಸ್ತುತ ಕಾಲಘಟ್ಟದಲ್ಲಿಯು ರವ ರವ ನರಳಿಕೆಯಲ್ಲಿ ನಲುಗುತ್ತಿದೆ,
ಇಲ್ಲಿ ಜಾತಿಯತೆ ಇಲ್ಲ ಎಂದೇಳುತ್ತಾರೆ, ಮತ ಪಂಥಗಳು ಇಲ್ಲ ಎನ್ನುತ್ತಾರೆ, ಬಲಿತವರೊಂದಿಗೆ ಹೊಂದಾಣಿಕೆಗಳಿಲ್ಲ, ರಾಜಕೀಯ ರಂಗದವರೊಂದಿಗೆ ಯಾವ ಸಂಬಂಧಗಳಿಲ್ಲ, ಇನ್ನೋರ್ವ ಪ್ರತಿಭಾನ್ವಿತ ಪತ್ರಕರ್ತರ ಬರಹಗಳು, ವೃದ್ದಿತ್ವಗಳ ಕುರಿತಾಗಿ ಅಸಹಿಸುವಿಕೆ ಅಥವಾ ಅಸಹಿಷ್ಣುತೆಗಳಿಲ್ಲ, ಇಂತಿವರ ಬಗ್ಗೆ ನಿಜಕ್ಕೂ ಇರ್ಷೆಗಳಿಲ್ಲ, ಜಿಜ್ಞಾಸೆಗಳಿಲ್ಲ ಎಂದು ಪ್ರಮಾಣಿಕರಿಸುತ್ತಾರೆ, ಕರೆನ್ಸಿ ಬೈಟ್ಸ್‌ಗಳಿಲ್ಲ, ಕರೆನ್ಸಿ ಸುದ್ದಿಗಳಿಲ್ಲ, ಹೈ ಪ್ರೋಪೈಲ್ ಆತ್ಮರತಿಗಳೊಡ್ಡಿ ತನ್ನದೇ ಜೆನ್ಯೂನಿಟಿ ಹೇಳಿಕೊಳ್ಳುವ ಪ್ರಯತ್ನ ಮಾಡಿಯೇ ಇಲ್ಲ, ಶಾಸಕರು, ಸಂಸದರು, ಸಚಿವರುಗಳ ಹಾದಿಯಾಗಿ ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳೊಂದಿಗೆ ತಾವಲ್ಲದೆ ಮತ್ತೋರ್ವ ಪತ್ರಕರ್ತ ಎಂದಿಗೂ ಉತ್ತಮ ಜನೋಪಯೋಗಿ ಸಹಬಾಗಿತ್ವ, ಮಾತುಕತೆಯ ಸಾಂಗತ್ಯಗಳಿದ್ದದ್ದೂ ಸಾರ್ವಜನಿಕವಾಗಿ ದರ್ಶಿಸಿಕೊಂಡರೆ, ಮುಗೀತು ಇಂತಹ ಕೊಂಡಿಯನ್ನು ಆದಷ್ಟು ಬೇಗದಿ ಬ್ರೇಕ್ ಮಾಡುವ ದಿನಮಾನದ ಕೊನೆತುದಿವರೆಗೆ ಬೇಗುದಿಗೆ ಒಳಗಾಗಿಲ್ಲ, ತಾವೇ ಜೆನ್ಯೂನಿಟಿ ಪತ್ರಕರ್ತ, ಅವರಲ್ಲ, ತಾನೇ ಸರ್ವೋತ್ತಮ ಇಡೀ ಪತ್ರಿಕಾರಂಗದ ಪಿತಾಮಹನೆನ್ನುವ ಆತ್ಮರತಿಯ ಫಲಕ ಪ್ರದರ್ಶಿಸಿಲ್ಲ, ಆಡಳಿತರೂಢಾತ್ಮರೊಂದಿಗೆ ಶಾಮೀಲಾಗಿ ಪತ್ರಕರ್ತರ ಜೀವನವನ್ನೇ ಮನಸ್ಸೋ ಇಚ್ಚೆ ಮಾನಸೀಕವಾಗಿ ಆತ್ಯಾಚಾರ ಎಸಗಿಲ್ಲ, ಅವನು ನಕಲಿ ಪತ್ರಕರ್ತ, ಪತ್ರಿಕೆಗಳಿಲ್ಲ, ಇದ್ದರೂ ಪ್ರಚುರದಲ್ಲಿಲ್ಲ, ಇನ್ನೂ ಮುಂತಾದ ಆರೋಪಗಳು ಮಾಡಿಯೇ ಇಲ್ಲ, ಇಂತಹ ನೂರಾರು ನಮೂನಿ ಡ್ರಾಮಿಸ್ಟ್‌ಗಳ ರಂಗನರ್ತನಗಳು ಈ ಹೊತ್ತಿನ ಪತ್ರಿಕಾ ರಂಗದಲ್ಲಿ ಈಗಾಗಲೇ ಖಾಯಂ ನೊಂದಣಿಗೊಂಡಿವೆ, ಇದೊಂದು ಪತ್ರಿಕಾ ಲೋಕದ ವಿಕೃತ ಶಾಸನ ವಿಕಲ್ಪಿತ ಹೆಜ್ಜೆಗಳಿವು, ಖಂಡಿತವಾಗಿಯು ಇಂತಿವುಗಳು ಅಕ್ಷರಶಃ ಜಾರಿಯಲ್ಲಿಯೂ ಇವೆ, ಇದಕ್ಕೆ ಹಸಿ ಉದಾಹರಣೆಗಳೂ ಇವೆ.
ಹೀಗಾಗಿ ಪತ್ರಕರ್ತರು ಪತ್ರಕರ್ತರಾಗಿ ಜೀವನರೂಪಿಸಿಕೊಂಡವರು, ಇಂತಹ ಒಳಹೂರಣದಂತಹ ಸಾಂಕ್ರಮಿಕ ವೈರಸ್ ಅನಾಹುತವನ್ನು ಅರಿತುಕೊಳ್ಳಬೇಕು, ಅರಿತುಕೊಂಡು ಮೌನದಲ್ಲಿಯೇ ಬರಹದ ಕೈಂಕರ್ಯದಲ್ಲಿ ಇನ್ನಷ್ಟು, ಮತ್ತಷ್ಟು ತನ್ನ ಅಭಿವ್ಯಕ್ತಿಯಡಿಯಲ್ಲಿಯೇ ಮುಂದಡಿಯಾಗಬೇಕು, ಒಂದಷ್ಟು ಆತ್ಮರತಿಯಂತಹ ಮಾನಸೀಕತೆಯವರು ತನ್ನನ್ನೇ ತಾನು ಶ್ಲಾಘಿಸಿಕೊಳ್ಳುವ ಪರಮಮೂರ್ಖತನದ ಪರಮಾವಧಿಗೆ ಒಳಗಾಗಿ, ಇನ್ನೋರ್ವ ಸಹುದ್ಯೋಗಿ ಪತ್ರಕರ್ತರ ಜೀವನವನ್ನು ಜೀವಂತವಾಗಿ ದಹಿಸಿಬಿಡುವ ಬಲು ನಿಕರ್ಮಿಗಳು ಪತ್ರಿಕಾರಂಗದಲ್ಲಿ ಜಡತ್ವದಿ ಮೊಕ್ಕಾಂ ಹೂಡಿಕೊಂಡಿದ್ದಾರೆ, ಇವರನ್ನು ಅಲುಗಾಡಿಸಲು ಸಾಧ್ಯವೂ ಆಗದು, ಏಕೆಂದರೆ ಈಗಾಗಲೇ ಜಿಲ್ಲಾರಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರೇ ಉನ್ನತ ವಲಯದ ಅಧಿಕಾರಿಗಳೊಂದಿಗೆ ಪಾರ್ಟಿಕ್ಲಬ್‌ಗಳಲ್ಲಿ ಭಾಗಿಯಾಗಿ ಸಮಾ ಪಾನಮತ್ತರಾಗಿ ತಮ್ಮ ಆತ್ಮರತಿಯಂತಹ ಜೆನ್ಯೂನಿಟಿಗಳ ಪ್ರಮಾಣಪತ್ರವನ್ನು ಅವರುಗಳ ಎದೆಗಳ ಮ್ಯಾಲೆ ಲಗತ್ತಿಸಿ ಬಿಟ್ಟಿರುತ್ತಾರೆ, ಇಂತಹ ಕಂಟ್ರೋಲಿಂಗ್ ಸ್ಥಿತಿಗಳು ಈ ಭ್ರಷ್ಟ ಅಧಿಕಾರಿಗಳಿಗೂ ಬೇಕಿರುತ್ತದೆ, ಹೀಗಾಗಿ ಇಂತಿವ ಆತ್ಮರತಿಗಳ ವಿಕೃತತೆಯ ಸಮಪಾಲಿನಂತೆ ಲೇಪಿಸಿಕೊಂಡಿರುತ್ತಾರೆ, ಇದರಲ್ಲಿ ಕೆಲವರು ಪತ್ರಿಕಾ ವಲಯವನ್ನು ಸಮಸ್ಥಿತಿಯಲ್ಲಿ ಕಂಡು ತಮ್ಮ ಜವಾಬ್ದಾರಿಯನ್ನು ಉಳಿಸಿಕೊಂಡು ವರ್ಗಾವಾಗಿ ಹೋಗಿದ್ದು ಉದಾಹರಣೆಗಳಿದೆ, ಈ ಸಾಲಿನಲ್ಲಿ ಕೆಲವರು ಮಾತ್ರ ಎನ್ನಬಹುದಾಗಿದೆ ಇನ್ನೂಳಿದವರು ಈ ಅರೆಬೆಂದ ಮಾತುಗಳನ್ನು ನಂಬಿ, ವಾಸ್ತವಾಂಶದ ಅರಿವಿದ್ದರೂ ತಾಳಕ್ಕೆ ಮೇಳ ಎನ್ನುವಂತೆ ಕುಣಿದು ಕುಣಿಯೊಳಗೆ ಪರಿತಪಿಸಿದ ಅಸಲಿ ಸಂಗತಿಗಳಿವೆ, ಇಂತಹ ಸಂಗತಿಗಳನ್ನು ಕೂಡ ಉನ್ನತ ಮಟ್ಟದ ಅಧಿಕಾರಿಗಳ ವಲಯ ಅವಲೋಕಿಸಿಕೊಳ್ಳಬೇಕಾಗಿದೆ.
ಇನ್ನೂ ಆಯಾ ಶಾಸಕರು, ಸಂಸದರು, ಸಚಿವರು, ಇನ್ನೂಳಿದ ಖಾಲಿ ಫಲಾವ್ ರಾಜಕಾರಣಿಗಳು ಕೂಡ ಇಂತಹುದೇ ಕೂಪಕ್ಕೆ ಇಂದಿಗೂ ಒಳಗಾಗುತ್ತಲೇ ಇರುತ್ತಾರೆ, ಅಲ್ಲದೆ ರಾಜಕೀಯ ಎಡವಟ್ಟು ಮಾಡಿಕೊಂಡು ಹೈರಾಣಗೊಂಡಿರುವ ಅನೇಕತೆಗಳಿವೆ, ರಾಜಕೀಯ ನಾಯಕರು ಎನ್ನುವ ಈ ಅಸಾಮಿಗಳಿಗೆ ಯಾವುದು, ಸತ್ಯ, ಯಾವುದು ಮಿಥ್ಯ..? ಎನ್ನುವ ತರ್ಕಕ್ಕೆ ಮನಸುಗೊಡದೆ, ಜಾಹಿರಾತುಗಳು, ಔತಣಕೂಟಗಳು, ಗಿಪ್ಟ್‌ಗಳು, ಬೆಂಬಲಿತ ಪೋನ್ ಕಾಲ್‌ಗಳು ರಿಂಗಣಿಸುವುದು, ಈ ಆತ್ಮರತಿಯಂತಹ ಮಾನಸೀಕ ಪರ್ತಕರ್ತರ ಕಿವಿ ಊದುವಿಕೆಗಳೆಂಬುದು ಇಂದಿಗೂ ಹಲವು ಬೆಳವಣಿಗೆಗಳಿಂದ ಎನ್ನಬಹುದು, ಹೌದು ನಾನಿಲ್ಲಿ ಔತಣಕೂಟಗಳು, ಗಿಪ್ಟ್‌ಗಳ ಬಗ್ಗೆ ಲಗತ್ತಿಸಿದ್ದೇನೆ, ಯಾರು ಇದು ಬೇಡ ಎಂದು ಪುಂಕಾನುಪುಂಕವಾಗಿ ಹೇಳುತ್ತಾರೋ ಮೊದಲು ಅವರ ಕಛೇರಿ, ಮನೆಗಳಿಗೆ ಇದು ತಲುಪಿಸಿಕೊಂಡು ಉಳಿದವರು ಕಂಡಂತೆ ಎಂದು ಸೈಡಾಗಿ ಬಿಡುತ್ತಾರೆ..! ಇದುವೇ ಅಂದರ್-ಬಾಹರ್ ಎನ್ನುವ ಥೇಟ್ ಜುಗಾರಿ ಆಟಗಳಿದ್ದಂತೆ ಇಲ್ಲಿನ ಬಹತೇಕ ಮೌಲ್ಯಾಧಾರಿತ ನಿಲುವುಗಳಾಗಿದೆ, ಇನ್ನೂ ಸಾಂದರ್ಭಿಕವಾದ ಚುನಾವಣೆಗಳು, ಇವೆಂಟ್ಸ್‌ಗಳು, ಜಾಹಿರಾತು, ಕರೆನ್ಸಿ ಸುದ್ದಿಗಳು, ವ್ಯಾಪಕಗೊಳ್ಳಲು ಲಕ್ಷಾಂತರ ರೂ ವೆಚ್ಚದಲ್ಲಿ ಪ್ಯಾಕೇಜ್ ಕೊಟ್ಟಿರುತ್ತಾರೆ, ಇದು ಸರಿಯಾಗಿದೆ ಎನ್ನುವ ಆತ್ಮರತಿ ಪತ್ರಕರ್ತರೆಂದಿಗೂ ಇದರ ವಿರುದ್ದ ಸಿಡಿದೇಳುವ ಪತ್ರಕರ್ತರ ಮೇಲೆ ಸಲ್ಲದ ಆರೋಪಗಳ ಮದ್ದು-ಗುಂಡು ಸಿಡಿಸಿ, ಇದೇ ಅಧಿಕಾರದಂಚಿನಲ್ಲಿರುವ ಆಡಳಿತರೂಢ ಜನಪ್ರತಿನಿಧಿಗಳಿಂದ ಹಾಗೂ ಖಾಲಿ ಫಲಾವ್ ಪೊಲೀಟಿಕಲ್ ಆಸಾಮಿಗಳಿಂದ ಗುರಿ ಮಾಡಿಸಿ ಅಂತಹ ಪತ್ರಕರ್ತರ ಜೀವನವನ್ನು ಮಸಣಗೈದು ಬಿಡುವ ಪ್ರಕರಣಗಳು ರಾಜ್ಯದಲ್ಲಿ ಈ ಹೊತ್ತಿಗೂ ಜಾರಿಯಲ್ಲಿದೆ.
ಇಂತಹ ಪ್ಯಾಕೇಜ್ ಸಿಸ್ಟಮ್‌ಗಳು ಚುನಾವಣೆಗಳನ್ನು ಎದುರಿಸುವ ರಾಜಕಾರಣಿಗಳಿಗೆ ಅನುಕೂಲಕರವಾಗಬಹುದು, ಆದರೆ ಬೇರೊಂದು ಊರಿನಿಂದ ದೌಡಾಯಿಸಿ ಬಂದು ಬಹುತೇಕ ಸ್ಥಳೀಯ ಪತ್ರಕರ್ತರ ಜೀವನಕ್ಕೆ ಪೆಟ್ಟುಕೊಡುವ ಹಾಗೂ ಅಪಮಾನಿಕರಿಸುವ ಪ್ರಕರಣಗಳಿವು, ಎಂದು ಎಂದಿಗೂ ಈ ಆತ್ಮರತಿ ಪತ್ರಕರ್ತರು ಗೊತ್ತು ಮಾಡಿಕೊಳ್ಳುವುದಿಲ್ಲ, ಇಂತಹ ಗೋಜಿಗೂ ತೆರಳುವುದಿಲ್ಲ ತನ್ನ ಪಾಲಿನ ಪ್ಯಾಕೇಜ್ ಬಂದಾಗಿದೆ, ತಾವು ಹೇಳಿದಂತೆ ನಡೆದುಕೊಳ್ಳುವ ಖಾಲಿ ಫಲಾವ್ ರಾಜಕಾರಣಿಗಳಿಗೆ ಹಾದಿ ತಪ್ಪಿಸಿಯೂ ಆಗಿದೆ ಎಂದು ಒಮ್ಮೆಲೆ ಕಿಸಿನಗೆ ಬಗೆಗಳ ಬಿತ್ತು, ದುಂಡುಮೇಜಿನ ಮ್ಯಾಲೆ ಹೈ ಪ್ರೋಪೈಲ್ ವಿಮರ್ಶೆಗಳು, ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ, ಇನ್ನೂ ಸ್ಥಳೀಯ ಪತ್ರಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ, ಇದರ ಪರಿಣಾಮ ಏನಾಗಬಹುದು ಎನ್ನುವ ಸಣ್ಣದೊಂದು ಊಹೆ ಮಾಡಿಕೊಳ್ಳಲಾಗದಷ್ಟು ಆತ್ಮರತಿಗಳ ಕರ್ಮಕೂಪದ ಕುಣಿಯಲ್ಲಿ ಬಿದ್ದು ಹಾಲಿ ಇರುವ ಪ್ರಾಬಲ್ಯಕ್ಕೂ ಮಸಿ ಬಳಿದುಕೊಂಡಿರುವ ಫಲಿತಾಂಶಗಳು ಕಾಣಿಸಿಕೊಂಡಿವೆ, ಎಂದರೆ ಅದು ಸ್ಥಳೀಯ ಪತ್ರಕರ್ತರುಗಳ ಸಾಮರ್ಥ್ಯ ಎನ್ನಬಹುದಾಗಿದೆ.
ಇನ್ನೂ ಊರು ತುಂಬೆಲ್ಲಾ ಪ್ಲೆಕ್ಸಿ ಬೀಳಬೇಕು, ನಾಳೆ ಅದು ಕಸವಾಗಿ, ಪಾಲಿಕೆ, ನಗರಸಭೆ, ಪುರಸಭೆ, ಸಂಚಾರಿ ಪೊಲೀಸ್ ನಿಯಮಗಳು ಮೀರಿ ಸಾರ್ವಜನಿಕರಿಗೆ ತೊಂದರೆಯಾದರೂ ಪರವಾಗಿಲ್ಲ, ಪ್ಲೆಕ್ಸಿ ಅಳವಡಿಕೆಯಿಂದ ಅಪಘಾತವಾದರೂ ಸರಿಯೇ, ಒಟ್ಟಾರೆ ಪ್ಲೆಕ್ಸಿಗಳಿಗೆ ಇರುವ ಮಹತ್ವ, ಬೆಲೆ, ಗೌರವ ಒಂದು ಸ್ಥಳೀಯ ಪತ್ರಿಕೆಗಳಿಗೆ ಈ ಜನಪ್ರತಿನಿಧಿಗಳು ಕೊಡುವುದಿಲ್ಲ ಎಂದರೆ ಅದಕ್ಕೆ ಇಂತಿವರ ಮಾನಸೀಕತೆ ಇಂದು ಅರ್ಥಮಾಡಿಕೊಳ್ಳಬೇಕಿದೆ, ಕೇವಲ ಚುನಾವಣೆಯ ಹಿಂದಿನ ವರುಷಗಳು, ಇವೆಂಟ್‌ಗಳಿಗೆ ಬಳಸಿಕೊಳ್ಳುವ ಸುದ್ದಿಗಳಿಗೆ, ಆ ಹೊತ್ತಿನ ಚುನಾವಣೆಯ ಜಾಹಿರಾತುಗಳಿಗೆ, ದೊಡ್ಡದಾದ ಇವೆಂಟ್‌ಗಳ ಜಾಹಿರಾತುಗಳಿಗೆ ಇನ್ನೀತರ ಸೌಲಭ್ಯಗಳಿಗೆ ಸ್ಥಳೀಯ ಪತ್ರಿಕೆಗಳು, ಪತ್ರಕರ್ತರು ವಂಚಿತರಾಗಿ ಮತ್ತಷ್ಟು ಆರೋಪಗಳಿಗೆ ತುತ್ತಾಗಿ ಬಿಡುತ್ತಾರೆ ಎನ್ನುವುದಕ್ಕೆ ಇದೇ ಆತ್ಮರತಿ ಪತ್ರಕರ್ತರ ದಂಡಿನ ಮಹಿಮೆಗಳು ಕಾರಣ ಎನ್ನುವ ಸತ್ಯದ ವಾಸ್ತವತೆಗಳು ಇಂದು ರಾಜ್ಯದ ಎಲ್ಲಾ ಸ್ಥಳೀಯ ಪತ್ರಕರ್ತರು ಮನನ ಮಾಡಿಕೊಳ್ಳಲಿ ಎನ್ನುವುದು ಅಂಬೋಣವಾಗಿದೆ.