September 26, 2026

I ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ರಾತ್ರಿ ಸುರಿದ ಮಳೆಗೆ ಅಪಾರ ಹಾನಿ ಸ್ಥಳಕ್ಕೆ I ಶಾಸಕರ ಭೇಟಿ I

0
IMG-20260427-WA0170

I ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ರಾತ್ರಿ ಸುರಿದ ಮಳೆಗೆ ಅಪಾರ ಹಾನಿ ಸ್ಥಳಕ್ಕೆ I ಶಾಸಕರ ಭೇಟಿ I

ಶಿವಮೊಗ್ಗ: ​ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಲ್ಲಾಪುರ, ಗುಡುಮಗಟ್ಟೆ, ಮಂಗೋಟೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯು ಈ ಭಾಗದ ಜನರ ಬದುಕನ್ನು ಅಕ್ಷರಶಃ ಬೀದಿಗೆ ತಂದಿದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಸುಮಾರು 200ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಇಡೀ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ; ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳು ಧರೆಗುರುಳಿವೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ್, ಮಾಜಿ ಶಾಸಕ ಕೆ.ಅಶೋಕ್ ನಾಯ್ಕ್, ಶ್ರೀನಿವಾಸ್ ಕರಿಯಣ್ಣ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿಯ ವೇಳೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್ ಅವರಿಗೆ ಘಟನೆಯ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟ ಶಾಸಕರು, ಸಂತ್ರಸ್ತರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣದ ಸ್ಪಂದನೆ ನೀಡಲು ಸೂಚಿಸಿದರು.

ಮನೆ ಕಳೆದುಕೊಂಡ ಕುಟುಂಬಗಳಿಗೆ ಹಾಗೂ ನಿರ್ಗತಿಕರಾದವರಿಗೆ ತಾತ್ಕಾಲಿಕವಾಗಿ ತಂಗಲು ತಕ್ಷಣವೇ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಅವರಿಗೆ ಅಗತ್ಯವಾದ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಈ ವಿಪತ್ತಿನ ಸಮಯದಲ್ಲಿ ಕಲುಷಿತ ನೀರಿನಿಂದ ಜಲಜನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುವುದರಿಂದ, ಗಂಜಿ ಕೇಂದ್ರಗಳು ಸೇರಿದಂತೆ ಗ್ರಾಮದಾದ್ಯಂತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದಿಷ್ಟವಾಗಿ ಸೂಚಿಸಲಾಯಿತು. ಬೆಳೆ ಹಾನಿಯ ಕುರಿತು ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಜಂಟಿ ಸಮೀಕ್ಷೆ ನಡೆಸಬೇಕು. ರೈತರಿಗೆ ಆಗಿರುವ ನಷ್ಟವನ್ನು ಕರಾರುವಾಕ್ಕಾಗಿ ಅಂದಾಜಿಸಿ, ಯಾವುದೇ ಲೋಪವಾಗದಂತೆ ವೈಜ್ಞಾನಿಕವಾಗಿ ಪರಿಹಾರದ ಮೊತ್ತವನ್ನು ನಿಗದಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ವಿದ್ಯುತ್ ಸಂಪರ್ಕವಿಲ್ಲದೆ ಕುಡಿಯುವ ನೀರು ಸರಬರಾಜಿಗೂ ತೊಂದರೆಯಾಗಿರುವ ಹಿನ್ನೆಲೆಯಲ್ಲಿ, ಮೆಸ್ಕಾಂ ಅಧಿಕಾರಿಗಳು ಹಗಲಿರುಳು ಕಾರ್ಯಾಚರಣೆ ನಡೆಸಿ, ಶೀಘ್ರವಾಗಿ ಹೊಸ ಕಂಬಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸುವ ಕೆಲಸವಾಗಬೇಕು ಎಂದು ಹೇಳಿದರು.

Spread the love

Leave a Reply

Your email address will not be published. Required fields are marked *

error: Content is protected !!