I ಶ್ರೀಕೃಷ್ಣ ಜನ್ಮಾಷ್ಟಮಿI ಗೀತಾಮೃತದ ನಿತ್ಯನವೀನತೆ I ಸಿ.ಎನ್. ಮಲ್ಲೇಶ್ I
ವಸುದೇವಸುತಂ ದೇವಂ ಕಂಸಚಾಣೂರಮರ್ಧನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥
ವಸುದೇವನ ಪುತ್ರ, ದೇವತೆಗಳ ದೇವ, ಕಂಸ ಚಾಣೂರರ ಮರ್ಧಕ, ದೇವಕೀ ಪರಮಾನಂದ, ಶ್ರೀಕೃಷ್ಣನನ್ನು ನಾನು ವಂದಿಸುತ್ತೇನೆ. ಆ ಕೃಷ್ಣನೇ ಜಗದ್ಗುರು.
ಕೃಷ್ಣನು ಕೇವಲ ದೈವಿಕ ಅವತಾರವಲ್ಲ, ಮನುಕುಲಕ್ಕೆ ಮಾರ್ಗದರ್ಶಕ. ಅವರ ಬಾಯಿಂದ ಹೊರಹೊಮ್ಮಿದ ಭಗವದ್ಗೀತೆ ಮಾನವ ಬದುಕಿಗೆ ಶಾಶ್ವತ ದಾರಿದೀಪ. ಯಾವ ಯುಗ, ಯಾವ ಕಾಲವಾದರೂ ಮನಸ್ಸಿಗೆ ಶಾಂತಿ, ಬದುಕಿಗೆ ಸಮತೋಲನ ನೀಡುವ ಶಕ್ತಿ ಗೀತೆಯಲ್ಲಿದೆ.
ಕೃಷ್ಣನ ಕಾಲ ಮತ್ತು ಇಂದಿನ ಕಾಲ : ಕೃಷ್ಣನ ಯುಗದಲ್ಲಿ ಅಧರ್ಮ, ಅಧಿಕಾರದ ದುರುಪಯೋಗ, ಯುದ್ಧದ ಅಶಾಂತಿ ಮನುಷ್ಯನನ್ನು ಕಾಡುತ್ತಿತ್ತು. ಇಂದಿನ ಕಾಲದಲ್ಲಿಯೂ ಬೇರೆ ರೂಪದ ಅಶಾಂತಿ ಇದೆ ಲೋಭ, ಅತೃಪ್ತಿ, ತಂತ್ರಜ್ಞಾನ ದುರುಪಯೋಗ, ಪರಿಸರ ಹಾನಿ ಮತ್ತು ಮಾನಸಿಕ ಒತ್ತಡ. ಆಗ ಕೃಷ್ಣನು ಗೀತಾಮೃತವನ್ನು ನೀಡಿದಂತೆ, ಇಂದಿಗೂ ಅದೇ ಸಂದೇಶ ನಮ್ಮ ಬದುಕಿಗೆ ಔಷಧವಾಗಿದೆ.
ಆಗುವುದೆಲ್ಲಾ ಒಳ್ಳೆಯದೇ ಗೀತೆಯ ಸಂದೇಶ : ಗೀತೆಯ ತತ್ತ್ವ ಸರಳವಾದರೂ ಆಳವಾದುದು. ನಿನಗೆ ಏನು ಕಳೆದುಹೋದರೂ ಅದು ನಿನ್ನದಾಗಿರಲಿಲ್ಲ. ನಿನಗೆ ಏನು ಸಿಕ್ಕಿದರೂ ಅದು ಈ ಜಗತ್ತಿನಿಂದಲೇ ಸಿಕ್ಕಿತು. ನೀನು ಕೊಟ್ಟದ್ದೂ ಲೋಕಕ್ಕೇ ಮರಳುತ್ತದೆ. ನಾಶವೆಂದು ಕಾಣುವುದು ಪರಿವರ್ತನೆಯ ರೂಪ ಮಾತ್ರ. ಪರಿವರ್ತನೆಯೇ ಜಗದ ನಿಯಮ. ಇದನ್ನು ಅರಿತವನು ಯಾವ ಸಂಕಷ್ಟದಲ್ಲಿದ್ದರೂ ಸಮಚಿತ್ತನಾಗಿರುತ್ತಾನೆ.
ಗೀತೆಯ ನಿತ್ಯನವೀನತೆ : ಆಚಾರ್ಯ ಶಂಕರರಿಂದ ಗಾಂಧೀಜಿವರೆಗೆ ಅನೇಕ ಮಹನೀಯರು ಗೀತೆಯನ್ನು ಆಧಾರ ಮಾಡಿಕೊಂಡು ಸಮಾಜ ಪರಿವರ್ತನೆ ಮಾಡಿದ್ದಾರೆ. ಗಾಂಧೀಜಿಯವರು ಗೀತೆಯ ಅಹಿಂಸೆಯನ್ನು ಶಸ್ತ್ರವನ್ನಾಗಿಸಿಕೊಂಡು ಸ್ವಾತಂತ್ರ್ಯ ಹೋರಾಟ ನಡೆಸಿದರು. ಇಂದಿನ ಭ್ರಷ್ಟಾಚಾರ, ಹಿಂಸಾಚಾರ, ಮೌಲ್ಯಗಳ ಕುಸಿತ, ಮಾನಸಿಕ ಒತ್ತಡಗಳ ನಡುವೆಯೂ ಗೀತೆಯ ಮೌಲ್ಯಗಳು ಅನಾಸಕ್ತಿ, ಸಮತೋಲನ, ಕರ್ತವ್ಯಭಾವ, ಅಹಿಂಸೆ ಬದುಕಿಗೆ ಆಶ್ರಯವಾಗುತ್ತವೆ.
ಯಾರ ಹೃದಯದಲ್ಲಿ ಗೀತಾ ಗಾನ ಹರಿಯುತ್ತಿದೆಯೋ, ಆ ಹೃದಯದಲ್ಲಿ ಭಯವಿಲ್ಲ. ದುಃಖ ಸುಖ, ಲಾಭ ನಷ್ಟ, ಜಯ ಅಪಜಯಗಳಲ್ಲಿ ಸಮಚಿತ್ತದಿಂದ ಬಾಳಲು ಶಕ್ತಿ ಗೀತೆಯಲ್ಲಿದೆ. ಅದಕ್ಕೇ ಇದನ್ನು ಸಾಧಕರಿಗೆ ಸಾಧನಗ್ರಂಥ, ಮುಮುಕ್ಷುಗಳಿಗೆ ಮೋಕ್ಷಗ್ರಂಥ, ಭಕ್ತರಿಗೆ ಭಕ್ತಿಗ್ರಂಥ, ಜ್ಞಾನಿಗಳಿಗೆ ಜ್ಞಾನಗ್ರಂಥವೆಂದೂ ಕರೆಯುತ್ತಾರೆ.
ಈ ಜನ್ಮಾಷ್ಟಮಿಯಲ್ಲಿ ನಾವು ಕೃಷ್ಣನ ಲೀಲೆಯನ್ನು ಕೇವಲ ನೆನಪಿಸಿಕೊಳ್ಳದೆ, ಅವರ ಗೀತೆಯ ಸಂದೇಶವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು.
ದುರ್ಜನರು ಸಜ್ಜನರಾಗಲಿ, ಸಜ್ಜನರು ಶಾಂತರಾಗಲಿ, ಶಾಂತರು ಮುಕ್ತರಾಗಲಿ, ಮುಕ್ತರು ಇತರರ ಮುಕ್ತಿಗೆ ನೆರವಾಗಲಿ. ಭಗವದ್ಗೀತೆ ನಿತ್ಯಪರಾಯಣ ಮಾಡುವವರಿಗೆ ಜಯವಾಗಲಿ. ಲೋಕ ಸಮಸ್ತ ಸುಖಿನೋ ಭವಂತು.
-ಸಿ.ಎನ್. ಮಲ್ಲೇಶ್, ವಕೀಲರು, ಶಿವಮೊಗ್ಗ

