September 26, 2026

I ಸಣ್ಣಕಥೆಗಳು ಓದುಗನ ಮೇಲೆ ಪರಿಣಾಮ ಬೀರಬೇಕು I ಪ್ರೊ. ಎಂ. ಬಿ. ನಟರಾಜ್ I

0
WhatsApp Image 2025-08-31 at 10.34.58 PM

I ಸಣ್ಣಕಥೆಗಳು ಓದುಗನ ಮೇಲೆ ಪರಿಣಾಮ ಬೀರಬೇಕು I ಪ್ರೊ. ಎಂ. ಬಿ. ನಟರಾಜ್ I

ಶಿವಮೊಗ್ಗ : ಸಾಹಿತ್ಯ ಪ್ರಕಾರಗಳಲ್ಲಿ ಕಥೆಗಳಿಗೆ ವಿಶಿಷ್ವವಾದ ಸ್ಥಾನವಿದ್ದು, ಓದುಗರಲ್ಲಿ ಸಮಾಜಮುಖಿ ಪರಿಣಾಮ ಬೀರುವಂತಹ ಶಕ್ತಿ ಹೊಂದಿರುವ ಸಣ್ಣ ಕಥೆಗಳು ರೂಪಗೊಳ್ಳಲಿ ಎಂದು  ಹಿರಿಯ ಸಾಹಿತಿ ಪ್ರೊ. ಎಂ. ಬಿ. ನಟರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್. ಬಂಗಾರಪ್ಪ ಸ್ಮಾರಕ ಗ್ರಂಥಾಲಯದ ಸಹಯೋಗದಲ್ಲಿ ಭಾನುವಾರ ಸಂಜೆ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಮುಂಗಾರು ಕಥಾ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓದುಗ ಮತ್ತು ಕೇಳುಗರನ್ನು ಆಕರ್ಷಣೆ ಮಾಡುವ ಶಕ್ತಿ ಸಣ್ಣ ಕಥೆಗಳಿಗೆ ಇದೆ. ಇಲ್ಲಿ ಕಥೆಯ ಆರಂಭ ಮತ್ತು ಮುಕ್ತಾಯ ಎರಡು ಕುತೂಹಲವಾಗಿರಬೇಕು. ಆದಿಕವಿ ಪಂಪನ ಕಾಲಕ್ಕೂ ಮೊದಲು ಕಥಾ ಪ್ರಕಾರಗಳು ಕನ್ನಡ ಸಾಹಿತ್ಯದಲ್ಲಿತ್ತು.  ಕಥೆ ಚಿಕ್ಕದಾದಷ್ಟು ಅರ್ಥ ಪೂರ್ಣವಾಗಿರುತ್ತದೆ. ಸಣ್ಣಕಥೆಗಳು ಒಗಟಾಗಿರಬಾರದು. ವಿವರಣೆ ಜಾಸ್ತಿಯಾದಂತೆ ಕಥೆ ಜಾಳಾಗುತ್ತದೆ. ಅದರ ಚೌಕಟ್ಟು ಮೀರಿ ಹೋಗಬಾರದು. ಪಾತ್ರಗಳು ಕಡಿಮೆಯಿರಬೇಕು ಮತ್ತು ವರ್ಣನೆ ಮಾಡದೆ ನಿಯಂತ್ರಣ ಇದ್ದರೆ ಒಳಿತು. ಕಥೆಯ ಅಂತ್ಯ ಗಂಟೆ ಹೊಡೆದಂತಿರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ಮಕ್ಕಳು, ಯುವಕರು, ಹಿರಿಯರು ಎಲ್ಲಾ ವಯೋಮಾನದವರು ಇಂದಿನ ಮುಂಗಾರು ಕಥಾ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೊಸತಲೆಮಾರಿಗೆ ಸೃಜನಾತ್ಮಕ  ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡಲು ಹತ್ತು ಹಲವು ಕಾರ್ಯಕ್ರಮಗಳನ್ನು ನಮ್ಮ ಮೂರು ಸಂಘಟನೆಗಳು ಜಿಲ್ಲೆಯಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದರು.
ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಬದ್ಧತೆ ನಮ್ಮದು. ಕಳೆದ ಇಪ್ಪತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಏರ್ಪಡಿಸುತ್ತಿದ್ದೇವೆ. ಅದಕ್ಕೂ ಮೊದಲು ಶಾಲಾ ವ್ಯಾಪ್ತಿಯಲ್ಲಿ ಕಮ್ಮಟಗಳನ್ನು ಏರ್ಪಡಿಸಿ ಕನ್ನಡ ಪಠ್ಯ ಪುಸ್ತಕದಲ್ಲಿನ ಸಾಹಿತ್ಯ ಓದುವ, ಅರ್ಥ ಮಾಡಿಕೊಳ್ಳುವ, ಬರೆಯಲು ಪ್ರಯತ್ನಿಸುವ ಪ್ರೇರಣೆ ನೀಡುತ್ತಿದ್ದೇವೆ. ಅವಕಾಶಗಳನ್ನು ಒದಗಿಸುವ ನೂರಾರು ಕಾರ್ಯಕ್ರಮ ಮಾಡುತ್ತಿದ್ದೇವೆ. ಅದನ್ನು ಬಳಸಿಕೊಳ್ಳುವ ಜವಾಬ್ದಾರಿ ಸಮಾಜಕ್ಕೆ ಬಿಟ್ಟದ್ದು ಎಂದರು.
ಕಥೆಗಾರರಾದ ಡಾ. ಜಿ. ಆರ್. ಲವ, ಗಾಯತ್ರಿ, ಪುಷ್ಪಾ ನಾಗಪ್ಪ, ರಾಮಕೃಷ್ಣ ಗೋಕಲೆ, ಗೌಸ್ ಪೀರ್, ಬಾಲರಾಜ್ ಚುರ್ಚುಗುಂಡಿ, ಶ್ರೀನಿವಾಸ ನಗಲಾಪುರ, ಸ್ಪಂದನ ಕಥೆ ಹೇಳಿದರು. ಗಾಯಕರಾದ ಎಸ್. ನಾರಾಯಣ ಹಾಡುಹೇಳಿದರು.  ಎಂ. ಎಂ. ಸ್ವಾಮಿ ಸ್ವಾಗತಿಸಿದರು. ಡಿ. ಗಣೇಶ್ ನಿರೂಪಿಸಿದರು. ಗಿರೀಶ್ ಅವರು ವಂದಿಸಿದರು.
Spread the love

Leave a Reply

Your email address will not be published. Required fields are marked *

error: Content is protected !!