September 24, 2026

I ಸಂತ ಶ್ರೀ ಸೇವಾಲಾಲರು ಸಮಾಜದ ಏಳಿಗೆಗಾಗಿ ಶ್ರಮಿಸಿ I ಶಾಂತಿ ಮಂತ್ರ ಸಾರಿದ್ದರು I ಅಭಿಷೇಕ್ ವಿ I

0
IMG-20260215-WA0179

I ಸಂತ ಶ್ರೀ ಸೇವಾಲಾಲರು ಸಮಾಜದ ಏಳಿಗೆಗಾಗಿ ಶ್ರಮಿಸಿ I ಶಾಂತಿ ಮಂತ್ರ ಸಾರಿದ್ದರು I ಅಭಿಷೇಕ್ ವಿ I

ಶಿವಮೊಗ್ಗ  : ಸಂತ ಶ್ರೀ ಸೇವಾಲಾಲರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದು, ಶಾಂತಿಯ ಮಾರ್ಗದಲ್ಲಿ ಸಾಗಬೇಕೆಂದು ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯುಕ್ತಶ್ರಾಯದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಯಾರೂ ಕೂಡ ಕುಡಿತ, ಮತ್ತಿತರೆ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸೇವಾಲಾಲರು ತಿಳಿಸಿದ್ದು, ಅವರು ತೋರಿದ ಮಾರ್ಗದಲ್ಲಿ ನಡೆದು, ಅವರ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ‌ ಉತ್ತಮಗೊಳ್ಳುತ್ತದೆ ಎಂದರು.
ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕುವ ರೀತಿಯಲ್ಲಿ‌ ಸೇವಾಲಾಲರ ಜಯಂತಿಗೆ ಸಹ ವಿವಿಧ ತಾಂಡಾಗಳಿಂದ ಭಕ್ತಾದಿಗಳು ಮಾಲೆ ಧರಿಸಿ ಎಲ್ಲ ದುಶ್ಚಟಗಳಿಂದ ದೂರವಾಗಿ ಶ್ರದ್ದೆ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಎಂದ ಅವರು ಮುಂದಿನ ದಿನಗಳಲ್ಲಿ ಸಮಾಜದ ಅತಿ ಹೆಚ್ಚು ಅಂಕ‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ‌‌ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಗಣೇಶ್. ಟಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕ್ರಿ ಪೂ 5 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಬಯಲಿನ ನಾಗರಿಕತೆ ಯಿಂದ ಬಂಜಾರ ಸಮುದಾಯದ ಇತಿಹಾಸ ಇರುವುದು ಕಂಡು ಬಂದಿದ್ದು, ಈ ಸಮಾಜದ ಉದ್ದಾರಕರಾದ ಕ್ರಾಂತಿವೀರ, ಸಮಾಜ ಸುಧಾರಕ, ಸಮಾಜದ ಹರಿಕಾರರಾದ ಸಂತ ಸೇವಾಲಾಲರು 1739 ಫೆಬ್ರವರಿ 15 ರಂದು ಸೂರಗೊಂಡನಕೊಪ್ಪ ದಲ್ಲಿ ಜನ್ಮತಾಳಿದರು. ಕನಕದಾಸರು, ಪುರಂದರದಾಸರಂತಹ ದಾರ್ಶನಿಕರ ಸಾಲಿನಲ್ಲಿ ಸೇವಾಲಾಲರು ನಿಲ್ಲುತ್ತಾರೆ.

ಪ್ರಾಣಿಗಳನ್ನು ಅತ್ಯಂತ ಪ್ರೀತಿಸುತ್ತಿದ್ದ, ಬಿಳಿ ಕುದುರೆಯನ್ನೇರಿ ಜಗತ್ತನ್ನು ಸುತ್ತುತ್ತಿದ್ದ ಸೇವಾಲಾಲರು ಉತ್ತಮ ಆರ್ಥಿಕ ತಜ್ಞರು, ಸಂಘಟನಾ ಚತುರರೂ ಆಗಿದ್ದರು. ಅನ್ಯರನ್ನೂ ತಮ್ಮವರೆಂದು ಭಾವಿಸಿ, ಸಮಾಜದ ಉದ್ದಾರಕ್ಕಾಗಿ ಸದಾ ಶ್ರಮಿಸಿದರು. ಸಮಾಜದ ಏಳಿಗೆಗಾಗಿ ಪಂಚ ತತ್ವಗಳಾದ ಕಳ್ಳತನ ಮಾಡಬಾರದು, ದಯೆ ಹೊಂದಿ, ಸತ್ಯದ ಮಾರ್ಗದಲ್ಲಿ ನಡೆಯಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು ಎಂದು ಸಾರಿದ್ದರು.

ಭೋಗ್, ಈತಿ ಮತ್ತು ಪ್ರಾರ್ಥನೆಯನ್ನು ಸಮಾಜದವರು ಅನುಸರಿಸಬೇಕು ಎಂದು ತಿಳಿಸಿದ್ದ ಸೇವಾಲಾಲರು‌ ೧೮ ನೇ ಶತಮಾನದಲ್ಲಿ‌ ಅಂಧಕಾರದಲ್ಲಿದ್ದ ಸಮಾಜಕ್ಕೆ ದಾರಿ ದೀಪವಾಗಿದ್ದರು.‌ ಆವಾಗಲೇ ಅವರು ಮುಂದಿನ ದಿನಗಳಲ್ಲಿ ನೀರನ್ನು ಸಹ ಕೊಂಡುಕೊಳ್ಳುವ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಕೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಹನುಮಾನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಉಮೇಶ್. ಹೆಚ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್,ಸಮಾಜದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!