I ಆಸಕ್ತಿ ಗುರುತಿಸಿ ಉತ್ತಮ ನಾಗರಿಕರನ್ನಾಗಿ ಬೆಳೆಸಿ I ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ I
ಬೆಂಗಳೂರು, : ತಾಂತ್ರಿಕತೆ ಇಂದು ಮಕ್ಕಳ ಪ್ರಬಲವಾಗಿ ಅಭಿವೃದ್ಧಿಯಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಹಲವು ಅಂಶಗಳು ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಹಾಗೂ ಆರೋಗ್ಯವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಕರೆ ನೀಡಿದರು.
ಬೆಂಗಳೂರಿನ ನಿಜಲಿಂಗಪ್ಪ ಕಾಲೇಜು ಆವರಣದಲ್ಲಿ ಕೆಎಲ್‌ಇ ಸಂಸ್ಥೆಯ ಬೆಂಗಳೂರಿನಲ್ಲಿರುವ ವಿವಿಧ ವಿದ್ಯಾಲಯಗಳ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾಗಿ ಡಾ. ಪ್ರಭಾಕರ ಕೋರೆ ಅವರು ಪ್ರಥಮ ಬಾರಿಗೆ ಬೆಂಗಳೂರಿನ ಕೆಎಲ್‌ಇ ವಿದ್ಯಾಲಯಗಳ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೋಷಕರು ತಮ್ಮ ಆಶಯದಂತೆ ಮಕ್ಕಳನ್ನು ಬೆಳೆಸುವ ಬದಲು, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ, ಸರಿಯಾದ ಮಾರ್ಗದರ್ಶನದೊಂದಿಗೆ ಬೆಳೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ಆರೋಗ್ಯವನ್ನು ನೀಡುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದರು. ಇಂದಿನ ಯುವಕರು ತಮ್ಮ ಜೀವನಶೈಲಿಯಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೀವನಶೈಲಿ ಸರಿಯಾಗಿದ್ದರೆ ಅನೇಕ ಸಂದರ್ಭಗಳಲ್ಲಿ ಆಸ್ಪತ್ರೆಯ ಅವಶ್ಯಕತೆಯನ್ನೇ ತಪ್ಪಿಸಬಹುದು. ಇದನ್ನು ಮನಗಂಡು ಕೆಎಲ್‌ಇ ಸಂಸ್ಥೆ ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.
*ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕರ್ನಾಟಕದ ಜನರ ಕೊಡುಗೆ ಅಪಾರವಾಗಿದೆ* . *ಬಹುತೇಕ ಪ್ರತಿಯೊಂದು ಮನೆಯಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರಿದ್ದರು* . *ಇಂದಿಗೂ ಭಾರತೀಯ ಸೇನೆಯಲ್ಲಿ ಉತ್ತರ ಕರ್ನಾಟಕದವರ ಪಾಲು ಬಹಳಷ್ಟಿದೆ* ಎಂದು ಡಾ. ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯುವಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆ ಬಹಳಷ್ಟಿದೆ. ನನಗೆ ಪದ್ಮಶ್ರೀ ಸೇರಿದಂತೆ ಯಾವುದೇ ಪ್ರಶಸ್ತಿ ದೊರೆತಿದ್ದರೂ, ಅದು ಕೆಎಲ್‌ಇ ಸಂಸ್ಥೆಯ ಕುಟುಂಬಕ್ಕೆ ಸಂದ ಗೌರವವೆಂದು ಭಾವಿಸುತ್ತೇನೆ. ಅಂತಹ ಎಲ್ಲ ಗೌರವಗಳನ್ನು ಕೆಎಲ್‌ಇ ಬಳಗಕ್ಕೆ ಹಾಗೂ ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಪ್ತರ್ಷಿಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ನಂತರ ಎನ್‌ಸಿಸಿ ಕೆಡೆಟ್‌ಗಳು, ಪುಟ್ಟ ಮಕ್ಕಳು ಹಾಗೂ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಗೀತೆಗಳ ಗಾಯನ ಮತ್ತು ವಿವಿಧ ವೇಷಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಜೀವ ಸದಸ್ಯ ಹಾಗೂ ಪ್ರಾಂಶುಪಾಲ ಮಲ್ಲಿಕಾರ್ಜುನಯ್ಯ ಸೇರಿದಂತೆ ಬೆಂಗಳೂರಿನಲ್ಲಿರುವ ವಿವಿಧ ಕೆಎಲ್‌ಇ ವಿದ್ಯಾಲಯಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
