September 25, 2026

I ಸ್ಬೂಡಾ ಅಧ್ಯಕ್ಷ I ಹೆಚ್.ಎಸ್ ಸುಂದರೇಶ್ I ಸಿಡಿಸಿದ ಅಸಮಾಧಾನ I

0
suda

I ಸ್ಬೂಡಾ ಅಧ್ಯಕ್ಷ I ಹೆಚ್.ಎಸ್ ಸುಂದರೇಶ್ I ಸಿಡಿಸಿದ ಅಸಮಾಧಾನ I

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದ ಸಂಘಟಿತ ದನಿಯಾಗಿ, ಸತತ ೪೦ ವರ್ಷಗಳ ಸುಧೀರ್ಘ ಶ್ರಮದಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕ ಹೆಚ್.ಎಸ್ ಸುಂದರೇಶ್‌ರವರು ಶಿವಮೊಗ್ಗದ ಲೋಕಾಯುಕ್ತ ಎಸ್ಪಿಯವರು ಸುಮೋಟೋ ಕೇಸು ದಾಖಲಿಸಿಕೊಂಡು ತನಿಖಿಸುವಂತಹ ಒಂದಷ್ಟು ಅಸಲು ಸಂಗತಿಗಳನ್ನು ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಬೆತ್ತಲಾಗಿಸಿದ್ದಾರೆ,

ಕಳೆದಷ್ಟೆ ದಿನಗಳ ಹಿಂದೆ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಹಾಗೂ ಸಚಿವ ಮಧು ಬಂಗಾರಪ್ಪನವರ ಆಪ್ತ ಜಿ.ಡಿ ಮಂಜುನಾಥ್ ಎಂಬುವ ಮಾಜಿ ಜೆಡಿಎಸ್ ಕಾರ್ಯಕರ್ತನ ವಸೂಲಿ ಬಾಜಿಗಳ ಹುಂಡಿಯನ್ನು ತೆರೆದಿಟ್ಟಿರುವ ಸುದ್ದಿ ಇದೀಗ ರಾಜ್ಯದಲ್ಲಿ ಪ್ರತಿಧ್ವನಿಸಲು ಕಾರಣವಾಗಿದೆ,

ಸ್ಬೂಡಾ ಅಧ್ಯಕ್ಷಗಾದಿಯಲ್ಲಿರುವ ಹೆಚ್.ಎಸ್ ಸುಂದರೇಶ್ ಅವರು ಮಾತನಾಡಿ ಅತೀವ ಅಸಮಾಧಾನವನ್ನು ಸ್ಪೋಟಿಸಿದ್ದಾರೆ, ತಾನು ಕೂಡ ಅಸೆಂಬ್ಲಿ ಅಭ್ಯರ್ಥಿ ಅಕಾಂಕ್ಷಿ ಇದೊಂದು ಸಾಮಾಜಿಕ ನ್ಯಾಯವು ಕೂಡ, ಏಕೆಂದರೆ ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷದ ಸಂಘಟಿತ ಬಲವರ್ಧನೆಗೆ ದುಡಿದವನು, ಎಂದಿಗೂ ಪಕ್ಷನಿಷ್ಠೆಯಿಂದ ದೂರ ಉಳಿಯಲಿಲ್ಲ ಇದನ್ನು ಕಡೆಗಣಿಸಿ ಮೂಲ ಕಾಂಗ್ರೆಸಿಗರಲ್ಲದವರಿಗೆ ಹೈಕಮಾಂಡ್ ಮಣೆ ಹಾಕಿ ಅಸೆಂಬ್ಲಿ ಅಭ್ಯರ್ಥಿಯನ್ನಾಗಿಸಿದ್ದಲ್ಲದೆ ಮಂತ್ರಿ ಆಗುವ ಅವಕಾಶ ನೀಡಿದೆ, ಇದಲ್ಲದೆ ಜೆಡಿಎಸ್‌ನಿಂದ ಬಂದ ಹುಡುಗ ಜಿಡಿ.ಮಂಜುನಾಥ್ ಎಂಬುವನು ಕಾಂಗ್ರೆಸ್‌ಗೆ ಬಂದು ಮಂತ್ರಿಗಳ ಆಪ್ತನಾಗಿ ಎಲ್ಲಾ ಇಲಾಖೆಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾನೆ, ಇದು ಈ ಹೊತ್ತಿನದ್ದಲ್ಲ, ಈ ಹಿಂದೆಯೂ ಉಸ್ತುವಾರಿ ಮಂತ್ರಿ, ಶಿಕ್ಷಣ ಸಚಿವನಾಗಿದ್ದ ಸಂದರ್ಭದಿಂದಲೂ ಇದೇ ವಸೂಲಿ ಚಾಕರಿ ಮಾಡಿಕೊಂಡು ಬಂದಿದ್ದಾನೆ, ಇತ್ತೀಚೆಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ೨೫ ಲಕ್ಷ ಹಣ ನೀಡುವಂತೆ ತಾಕೀತು ಮಾಡುತ್ತಾನೆ ಎಂದರೆ ಎಲ್ಲಿಗೆ ಬಂತು ಕಾಂಗ್ರೆಸಿನ ವ್ಯವಸ್ಥೆ, ಮಧು ಬಂಗಾರಪ್ಪನವರು ಬಂದ ಮೇಲೆ ಕಾಂಗ್ರೆಸ್ ಮುಖಂಡರೇ ಬೇಕಿಲ್ಲವಾಗಿದೆ, ಗೌರವವೂ ಇಲ್ಲವಾಗಿದೆ, ಎಂದು ಹೆಚ್.ಎಸ್ ಸುಂದರೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು,

ಜಿಡಿ.ಮಂಜುನಾಥ್ ಎಂಬಾತನ ಮೇಲೆ ಈ ಹಿಂದೆಯೂ ಇಂತಹುದೇ ಆರೋಪ ಎದುರಾಗಿತ್ತು ಅದು ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು, ಈ ಮ್ಯಾಟರ್ ಮಸಾಜ್ ಮಾತಾಗಿತ್ತು, ಈ ಕುರಿತಂತೆ ದೂರಿನ ಪ್ರತಿ, ಈತನ ಆಡಿಯೋ ದನಿಗಳು ಮಧು ಬಂಗಾರಪ್ಪನವರಿಗೆ ಇದೇ ಎಂದು ಮನವರಿಕೆ ಮಾಡಿಕೊಟ್ಟ ಮೇಲೂ ಅವರು ಈತನನ್ನು ಹೊರ ಹಾಕುವ ಕೆಲಸ ಮಾಡಿರಲಿಲ್ಲ, ಬದಲಿಗೆ ಈ ಘಟಿತ ಘಟನೆ ಇಂದಿಗೂ ಸುದ್ದಿಮನೆಗಳಲ್ಲಿದೆ, ಈತನ ಎತ್ತುವಳಿ ಬಾಜಿಗಳು ಅಂದು ಮೇರೆ ಮೀರಿದ ಕಾರಣಕ್ಕಾಗಿ ಈತನ ಬೇನಾಮಿ ಹಾಗೂ ವಂಶವೃಕ್ಷದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗಳು ದಾಖಲಾಗಿದೆ, ಇದು ಹೇಗೆ ಬಂತು ಎನ್ನುವ ತನಿಖೆಗಾಗಿ ತನಿಖಾ ಸಂಸ್ಥೆಗಳ ಮೆಟ್ಟಿಲು ಏರುವ ಜರೂರಿಗಳು ಈ ಪತ್ರಿಕಾಗೋಷ್ಟಿಯ ನಂತರ ಕಂಡು ಬಂದಿದೆ.

ಗೋಷ್ಟಿ ಮುಂದುವರೆದಂತೆ ನನ್ನ ಬೆಂಬಲಿಸಿದ ಕಾರ್ಯಕರ್ತರಿಗೆ ಒಂದು ಅವಕಾಶ ಕೊಡಿಸಲಾಗಲಿಲ್ಲ, ಅವರದೇ ಸಮುದಾಯದಲ್ಲಿ ನೂರೈವತ್ತು ಮತಗಳನ್ನು ಹಾಕಿಸಲು ಸಾಧ್ಯವಾಗದ ಓರ್ವ ಕಾರ್ಪೋರೇಟರ್ ಆಗುವುದಕ್ಕೆ ಅರ್ಹತೆ ಇಲ್ಲದ ಹೆಚ್.ಸಿ ಯೋಗೇಶ್ ಅಂತಹವನನ್ನು ವಾಮಮಾರ್ಗದಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿದೆ, ಇದು ದುರಂತಮಯವಾಗಿದೆ, ಇದಕ್ಕೆ ಭದ್ರಾವತಿಯ ಶ್ರೀನಿವಾಸ್ ಎಂಬುವ ರಾಷ್ಟ್ರೀಯ ಕಾಂಗ್ರೆಸ್ ಮುಖಂಡನ ಡ್ರಾಮಗಳು ಇದೆ, ಈತನಿಗೆ ಜಿಲ್ಲೆಯ ವಸ್ತು ಸ್ಥಿತಿ ಗೊತ್ತಿಲ್ಲದಿದ್ದವನು ಅರ್ಹತೆ ಇಲ್ಲದವನ ಪರವಾಗಿ ಬ್ಯಾಟಿಂಗ್ ಮಾಡುತ್ತಾನೆ ಇಂತಹ ಸ್ಥಿತಿಯನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ, ದಾಖಲೆಗಳು ನನ್ನ ಬಳಿಯಿದೆ, ಅದನ್ನು ತೋರಿಸಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೆಚ್.ಎಸ್ ಸುಂದರೇಶ್ ಅವರು ವಿವರಿಸಿದರು,

ಇದಕ್ಕೆ ತುರ್ತು ಸುದ್ದಿಗೋಷ್ಟಿ ಎಂದು ಕರೆಯಲಾಗಿದ್ದರು, ಹೆಚ್.ಎಸ್ ಸುಂದರೇಶ್ ಹೇಳಿರುವ ನಗ್ನ ಸತ್ಯಗಳನ್ನು ಕಾಂಗ್ರೆಸ್ ಮುಖಂಡರು ಮುಚ್ಚಿಹಾಕಿಕೊಂಡು ತೆರೆ ಎಳೆದರು ಈ ಎಲ್ಲಾ ಸಂಗತಿಗಳ ಅತೀ ಸೂಕ್ಷ್ಮತೆ ಕಾಂಗ್ರೆಸ್ ಸಂಘಟನೆಗೆ ಭಾರಿ ಪೆಟ್ಟು ಬೀಳುವುದರಲ್ಲಿ ಹಾಗೂ ಗಂಭೀರತೆ ಪಡೆಯುವುದರಲ್ಲಿ ಯಾವುದೇ ಅನುಮಾನಿತವಿಲ್ಲವಾಗಿದೆ,

ಇನ್ನೂ ತೀರ್ಥಹಳ್ಳಿಯ ಮಾಜೀ ಮಂತ್ರಿಗಳಾದ ಕಿಮ್ಮನೆ ರತ್ನಾಕರ್ ಅವರು ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಇದೇ ನನ್ನ ಕೊನೆ ಚುನಾವಣೆ ಎಂದಿದ್ದರು ಆದರೆ ಇದೀಗ ಉಲ್ಟಾ ಹೊಡೆದು ಮುಂದಿನ ಭಾರಿಯು ತಾನೇ ಅಭ್ಯರ್ಥಿ ಎಂದು ಪತ್ರಿಕಾಗೋಷ್ಟಿ ಮಾಡುತ್ತಾರೆ, ಹಾಗೂ ಆಗಾಗ್ಗೆ ಅಲ್ಲಿರುವ ಪಕ್ಷದ ಮುಖಂಡರ ವಿರುದ್ದವೇ ಬಂಡಾಯವೆದ್ದು ವಿವಾದಿತಗೊಳಿಸುತ್ತಾರೆ ಇದಕ್ಕೆ ಸಮಾಧಾನ ಮಾಡುವ ಹೈಕಮಾಂಡ್ ಯಾಕೆ ಇನ್ನೂ ಇಂತಿವರ ಮೇಲೆ ಶಿಸ್ತು ಕ್ರಮ ಜರುಗಿಸಲಿಲ್ಲ, ಬದಲಿಗೆ ನನ್ನ ಒತ್ತಾಯವಿದೆ, ಕಿಮ್ಮನೆಗೆ ಮುಲಾಮು ಹಚ್ಚಿದ್ದು ಸಾಕು ಆರ್.ಎಂ ಮಂಜುನಾಥ ಗೌಡರವರು ಕ್ಷೇತ್ರಕ್ಕಾಗಿ ದುಡಿದಿದ್ದಾರೆ, ಮಾತಿನಂತೆ ಮುಂದಿನ ಭಾರಿ ಅವರಿಗೆ ಟಿಕೆಟ್ ನೀಡಬೇಕು, ಹಾಗೂ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಮಂತ್ರಿ ಸ್ಥಾನ ನೀಡಬೇಕು, ಒಂದಷ್ಟು ಸ್ವಘೋಷಿತ ವ್ಯಕ್ತಿಗಳನ್ನು, ಅಸಮರ್ಥರನ್ನು ಪಕ್ಷದಿಂದ ದೂರವಿಡಬೇಕು ಎನ್ನುವ ಒತ್ತಾಯವನ್ನು ಬೆಂಗಳೂರಿಗೆ ಹೋಗಿಯೇ ಮಾಡುತ್ತೇನೆ, ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಹೆಚ್.ಸಿ ಯೋಗೇಶ್‌ನನ್ನು ಬದಲಾಯಿಸಬೇಕು

ಇದಾಗದಿದ್ದರೆ ನಾನು ಪಕ್ಷ ತೊರೆಯುವುದಕ್ಕೆ ಹಿಂಜಿರಿಯುವುದಿಲ್ಲ ಹಾಗೂ ನನ್ನೊಂದಿಗೆ ಸಾಕಷ್ಟು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ತೊರೆಯುವುದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಹೆಚ್.ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!