I ಈ ಹೊತ್ತಿನ ರೀಲ್ಸ್ ರೌಡಿಗಳು I ವರ್ಸಸ್ I ರೀಲ್ಸ್ ಲೀಡರ್‍ಸ್‌ಗಳು I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಈ ಹೊತ್ತಿನ ರೀಲ್ಸ್ ರೌಡಿಗಳು I ವರ್ಸಸ್ I ರೀಲ್ಸ್ ಲೀಡರ್‍ಸ್‌ಗಳು I
ಆಧುನಿಕ ತಂತ್ರಜ್ಞಾನ ವೃದ್ದಿಗಳಾಗುತ್ತಿದ್ದಂತೆಯೇ ಬದಲಾವಣೆಗಳು ಬೆನ್ನ ಹಿಂದೆಯೇ ರೌಂಡ್ಸ್ ಆಗಿ ಬಿಡುತ್ತದೆ, ಅದು ವ್ಯಾಪಾರೀಕರಣ, ಕಲೆಗಳು, ಪ್ರಬುದ್ದತೆಗಳು, ಸಾಮಾಜಿಕ ರಂಗಭೂಮಿಕೆಗಳಿಗೆ, ಜ್ಞಾನ, ಸಂದೇಶ, ಅರಿವುಗಳ ಮೂಲಕ ಸಂಪರ್ಕ ಸಾಧನವಾದೊಡೆ ನಿಜಕ್ಕೂ ಸಾಮಾಜಿಕ ಆರೋಗ್ಯಕರ ಎನ್ನಬಹುದು, ಆದರೆ ಇದೇ ಬದಲಾದ ದಿಕ್ಕುಗಳ ಸಾಂಗತ್ಯದಡಿ ಜಾಲತಾಣಗಳ ಮೂಲಕ ಶ್ರೀ ಸಾಮಾನ್ಯರ ಮುಂದಡಿ ಅಥವಾ ಬೆದರಿಕೆಗಳು, ತನ್ನ ಸಾಮಾರ್ಥ್ಯದ ಅಧಮತೆಗಳನ್ನು ಬಿತ್ತುವುದಕ್ಕೆ ಈ ಹೊತ್ತಿನ ಪಕ್ಕಾ ರೌಡಿ ಎಲಿಮೆಂಟ್‌ಗಳು, ವಸೂಲಿ ಮಂದಿಗಳು, ದೋ ಮೀಟರ್ ವೈಟ್ ಕಾಲರ್ ಲೀಡರ್‍ಸ್‌ಗಳು ಮುಗಿ ಬೀಳುತ್ತಿರುವುದನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಚಿತ್ತವರಿಸಬೇಕಾದ ಅತೀ ಜರೂರತ್ತಿದೆ, ಇದು ರಾಜ್ಯದೆಲ್ಲಡೆ ಅಷ್ಟೆ ಅಲ್ಲದೆ ಭಾರತಾದ್ಯಂತ ಪಸರಿಸಿಕೊಂಡು ವಿರಾಜಿಸುತ್ತಿರುವುದು ಅತೀ ರಂಜಿಸುತ್ತಿರುವುದು ದರ್ಶಿಸಿಕೊಳ್ಳುತ್ತಿದೆ, ಇಂತಹುದು ಅನಾಹುತಕಾರಿ ಸಂಗತಿ ಅನಿಸಿಕೊಂಡು ಯಾವ ಘಟಿತ ಘಟನೆಗಳು ಕಾರಣವಾಗಿ ಬಿಡುತ್ತದೆ ಎನ್ನುವುದಕ್ಕೆ ಶಿವಮೊಗ್ಗದ ಉದಾಹರಿತ ಉದಾಹರಣೆಗಳನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ.
ಹೌದು ಇತ್ತೀಚೆಗೆ ಮತ್ತಷ್ಟು ಅಧಿಕವಾಗಿ ಅತಿರಂಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಶಿವಮೊಗ್ಗ ಹಾಗೂ ಬೆಂಗಳೂರು ಭೂಗತ ಜಗತ್ತಿನವರು, ಇದೊಂದು ಅನಾಹುತಕಾರಿ ಬೆಳವಣಿಗೆ ಎಂದೇ ತರ್ಕಿಸಿ, ಹಸಿ ಘಟನೆಗಳನ್ನಾಧರಿಸಿ, ಬೆಂಗಳೂರು ಭೂಗತ ಡಾನ್‌ಗಳನ್ನು ಬೆಂಬಲಿಸುತ್ತಿರುವ ಅನೇಕ ಸಾಮಾಜಿಕ ಜಾಲತಾಣದ ಪೇಜ್‌ಗಳ ಅಡ್ಮೀನ್‌ಗಳನ್ನು ಕರೆಯಿಸಿ ಕೇಸು ದಾಖಲಿಸಿ, ಪೇಜ್‌ಗಳನ್ನು ಬ್ಲಾಕ್ ಮಾಡಿರುವ ಬೆಂಗಳೂರಿನ ಪೊಲೀಸ್ ಕಮೀಷನರ್ ತ್ವರಿತಗತಿಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಗಳನ್ನು ಬಳಸಿಕೊಳ್ಳುತ್ತಿರುವ ಅಕೌಂಟ್‌ಗಳ ಮೇಲೆ ತೀವ್ರ ನಿಗಾ ಮಡಗಿರುವುದು, ಸಧ್ಯದ ಆರೋಗ್ಯಕರ ಸಂಗತಿಯಾಗಿದ್ದರು, ಭೂಗತರನ್ನು ಪೋಷಿಸುತ್ತಿರುವ ಅಮಾಯಕ ಯುವ ಸಮುದಾಯವನ್ನು ಸೆಳೆಯುತ್ತಿರುವ ಈ ಪೇಜ್‌ಗಳು ಮತ್ತೂ ಅಣಕ ಇಡುತ್ತಿವೆ, ಅಲ್ಲದೆ ಯುವಕರು ಕ್ರೇಜ್ ಹಾಗೂ ಬಿಲ್ಡಪ್‌ಗಳಿಗಾಗಿ ಈ ಕರ್ಮದ ಕೂಪಕ್ಕೆ ತಮಗೊತ್ತಿಲ್ಲದೆ ಸಿಲುಕಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ,
ಬೆಂಗಳೂರಿನ ಒಂದು ಹಂತದ ಮಾಫಿಯ ಕಿಂಗ್ ಎಂದೇ ಲೇಪಿಸಿಕೊಳ್ಳುತ್ತಿರುವ ಸೈಲೆಂಟ್ ಸುನೀಲನಿಗೆ ಬೆಂಬಲಿಸಿ ತೆರೆಯಲಾಗಿರುವ ಇನ್ಸ್ಟಾಗ್ರಾಮ್ ಪೇಜುಗಳಲ್ಲಿ ಅಣ್ಣನ ತರಾವರಿ ಪೋಟೋಗಳ ಮೇಲೆ ಸಿನಿಮಾ ಹಾಡುಗಳನ್ನು ಹಾಕಿ ಲಿರಿಕಲ್ ವೀಡಿಯೋ ತುಣುಕುಗಳನ್ನು, ಹರಿ ಬಿಡುವ ನೂರಾರು ಪೇಜುಗಳಲ್ಲಿರುವ ಲೈಕ್-ಕಮೆಂಟ್‌ಗಳನ್ನು ನೋಡಿ ಇಂತಿವರ ವಿರೋದಾತ್ಮಕ ಸಾಲಿನಲ್ಲಿದ್ದ ನಟೋರಿಯಸ್ ವಿಲ್ಸನ್ ಗಾರ್ಡನ್ ನಾಗನ ಬೆಂಬಲಿಸಿರುವ ಪೇಜುಗಳು ಇದಕ್ಕೆ ಪ್ರತಿರೋಧ ಒಡ್ಡುವಂತೆ ವೀಡಿಯೋ ಕ್ರಿಯೇಟ್‌ಗಳು ದಾಂಗುಡಿಯಿಕ್ಕಿದೆ, ಇಲ್ಲಿಯು ಬೆಂಬಲ ನೀಡುವ ಯುವ ಕ್ರೇಜಿಗಳು ಬಿಲ್ಡಪ್ ತೆರೆದಿಟ್ಟಿದೆ, ಇಂತಹ ವಾಸ್ತವಗಳನ್ನು ಶಿವಮೊಗ್ಗದಲ್ಲಿಯು ನೋಡುವುದಾದರೆ ‘ಗಾಂಜಾ ಗಿರಾಕಿ’ಗಳು ಕೂಡ ಮಚ್ಚು ಹಿಡಿದು, ಗ್ಯಾಂಗ್ ಕಟ್ಟಿಕೊಂಡು, ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾ ಡೈಲಾಗ್‌ಗಳನ್ನು ಹಾಕಿಕೊಂಡು ಬಿಲ್ಡಪ್ ನೀಡುತ್ತಿರುವ ವೀಡಿಯೋಗಳು ದರ್ಶಿಸಿಕೊಂಡಿವೆ,
ಇನ್ನೂ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಸಿಂಹ, ಹುಲಿ, ಬೆಟ್ಟ, ಕಾಡು, ಹೀಗೆ ಯುದ್ದಕ್ಕೆ ಸನ್ನದ್ದತೆ ಹೊಂದಿರುವಂತೆ ಹಾಡು, ಡೈಲಾಗ್‌ಗಳನ್ನು ತಮ್ಮ ಪೋಟೋಗಳ ಮೇಲೆ ಲಿರಿಕಲ್ ವೀಡಿಯೋ ಮಾಡಿ ಹಾಕಿಕೊಂಡು ಉಳಿದವರು ಕಂಡಂತೆ ಉರಿಸಬೇಕು, ಎನ್ನುವ ಭಾವದಡಿ ಕಾಣಸಿಗುವ ಇಂತಹ ವೀಡಿಯೋ, ಬೆಳವಣಿಗೆಗಳನ್ನು ನೋಡಿದರೆ ನಿಜಕ್ಕೂ ನಾವುಗಳು ನಾಡಿಲ್ಲಿದ್ದೇವಾ..? ಕಾಡಿಗೆ ಬಂದಿದ್ದೇವಾ..?! ಅಥವಾ ಕಾಡು ಪ್ರಾಣಿಗಳೆಲ್ಲಾ ನಾಡಿಗೆ ಬಂದು ಓಡಾಡುತ್ತಿದಿಯಾ ಎನ್ನುವಂತೆ ಭಾಸವಾಗುತ್ತಿದೆ, ಇಂತಹ ಮಾದರಿ ಸ್ಟೇಟಸ್‌ಗಳೇ ಹಲವು ಘಟಿತ ಘಟನೆಗಳಿಗೂ ಕಾರಣವಾಗಿದೆ, ಅಲ್ಲದೆ ಮರ್ಡರ್‌ನಂತಹ ಅನಾಹುತಕಾರಿಗೂ ಎಡೆಮಾಡಿಕೊಟ್ಟಿದೆ.
ಈ ಲಿರಿಕಲ್ ವೀಡಿಯೋ ಎಡಿಟ್‌ಗಳ ಕಾಲಘಟ್ಟದ ಮುನ್ನದಿ ಶಿವಮೊಗ್ಗ ತುಂಬೆಲ್ಲಾ ಪ್ಲೆಕ್ಸಿ ದುನಿಯಾ ರಾರಾಜಿಸುತಿತ್ತು, ಇದೀಗ ಈ ಪ್ಲೆಕ್ಸಿ ಹಾವಳಿಗಳ ಜೊತೆಯಲ್ಲಿ ವೀಡಿಯೋ ಮಿಕ್ಸಿಂಗ್ ಯಾತನೆಗಳು ಶುರುವಾಗಿ ಬಿಡುತ್ತದೆ, ಇಂತಹ ಬಾಧೆಗಳಿಗೆ ಪೊಲೀಸ್ ವ್ಯವಸ್ಥೆಗಳೇ ಕಡಿವಾಣ ಹಾಕಬೇಕಾಗಿರುವುದು ಅಲ್ಲದೆ ಸಾರ್ವಜನಿಕ ಜಾಗೃತಿಗಳನ್ನು ಮೂಡಿಸುವತ್ತ ಕಾರ್ಯಾಗಾರಗಳು, ಅರಿವಿನ ವಿಚಾರ ಸಂಕೀರಣಗಳು ಸಮಾಜದ ಬಾಹ್ಯವಾಹಿನಿಯಲ್ಲಿ ಕಟ್ಟಿ ಕೊಡಬೇಕಾದ ಜವಾಬ್ದಾರಿಗಳು ಸಾಮಾಜಿಕ ಸಂಘ -ಸಂಸ್ಥೆಗಳಿಗೂ ಇದೆ,
ಇತ್ತೀಚೆಗೆ ಶಿವಮೊಗ್ಗ ಕಂಡಂತೆ ನಗರದ ಮುಖ್ಯ ಹೆದ್ದಾರಿಗಳಾದ ಸವಳಂಗ ರಸ್ತೆ, ವಿನೋಬಾ ನಗರ ರಸ್ತೆ, ನೂರಡಿ ರಸ್ತೆ, ಬಾಲರಾಜ್ ಅರಸ್ ರೋಡ್, ನೆಹರು ರಸ್ತೆ, ಬಿಹೆಚ್ ರಸ್ತೆ, ಶಿವಮೊರ್ತಿ ಸರ್ಕಲ್, ಅಕ್ಕಮಹಾದೇವಿ ವೃತ್ತ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ ಸರ್ಕಲ್, ಗೋಪಿ ವೃತ್ತ, ಎಎ ವೃತ್ತ, ಬಸ್ಟ್ಯಾಂಡ್ ಸರ್ಕಲ್, ಇನ್ನೂ ಮುಂತಾದೆಡೆ ಅತಿರಂಜನೆಯ ಪ್ಲೆಕ್ಸಿಗಳು, ಕಟೌಟ್‌ಗಳಲ್ಲಿ ಕೆಲ ನಾಲ್ಕೈದು ಮಂದಿಗಳು ತಮ್ಮದೇ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಅತಿರಂಜಿತವಾಗಿ ಕಾಣಿಸಿಕೊಂಡಿದ್ದು ಶ್ರೀ ಸಾಮಾನ್ಯರಿಗೆ ಬಹುತೇಕವಾಗಿ ಅಸಹ್ಯ ಹುಟ್ಟಿಸಿವಂತೆ ಮಾಡಿದೆ, ಇನ್ನೂ ಇಂತಿವರುಗಳೆಲ್ಲಾ ಯಾವ ಸಾಮಾಜಿಕ ಕ್ರಾಂತಿಗಳನ್ನು ಮಾಡಿದವರು..?! ಎಂದು ತರ್ಕದ ತುಲನೆಗಳಾಗಿದೆ, ಜನಸ್ನೇಹಿಯಾಗಿ ನಾಯಕರಾಗಬೇಕಾಗಿದ್ದವರು ಮರೆತು ಯಾವುದೇ ಐತಿಹಾಸಿಕ ನಡೆ, ನುಡಿಗಳ ಚರಿತ್ರೆಯ ಪುಟಗಳಲ್ಲಿ ಸಣ್ಣದಾಗಿ ಒಂದು ಸಾಲಿನಲ್ಲಿಯು ಕಾಣಿಸಿಕೊಳ್ಳದಿದ್ದವರು ಶ್ರದ್ದಾಂಜಲಿ ಅರ್ಪಿಸಿಕೊಳ್ಳುವ ಆತ್ನರತಿಯಂತೆಯೇ, ತಮಗೆ ತಾವೇ ವೈಭವಿಕರಿಸಿಕೊಂಡಿದ್ದು ಮತ್ತೊಂದು ಶಿವಮೊಗ್ಗದ ದುರಂತ ಎನ್ನಬಹುದು, ಇಂತಹ ಹುಟ್ಟು ಹಬ್ಬಗಳು ವ್ಯವಸ್ಥಿತವಾಗಿ ಅರ್ಥಗರ್ಭಿತವಾಗಿ ಸಮಾಜಮುಖಿಯಾಗಿ ಆಚರಿಸಿಕೊಂಡರೆ ಮುಂದಿನ ಬೆಳವಣಿಗೆಗೆ ಸಾರ್ಥಕ ವಾದೀತು ಎಂದು ಹೇಳಬಹುದು, ಆದರೂ ಕೆಲವರಿಗೆ ಪ್ಲೆಕ್ಸಿಗಳ ಮೂಲಕ ಕಾಣಿಸಿಕೊಂಡು, ಲಿರಿಕಲ್ ವೀಡಿಯೋ, ಎಡಿಟಿಂಗ್ ವೀಡಿಯೋಗಳಲ್ಲಿ ದರ್ಶಿಸಿಕೊಂಡು ಮಹಾನ್ ನಾಯಕರೆಂದು ಬಿಂಬಿಸಿಕೊಂಡು ಇನ್ನಾವ ಜಾಹಿರಾತಿನಂತಹ ಬಿತ್ತಣಕ್ಕೆ ಮುಂದಾಗಿದ್ದಾರೋ ಆ ದೇವರೆ ಬಲ್ಲ ಎನ್ನುವುದಾಗಿದೆ.
ಏನೇ ಆಗಲಿ “ಮೂರ್ಖ ದೊರೆಗಳ ಮುಂದಡಿ ಕಿನ್ನರಿ ಹಾಡು ಕೇಳಿತಂತೆ” ಅವರೊಮ್ಮೆ ಅವಲೋಕನ ಮಾಡಿಕೊಂಡು ಮುಂದಾದರು ಪ್ಲೆಕ್ಸಿ, ವೀಡಿಯೋ ತುಣುಕುಗಳಲ್ಲಿ ಸಾಮಾಜಿಕ ಜಾಲತಾಣದ ಗೋಡೆಗಳನ್ನು ನುಂಗಿ ಸ್ವಾಹ ಮಾಡಿಕೊಳ್ಳದೆ, ಒಂದೇ ಒಂದು ಒಳಿತಿನ ಶಾಶ್ವತ ಕೆಲಸಗಳು ನಿಮ್ಮಗಳ ಹುಟ್ಟು ಹಬ್ಬಕ್ಕೆ ಶ್ರೇಯಸ್ಸು ತಂದು ಕೊಡಲಿ ಎನ್ನುವುದು ಈ ಅಕ್ಷರದ ಸಾಲುಗಳ ಉವಾಚ,
ಹೀಗೆ ಮುಂದುವರೆದಂತೆ ನೂರು ಗ್ರಾಂ ಬಿರಿಯಾನಿ ಪೊಟ್ಟಣದ ಬಾಕ್ಸ್, ಅದರ ಮೇಲೊಂದು ರಾಜಕೀಯ ನಾಯಕರ ಪೋಟೋ ಲಗತ್ತಿಸಿ, ಬಿರಿಯಾನಿಗಾಗಿ ಮುಗಿಬಿದ್ದ ನೂರಾರು ಕೈಗಳಿಗೆ ನೀಡುವ ಆತುರಾತರತೆಗಳು, ಹಿಂದೆ ಬನ್ನಿ, ಹೀಗೆ ಬನ್ನಿ ಎನ್ನುತಲಿ ಜನರತ್ತಿರ ತೂರಿ ಬಿಡುವ ಬಿರಿಯಾನಿ ಪೊಟ್ಟಣದ ಬಾಕ್ಸ್‌ಗಳು ಅದನ್ನು ಅದೆಷ್ಟೋ ವರುಷಗಳಿಂದ ಹಸಿವು ಕಟ್ಟಿಕೊಂಡವರಂತೆ ಕ್ಯಾಚ್ ಹಿಡಿವ ಅರಿವಿಲ್ಲದ ಜನರ ದುರ್ಬಲತೆಯನ್ನು ಸಂಪೂರ್ಣವಾಗಿ ಕಬಳಿಸಿಕೊಳ್ಳುವ ಇಂತಹ ರಾಜಕಾರಣಿಗಳ “ನೂರು ಗ್ರಾಂ ನಾಟಿ ಕೋಳಿ ಬಿರಿಯಾನಿ” ಪ್ರಹಸನ ನೋಡಿ, ಜನರಿಗೂ ಬುದ್ದಿಗೇಡು, ಕೊಡುವ ಕೈಗಳಿಗೂ ಬುದ್ದಿಗಳಿಲ್ಲ ಎಲ್ಲವೂ ಲದ್ದಿಗೇಡು ಎನ್ನುವದಂತೂ ಕಂಡು ಬಂದಿದ್ದು ಶಿವಮೊಗ್ಗದಂತಹ ಹೋರಾಟದ ನಗರಿಯಲ್ಲಿ ಎಂದರೇ ಅಚ್ಚರಿಯಾಗಿದೆ, ಜನರನ್ನು ಹಂದಿಗಳಂತೆ ಕಾಣುವ ಮನಸ್ಥಿತಿಯಿಂದ ಜನಪ್ರತಿನಿಧಿಗಳು ಹೊರಬರಬೇಕಾಗಿದೆ, ಇದಾಗದಿದ್ದರೆ ಪ್ರಬುದ್ಧ ಸಮಾಜ ಇಂತಹ ದಯನೀಯತೆಗಳನ್ನು ಅಲ್ಲಗಳಿಯದೇ ಇರಲಾರದು,
ಇದಾದ ಬಿರಿಯಾನಿ ಪ್ರಹಸನದ ಕೆಲವೇ ನಿಮಿಷಗಳಲ್ಲಿ ಇಂತಹುದೇ ಸಾಮಾಜಿಕ ಜಾಲತಾಣದ ಗ್ರೂಪ್‌ಗಳಲ್ಲಿ “ಕಾವೇರಿ ಸೀಮೆಯಾಗ ಕನ್ನಡ ಮಣ್ಣಿನ ಮಡಿಲಾಗ, ಬಂದಾನೋ ತೇರ್‍ನಾಂಗ ತಂದೇಗೆ ತಕ್ಕ ಮಗಾ” ಎನ್ನುವ ಹಾಡಿಗೆ ವೀಡಿಯೋ ಮಿಕ್ಸ್ ಮಾಡಿದ ತುಣುಕಿನಲ್ಲಿ ನೂರು ಗ್ರಾಂ ಬಿರಿಯಾನಿ ಪೊಟ್ಟಣಗಳನ್ನು ಹತ್ತಾರು ಕೈಗೆ ಕೊಡುತ್ತಿರುವ ಓರ್ವ ಜನಪ್ರತಿನಿಧಿಗೆ ಯಾವ ಪ್ರಬುದ್ದತೆಗಳಿದೆ ಎನ್ನುವುದನ್ನು ಈ ಮಲೆನಾಡಿನ ಜನತೆಯೇ ಅರ್ಥಮಾಡಿಕೊಳ್ಳಬೇಕಾಗಿದೆ,
ಇದೇ ಬಿರಿಯಾನಿ ನೀಡುವ ಔದಾರ್ಯತೆಗಳಿದ್ದರೆ ಅದಕ್ಕೂ ಕ್ರಮಗಳಿಲ್ಲವೇ, ಟೇಬಲ್ ಊಟ, ಅಥವಾ ಬೊಪೆ ಸಿಸ್ಟಮ್‌ಗಳ ಮೂಲಕ ಜನರಿಗೆ ಗೌರವಿಸಿ ನಾಟಿ ಕೋಳಿ ಬಿರಿಯಾನಿ ಮಾಡಿಸಬಹುದಿತ್ತಲ್ಲವೇ..? ಹಸಿವು ಎನ್ನುವ ನೀಡ್ಸ್ ಪರ್ಸನ್‌ಗಳು ಎಲ್ಲಿ ಸಿಗುತ್ತಾರೋ, ಎನ್ನುವ ಸಣ್ಣದೊಂದು ಮಾಹಿತಿಗಳಿಲ್ಲದೆ ಪ್ರಮುಖ ವೃತ್ತಗಳಲ್ಲಿ ದೊಡ್ಡದಾದ ಪ್ಲೆಕ್ಸಿಗಳ ಮುಂದಡಿ ಕೇವಲ ತಮ್ಮ ಜನಪ್ರತಿನಿಧಿಯ ಅಸ್ತಿತ್ವದ ಜಾಹಿರಾತಿಗಾಗಿ, ಪ್ರಚುರತೆಗಾಗಿ ನೂರು ಗ್ರಾಂ ನಾಟಿ ಕೋಳಿ ಬಿರಿಯಾನಿ ಪೊಟ್ಟಣಗಳನ್ನು ಹಂಚಿದ್ದು ನೋಡಿದರೆ ಇವರಿಗೂ ರೀಲ್ಸ್ ಹುಚ್ಚುಗಳ ಅಮಲೇರಿರುವುದು ಸಾಬೀತಾಗುತ್ತದೆ,
ಹೀಗಾಗಿಯೇ ತಲೆಬರಹದಡಿ ಕಾಣಿಸಿರುವಂತೆ ರೀಲ್ಸ್ ರೌಡಿಗಳು ಹಾಗೂ ರೀಲ್ಸ್ ರಾಜಕಾರಣಿಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎನ್ನುವುದಾಗಿದೆ, ಇಂತಹ ದಯನೀಯತೆಗಳಿಂದ, ಅನಾಹುತಕಾರಿಗಳಿಂದ ಶ್ರೀ ಸಾಮಾನ್ಯ, ಯುವ ಸಮುದಾಯ ದೂರವಿರಬೇಕೆಂದರೆ ಅವರಿಗೆ ಜಾಗೃತ ಕಾರ್ಯಾಗಾರಗಳು ಅನಿವಾರ್ಯ ಹಾಗೂ ಪೊಲೀಸರ ಕ್ರಮಗಳು ಅಗತ್ಯತೆಯಾಗಿದೆ ಎಂದು ಈ ಲೇಖನದ ಮೂಲಕ ನನ್ನಯ ಅಂಬೋಣ.