I ಮತದಾರರ ಪಟ್ಟಿ ಅಕ್ರಮದ ಬಗ್ಗೆ ತನಿಖೆಯಾಗಲಿ I ಕೆ.ಬಿ. ಪ್ರಸನ್ನಕುಮಾರ್ I
ಶಿವಮೊಗ್ಗ: ‘2018ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಐಆರ್ (ವಿಶೇಷ ಮತದಾರರ ಪರಿಷ್ಕರಣೆ) ಪ್ರಕ್ರಿಯೆಯ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಿದ ಪಾಲಿಕೆ ಆಯುಕ್ತರು, ಬಿಎಲ್‌ಒಗಳು ಹಾಗೂ ಬಿಎಲ್‌ಎಗಳ ಶ್ರಮ ಶ್ಲಾಘನೀಯ. ಪಕ್ಷದ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.
‘ರಾಷ್ಟ್ರಭಕ್ತರ ಬಳಗದವರು ಫಾರಂ ನಂ.6 ಪಡೆದು ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಚುನಾವಣೆ ಪ್ರತಿಯೊಬ್ಬರ ಹಕ್ಕು. ಅದನ್ನು ನ್ಯಾಯಯುತವಾಗಿ ನಡೆಸುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.
‘2013ರಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸುಮಾರು 2,15 937 ಲಕ್ಷ ಮತದಾರರಿದ್ದರು. 2018ರಲ್ಲಿ ಈ ಸಂಖ್ಯೆ 2,56,373ಕ್ಕೆ ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಸುಮಾರು 40,436ಸಾವಿರ ಮತದಾರರು ಹೆಚ್ಚಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. 2023ರಲ್ಲಿ ಮತದಾರರ ಸಂಖ್ಯೆ 2,60,757 ಏರಿಕೆ ಆಗಿದೆ. ಒಟ್ಟಾರೆಯಾಗಿ 2013 ಮತ್ತು 2018 ರ ನಡುವೆ 40,436ಸಾವಿರ ಮತದಾರರು ಹೆಚ್ಚಾಗಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
‘ಎಸ್‌ಐಆರ್ ಪ್ರಕ್ರಿಯೆಯಲ್ಲಿ 9,181 ಮೃತ ಮತದಾರರ ಹೆಸರುಗಳನ್ನು, ಶಾಶ್ವತವಾಗಿ ವಿಳಾಸ ಬದಲಿಸಿರುವ 29,962 ಮತದಾರರ ಹೆಸರುಗಳನ್ನು ಹಾಗೂ 5 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಒಟ್ಟಾರೆ 56,432 ಮತಗಳನ್ನು ಎಸ್‌ಐಆರ್‌ನಲ್ಲಿ ಅಳಿಸಲಾಗಿದೆ’ ಎಂದು ಹೇಳಿದರು.
‘ಯಾರೊಬ್ಬರ ಮತದಾನದ ಹಕ್ಕು ಕಸಿದುಕೊಳ್ಳಬಾರದು. ಅದೇ ರೀತಿ ಅನರ್ಹರನ್ನು ಯಾರದ್ದೋ ಒತ್ತಡಕ್ಕೆ ಮಣಿದು ಮತದಾರರ ಪಟ್ಟಿಗೆ ಸೇರಿಸಬಾರದು. 2018ರಲ್ಲಿ ನಗರ ಕ್ಷೇತ್ರದಲ್ಲಿ ಬಂದವರನ್ನೆಲ್ಲ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಇದೇ ರೀತಿಯ ಅಕ್ರಮ ನಡೆದಿದೆ ಎಂಬ ಅನುಮಾನವಿದ್ದು, 2013ರ ಮತದಾರರ ಸಂಖ್ಯೆ ಹಾಗೂ ಪ್ರಸ್ತುತ ಸಂಖ್ಯೆಯ ನಡುವಿನ ವ್ಯತ್ಯಾಸದ ಕುರಿತು ತನಿಖೆ ನಡೆಸಬೇಕು. ಈ ಸಂಬಂಧ ಲೋಕಾಯುಕ್ತ, ಮುಖ್ಯಮಂತ್ರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಪ್ರಮುಖರಾದ ಕಡಿದಾಳ್ ಗೋಪಾಲ್, ದೀಪಕ್ ಸಿಂಗ್, ನರಸಿಂಹ ಗಂಧದನೆ, ಎಚ್.ಎಂ. ಸಂಗಯ್ಯ, ತ್ಯಾಗರಾಜ್, ಉಮಾಶಂಕರ್ ಉಪಾಧ್ಯ, ಮಂಜುನಾಥ್ ಇದ್ದರು.