September 24, 2026

I ಕೆಟ್ಟ ಹವ್ಯಾಸಗಳನ್ನು ತ್ಯಜಿಸಿ I ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ I ಡಾ ಎಚ್.ಮಂಜುನಾಥ್ I

0
14-02-2026 dvs college dental healh news 1

 I ಕೆಟ್ಟ ಹವ್ಯಾಸಗಳನ್ನು ತ್ಯಜಿಸಿ I ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ I ಡಾ ಎಚ್.ಮಂಜುನಾಥ್ I

ಶಿವಮೊಗ್ಗ: ಪ್ರಪಂಚದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಮುಖ್ಯ ಕಾರಣ ನಮ್ಮ ದವಡೆ ಮತ್ತು ದಂತಗಳಲ್ಲಿ ಕಂಡುಬರುವ ರೋಗ ಲಕ್ಷಣಗಳಾಗಿವೆ ಎಂದು ದಂತ ವೈದ್ಯ ಡಾ ಎಚ್.ಮಂಜುನಾಥ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಜನರು ಗುಟ್ಕಾ ಸೇವನೆ, ತಂಬಾಕು ಸೇವನೆ ಸೇರಿದಂತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದರಿಂದ ಬಾಯಿ, ದವಡೆ ಹಾಗೂ ದಂತಗಳ ಸವಕಳಿ ಮತ್ತು ರೋಗ ಹೆಚ್ಚಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಜನರು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಸ್ವಚ್ಛತೆಯ ಕಡೆಗೆ ಮತ್ತು ಉತ್ತಮ ಆರೋಗ್ಯದ ಅಭ್ಯಾಸಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಸುಬ್ಬಯ್ಯ ದಂತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವರಾಜ್ ಮಾತನಾಡಿ, ಮುಖ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಯುವಜನರ ಪಾತ್ರ ಬಹಳ ಮುಖ್ಯವಾಗಿದೆ. ಇಂದಿನ ಕ್ಯಾನ್ಸರ್ ಹೃದಯಾಘಾತ ಇನ್ನಿತರ ಕಾಯಿಲೆಗಳ ಮೂಲ ನಮ್ಮ ಬಾಯಿಂದಲೇ ಪ್ರಾರಂಭವಾಗುತ್ತವೆ. ಆದ್ದರಿಂದ ಇವುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಜವಾಬ್ದಾರಿಯುತ ವ್ಯಕ್ತಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ತಂಬಾಕು ಸೇವನೆ ಮಾಡುವ, ಗುಟ್ಕಾ ತಿನ್ನುವ ಯುವಜನರು ಮುಂದೆ ಸಂಭವಿಸಬಹುದಾದ ಮಾರಕ ರೋಗಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಕೆಟ್ಟ ಅಭ್ಯಾಸಗಳನ್ನು ಈಗಿನಿಂದಲೇ ತ್ಯಜಿಸಬೇಕು ಎಂದು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ದಂತ ತಪಾಸಣೆ ಮತ್ತು ಚಿಕಿತ್ಸೆ ವೆಚ್ಚಗಳು ಹೆಚ್ಚಾಗುತ್ತಿದ್ದು, ಆದಷ್ಟು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಳು ದೊರೆಯುವಂತೆ ಆಗಬೇಕು ಎಂದು ತಿಳಿಸಿದರು.

ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಆರ್.ಪರಿಮಳಾ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಪ್ರೊ. ಎನ್.ಕುಮಾರಸ್ವಾಮಿ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!