September 24, 2026

I ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡೋಣ I ಜಿ.ಕೆ.ಮಿಥುನ್ ಕುಮಾರ್ I

0
1003213062
I ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡೋಣ I ಜಿ.ಕೆ.ಮಿಥುನ್ ಕುಮಾರ್ I
ಶಿವಮೊಗ್ಗ: ಯುವ ಸಮೂಹ ಮಾದಕ ವ್ಯಸನಗಳ ಅಡಿಯಾಳಾಗದೆ ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡಲು ಕಂಕಣ ಬದ್ದರಾಗೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕರೆ ನೀಡಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಐಕ್ಯೂಎಸಿ, ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಯುವ ದಿನ ಅಂಗವಾಗಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಗಾಂಜಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ನಗರ ಪ್ರದೇಶಗಳಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವೈಯೋಸಹಜ ವ್ಯಾಮೋಹಗಳಿಂದ ಶುರುವಾಗುವ ಕೆಲವು ದುಶ್ಚಟಗಳು, ಹಂತವಾಗಿ ನಮ್ಮ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಇಲ್ಲದವರಾಗಿ, ಜೊತೆಯಲ್ಲಿ ಯಾವುದೇ ಕೌಶಲ್ಯಾಧಾರಿತ ಚಿಂತನೆಗಳನ್ನು ಮಾಡಲಾಗದ ಅಧೋಗತಿಗೆ ಬಂದು ತಲುಪಿಬಿಡುತ್ತಾರೆ. ಅಂತಹ ವಿಚಾರಗಳಿಂದ ದೂರವಿರಿ.
ಪೊಲೀಸ್ ಇಲಾಖೆ ಒಂದೇ ಎಲ್ಲವನ್ನು ಸರಿ ಪಡಿಸುತ್ತದೆ ಎಂಬ ಯೋಚನೆಗಿಂತ, ಸಮಾಜದ ಪ್ರಜೆಗಳಾಗಿ ಸುಸ್ಥಿರ ವಾತಾವರಣ ನಿರ್ಮಾಣ ಮಾಡಲು ಏನೆಲ್ಲಾ ಕೊಡುಗೆ ನೀಡಬಹುದು ಎಂಬುದನ್ನು ಸೂಕ್ಷ್ಮವಾಗಿ ಯೋಜಿಸಿ. ಅಮೂಲ್ಯವಾದ ಬದುಕನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ. ಹೆಲ್ಮೆಟ್, ಸೀಟ್ ಬೆಲ್ಟ್ ನಂತಹ ಸೂಕ್ಷ್ಮ ವಿಚಾರಗಳ ಬಗೆಗಿನ ಅಸಡ್ಡೆ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಸುರಕ್ಷಿತವಾಗಿ ವಾಹನಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ವಾತಾವರಣವನ್ನು ವಿಪರೀತವಾಗಿ ಕಾಡುತ್ತಿರುವ ಸಮಸ್ಯೆ ಮಾದಕ ದ್ರವ್ಯ ಸೇವನೆ. ಪ್ರಕೃತಿ ಎಂಬುದು ತುಂಬಾ ಸೂಕ್ಷ್ಮವಾದ ವಿಚಾರ. ಅದರ ಸಮತೋಲನ ಏರಿಳಿತವಾದಾಗ, ತಾನೇ ಸ್ವಯಂ ನಿಯಂತ್ರಿಸಿಕೊಳ್ಳುವ ಕಾರ್ಯವಿಧಾನಗಳನ್ನು ಹೊಂದಿದೆ. ಇಂತಹ ವಿಧಾನಗಳು ಪ್ರವಾಹ, ಬರಗಾಲ ವಿಕೋಪಗಳಂತಹ ಅನಾಹುತಗಳಿಗೆ ಕಾರಣವಾಗುತ್ತದೆ.
ಅದೇ ರೀತಿಯಲ್ಲಿ ದೇಹದ ಪ್ರಕೃತಿಗೆ ಸಮಸ್ಯೆಯಾದಾಗ ಅದು ಕೂಡ ಪ್ರಕೃತಿಯ ಹಾಗೆಯೇ ಸ್ವಯಂ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುತ್ತದೆ. ಮಾದಕ ದ್ರವ್ಯವು ದೇಹದ ಪ್ರಕೃತಿಯಲ್ಲಿ ಅಸಹಜ ಬೆಳವಣಿಗೆಗೆ ಕಾರಣವಾಗಿ, ಸಮತೋಲನ ತಪ್ಪಲು ಕಾರಣವಾಗುತ್ತದೆ. ಒಮ್ಮೆ ಶುರುವಾದ ವ್ಯಸನದಿಂದ ಹೊರಬರುವ ದಾರಿಯೇ ಕಾಣದಾಗುತ್ತದೆ‌. ಮನಸ್ಸಿನ ಭಾವನೆಗಳ ನಿಯಂತ್ರಣ ಮತ್ತು ಜಾಗೃತಿಯೇ ಇದಕ್ಕಿರುವ ಔಷಧವೇ ವಿನಃ ಬೇರೆ ಯಾವ ಔಷಧೀಯು ಇಲ್ಲ ಎಂದು ಹೇಳಿದರು.
ಎನ್ಇಎಸ್ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಅಭಿಯಾನ ವಿಸ್ತರಣೆಗೊಳ್ಳಬೇಕಿದೆ. ವಿದ್ಯಾರ್ಥಿಗಳ ಜೊತೆಗೆ ಪ್ರತಿಯೊಬ್ಬ ಪ್ರಜೆಯು ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಸದೃಢ ಭಾರತ ನಿರ್ಮಾಣ ಮಾಡಲು ಶಕ್ತರಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭಾ ಮರುವಂತೆ, ಗೃಹ ರಕ್ಷಕದಳದ ನಿಕಟಪೂರ್ವ ಜಿಲ್ಲಾ ಸಮಾದೇಷ್ಟರಾದ ಚಂದನ್ ಪಟೇಲ್, ಎನ್ಎಸ್ಎಸ್ ಘಟಕ ಅಧಿಕಾರಿ ಮಂಜುನಾಥ್.ಎನ್, ಪ್ರವೀಣ್.ಬಿ.ಎನ್, ಗಾಯತ್ರಿ.ಟಿ, ಯುವ ರೆಡ್ ಕ್ರಾಸ್ ವಿಭಾಗ ಸಂಚಾಲಕಿ ಸೌಪರ್ಣಿಕ ಉಮೇಶ್, ಶೃತಿ.ಕೆ, ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಫ್ರಾನ್ಸಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Spread the love

Leave a Reply

Your email address will not be published. Required fields are marked *

error: Content is protected !!