I ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ I ವೈದ್ಯನಾಥ I
ಶಿವಮೊಗ್ಗ : ಪತ್ರಿಕೆಯ ಮಾಲೀಕರು ಹಾಗೂ ಸಂಪಾದಕರು ಎಷ್ಟು ಮುಖ್ಯವೋ, ಅದೇ ರೀತಿ ಪತ್ರಿಕಾ ವಿತರಕರೂ ಪ್ರಮುಖರು. ಮಳೆ, ಗಾಳಿ, ಚಳಿ ಲೆಕ್ಕಿಸದೆ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ವಿತರಕರ ಸೇವೆ ಶ್ಲಾಘನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಯು.ವೈದ್ಯನಾಥ ಹೇಳಿದರು.
ನಗರದ ಜಿಲ್ಲಾ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸವಾಲುಗಳ ನಡುವೆಯೂ ವಿತರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿತರಕರ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾ ಹಾಗೂ ರಾಜ್ಯ ಸಂಘಟನೆಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಓದುಗರ ಸಂಖ್ಯೆ, ಅದರಲ್ಲೂ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ. ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹೊಸ ಓದುಗರನ್ನು ಸೃಷ್ಟಿಸುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಜ್ಞಾನ ಹಾಗೂ ಓದುವ ಹವ್ಯಾಸ ಬೆಳೆಸಬೇಕು. ಪತ್ರಿಕೆ ಮತ್ತು ಸಾಹಿತ್ಯ ಓದದೆ ಜ್ಞಾನ ವಿಸ್ತರಿಸಿಕೊಳ್ಳುವುದು ಕಷ್ಟ. ಶಾಲೆಗಳಿಗೆ ಪತ್ರಿಕೆಗಳು ತಲುಪುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮ್ಮದ್ (ನಜೀರ್) ಮಾತನಾಡಿ, ಕನ್ನಡ ಪತ್ರಿಕೆಗಳನ್ನು ಪಕ್ಕದ ಮನೆಯಿಂದ ಪಡೆದು ಓದುವ ಪ್ರವೃತ್ತಿ ಹೆಚ್ಚಾಗಿದೆ. ಶಾಲೆಗಳಲ್ಲಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು. ವಿತರಕರಿಗೆ ಇರುವ ಅಪಘಾತ ವಿಮೆಯಲ್ಲಿ ಅಪಘಾತದಿಂದ ಕೈಕಾಲು ಮುರಿದಂತಹ ಸಂದರ್ಭಗಳಲ್ಲಿ ಮಾತ್ರ ಪರಿಹಾರ ದೊರೆಯುತ್ತದೆ. ಆರೋಗ್ಯ ಸಮಸ್ಯೆಗಳಿಗೂ ನೆರವಾಗುವಂತೆ ಅಪಘಾತ ವಿಮೆಯನ್ನು ಆರೋಗ್ಯ ವಿಮೆಯಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಶಿವಮೊಗ್ಗದ ಶ್ರೀನಿವಾಸ್, ಭದ್ರಾವತಿಯ ಪರಶುರಾಮ ಹಾಗೂ ತೀರ್ಥಹಳ್ಳಿಯ ಕಮ್ಮರಡಿ ಚಂದ್ರಶೇಖರ್ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮಾಲತೇಶ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಖಜಾಂಚಿ ರೋಹಿತ್, ಜಿ.ವಿಜಯಕುಮಾರ್, ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷರು ಶಿವಕುಮಾರ್, ಮಹಿಳಾ ಅಧ್ಯಕ್ಷರು ಶಾರದಾ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ವಾಟಾಳ್ ಮಂಜುನಾಥ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಹುಲಿಗಿ ಕೃಷ್ಣ, ಉಪಾಧ್ಯಕ್ಷರಾದ ರಾಮು ಜಿ, ತೀರ್ಥಹಳ್ಳಿನಾಗಭೂಷಣ್, ಸಹ ಕಾರ್ಯದರ್ಶಿಯಾದ ಭದ್ರಾವತಿ ಪರಶುರಾಮ್ ರಾವ್, ಭದ್ರಾವತಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್, ಪಾರ್ಥಿಬನ್. ರಾಜ ವರ್ಮಾ ಜೈನ್.ಮಹಮದ್ ಅಜಿದ್ವುಲ್ಲಾ, ಪ್ರಾಣೇಶ್, ದುರ್ಗಾಜಿ. ಸುಬ್ರಮಣಿ, ಇಮ್ರಾನ್. ನಿತಿನ್. ರಕ್ಷಣಾ ವೇದಿಕೆ ಕಾವಲು ಪಡೆ ಪದಾಧಿಕಾರಿಗಳಾದ ಅಶೋಕ್. ರಾಗಿಗುಡ್ಡ ರಾಮಣ್ಣ. ಗಣೇಶ್. ಮೋಹನ್. ಮಂಜುನಾಥ್. ಇನ್ನು ಮುಂತಾದವರು ಭಾಗವಹಿಸಿದ್ದರು