September 24, 2026

I ಬದಲಾಗದ ಜೆಸಿ ಬದುಕುಗಳಲ್ಲಿ I ಜೆಸಿಐ ಕೂಡ ಒಂದು ಗೌಣ I

0
images

ಬರೆಯತ್ತಾರೆ ಗಾರಾ.ಶ್ರೀನಿವಾಸ್

I ಬದಲಾಗದ ಜೆಸಿ ಬದುಕುಗಳಲ್ಲಿ I ಜೆಸಿಐ ಕೂಡ ಒಂದು ಗೌಣ I

What is JCI…? ನೀವು ಓದಿ, ಜೆಸಿಗಳಾಗಿ ಬದುಕು ಬದಲಾಗುತ್ತದೆ.
ನಾವು ಬದಲಾಗದೇ ಹೊರತು ಬದುಕು ಬದಲು ಮಾಡಿಕೊಳ್ಳಲಾಗುವುದಿಲ್ಲ” ಎನ್ನುವ ದಿಟ್ಟವಾದ ದಿಟದ ದಡದಲ್ಲಿ ನಾವಿರಲೇ ಬೇಕು, ಭುವಿಯ ಮೇಲೆ ನಿಂತು ಆಗಸದತ್ತ ಕಣ್ಣಾಯಿಸಿದಾಗ ಅಲ್ಲೊಂದು ಕಾವಣವಿದೆ, ಚಿತ್ತಾರವಿದೆ, ನಕ್ಷತ್ರಗಳಿವೆ, ಸೂರ್ಯ-ಚಂದ್ರ ಗ್ರಹಗಳಿವೆ ಎಂದು ತಾತ್ವಿಕವಾಗಿ ನಾವು ಹೇಳುವಾಗ ಕಾಣುತ್ತಿರುವ ಕಾವಣವನ್ನು ದಾಟಿ ಹೋಗಬಹುದು, ಅದೊಂದು ಚಿತ್ತಾರವಷ್ಟೆ ಎನ್ನುವ ಸತ್ಯ ಮನಗಾಣುವುದಕ್ಕೆ ತೆರಳುವುದಿಲ್ಲ, ಅಲ್ವಾ..? ಹಾಗೆಯೇ ನಾವು ದಿಟ್ಟಿಸುವ ನೋಟಕ್ಕೆ ಯಾವ ಕಾವಣದ ತಡೆಗಳಿರಬಾರದು, ಅದು ವಿಸ್ತಾರವಾಗಿರಬೇಕು, ಯಾಕೆಂದರೆ ಜಗತ್ತು ಉಹಿಸಲಾರದಷ್ಟು ದೊಡ್ಡದು, ವಿಜ್ಞಾನಕ್ಕೂ ಸಿಗಲಾರದ ವಿಸ್ತೀರ್ಣ ಹೊಂದಿರುವ ಜಗತ್ತಿನಲ್ಲಿ ನಾವಿದ್ದು ಸಣ್ಣದಾದ ದುರಾಲೋಚನೆಗಳ ಅಂಧತ್ವ ಅಡ್ಡಲಾಗಿ ತಾನೋಂದು ಆಹಂಕಾರದ ಬೇಗುದಿಗೆ ಸಿಲುಕಿ ಬಿಟ್ಟರೆ ನಾವು ಅನಿಸದಷ್ಟೆ ಕಾವಣದೊಳಗೆ ಕೊನೆಯುಸಿರೆಳೆದು ಬಿಡುತ್ತೇವೆ,

ಹೀಗೆ ತಮಗೆ ತಾವೇ ಸೀಮಿತಗೊಳಿಸಿಕೊಳ್ಳುವ ಇರಾದೆಯಲ್ಲಿ ಸಮರ್ಥನೆ, ಮೊಂಡುವಾದ, ಇಬ್ಬಗೆಯ ನೀತಿ, ಗುಂಪುಗಾರಿಕೆ, ಅಗೌರವಗಳ ಬಿತ್ತುವಿಕೆ, ಅಪಮಾನಗಳ ಸುರಿಸುವಿಕೆ, ತನ್ನ ಬೆನ್ನು ತಾನೇ ತಟ್ಟಿಕೊಳ್ಳುವಂತೆ ಮಾಡಿದ್ದೆಲ್ಲವೂ “ಇತಿಹಾಸ” ಪರಮಾವಧಿ ಎಂದು ದಾಖಲಿಸುವ ಪ್ರಯತ್ನ ಮಾಡಿದರೆ ಅದೊಂದು ಬಹಳ ದೊಡ್ಡದಾದ ಪ್ರಮಾದವೇ ಸರಿ ಎಂದು ಉವಾಚಿಸುತ್ತಾ ಇಂತಿವ ಟಿಪ್ಪಣಿಗಳನ್ನು ಈ ಲೇಖನದಲ್ಲಿ ಹೇಳಬೇಕಾದ ಅನಿವಾರ್ಯತೆಗಳಿವೆ ಎನ್ನುವ ಕಾರಣಕ್ಕೆ ತಮ್ಮಗಳ ಮುಂದಡಿಯಿಟ್ಟು ಜಗತ್ತಿನ ಬಹುದೊಡ್ಡ ಮೊದಲ ಅಂತರಾಷ್ಟ್ರೀಯ ಸಂಘಟನೆಯ ಒಳಹರಿವುಗಳನ್ನು ಇಲ್ಲಿ ವಿಸ್ತ್ರಗೊಳಿಸುತ್ತಿದ್ದೇನೆ.

ನೀವು ಕೂಡ ಜೆಸಿಗಳಾಗುವ ಆಕಾಂಕ್ಷಿಯಾಗಿದ್ದರೆ ನಿಮ್ಮ ಸಣ್ಣತನಗಳ ಪರಮಾವಧಿಗಳನ್ನು ಚಪ್ಪಲಿ ಬಿಡುವ ಸ್ಥಳದಲ್ಲಿ ಬಿಟ್ಟು ಇಲ್ಲಿ ಕೊನೆಯವರೆಗೂ ಓರ್ವ “ವಿದ್ಯಾರ್ಥಿ” ಯಾಗಿರುತ್ತೇನೆ ಎನ್ನುವ ಮನೋಭಾವದಡಿ ಬಂದರೆ ಮಾತ್ರ ನಿಮ್ಮ ಬದುಕು ಖಂಡಿತ ಬದಲುಗೊಳ್ಳುತ್ತದೆ ಎಂದು ಈ ಲೇಖನದ ಮೂಲಕ ಪ್ರಮಾಣಿಕರಿಸುತ್ತೇನೆ.

ಇದು ಕೇವಲ ಉತ್ಪ್ರೇಕ್ಷೆಗಾಗಿ ಇಲ್ಲಿ ಲಗತ್ತಿಸುತ್ತಿಲ್ಲ “ಜೆಸಿಐ” ಅಂತಹದೊಂದು ಖಚಿತ ಭರವಸೆ ಮೂಡಿಸುವ ಆಶಾದಾಯಕ ವೇದಿಕೆ ಎಂದು ತಿಳಿಸಲಿಚ್ಚಿಸುತ್ತೇನೆ.
What is JCI…? ಜೆಸಿಐ ಎಂದರೇನು..? ಜೆಸಿಐ, ಯುವಜನರ ಹಾಗೂ ಲಾಭರಹಿತ ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆ, ಜೆಸಿಐ ಒಂದು ಅಭಿವೃದ್ಧಿಯ ಬದಲಾವಣೆಯನ್ನು ಒದಗಿಸುತ್ತದೆ, ಅಲ್ಲದೆ ಯುವಜನರಿಗೆ ಸಕಾರಾತ್ಮಕ ಬದಲಾವಣೆಯನ್ನು ನೀಡುವ ಸಂಸ್ಥೆ, ಜೆಸಿಐ ವಿಶ್ವವ್ಯಾಪಿ ಉತ್ತಮ ಸಮಾಜಕ್ಕೆ ಬೇಕಾಗುವ ಎಲ್ಲಾ ರೀತಿಯ ತರಬೇತಿ ನೀಡುವ ವಿಶ್ವವಿದ್ಯಾನಿಲಯ, ಹೀಗೆ ಸಾಕಷ್ಟು ಹೇಳುತ್ತಲೇ ಸಾಗಬಹುದು.

ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ( Junior Chamber International ) ಕುರಿತಾಗಿ ಒಂದೇ ಸಾಲಿನಲ್ಲಿ ಹೇಳಬಹುದಾದರೆ ಅದೊಂದು ಜೀವಪರ ನಿಲುವಿನ ಮೇರು ಗಣಿ” ಎನ್ನಬಹುದು, ಬಹಳಷ್ಟು ಜನತೆಗೆ ಇದರ ಕಾರ್ಯವ್ಯಾಪ್ತಿ ಗೊತ್ತಿಲ್ಲ, ವಿದ್ಯಾರ್ಥಿಗಳಿಗೆ ಮೊದಲೇ ತಿಳಿದಿಲ್ಲ, ಕರ್ನಾಟಕದಲ್ಲಿ ಮೂರು ಜೋನ್ ಗಳಿವೆ, ಸಾಕಷ್ಟು ಹಿರಿಯ ಜೆಸಿಗಳ ಶ್ರಮದಿಂದ ಕಟ್ಟಿ ಬೆಳೆಸಿದ “ಜೆಸಿಐ” ಯಾಕೆ ಪ್ರಚುರದ ವ್ಯಾಪಕತೆ ಪಡೆದಿಲ್ಲ..? ಎನ್ನುವ ಪ್ರಶ್ನೆಗಳು ಕಾಡುತ್ತಲೇ ಇದೆ. ಜೆಸಿಐ ಎಲ್ಲರಿಗೂ ಸಮಾನತೆಯನ್ನು ನೀಡಿದೆ ಇದಕ್ಕೆ ಜೆಸಿಐನಲ್ಲಿರುವ ಸಂವಿಧಾನವೇ ಸಾಕ್ಷೀಕರಿಸುತ್ತದೆ. ಜೆಸಿಐ ಕುರಿತಾದ ಈ ಪ್ರಶ್ನೆಗೆ ಸಾಧ್ಯವಾದರೆ ಹಿರಿಯ ಜೆಸಿಗಳೇ ಉತ್ತರಿಸಬೇಕಾದ ಜರೂರತ್ತಿದೆ.

“ಆಡು ಮುಟ್ಟದ ಸೊಪ್ಪಿಲ್ಲ” ಗಾದೆ ಬಹುಷ್ಯಃ ಜೆಸಿಐಗೆ ಹೋಲಿಸಬಹುದು ಯಾಕೆಂದರೆ ಜೆಸಿಐ ಪ್ರವೇಶಿಸಲಾಗದ ಯಾವ ಜಾಗೃತಿಯು ಉಳಿದಿಲ್ಲ, ಎಲ್ಲಾ ಜಾಗೃತಿಯ-ಅರಿವುಗಳ ಕೃಷಿ ನಿರಂತರವಾಗಿಸಿಕೊಂಡಿದೆ, ಅಲ್ಲದೆ ಆಯಾ ಕಾಲಘಟ್ಟದ ಜನಪೀಡಿತ ಸಮಸ್ಯೆಗಳಿಗೂ ಸ್ಪಂದಿಸಿ ಶಿಕ್ಷಣವನ್ನು ನೀಡುತ್ತಿರುವ ಬಹುದೊಡ್ಡ ಸಂಸ್ಥೆಯಾಗಿದೆ, ಇನ್ನೂ ಮುಂದುವರೆದರೆ ಸೇವಾ. ತರಬೇತಿ, ಅರಿವು, ವ್ಯಕ್ತಿವಿಕಸನ, ಹಾಗೂ ಜಾಗತಿಕ ಮನಸ್ಸಿನ ಯುವಸಮುದಾಯಕ್ಕೆ ಮಾನವ ಪ್ರತಿಪಾದಿತ ಹಕ್ಕುಗಳು, ಜವಾಬ್ದಾರಿಗಳು ಮತ್ತು ಗುರಿಗಳನ್ನು ಹೇಳಿಕೊಡುತ್ತಿದೆ ವಿವಿಧ ಸಮುದಾಯಗಳಾದ ಜನ, ವಸತಿ, ಜೀವನ, ಪ್ರಾಣಿ-ಪಕ್ಷಿ. ಪರಿಸರ ಹೀಗೆ ಜಗತ್ತಿಗೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುವ ಸ್ಥಳೀಯ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರಗಳನ್ನು ಜೆಸಿಐ ನೀಡುತ್ತದೆ. ಹೊಸ ಆಲೋಚನೆಗಳು, ಸಹಯೋಗ ಮತ್ತು ವೈವಿಧ್ಯತೆಯನ್ನು ಸ್ವೀಕರಿಸಿ, ಜನ ಸಮುದಾಯದ ನಿರ್ಣಾಯಕ ಸವಾಲುಗಳನ್ನು ಎದುರಿಸುವ ಉತ್ಸಾಹ ಮತ್ತು ಧೈರ್ಯವನ್ನು ಸದಾ ಎದೆಚರಿಗೆಗಳಿಗೆ ತುಂಬುತ್ತದೆ ಜೆಸಿಐ ಎನ್ನುವುದನ್ನು ನಾವುಗಳು ಮನಗಾಣಬೇಕಾಗಿದೆ.

ಜೆಸಿಐನ ಪ್ರಭಾವ ಬಹಳಷ್ಟಿದೆ ಎನ್ನುವುದಕ್ಕೆ ಇತ್ತೀಚೆಗೆ ಜಾಗತಿಕ ಮಟ್ಟದ ಚರ್ಚೆಯಲ್ಲಿ ಶೇಕಡವಾರು ಸೇವಾ ಚಟುವಟಿಕೆಯ ಆಧಾರಿತವಾಗಿ ಜೆಸಿಐ ೦.೪೭ ಸೆಕೆಂಡಿನಲ್ಲಿ ಅಂದರೆ ಒಂದು ಸೆಕೆಂಡಿನ ಅರ್ಧಭಾಗದ ಸಮಯದೊಳಗೆ ೧೪೨ ದೇಶದಲ್ಲಿ ಒಟ್ಟು ೪೮.೪೬ ಲಕ್ಷದ ಫಲಿತಾಂಶವನ್ನು ಪಬ್ಲಿಕ್ ರಿಲೇಷನ್ ಹಾಗೂ ವಿವಿದ ಭಾಗದ ಕಮ್ಯೂನಿಟಿ ಸೇವೆಯನ್ನು ನೀಡುತ್ತಿರುವ ಜಗತ್ತಿನ ಮೊದಲ ಅಂತರಾಷ್ಟ್ರೀಯ ಸಂಘಟನೆ ಎಂದು ಅಂತಿಮ ತೀರ್ಮಾನಕ್ಕೆ ಬರಲಾಗಿದೆ.

ಹೀಗಿದ್ದರೂ ಜೆಸಿಐ ವೇದಿಕೆಯನ್ನು ವ್ಯಾಪಕವಾಗಿ ಯುವಜನತೆಯಲ್ಲಿ ಹಾಗೂ ಶ್ರೀ-ಸಾಮಾನ್ಯರಲ್ಲಿ- ಉದ್ಯೋಗಿಗಳಲ್ಲಿ ಪರಿಚಿತವಾಗುತ್ತಿಲ್ಲ ಎನ್ನುವುದರ ತುಲನೆ ಆಗಬೇಕಾದ ಅಗತ್ಯತೆಗಳಿವೆ, ಹೀಗಿರುವ ಸಾಮಾಜಿಕ ಮಾಧ್ಯಮ ಮತ್ತು ವಿವಿಧ ಹಂತದ ಅಭಿಯಾನಗಳ ಮೂಲಕ ಜೆಸಿಐ ತಲುಪಿಸಬೇಕಾದ ಕೈಂಕರ್ಯಗಳು ಜೆಸಿಐ ಕಲಿತಿರುವ ಜೆಸಿಗಳಿಂದಲೇ ಆಗಬೇಕಾಗಿದೆ,

ಯಾಕೆ… ಜೆಸಿಐನ್ನು ಹಗುರವಾಗಿ, ಹಾಗೂ ಆಹಾಂಕಾರದ ಪರಮಾವಧಿಗಳಿಗೆ ಗುರಿ ಮಾಡುತ್ತಿರುವ ಪ್ರಸಂಗಗಳಿವೆ, ಕಲಿತ ಬಹಳಷ್ಟು ಜೆಸಿಗಳು ಅನ್ಯರಿಗೆ ಕಲಿಸಲು ಹಾಗೂ ಮಾರ್ಗದರ್ಶಿಸಲು ಹೋಗುತ್ತಿಲ್ಲ, ತಾನಷ್ಟೆ ಉದ್ದಾರವಾದರೆ ಸಾಕು, ನೆರೆಯವನ ಅಭಿವೃದ್ದಿ ಎಂದಿಗೂ ಸಹಿಸಲಾಗದು ಎನ್ನುವ ಜಿಜ್ಞಾಸೆಗಳು ಕೂಡ ಕಾರಣವಾಗಿರಬಹುದು.

ಇತ್ತೀಚೆಗೆ ಒಂದು ಚರ್ಚಿತ ಸಭೆಯೊಂದರಲ್ಲಿ ಭಾಗವಹಿಸಿದ್ದೆ, ಅಲ್ಲೋರ್ವರು ಬಹಳ ಹಿಂದೆ ಜೆಸಿಐ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ ಸುಮಾರು ಇಪ್ಪತ್ತು ವರುಷಗಳು ಸಂದಿದೆ, ನನ್ನ ಬದುಕನ್ನು ಬದಲಾಯಿಸಿದ್ದೆ ಜೆಸಿಐ ತರಬೇತಿಗಳು, ತರಬೇತಿಗಷ್ಟೆ ಸೀಮಿತವಾಗಿದೆ ಜೆಸಿಐ ಎಂದು ಒಂದಿಷ್ಟು ಉದ್ದುದ್ದ ಅಭಿಪ್ರಾಯಿಸಿದರು.

ಕಲಿತಿದ್ದೇನೆ ಎಂದು ಹೇಳಿದ್ದು ಬಹಳ ಸಂತೋಷದಾಯಕವಾದ ಸಂಗತಿ, ಕಲಿತಿದ್ದನ್ನು ಕಳೆದ ಮೂವತ್ತು ವರುಷಗಳಿಂದ ಅನ್ಯರಿಗೆ ಕಲಿಸಲು ಅಥವಾ ಮಾರ್ಗದರ್ಶಿಸಲು ವಿಫಲವಾಗಿದ್ದು ಹಾಗೂ ಸ್ವಂತಿಕೆಗಷ್ಟೆ ಸೀಮಿತಿಗೊಳಿಸಿಕೊಂಡಿದ್ದು, ಬಲು ನೋವಿನ ಸಂಗತಿ ಎನ್ನುವುದು ಈ ಹಿರಿಯ ಜೆಸಿಗೆ ಅರಿವಿಗೆ ಇನ್ನೂ ಬಂದಿಲ್ಲ, ಹಾಗೂ ಇಲ್ಲಿ ತರಬೇತಿ ಮಾತ್ರವಲ್ಲ ಸರ್ವಿಸ್ ಕೂಡ ಎನ್ನುವುದನ್ನು ಮರೆಯಕೂಡದು, ಹೀಗಿದಿದ್ದರೆ ಪಬ್ಲಿಕ್ ರಿಲೇಷನ್ ಪ್ರೋಗ್ರಾಂ ಪ್ಲಾನಿಂಗ್ ಇರುತ್ತಿರಲಿಲ್ಲ, ಕಮ್ಯೂನಿಟಿ ಡೋನೆಷನ್ ಪ್ರೋಗ್ರಾಂ ಇರುತ್ತಿರಲಿಲ್ಲ, ಅಲ್ವಾ..? ಒಟ್ಟಾರೆ ಈ ಹಿರಿಯ ಜೆಸಿ, ಜೆಸಿಐನಲ್ಲಿ ಸಿಗುವ ಎಲ್ಲಾ ಜ್ಞಾನಗಳನ್ನು ಬಳಸಿಕೊಂಡಿದ್ದಾರೆ ಆದರೆ ಅದನ್ನು ಬೇರೆಯವರಿಗೂ ಧಾರೆಯೆರೆಯುವುದಕ್ಕೆ ದೊಡ್ಡ ಮನಸು ಮಾಡಲಿಲ್ಲ ಎನ್ನುವ ಸಣ್ಣತನಗಳು ಬಹಳಷ್ಟು ಜೆಸಿಐ ಕಲಿತ ಜೆಸಿಗಳಿಂದಲೇ ಆಗುತ್ತಿದೆ ಎನ್ನುವ ಸತ್ಯದ ಅವಲೋಕನದ ಅಧ್ಯಯನ ಆಗಬೇಕಿದೆ.

ಇಂತಹದೊಂದು ಪ್ರಮಾದ ಮಾನಸೀಕತೆ ಕೆಲವರಲ್ಲಿ ಇರುವುದರಿಂದಲೇ ಜೆಸಿಐ ವ್ಯಾಪಕವಾಗಿ ಜನ ಸಮುದಾಯದ ನಡುವೆ ಪ್ರಚುರತೆ ಪಡೆದಿಲ್ಲ, ಹಾಗೂ ಮೊದಲ ಸಾಲಿನಲ್ಲಿಯೇ ಹೇಳಿದ್ದೇನೆ “ನೀವು ಜೆಸಿ” ಗಳಾಗ ಬಯಸಿದರೆ ನಿಮ್ಮ ಸಣ್ಣತನಗಳನ್ನು ನೀವು ಬಿಡುವ ಚಪ್ಪಲಿಯ ಸ್ಥಳದಲ್ಲಿ ಬಿಟ್ಟು ಬನ್ನಿ, ಇಲ್ಲಿ ನೀವೆಷ್ಟೇ ಕಲಿತರು ಖಾಯಂ ವಿದ್ಯಾರ್ಥಿಯಾಗಿಯೇ ಇರುತ್ತೇನೆ ಎನ್ನುವ ಮನಸು ನಿಮ್ಮದಾದರೆ ಮಾತ್ರ ಯಾವ ಜೆಸಿಗಳಿಗೂ ಕಾವಣ ( ಚಪ್ಪರ ) ಎನ್ನುವುದು ಆವರಿಸಿಕೊಳ್ಳುವುದಿಲ

ಅದರಿಂದಾಚೆಗೂ ವಿಸ್ತಾರತೆಗಳನ್ನು ನೋಡಬಹುದಾಗಿದೆ ಎಂದು ಹೇಳ ಬಯಸುತ್ತೇನೆ.
“ಜೆಸಿಐ” ಎಂದಿಗೂ ಹೇಳಿಲ್ಲ ಅದರ ಸಾಂವಿಧಾನದಲ್ಲೂ ಧರ್ಮ, ಜಾತಿ, ರಾಜಕೀಯ, ಪ್ರತಿಷ್ಠೆ, ಜಿಜ್ಞಾಸೆ, ಮೊಂಡುವಾದ, ಹಠಸಾಧನೆ, ಸಾರ್ವಕಾಲೀಕವಾಗಿಯೂ ಅಸಮರ್ಥನೆಗಳನ್ನೇ ಸಮರ್ಥನೆ ಮಾಡಿಕೊಂಡು ಅಗೌರವ- ಗುಂಪುಗಾರಿಕೆ ಬಿತ್ತುವುದನ್ನು ಹೇಳಿಲ್ಲ, ಮಹಿಳೆ-ಪುರುಷ-ಮಕ್ಕಳು ಎನ್ನುವ ಬೇದವೂ ಇಲ್ಲ, ನಾಯಕತ್ವಗಳನ್ನು ರೂಪಿಸುವುದಕ್ಕೆ ಆಯ್ಕೆಗಳನ್ನು ನೀಡಿಲ್ಲ, ವಿಧ್ಯಾರ್ಹತೆಯ ಅರ್ಹತೆ ತಿಳಿಸಿಲ್ಲ, ನಾಗರೀಕ ಬದುಕುಗಳ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಅನಾಗರೀಕನಾಗಿ ವರ್ತಿಸುವುದು ವಿವರಿಸಿಲ್ಲ, ಸರ್ವಾಧಿಕಾರಿ ಧೋರಣೆ, ಇಂತಹ ಅನೇಕತೆಗಳ ವಿಕೃತ- ಅನುಚಿತವಾದ ದುರ್ವರ್ತನೆಗಳಿಗೆ ಅವಕಾಶಗಳೇ ಇಲ್ಲ ಇಲ್ಲ ಎಂದ ಮೇಲೆ ಇದನ್ನು ಬಿಟ್ಟು ಮೂಲ ಜೆಸಿಐ ಮೌಲ್ಯಗಳೊಂದಿಗೆ, ಸಾಂವಿಧಾನಿಕ ನಿಲುವುಗಳೊಂದಿಗೆ ಸಾಗಲು ಯಾಕೆ ಹಲವರಿಗೆ ಕ್ಲಿಷ್ಟಕರವೆನಿಸಿದೆ ಎನ್ನುವುದು ಒಂದೊಮ್ಮೆ ಅವಲೋಕಿಸಿಕೊಳ್ಳುವ ಔದಾರ್ಯತೆಗಳ ಬೆಳೆಸಿಕೊಳ್ಳಬೇಕಾದ ಮನುಷ್ಯಜೀವಿ, ಸಂಘಜೀವಿಗಳಾಗಿ ಎನ್ನುವುದು ಆಶಯವಾಗಿದೆ.

“ಜೆಸಿಐ ವಾಣಿ” ನಲ್ಲಿರುವಂತೆ “ದೇವರ ಮೇಲಿನ ನಂಬಿಕೆಯು ಮಾನವ ಜೀವನಕ್ಕೆ ಅರ್ಥ ಮತ್ತು ಉದ್ದೇಶವನ್ನು ನೀಡುತ್ತದೆ; ಮನುಷ್ಯನ ಸಹೋದರತ್ವವು ರಾಷ್ಟ್ರಗಳ ಸಾರ್ವಭೌಮತ್ವವನ್ನು ಮೀರಿಸುತ್ತದೆ” ಎನ್ನುವ ಮೊದಲ ಸಾಲಿನ ತಾತ್ಪರ್ಯಗಳಿಗೆ ಗೌರವಿಸುವುದೇ ಆದರೆ ಜೆಸಿಗಳಾಗಿ ಸಂತೋಷ, ಇಲ್ಲಿ ಕಲಿತಿದ್ದನ್ನು ಅನ್ಯರಿಗೆ ಕಲಿಸಿ, ನೀವು ಬೆಳೆಯಿರಿ ಬೇರೆಯವರನ್ನು ಬೆಳೆಸಿರಿ, ನೀವು ಜ್ಞಾನದ ಹರಿವಿನಲ್ಲಿ ಆನಂದಿಸಿ ಇನ್ನೋರ್ವರನ್ನು ಜ್ಞಾನದ ಅರಿವಿನ ಕುರಿತಾಗಿ ಮಾರ್ಗದರ್ಶಿಸಿ, ಎಂದಿಗೂ ಅಹಂಭಾವಿಸಿದೆ, ಎಲ್ಲರಲ್ಲೂ ಮನುಷ್ಯತ್ವವನ್ನು ಕಂಡು ಸಹೋದರತ್ವವನ್ನು ಬೆಸೆದುಕೊಳ್ಳಿ ಹೀಗಾದರೆ ಮಾತ್ರ ಜೆಸಿವಾಣಿಯನ್ನು ನುಡಿಯುವುದಕ್ಕೆ ಅರ್ಹರಿರುತ್ತೀರಿ ಇಲ್ಲವಾದಲ್ಲಿ ಆತ್ಮಗತದಿ ಆನರ್ಹರಾಗಿಯೇ ಇದ್ದು ಬಿಡುತ್ತೀರಿ ಎನ್ನುವುದು ಇಲ್ಲಿ ಉಲ್ಲೇಖಿಸುತ್ತೇನೆ.
ಹೀಗೆ ೧೦೬ ವರುಷಗಳ ಕೆಳಗೆ “ಜೆಸಿಐ” ವೇದಿಕೆ, ಇದಕ್ಕೊಂದು ಸಂವಿಧಾನ, ಗುರಿ, ಕುರಿತಾಗಿ ಹೇಳೂವಾಗ ಎಲ್ಲರಲ್ಲೂ ಕುಹಕ ಭಾವನೆ ಇತ್ತೇನೋ..? ಗೌರವಾನ್ವಿತರಾದ *ಹೆನ್ರಿ ಗೀಸೆನ್‌ಬಿಯರ್* ಅವರು ಮೊದಲು ಡ್ಯಾನ್ಸ್ ಕ್ಲಬ್ ಅನ್ನು ರಚಿಸಿದ್ದರು, ತದನಂತರ ಇದೇ ವೇದಿಕೆ ಸಮುದಾಯದ ಯುವಕರ ಸಾಮಾಜಿಕ ನ್ಯಾಯ ಗಳಿಸಬೇಕಿದೆ ಎಂದು. ಜಾಗತಿಕ ಆಂದೋಲನ ಶುರು ಮಾಡಿದರು ಈ ಎಲ್ಲಾ ಪ್ರಯತ್ನಗಳಿಂದಲೇ ಅಂದು ಅಕ್ಟೋಬರ್ ೧೩, ೧೯೧೫ ರಂದು, ಅಮೆರಿಕದ ಸೇಂಟ್ ಲೂಯಿಸ್‌ನ ೩೨ ಸದಸ್ಯರೊಂದಿಗೆ “ಯಂಗ್ ಮೆನ್ಸ್ ಪ್ರೋಗ್ರೆಸ್ಸಿವ್ ಅಸೋಸಿಯೇಶನ್ (YMPCA) ಅನ್ನು ರಚಿಸಿದಾಗ ಮೊದಲ ಜೆಸಿಐ ಚಳವಳಿಯ ಉಗಮವಾಯಿತು. ಅಲ್ಲಿಂದ ಶುರುವಾದ YMPCA ) ಮುಂದುವರೆದ ಕಾಲಘಟ್ಟದಲ್ಲಿ ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಎಂದು ಬದಲುಗೊಂಡು ಇಂದು ವಿಶ್ವವ್ಯಾಪಿಯಲ್ಲಿ ಅಗ್ರಗಣ್ಯವಾಗಿ ವಿಶ್ವಜನ ಸಮುದಾಯಕ್ಕೆ ದೊಡ್ಡದೊಂಡು ಶಾಶ್ವತ ಶಾಸನ ಬರೆದು ಇಂದಿಗೂ ಬದುಕುಳಿದ ಜೀವಪರ ನಿಲುವಿನ ನಾಯಕರಾಗಿ, ಸಾಧಿತರಾಗಿ ವಿಶ್ವದ ಮನುಕುಲದಲ್ಲಿದ್ದಾರೆ.

ಇಂತಹ ಶ್ರೇಷ್ಟತೆಯನ್ನು ಮೆರೆಯುವಾಗ ಎಂದಾದರೂ ಸಣ್ಣತನವನ್ನು ಹೆನ್ರಿ ಗೀಸೆನ್‌ಬಿಯರ್ ತಳೆದಿದ್ದರೆ ಇಂದು ಸಣ್ಣತನವನ್ನೇ ಮೈಗೂಡಿಸಿಕೊಂಡಿರುವ ಕೆಲ ಜೆಸಿಐ ಕಲಿತ ಜೆಸಿಗಳು ಇಂದು ಸಾರ್ವಜನಿಕವಾಗಿ ಸೋಷಿಯಲ್ ಐಕಾನ್ ಆಗುತ್ತಿರಲಿಲ್ಲ, ವಿಶ್ವಮಟ್ಟದ ಜ್ಞಾನವನ್ನು ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ವ್ಯಕ್ತಿತ್ವ ವಿಕಸನವೂ ಆಗುತ್ತಿರಲಿಲ್ಲ, ಅಲ್ವಾ..? ಇಂದೇ ಸಾಧ್ಯವಾದರೆ ತಿದ್ದುಕೊಳ್ಳುವವರು ತಿದ್ದಿಕೊಳ್ಳಿ, ಯಾಕೆಂದರೆ ಮುಂದೊಂದು ದಿನ ಅದೇ ತಪ್ಪುಗಳ ಆಳ ಕ್ರಮಿಸಿ ಅಳಿಸಲಾಗದೇ ಉಳಿದರೆ ಜೆಸಿ ಪಯಣ ವ್ಯರ್ಥವಾದೀತು, ಎಂದು ನಾನು ಕಂಡ ಜೆಸಿ ಮಾನಸೀಕತೆಯನ್ನು ಇಲ್ಲಿ ಯಾವ ಮುಲಾಜಿಲ್ಲದೆ ದಾಖಲಿಸಿದ್ದೇನೆ,

ಪ್ರತಿ ಜೆಸಿಗಳು ಅರ್ಥೈಸಿಕೊಳ್ಳಬೇಕಿದೆ, ಪಕ್ಕದ ನೆರೆಮನೆಯವನ ಪರಿಚಯವಿಲ್ಲದವನಿಗೆ ಹೆನ್ರಿ ಗೀಸೆನ್‌ಬಿಯರ್ ಅವರು ಇಡೀ ವಿಶ್ವದ ಭೂಪಟದ ಲಿಂಕ್ ಬೊಗಸೆಗಳಿಗೆ ತಂದೊಡ್ಡಿದಾಗ ಜೆಸಿಯಾದವನು ನಿಜಕ್ಕೂ ಆತ್ಮಪೂರ್ವಕವಾಗಿ ಸಂಭ್ರಮಿಸಬೇಕಲ್ಲವೇ, ಈ ಆನಂದದ ರುಚಿಯನ್ನು ಇತರರಿಗೂ ಉಣಬಡಿಸಬೇಕಲ್ಲವೇ..? ಹೇಳಿ.

ಹೇಳುವ ಸಾಲುಗಳು ಬಹಳಷ್ಠಿದೆ ಹೇಳುತ್ತಲೇ ಸಾಗಿದರೆ ಅದೊಂದು ಹೊತ್ತಿಗೆಯಾದೀತು, ಹೀಗಾಗಿ ಜೆಸಿಗಳಾಗಿ ಬದುಕು ಬದಲಾಯಿಸಿಕೊಳ್ಳಿ, ಕಲಿಯಿರಿ ಕಲಿತ ಮೇಲೆ ಕಲಿಸಲು ಶುರುಮಾಡಿರಿ, ನಾಯಕರಾಗಿ ಇತರರನ್ನು ನಾಯಕರನ್ನಾಗಿಸಿ, ಯಾರಿಗಾದರೂ ಸಹಾಯ ಮಾಡಬೇಕೆಂದರೆ, ಆಶಯಗಳನ್ನು ತಿಳಿಸಬೇಕೆಂದರೆ ಹೃದಯದಿಂದ ತಿಳಿಸಿ, ಜೆಸಿಐ ಸಾಂವಿಧಾನದ ನಿಯಮಗಳಂತೆ ಯಾವ ಆಧಿಕಾರ ಸಿಕ್ಕರೂ ಅದು ಒಂದೇ ವರುಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸೀಮಿತವಾದ ಸಮಯದಲ್ಲಿ ಜೆಸಿಐ ನೀಡುವ ಮುಕ್ತ ಮನಸಿನ ಅವಕಾಶಗಳನ್ನು ಬಳಸಿಕೊಂಡು ಅಷ್ಟೆ ಮುಕ್ತ ಮನಸಿನಿಂದ ಅವಕಾಶಗಳನ್ನು ಇತರೇ ಜೆಸಿಗಳಿಗೂ ಸಿಗುವಂತೆ ಮಾಡುವುದು ಕೂಡ ಪ್ರತಿ ಕಲಿತ ಜೆಸಿಗಳ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿ ಜೆಸಿಐ ಕುರಿತಾಗಿ ಒಂದಿಷ್ಟು ಬರೆದು ಸಾರ್ವಜನಿಕವಾಗಿ, ಜೆಸಿಗಳಾಗಲು ಹಾಗೂ ಕಲಿತ ಕೆಲ ಜೆಸಿಗಳ ಮಾನಸೀಕತೆಗಳ ಬದಲುಗೊಳ್ಳಲು ಪೂರಕವಾಗಿರುವ ಸಾಲುಗಳೆಂದು ಭಾವಿಸಿ ಅಂಬೋಣಿಸುತ್ತಿದ್ದೇನೆ.

Spread the love

Leave a Reply

Your email address will not be published. Required fields are marked *

error: Content is protected !!