September 25, 2026

I ಜನಸಂಸ್ಕೃತಿಯ ಮೇಳೈಸುವ I ಯುವದನಿ I ಐಡಿಯಲ್ ಗೋಪಿ I

0
ideal gopi s

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಜನಸಂಸ್ಕೃತಿಯ ಮೇಳೈಸುವ I ಯುವದನಿ I ಐಡಿಯಲ್ ಗೋಪಿ I

ಶಿವಮೊಗ್ಗ ಮಹಾನಗರ ಪಾಲಿಕೆ ಎಂದೊಡೆ ಇಲ್ಲೊಂದು ಅಪವಾದಗಳ ದನಿ ಬುಗಿಲೆದ್ದು ಬಿಡುತ್ತದೆ ಆದರೆ ಇಲ್ಲಿಯೂ ಅಮುಲಾಗ್ರ ಅಭಿವೃದ್ದಿಯ ದಿಸೆಯಲ್ಲಿ ಕೆಲಸ ಮಾಡಿದ ಕೆಲ ಅಧಿಕಾರಿಗಳು ಹಾಗೂ ನಗರಸಭೆ/ಮಹಾನಗರಪಾಲಿಕೆ ಸದಸ್ಯರುಗಳು ಈ ಅಪವಾದಗಳನ್ನು ತಳ್ಳಿ ಹಾಕುವಂತೆ ಜನದನಿಯಾಗಿ ನಡೆದುಕೊಂಡಿರುವ ಅಸಲಿ ಉದಾಹರಣೆಗಳಿವೆ, ಹೀಗಾಗಿ ನಾಗರೀಕ ನ್ಯಾಯದ ಭರವಸೆಗಳು ಇನ್ನೂ ಉಳಿದುಕೊಂಡಿವೆ ಎನ್ನಬಹುದು. ಹೌದು ಮಹಾನಗರ ಪಾಲಿಕೆಯ ಸದಸ್ಯರಾಗಿ ತಮ್ಮದೇ ಯೋಚನೆ ಹಾಗೂ ಯೋಜನೆಗಳ ಹಾದಿಯಲ್ಲಿ ಅಧಿಕಾರಿಗಳ ಮನವೊಲಿಸಿ, ರಾಜ್ಯಕ್ಕೆ ಮಾದರಿಯಾಗಿ ಸಾರ್ವಜನಿಕ ಜನಜೀವನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ಮಲೆನಾಡಿನಲ್ಲಿ ಹೊಸದೊಂದು ಭರವಸೆ ಮೂಡಿಸಿದ ನಾಯಕತ್ವ ರೂಪಿಸಿದವರೇ “ಐಡಿಯಲ್ ಗೋಪಿ”

ಇಂತಿವರ ಕುರಿತಾಗಿ ಸೂರ್ಯಗಗನ ಪತ್ರಿಕೆ ಒಂದಿಷ್ಟು ವಾಸ್ತವವನ್ನು ತೆರೆಡಿಡುವುದಕ್ಕೆ ಮುಂದಾಗಿದೆ. ಅಲ್ಲದೆ ಶಿವಮೊಗ್ಗ ಹೇಗಿರಬೇಕು..? ಇದೀಗ ಹೇಗಿದೆ..? ೧೫೦೦ ಕೋಟಿ ಬಜೆಟಿನ ಸ್ಮಾರ್ಟ್ ಸಿಟಿ ಕೆಲಸಗಳು ಹೇಗೆ ಸಾಗಿದೆ, ೫೦೦ ಕೋಟಿ ಅಮೃತ್ ಯೋಜನೆ ಯಾವ ಹಂತಗಳಲ್ಲಿದೆ, ಭ್ರಷ್ಟಾಚಾರದ ಅಮೇಧ್ಯ ಹೇಗೆ ಲೇಪನವಾಗಿದೆ, ಅಭಿವೃದ್ದಿಯ ನೆಪದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಹೇಗೆ ನಾಗರೀಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿದೆ, ಕೆಲವಡೆ ಖಾಸಗಿ ಆಸ್ತಿಗಳು ನಷ್ಠವೂ ಆಗುತ್ತಿದೆ, ಸಾವುಗಳು ಸಂಭವಿಸುತ್ತಿದೆ ಎನ್ನುವ ಹತ್ತು ಹಲವು ಬೇಗುದಿಗಳ ಬುಟ್ಟಿಯನ್ನು ಬಿಚ್ಚಿಟ್ಟಿದ್ದಾರೆ ಎನ್ನುವುದು ಪ್ರಬುಧ್ದ ಸಮಾಜ ಮತ್ತೊಮ್ಮೆ ಚಿಂತನೆಯತ್ತ ಚಿತ್ತವರಿಸಬೇಕಿದೆ ಇದು ಅತೀವ ಜರೂರಿಯೂ ಆಗಿದೆ. ದುಡ್ಡಿದ್ದವನು ನಾಯಕತ್ವ ನಿಭಾಯಿಸಿಬಿಡುತ್ತೇವೆ ಎಂದು ಜಾತಿಯಾಧರಿತವಾಗಿ ರಾಜಕೀಯ ಮಾಡುವ ಮಾನಸೀಕತೆಯವರಿಗೆ ನಿಜಕ್ಕೂ ತಾನು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಗೆ ಏನು ಅಗತ್ಯವಿದೆ..? ಸಾರ್ವಜನಿಕವಾಗಿ ಸಲ್ಲಿಸಬೇಕಾದ ತುರ್ತು ಸೇವೆಗಳೇನು..? ರಾಜ್ಯ ಹಾಗೂ ಕೇಂದ್ರಾಡಳಿತಗಳು ನೀಡುವ ಯೋಜನೆಗಳೇನು..? ಶಿವಮೊಗ್ಗದಲ್ಲಿ ಕಳೆದ ಬಜೆಟ್ ಗಳಿಂದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗ, ದಲಿತ ವರ್ಗ, ಅಂಗವಿಕಲರಿಗೆ, ವಿದ್ಯಾರ್ಥಿ ವೇತನಗಳಿಗೆ ಮೀಸಲಾಗಿರುವ ೭.೨೫% ಯೋಜನೆ, ೩.೨೫% ಯೋಜನೆ, ೨೨.೭೫% ಯೋಜನೆಗಳಿಗೆ ಯಾಕೆ ಕ್ರಿಯಾಯೋಜನೆಗಳೇ ಸಿದ್ದಪಡಿಸಲಾಗಿಲ್ಲ, ಬರಬರುತ್ತಾ ಈ ಯೋಜನೆಗಳು ಬಜೆಟಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲವೇಕೆ..? ಈ ಕುರಿತಂತೆ ಉಳಿದ ಜನಪ್ರತಿನಿಧಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುತ್ತಿಲ್ಲವೇಕೆ..? ವಿರೋಧಪಕ್ಷದ ನಾಯಕರಿಗೆ ಮಾಹಿತಿ ಇಲ್ಲವೇ.. ಅಥವಾ ಪರ್ಸೆಂಟೇಜ್ ಎಣಿಕೆಯಲ್ಲಿ ಮಿಂದು ಹೋಗಿದ್ದಾರೆಯೇ.. ಹೀಗೆ ನೂರಾರು ಪ್ರಶ್ನೆಗಳು ಒಮ್ಮೆಲೆ ಸಾಲುಗಟ್ಟುತ್ತವೆ.

ಆಚ್ಚರಿ ಎಂದರೆ ಯಾವುದಕ್ಕೂ ಉತ್ತರಿಸುವ ಸಾಮರ್ಥ್ಯ. ಸಮರ್ಥ ಮನೋಭಾವಗಳ ಕೊರತೆ ಇಂದು ಬಹುತೇಕ ಪಾಲಿಕೆ ಸದಸ್ಯರಿಗಿದೆ, ಇದಲ್ಲದೆ ಬಹುತೇಕರಿಗೆ ಪಾಲಿಕೆಯ ಯೋಜನೆಗಳು, ನಾಗರೀಕ ಅಭಿವೃದ್ದಿಗಳು, ಮಾದರಿ ಶಿವಮೊಗ್ಗಕ್ಕೆ ಇರುವ ಅಗತ್ಯ ಯೋಜನೆಗಳ ಬಗ್ಗೆ ಕಿಂಚಿತ್ತು ಮಾಹಿತಿಯೂ ಇಲ್ಲ, ಕಾಳಜಿಯೂ ಇಲ್ಲವಾಗಿದೆ ಇದು ಸಧ್ಯದ ದುರಂತ ಎನ್ನಬಹುದು,
ಮೇಲಾಗಿ ಯಾರನ್ನೋ ಹೊಗಳುವುದೋ.. ಅಥವಾ ಇನ್ನಾರನ್ನೋ ತೆಗಳುವುದೋ.. ಉದ್ದೇಶವೂ ಇದಲ್ಲವಾಗಿದೆ, ಸಾರ್ವಜನಿಕ ಹಿತದೃಷ್ಠಿಯಿಂದ ಮಾದರಿ ಶಿವಮೊಗ್ಗ ನಿರ್ಮಾಣದ ಕನಸು ಇಟ್ಟುಕೊಂಡು ಕೆಲಸ ಮಾಡಿದವರಲ್ಲಿ ಒಬ್ಬರಾದ “ಐಡಿಯಲ್ ಗೋಪಿ” ಯವರನ್ನು ಪತ್ರಿಕೆ ಮಾತನಾಡಿಸಿದೆ. ಅಂದಿನ ಪಾಲಿಕೆ ಆಯುಕ್ತರಾದ ರವಿಯವರ ಅಭಿವೃದ್ದಿ ಸಾಂಗತ್ಯದಲ್ಲಿ ಜೊತೆಯಾಗಿ ನಡೆದವರು ನಾಲ್ಕು ಭಾರಿ ಪಾಲಿಕೆಯ ಬಜೆಟ್ ಮಂಡನೆ ಮಾಡಿ ವಿಶೇಷವಾಗಿ ೩.೨೫% ಯೋಜನೆಯಡಿ ಅಂಗವಿಕಲರಿಗೆ ಮೋಟಾರ್ ಧ್ವಿ-ಚಕ್ರ ವಾಹನಗಳನ್ನು ಒದಗಿಸುವಲ್ಲಿ ಶ್ರಮಿಸಿದದವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಇದೇ ಐಡಿಯಲ್ ಗೋಪಿ, ೨೦ ನೇ ವಾರ್ಡಿನ ಸದಸ್ಯರಾಗಿ ಈ ವಾರ್ಡಿನ ಅಭಿವೃದ್ದಿಗಷ್ಠೆ ಗಮನಹರಿಸದೇ ಇಡೀ ಶಿವಮೊಗ್ಗದಲ್ಲಿ ಕಸಮುಕ್ತ ನಗರವನ್ನಾಗಿ ನಿರ್ಮಿಸಬೇಕು ಹಾಗೂ ಎಲ್ಲಿ ಕಸ ಉತ್ಪತ್ತಿಯಾಗುತ್ತದೆಯೋ ಅಲ್ಲಿಯೇ ಅದು ಶೂನ್ಯಗೊಳಿಸುವ ತಾಂತ್ರಿಕ ಯೋಜನೆಗಳನ್ನು ಅಳವಡಿಸಬೇಕು ಎಂದು ಪಾಲಿಕೆಯಲ್ಲಿ ದನಿಯಾದವರು

ಹೀಗಾಗಿಯೇ ನೂರಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಇಡೀ ನಗರಕ್ಕೆ ಸಾಂಕ್ರಮಿಕ ವೈರಸ್ ಹರಡುತ್ತಿದ್ದ ಹಾಗೂ ವಿಷಪೂರಿತ ಗಾಳಿಯನ್ನು ಹೊರಸೂಸುತ್ತಿದ್ದ ಕನ್ಸರ್ ವೆನ್ಸಿಗಳು ಹಾಗೂ ಇದರ ಒತ್ತುವರಿ ತಡೆಯುವುದಕ್ಕೆ, ಭಾರಿ ಕಾಂಪ್ಲೆಕ್ಸ್ ಗಳು, ಕಟ್ಟಡಗಳ ಮೇಲ್ಬಾಗದಿಂದಲೇ ಸುರಿಯುತ್ತಿದ್ದ ವೇಸ್ಟೇಜ್ -ತ್ಯಾಜ್ಯಗಳ ತಡೆಯುವಿಕೆಗಾಗಿ ವಿಶೇಷ ಯೋಜನೆ ಸಿದ್ದಪಡಿಸುವಂತೆ ಸಾಮಾನ್ಯ ಸಭೆಯಲ್ಲಿ ನಿರಂತರವಾಗಿ ದನಿ ಎತ್ತಿ ನಂತರ ಅಂದಿನ ಆಯುಕ್ತರು, ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಇಂಜಿನಿಯರ್ ಗಳ ಸಹಯೋಗದಲ್ಲಿ ನಡೆಸಿದ್ದು “ಕನ್ಸರ್ ವೆನ್ಸಿ ಸರ್ಜಿಕಲ್ ವರ್ಕ್” ಇದರಿಂದಾಗಿ ೨೦ಕ್ಕೂ ಹೆಚ್ಚು ಕನ್ಸರ್ ವೆನ್ಸಿಗಳು ಯೂಜಿಡಿ. ಟೈಲ್ಸ್ , ಒಳಚರಂಡಿ ಕಾಮಗಾರಿ ನಡೆದು ನಿರುಮ್ಮಳವಾಗಿ ಸಾರ್ವಜನಿಕರು ಓಡಾಡುವಂತೆ ಹಾಗೂ ಪಾಲಿಕೆಗೊಂದು ಆಸ್ತಿ, ರೆವಿನ್ಯೂ ಸೃಷ್ಠಿಸಿ ನಾಗರೀಕ ಆರೋಗ್ಯ-ಒಳ್ಳೆಯ ವಾತಾವರಣವನ್ನು ಕಲ್ಪಿಸಿಕೊಟ್ಟ ಶ್ರಮದಾನದ ಅಗ್ರಸಾಲಿನಲ್ಲಿ ಅಷ್ಟೆ ಸೌಜನ್ಯತೆಯಿಂದ ನಿಂದವರು ಐಡಿಯಲ್ ಗೋಪಿ. ಹೀಗಾಗಿ ಇಂದಿಗೂ ಇಂತಿವರನ್ನು “ಕನ್ಸರ್ ವೆನ್ಸಿ ಗೋಪಿ” ಎಂದೇ ಪಾಲಿಕೆಯಲ್ಲಿ ತಮಾಷೆಗೆ ಕರೆದು ಮಾತಾಡಿಸುತ್ತಾರೆ, ಸಮುದಾಯ ನಿರ್ಮಾಣ, ಸೇವೆ ಎನ್ನುವುದು ಬರೀ ಮಾತಿನಲ್ಲಿದ್ದರೆ ಪ್ರಯೋಜನವೇ ಅದು ಕೃತಿಯಾದೊಡೆ ಮಾತ್ರ ಅದಕ್ಕೊಂದು ಅರ್ಥವಲ್ಲವೇ.. ನಿಜಕ್ಕೂ ತಮ್ಮ ಸೇವಾವಧಿಯ ವರುಷಗಳ ಎಲ್ಲಾ ದಿನಮಾನಗಳಲ್ಲೂ ನಗರದ ಸ್ವಚ್ಚತೆಗೆ, ವಿಶೇಷ ಯೋಜನೆಗೆ ಮಿಡಿಯುತ್ತಿದ್ದ ಮಲೆನಾಡಿದ ಹೊಸ ಭರವಸೆಯ ನಾಯಕನಾಗಿ ಐಡಿಯಲ್ ಗೋಪಿ ತಮ್ಮನ್ನು ದರ್ಶಿಸಿಕೊಳ್ಳುತ್ತಾರೆ.,

ಬಹಿರ್ದೆಸೆಯಿಂದ ಮುಕ್ತವಾಗಿದೆಯೇ.. ಶಿವಮೊಗ್ಗ..? ಎನ್ನುವುದರ ಬಗ್ಗೆ ಐಡಿಯಲ್ ಗೋಪಿಯವರು ಇದು ಪಾಲಿಕೆಯ ವ್ಯಾಖ್ಯಾನ ಮಾತ್ರವಾಗಿದೆ, ನಗರದಲ್ಲಿ ಶೇಕಡ ೬೦% ಕಮರ್ಷಿಯಲ್ ಕಟ್ಟಡಗಳಿಗೆ ಶೌಚಾಲಯಗಳೇ ಇಲ್ಲ, ಇಲ್ಲಿ ಸಂಪರ್ಕ ಬಯಸುವ ನಾಗರೀಕ ಸಮುದಾಯ ಅಥವಾ ಬಾಡಿಗೆದಾರರು ಮೂತ್ರ ವಿಸರ್ಜನೆ ಉಪಯೋಗಿಸಿಕೊಳ್ಳುವುದು ಪಾಳುಬಿದ್ದ ಜಾಗಗಳು, ಸ್ವಚ್ಚತೆ ಕಾಣದೇ ಇರುವ ಜನಪ್ರದೇಶಗಳು, ಕೋವಿಡ್-೧೯ ನಂತಹ ಇಂತಹ ವಿಷಮಸ್ಥಿತಿಯ ಸಂದರ್ಭದಲ್ಲೂ ಸಾಂಕ್ರಮಿಕ ವೈರಸ್ ಹರಡುವಿಕೆಗೆ ಕಾರಣವಾಗಬಲ್ಲದು ಎನ್ನುವ ಕಿಂಚಿತ್ತು ಕಾಳಜಿ ಪಾಲಿಕೆಗೆ ಇಲ್ಲವಾಗಿದೆ, ಇಂದಿಗೂ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವುದು ದಂಡನಾರ್ಹ ಎನ್ನುವ ಅಲ್ಲಲ್ಲಿ ಫಲಕಗಳಿದ್ದರೂ ಯಾವುದೇ ಪ್ರಯೋಜನವಿಲ್ಲವಾಗಿದೆ, ಇದಕ್ಕೆ ಸಾರ್ವಜನಿಕ ಶೌಚಾಲಯಗಳ ಕೊರತೆ ಎನ್ನುವುದು ತೋರಿಸುತ್ತದೆ ಮುಖ್ಯವಾಗಿ ಇದರಿಂದ ತೊಂದರೆಯಾಗುತ್ತಿರುವುದು ಪುರಷರಿಗಿಂತ ಮಹಿಳೆಯರಿಗೆ ಅಧಿಕ ಎನ್ನಬಹುದು ಅಂಜಿಕೆಯಿಂದ ಯಾರನ್ನೂ ಕೇಳಲಾಗದೇ ಕೆಲವೆಡೆ ಪರಿತಪಿಸಿ ಹಾದು ಹೋಗುವ ಮಹಿಳೆಯರನ್ನು ಮಾತಾನಾಡಿಸಿ ಪರಿಹಾರ ಕಂಡುಕೊಳ್ಳುವ ಗೋಜಿಗೆ ಹೋಗುತ್ತಾರೆ ಹೀಗಾಗಿ ಶೇಕಡ ೬೦% ಕಮರ್ಷಿಯಲ್ ಕಟ್ಟಡಗಳಿಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪಾಲಿಕೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲು ಮುಂದಾದರೆ ಅನಿವಾರ್ಯವಾಗಿ ಕಟ್ಟಡ ಮಾಲೀಕರು ಶೌಚಾಲಯ ನಿರ್ಮಿಸಿಕೊಳ್ಳುತ್ತಾರೆ, ಹಾಗೂ ಅಗತ್ಯವಿರುವ ಕಡೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾ ಮಾಡಿದರೆ ಶೇಕಡವಾರು ಬಹಿರ್ದೆಸೆಯಿಂದ ಮುಕ್ತವಾಗುತ್ತದೆ ನಗರ ಎನ್ನುತ್ತಾರೆ ಐಡಿಯಲ್ ಗೋಪಿಯವರು.

ಹೀಗೆ ಕನಿಷ್ಠ ಕಾರ್ಯಕ್ರಮಗಳು ನಾಗರೀಕ ಸಮುದಾಯಕ್ಕೆ ಅಗತ್ಯವಿದೆ : ಎನ್ನುವುದನ್ನು ತಿಳಿಸುವುದು ಕೂಡ ಓರ್ವ ಜನಪ್ರತಿನಿಧಿಯ ಆಧ್ಯ ಕರ್ತವ್ಯವಾಗಿದೆ ಎಂದೇ ಭಾವಿಸಬಹುದು. ಇನ್ನೂ ರಾಜಕಾಲುವೆ, ಚಾನೆಲ್ ಗಳು ನಗರ ಮಧ್ಯೆಭಾಗದಿಂದ ಹರಿದು ಹೋಗುವುದರಿಂದ ಇದಕ್ಕೆ ವೇಸ್ಟೇಜ್ ನೀರು, ಯೂಜಿಡಿ ಲಾಸ್ಟ್ ಪಾಯಿಂಟ್ ಕನೆಕ್ಷನ್ ಮಾಡುವುದು, ಮಲೀನ ನೀರು, ಡ್ರೈನೇಜ್ ಕನೆಕ್ಷನ್ ಮಾಡುವುದರಿಂದ ಚಾನೆಲ್ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಕೆಲ ರಾಜಕಾಲುವೆ ನೀರು ಕೃಷಿಗೆ, ಜಾನುವಾರು ಕುಡಿಯುವುದಕ್ಕೆ ಇನ್ನೀತರ ಸದ್ಬಳಕೆಗೆ ಯೋಗ್ಯವಿಲ್ಲವಾಗುತ್ತದೆ ಹೀಗಾಗಿ ಪಾಲಿಕೆಯ ಆಸ್ತಿಗಳನ್ನು ಗುರುತಿಸಿ ಅದನ್ನು ಉಳಿಸಿಕೊಂಡು ಅಲ್ಲಲ್ಲಿ Seepage Water Treatment Plant ( ನೀರು ಶುಧ್ದೀಕರಣ ಘಟಕ ) ನಿರ್ಮಾಣ ಮಾಡುವುದರಿಂದ ಮಲೀನಗೊಂಡು ಹರಿಯುವ ಡ್ರೈನೇಜ್ ನೀರು ಒಂದೆಡೆ ಶೇಖರಿಸಿ ಅದನ್ನು ಮರುಬಳಕೆ ಮಾಡಬಹುದು ಇದರಿಂದ ಪಾಲಿಕೆಯ ಕುಡಿಯುವ ನೀರನ್ನು ಬಳಸಿಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ ಎನ್ನುವ ಹೆಜ್ಜೆಯಲ್ಲಿ ಐಡಿಯಲ್ ಗೋಪಿಯವರು ತಮ್ಮ ಅಧಿಕಾರವಧಿಯಲ್ಲಿ “ಗಾಂಧಿ ಪಾರ್ಕ್”ನಲ್ಲಿ ಮರಗಿಡ ಹಾಗೂ ಸ್ವಚ್ಚತೆಗೆ ಬಳಸಿಕೊಳ್ಳುತ್ತಿದ್ದ ೫೦ಸಾವಿರ ಲೀಟರ್ ಕುಡಿಯುವ ನೀರು ಉಳಿಸಲು Seepage Water Treatment Plant ( ನೀರು ಶುಧ್ದೀಕರಣ ಘಟಕ ) ಸ್ಥಾಪಿಸುವಲ್ಲಿ ಯಶಸ್ವಿಯಾದರು ಇದೀಗ ಮಲೀನಗೊಂಡ ನೀರು ಶುಧ್ದೀಕರಣ ಘಟಕದಡಿ ಮರುಬಳಕೆಯಾಗುತ್ತಿದೆ ಎನ್ನುವುದನ್ನು ಜನತೆ ಸ್ಮರಿಸಬಹುದು.

ಇಂತಹ ನೂರು ಯೋಜನೆಗಳನ್ನು ಕಟ್ಟಿಕೊಂಡು ನಿರಂತರ ದನಿಯಾಗುತ್ತಿದ್ದ ಐಡಿಯಲ್ ಗೋಪಿಯವರನ್ನು ಜನತೆ ಸೋಲಿಸಿದ್ದಾರೆ, ಇದು ಅಭಿವೃದ್ದಿಗೆ ಸಂದ ಸೋಲು ಎಂದು ಬಣ್ಣಿಸಬಹುದು,
ಯಾರು ಕೆಲಸವನ್ನು ಮಾಡುತ್ತಾರೋ ಅವರನ್ನು ಜನತೆ ಅಷ್ಟಾಗಿ ಒಪ್ಪಿಕೊಳ್ಳುವುದಿಲ್ಲ ತಪ್ಪಿನ ಅರಿವಾದಾಗ ಕಾಲ ಮುಗಿದ ಅಧ್ಯಾಯವಾಗಿ ಬಿಡುತ್ತದೆ ಹೀಗಾಗಿ ಜನತೆ ಒಮ್ಮೆಲೆ ಅರ್ಥೈಸಿಕೊಳ್ಳಬೇಕಾಗಿದೆ ಅಭಿವೃದ್ದಿ ಹಾಗೂ ಜನಪರ ಕಾಳಜಿಗೆ ಬೇಕಾಗಿರುವುದು ಪಕ್ಷವಲ್ಲ ನಾಯಕತ್ವ ಎನ್ನುವುದು ಮುಂದಾದರು ಅರ್ಥೈಸಿಕೊಳ್ಳಲಿ ಎನ್ನುವುದು ಈ ಲೆಖನದ ಆಶಯವೂ ಆಗಿದೆ, ಒಟ್ಟಾರೆ ಶಿವಮೊಗ್ಗದ ಏಳಿಗೆಯ ಚಿತ್ರಣವಿಡಿದು ನಿಂದ ಓರ್ವ ಯಶಸ್ವಿ, ತಾಂತ್ರಿಕ ಜ್ಞಾನವುಳ್ಳ ನಾಯಕತ್ವವನ್ನು ಪಾಲಿಕೆ ಕಳೆದುಕೊಂಡಿದೆ ಎಂದು ಮತ್ತೊಮ್ಮೆ ಇಲ್ಲಿ ಲಗತ್ತಿಸುತ್ತೇನೆ.

ಶಿವಮೊಗ್ಗ ಸದಾ ಹಸಿರಾಗಿರಬೇಕು ಈ ಮೂಲಕ ಜನತೆಯ ಉಸಿರಾಗಿರಬೇಕು ಎಂದುಕೊಂಡ ಐಡಿಯಲ್ ಗೋಪಿಯವರು “ಹಸರೀಕರಣದ ಯೋಜನೆ” ಸಮಗ್ರವಾಗಿ ಕಾರ್ಯರೂಪಕ್ಕೆ ಬರಲಿ ಎಂದು ಇಂದಿಗೂ ಪಾಲಿಕೆಗೆ ಒತ್ತಾಯಿಸುತ್ತಾರೆ, ಈ ನಡುವೆ ಸ್ಮಾರ್ಟ್ ಸಿಟಿ ಯೋಜನೆ ಹಾದಿ ತಪ್ಪುತ್ತಿದೆ ಭ್ರಷ್ಠಾಚಾರದ ಅಮೇಧ್ಯಾ ಮೆತ್ತುಕೊಂಡಿದೆ, ಅಧಿಕಾರಿ ವರ್ಗ ಹಾಗೂ ಆಡಳಿತ ವ್ಯವಸ್ಥೆ ಹೆಪ್ಪುಗಟ್ಟಿದೆ, ಸರಾಗವಾಗಿ ಯಾವುದು ಆಗುತ್ತಿಲ್ಲ ಸಮರ್ಪಕವಾಗಿ ನಡೆಯುತ್ತಿಲ್ಲ, ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕುಟುಂಬ ಭದ್ರತೆಗಳಿಲ್ಲ, ಅವರ ಆರೋಗ್ಯ ರಕ್ಷಣೆ ಪಾಲಿಕೆಯ ಹೊಣೆ ಎನ್ನುವುದರ ಬಗ್ಗೆ ಅರಿವಿಲ್ಲ, ಸಾರ್ವಜನಿಕ ಅಹವಾಲುಗಳು ಡಸ್ಟ್ ಬಿನ್ ಸೇರಿಕೊಳ್ಳುತ್ತಿವೆ, ಚಾರುಲತಾ ಸೋಮಲ್ ಎನ್ನುವ ಗಟ್ಟಿಗಿತ್ತಿಯಂತಹವರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಅಗತ್ಯವಾಗಿ ಬೇಕಾಗಿದ್ದಾರೆ, ಪ್ರಸ್ತುತ ಆಯುಕ್ತರು ನಾಗರೀಕರಿಂದಲೇ ಕಣ್ಮರೆಗೊಂಡು ರಾಜಕೀಯ ಮಾಡುತ್ತಿದ್ದಾರೆ, ರಾಜಕೀಯ ಮಾಡುವವರು ಪ್ರಶ್ನಿಸುತ್ತಿಲ್ಲ, ಇಂತಹ ದಯನೀಯತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಬಂದೊದಗಿದೆ ಎಂದು ನೋವನ್ನು ತೋಡಿಕೊಳ್ಳುತ್ತಾರೆ ಐಡಿಯಲ್ ಗೋಪಿ ಇನ್ನೂ ಟ್ರಾಪಿಕ್ ಸಮಸ್ಯೆಗಳ ಬಗ್ಗೆ ಚಕಾರೆತ್ತುತ್ತಿಲ್ಲ. ಜಿಲ್ಲಾ ರಕ್ಷಣಾ ಇಲಾಖೆಯೂ ಈ ಕುರಿತಂತೆ ಗಮನವೂ ಹರಿಸುತ್ತಿಲ್ಲ, ಕೇವಲ ಗುಂಪು ಗುಂಪಾಗಿ ನಿಂತು ಸಾರ್ವಜನಿಕರಿಂದ ದಂಡ ವಸೂಲಿ ನಡೆಸುವುದೇ ಕಾಯಕ ಮಾಡಿಕೊಂಡಿದ್ದಾರೆ,

ಇಂತಹ ವಾಸ್ತವತೆಗಳನ್ನು ಅರ್ಥೈಸಿಕೊಂಡು ಕ್ಷೇತ್ರದ ಅಭಿವೃದ್ದಿ, ಸೌಹಾರ್ಧಯುತ ಕಾಳಜಿ, ಯುವಸಂಪತ್ತು ದುರುಪಯೋಗಪಡಿಸಿಕೊಳ್ಳದೆ ಕಾಪಾಡುವಿಕೆ, ದ್ವೇಷ ರಾಜಕೀಯ ಮಾಡದೇ ಜೀವಪರತೆಗಳನ್ನು ಹೊಂದಿರುವ ಯುವ ನಾಯಕತ್ವಕ್ಕೆ ಕ್ಷೇತ್ರದ ಜನತೆ ಇನ್ನಾದರೂ ಬೆಂಬಲಿಸಲಿ ಎನ್ನುವುದು ಐಡಿಯಲ್ ಗೋಪಿಯವರ ಕರೆಯಾಗಿದೆ. ಇದಕ್ಕೆ ಪೂರಕವಾಗಿರುವಂತೆ ಮುಂದಿನ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೋಪಿಯವರಂತಹ ಜನಪರ ಜ್ಞಾನವುಳ್ಳ ನಾಯಕತ್ವ ಗೆದ್ದು ಬರಲಿ ಎನ್ನುವುದು ಅಂಬೋಣ.

Spread the love

Leave a Reply

Your email address will not be published. Required fields are marked *

error: Content is protected !!