ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ರಾಜಕೀಯಕ್ಕಾಗಿ ಎಂದಿಗೂ ಕೋಮು ಧ್ವೇಷ ಬಿತ್ತದ I ಬಿ.ಎಸ್ ಯಡಿಯೂರಪ್ಪ I
ಈ ಲೇಖನದ ಮೊದಲಿಗೆ ಬಿ.ಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕಾ ಬಳಗದಿಂದ ತಿಳಿಸಿ ಬಿ.ಎಸ್.ವೈ ಅವರ ಕುರಿತಾಗಿ ಹೇಳುವುದು ಬಹಳಷ್ಟು ಸಗಟುಗಳಿದೆ, ಈ ಸಗಟುಗಳಲ್ಲಿ ಒಂದು ತುಣುಕು ಹಾಗೂ ಸಾಮಾಜಿಕವಾಗಿ ಅವರಿಗಿದ್ದ ಕಾಳಜಿಯನ್ನು ಇಲ್ಲಿ ವಿಸ್ತೃತಗೊಳಿಸುತ್ತಿದ್ದೇನೆ,
ಈ ಮುನ್ನದಿ ಮತ್ತೊಮ್ಮೆ ರಾಜಕಾರಣದ ಅವಲಂಬಿತ ಬದುಕು ನನ್ನದಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಬರೆದಿದ್ದೇನೆ. ರಾಜಕಾರಣವನ್ನು ಯಾವ ಕಾರಣಕ್ಕಾಗಿ ಗೌರವಿಸಬೇಕು, ಬೆಂಬಲಿಸಬೇಕು ಎನ್ನುವ ಅರಿವು, ಜವಾಬ್ದಾರಿಯನ್ನು ನೆಲದ ಪ್ರತಿ ವಾಸಿಗಳು ಅರಿತಿರಬೇಕು, ರಾಜಕಾರಣದ ಅಥವಾ ರಾಜಕೀಯ ನಾಯಕರ ತುಷ್ಠೀಕರಣ, ಸಮರ್ಥನೆಗಳ ಗೀಳಿಗೆ ಬಿದ್ದು ತಮ್ಮ ಆತ್ಮಾಭಿಮಾನವನ್ನು ಮಾರಿಕೊಳ್ಳಬಾರದು ಇದು ಒಟ್ಟು ಸಮಾಜಕ್ಕೆ ಆರೋಗ್ಯಕರವಾದ ಸಂಗತಿಯಲ್ಲ ಹೀಗಾಗಿ ಕೇವಲ ಸಮರ್ಥನೆ ಮಾಡಿಕೊಳ್ಳುವ ಬರದಲ್ಲಿ ಅತೀ ಕೆಟ್ಟದಾಗಿ, ವಿವಾದಿತ ಹೇಳಿಕೆಗಳನ್ನು ನೀಡುವುದು ಹಾಗೂ ಅಭಿಪ್ರಾಯಿಸುವುದು ಸಾಮಾಜಿಕವಾಗಿ ವಿದ್ರೋಹ ಎಸಗಿದಂತೆ ಎನ್ನುವುದು ಫಾಲ್ಹೋ ಮಾಡುವ ಕಾರ್ಯಕರ್ತರಿಗೂ ಮನವರಿಕೆಯಾಗಲಿ, ಏಕೆಂದರೆ ಜಾಲತಾಣದಲ್ಲಿ ಹೇಳಿಕೆ, ಪ್ರತಿ ಹೇಳಿಕೆಗಳು, ಸುಳ್ಳು, ಕೀಟಲೆಗಳಲ್ಲಿಯೇ ಬೆಂಬಲಿತ ಯುವ ಸಮಾಜ ಮಿಂದು ವಿಂಗಡಣೆಯಾಗುತ್ತಲೇ ಹೋದರೆ ಯುವ ಸಂಪತ್ತು ಅಪಾಯದ ಅಂಚಿಗೆ ಹೋದಂತೆ ಅಲ್ಲವೇ..? ಇಲ್ಲಿಗೆ ನಿಲ್ಲಿಸಿ ಬಿಡಿ, ತತ್ವ ಆದರ್ಶ,ಪಕ್ಷ, ಸ್ವಜನತೆ ಏನೇ ಇರಲಿ ಮೊದಲು ಮಾನವೀಯತೆ ಮೆರೆಯಬೇಕಿದೆ, ಜನಜೀವನದ ಬದುಕುಗಳಿಗೆ ಸುಡುಬೆಂಕಿಯಿಟ್ಟು ಅಥವಾ ತೇಜೋವಧೆಗೊಳಿಸಿ ಇನ್ನಾವ ಅಮಾನವೀಯ ಘಟ್ಟದತ್ತ ತೆರಳದಂತೆ ಜನಪರ ದನಿಯಾಗುವ ನಿಟ್ಟಿನಲ್ಲಿ ಎಲ್ಲರೂ ಚಿಂತನೆಗಳತ್ತ ಚಿತ್ತವರಿಸಬೇಕಾದ ಜರೂರತ್ತಿದೆ ಎಂದು ಟಿಪ್ಪಣಿಯನ್ನು ತಮ್ಮ ಮುಂದಡಿ ವಿಸ್ತೃತವಾಗಿಸಿ ಬಿ.ಎಸ್ ಯಡಿಯೂರಪ್ಪನವರ ಸುಧೀರ್ಘವಾದ ರಾಜಕೀಯದ ಇತಿಹಾಸದಲ್ಲಿ ಎಂದಿಗೂ “ಕೋಮು ಭಾವನೆ” ಕೆರಳಿಸಲೇ ಇಲ್ಲ , ಕೆರಳಿಸುವ ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ನೀಡಿ ಸೌಹಾರ್ದತೆಗೆ ಮುಂದಾಗುತ್ತಿದ್ದ ಬಿ.ಎಸ್ ಯಡಿಯೂರಪ್ಪನವರಿಗೆ ಒಟ್ಟು ಸಮಾಜದ ಏಕತೆಯ ಕನಸಿತ್ತು.
ಇನ್ನೂ ರಾಜಕೀಯ ಸಂಗತಿಯಲ್ಲಿ ಹೇಳಿಕೆ, ಪ್ರತಿಹೇಳಿಕೆಗಳು ಸಾಮಾನ್ಯವಾಗಿರುತ್ತದೆ ಇದರಿಂದ ರಾಜಕೀಯ ವಿಶ್ಲೇಷಣೆಗೆ ಬಳಸಿಕೊಂಡರೆ ಹೊರತು ಸಾರ್ವಜನಿಕ ಸಂಗತಿಗಳ ನಡುವೆ ಎಂದಿಗೂ ಜಾತಿ-ಧರ್ಮಗಳಿಡಿದು ವಿರೋದಬಾಸವಾದ ಹೇಳಿಕೆಗಳತ್ತ ಚಿತ್ತವರಿಸಲೇ ಇಲ್ಲ, ವಿರೋದಪಕ್ಷದ ನಾಯಕರಾದ ಸಂದರ್ಭದಲ್ಲಾಗಲಿ, ಮುಖ್ಯಮಂತ್ರಿಯ ಹುದ್ದೆಯನ್ನಾಗಲಿ ನಿರ್ವಹಿಸುವಾಗ ಅಥವಾ ಇನ್ನಾವ ರಾಜಕೀಯ ಕಾರಣಕ್ಕಾಗಿ ಎಂದಿಗೂ “ಕೋಮು ಭಾವನೆ” ಕೆರಳಿಸುವಷ್ಟರ ಮಟ್ಟಿಗಿನ ಗೋಜಿಗೆ ತೆರಳದೆ ತಾನೋರ್ವ ಸಮ ಸಮಾಜದ ನಾಯಕನೆಂದು ಬಿಂಬಿಸಿಕೊಂಡಿದ್ದರು, ಅಕ್ಷರಶಃ ಇದನ್ನು ಪಾಲಿಸಿ ಕೊಂಡು ಬಂದು ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ರಾಜಕೀಯ ಮೌನಕ್ಕೆ ಶರಣಾಗಿದ್ದಾರೆ.
ಬಿಜೆಪಿ ಪಕ್ಷದ ಹಿಂದುತ್ವ ಅಜೆಂಡಾದಡಿ, ಆರ್.ಎಸ್.ಎಸ್ ನ ಮೂಲ ಸೂಚನೆಯನ್ನು ಕೆಲವು ಸಂಗತಿಗಳಲ್ಲಿ ಮಾತ್ರವೇ ಅನುಸರಿಸುತ್ತಿದ್ದರು. ವಿಪರೀತ ಕೋಮು ಹೇಳಿಕೆಗಳನ್ನಿತ್ತ ತಮ್ಮದೆ ಪಕ್ಷದ ಕೆಲ ನಾಯಕರುಗಳಿಗೆ ತಾಕೀತು ಕೂಡ ಮಾಡುತ್ತಿದ್ದರು, ಆದರೆ ಶಿವಮೊಗ್ಗದಂತಹ ಪವರ್ ಪ್ಲೇಸ್ ನಲ್ಲಿ ರಾಜಕೀಯ ಯಶಸ್ಸುಗಳಿಸಿದವರು ಕೇವಲ ಕೋಮುವಿಷ ಬೀಜ ಬಿತ್ತಿಯೇ ಗೆಲ್ಲುತ್ತಿದ್ದರು, ಅವರೆಂದಿಗೂ ಕ್ಷೇತ್ರವ್ಯಾಪಿ ಅಭಿವೃದ್ದಿಯನ್ನು ಸಹಿಸದವರು ಅಲ್ಲ, ಅಭಿವೃದ್ದಿಗಾಗಿ ಕಾಯಕಲ್ಪ ಮಾಡಿದವರು ಅಲ್ಲ, ಅವರ ಸುಧೀರ್ಘ ರಾಜಕೀಯ ಹಾದಿಯಲ್ಲಿ ಕನಿಷ್ಠ ಜನಪರ ಕಾರ್ಯಕ್ರಮಗಳ ಸುಳಿವು ಇಲ್ಲ, ಏನಾದ್ರೂ ಅನಾಯಾಸವಾಗಿ ಗೆದ್ದು ಬಿಡುತ್ತಿದ್ದರು ಎನ್ನುವುದಕ್ಕೆ ಬಿ.ಎಸ್ ಯಡಿಯೂರಪ್ಪನವರು ಅಮೂಲಾಗ್ರದಡಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಲೆನಾಡಿಗೆ ಹಾಗೂ ರಾಜ್ಯದ ಜನತೆಗೆ ನೀಡಿದ ಅಭೂತಪೂರ್ವ ಅಭಿವೃದ್ದಿ ಕೊಡುಗೆಗಳು ಕಾರಣ ಎನ್ನುವುದನ್ನು ಮರೆಯಬಾರದು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪನವರು ನಾಲ್ಕನೇ ಭಾರಿ ಮುಖ್ಯಮಂತ್ರಿಯಾಗಿದ್ದು ಜುಲೈ -೨೬-೨೦೧೯ ಅಚ್ಚರಿ ಎನೆಂದರೆ ಅಂದು ಜುಲೈ-೨೬-೨೦೨೧ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ೭೫ ವರ್ಷದ ಮೇಲ್ಪಟ್ಟ ರಾಜಕಾರಣಿ ಎನ್ನುವ ಬಿಜೆಪಿ ಪಕ್ಷದ ಹೊಸದೊಂದು ಅಜೆಂಡಾದ ತಳಹದಿಯನ್ನು ಒಪ್ಪಿ ಸ್ವತಃ ರಾಜಿನಾಮೆಯನ್ನು ಒಪ್ಪಿಸಿದರು. ಆದರೆ ಚಳುವಳಿ-ಹೋರಾಟಗಳ ಮೂಲಕ “ಕ್ರಿಯಾಸಿದ್ದಿ ಸತ್ವೇ ಭವತಿ ಮಹತಾಂ ನೋಪಕರಣೆ” ಎನ್ನುವ ಸಂಘದ ಗೀತೆಯೊಂದಿಗೆ ಜನಪರವಾಗಿ ನಡೆದು ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಇಲ್ಲದೆ ಬಿಜೆಪಿ ಇಲ್ಲ ಎನ್ನುವ ವಾಸ್ತವ ಬಲವರ್ಧನೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ರಾಜಕೀಯ ವೇದಿಕೆಯಲ್ಲಿ ಮೊದಲಿಗ ಮುತ್ಸದ್ದಿ ಎಂದರೆ ತಪ್ಪಾಗಲಾರದು.
ಇಂತಿವರಿಗೂ ಆಗಾಗ್ಗೆ ಕೋಮು ಭಾವನೆ ಕೆರಳಿಸುವ ಪರಿವಾರದ ಹಿಡನ್ ಅಜೆಂಡಾಗಳ ಸೂಚನೆಗಳಿದ್ದವು ಅನಿಸುತ್ತೇ ಆದರೆ ಎಂದಿಗೂ ಸಂಘಪರಿವಾರವನ್ನು ಗೌರವಿಸಿ ನಡೆದರೆ ಹೊರತು ಬಲವಾಗಿ ಪ್ರತಿಪಾದಿಸಲು ಮುಂದಾಗದೇ ನಾಡಿನ ಎಲ್ಲಾ ಸ್ತರದ ಜನತೆಯೊಂದಿಗೆ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎನ್ನುವಂತೆ ನುಡಿದಂತೆ ನಡೆದವರು, ಇನ್ನೂ ಅದಾಗ ಬೂಕನಕೆರೆ ಯಡಿಯೂರಪ್ಪನವರು ಹೋರಾಟದ ನೆಲೆ ಶಿವಮೊಗ್ಗಕ್ಕೆ ಬಂದ ಮೇಲೆ ಅಂದಿನ ಸಂಘಪರಿವಾರದ ನಡೆಗಳಿಗೆ ಆಕರ್ಷಿತರಾದರು ಶಿಕಾರಿಪುರದ ಪುರಸಭಾ ಸದಸ್ಯರಾಗಿ ಮೊದಲ ಭಾರಿಗೆ ರಾಜಕೀಯ ಪ್ರವೇಶಿಸಿದರು, ಇದಾದ ತರುವಾಯ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ನಾಯಕರಾಗಿ, ಶಿಕಾರಿಪುರ ಕ್ಷೇತ್ರದಿಂದ ಅಸೆಂಬ್ಲಿಗೆ ಹೆಜ್ಜೆ ಇಟ್ಟರು, ವಿರೋದಪಕ್ಷದ ನಾಯಕರು ಆದರು, ಉಪಮುಖ್ಯಮಂತ್ರಿಯಾಗಿ ೨೦೦೭ರಲ್ಲಿ ಸ್ವಂತ ಬಲದಿಂದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯಾದರು.
ಹೀಗೆ ಎಲ್ಲಾ ಕಾಲಕ್ಕೂ ಬಿಜೆಪಿಯನ್ನು ರಾಜಕೀಯ ಸಂಘರ್ಷದಡಿಯಲ್ಲಿಯೇ ಬಲಪಡಿಸಿದರೇ ವಿನಃ ಎಂದಿಗೂ “ಕೋಮು ಭಾವನೆ”ಯ ವಿಷಬೀಜದಿಂದ ರಾಜಕೀಯವನ್ನು ಮಾಡಲಿಲ್ಲ, ಹೀಗಾಗಿಯೇ ಅವರು ತಮ್ಮದೇ ಪಕ್ಷದವರ ಕುತಂತ್ರದಡಿ ಭ್ರಮನಿರಸನಕ್ಕೊಳಗಾಗಿ ಕೆಜೆಪಿ ಪಕ್ಷವನ್ನು ಕಟ್ಟಿಕೊಂಡರು, ಅದಾಗ ಅಹಿಂದ ವರ್ಗದವರು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರು ರಾಜ್ಯದಲ್ಲಿ ಕೆಜೆಪಿ ಪಡೆದ ಮತ ಸಂಖ್ಯೆಗಳನ್ನು ಬಿಜೆಪಿಗಿಂತಲೂ ಅಧಿಕ ಗಳಿಸುವಲ್ಲಿ ಶ್ರಮಿಸಿದರು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಅಭ್ಯರ್ಥಿಯನ್ನು ಠೇವಣಿಗೆ ಹತ್ತಿರದಲ್ಲಿ ಸೋಲುಣಿಸಿದರು, ಕೆಜೆಪಿ ಅಭ್ಯರ್ಥಿಯನ್ನು ಕೇವಲ ೨೭೦ ಮತಗಳಿಂದ ಗೆಲುವನ್ನು ಪ್ರತಿಪಕ್ಷದವರಿಗೆ ಬಿಟ್ಟುಕೊಟ್ಟ ರಾಜಕೀಯ ಲೆಕ್ಕಾಚಾರ ನೋಡಿದಾಗ ಬಿ.ಎಸ್ ಯಡಿಯೂರಪ್ಪನವರ ಹೆಸರಿಲ್ಲದೆ ಬಿಜೆಪಿಯನ್ನು ಮುನ್ನೆಡೆಸಲು ಸಾಧ್ಯವಿಲ್ಲವೆನ್ನುವ ಸತ್ಯದರ್ಶನವನ್ನು ದರ್ಶಿಸುವಂತೆ ಮಾಡಿಕೊಟ್ಟವರು ಬಿ.ಎಸ್ ಯಡಿಯೂರಪ್ಪನವರು,
ಇದೀಗಲೂ ನಾಲ್ಕನೇ ಭಾರಿಗೆ ಮುಖ್ಯಮಂತ್ರಿಯಾಗಿ ಮಲೆನಾಡಿಗೆ ಕೊಟ್ಟಿರುವ ಅಭಿವೃದ್ದಿಯ ಮೇಲ್ಪಂಕ್ತಿಯನ್ನು ಇಲ್ಲಿನ ಜನತೆ ಮತ-ಪಂಥಗಳ ಬೇದವಿಲ್ಲದೆ ಒಕ್ಕರೊಲಿನಿಂದ ಒಪ್ಪಿಕೊಳ್ಳುತ್ತಾರೆ, ಎನ್ನುವುದಕ್ಕೆ ಅವರ ಮನುಷ್ಯ ಪ್ರೀತಿಯ ನಿಲುವುಗಳು ಕಾರಣಗಳು ಎನ್ನಬಹುದು. ಶಿವಮೊಗ್ಗದಂತಹ ಅತೀಸೂಕ್ಷ್ಮ ಕೋಮುಭಾವನೆಗಳು ಕೆರಳಿ ನಡೆದ ಎಂತಹುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಜನಸಮೂಹದ ಸೌಹಾರ್ಧ ಜೀವನಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳುತ್ತಾರೆ, ತಮ್ಮ ನೇರ ಮಾತು, ಶಿಸ್ತಿನಿಂದ ತಮ್ಮೊಳಗಿನ ಜೀವಪರತೆಯ ಅಜೆಂಡಾವನ್ನು ಚಾಚುತಪ್ಪದೆ ಪ್ರತಿಪಾದಿಸುತ್ತಲೇ ಅಂದು ಪೂರ್ವ ಚರ್ಚೆಯಂತೆ ಸ್ವಯಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜಕೀಯ ಮೌನಕ್ಕೆ ಶರಣಾಗಿರುವ ಬಿ.ಎಸ್ ಯಡಿಯೂರಪ್ಪನವರ ಹೆಸರು ಎಲ್ಲಿಯವರೆಗೆ ಬಿಜೆಪಿಯಲ್ಲಿ ಇರುತ್ತದೋ… ಅಲ್ಲಿಯವರೆಗೆ ಮಾತ್ರ ಬಿಜೆಪಿ ಸಂಘಟನೆಯ ಬಲವರ್ಧನೆ ಎನ್ನುವ ಕಟು ಸತ್ಯ ಸಂಘ ಪರಿವಾರದವರು ಸ್ವೀಕರಿಸದೇ ಹೋದರು ಒಪ್ಪಿಕೊಳ್ಳಲೇಬೇಕಾದ ರಾಜಕೀಯ ಅನಿವಾರ್ಯತೆಗಳು ಏರ್ಪಟ್ಟಿವೆ.
ಒಟ್ಟಿನಲ್ಲಿ ಬಿಎಸ್.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ವಿಜೇಂದ್ರ ಯಡಿಯೂರಪ್ಪನವರು ರಾಜಕೀಯ ರಣಕಹಳೆಯನ್ನಿಟ್ಟಿದ್ದಾರೆ, ಮುಂಬರುವ ಏರುಪೇರುಗಳ ನಡುವೆ ವಿಜೇಂದ್ರರವರ ಸಂಘಟನಾ ಚಾತುರ್ಯ ಬಿಜೆಪಿಗೆ ಅಗತ್ಯತೆಯನ್ನು ತೋರಿಸಿಕೊಟ್ಟಿದೆ, ಈಗಾಗಲೇ ಹಲವು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಸಾಬೀತುಪಡಿಸಿದ್ದಾರೆ, ಇಲ್ಲೂ ಸಂಘಪರಿವಾರದ ಮಧ್ಯೆ ಪ್ರವೇಶ ನಡೆದು ವಿಜೇಂದ್ರರವರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರೆ ಬಿಜೆಪಿಯ ಸಂಘಟನೆಯಲ್ಲಿ ಭಾರಿ ಬಿರುಕುಗಳು ಮೂಡುವ ಸಂದರ್ಭಗಳಿವೆ,
ಇನ್ನೂ ಮುಂದಿನ ೨೦೨೮ರ ಅಸೆಂಬ್ಲಿ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಅತೀವ ಕುತೂಹಲ ಮೂಡಿಸಿದೆ, ಒಂದೆಡೆ ಪಕ್ಷದಿಂದ ಪಲ್ಲಟವಾಗುತ್ತಿರುವ ಮುಖಂಡರುಗಳು ಈ ಕ್ಷೇತ್ರದ ಮೇಲೆ ನಿಗಾವಹಿಸಿಯೇ ರಾಜಕೀಯ ದಾಳ ಎಸಗಿದ್ದಾರೆ, ಇಂತಿವುಗಳು ಏನೇ ಇರಲಿ ಮುಂದಿನ ಕ್ಷಿಪ್ರ ರಾಜಕೀಯ ವಿದ್ಯಮಾನದೊಳು ಶಿವಮೊಗ್ಗ ಜಿಲ್ಲೆಯ ಕ್ಷೇತ್ರ ವಿಂಗಡಣೆಗಳು ಖಾತ್ರಿಯಾದರೆ ಒಂದಿಷ್ಟು ಹೊಸ ಮುಖಗಳು ಕಣಕ್ಕಿಳಿವ ಲೆಕ್ಕಚಾರಗಳಲ್ಲಿ ರಾಜಕೀಯ ಮುಂದುವರೆದಿದ್ದರೂ ಬಿಎಸ್‌ವೈ ಎನ್ನುವ ಚಾಣಕ್ಯನಂತಹ ಘಟ ಇರುವವರೆಗೂ ಯಾರ ಬೇಳೆಯೂ ಶಿವಮೊಗ್ಗದಲ್ಲಷ್ಟೆ ಅಲ್ಲ ರಾಜ್ಯದ ಆಯಕಟ್ಟಿನ ಕ್ಷೇತ್ರಗಳಲ್ಲಿ ಇವರ ಹುಕುಂ ಜಾರಿಯಲ್ಲಿರುತ್ತದೆ ಎನ್ನುವ ವಾಸ್ತವ ತಳಸ್ಪರ್ಶಿಯಲ್ಲಿ ಬಿಎಸ್‌ವೈ ಅವರಿಗೆ ಸಲಾಂ ಹಾಕುವ ಅನಿವಾರ್ಯತೆಗಳಿದೆ.
ಇಂತಿಷ್ಟು ಇಲ್ಲಿ ಹೇಳಬೇಕಾದ ಸಂದರ್ಭ ಎದುರಾದರೆ ಬಿಜೆಪಿಯಲ್ಲಿ ಬಿ,ಎಸ್ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿರುವ ವಿಜೇಂದ್ರ ಯಡಿಯೂರಪ್ಪನವರು ತಮ್ಮ ರಾಜಕೀಯ ಬಿರುಗಾಳಿಯಲ್ಲಿ ಎಲ್ಲವೂ ಬದಲುಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, “ಅಪ್ಪನ ಹಾಗೇ ಮಗ ಎನ್ನುವಂತೆ” ವಿಜೇಂದ್ರರವರು ಕೂಡ ರಾಜಕೀಯ ಕಾರಣಕ್ಕಾಗಿ ಸೌಹಾರ್ದತೆಗೆ ಬಂಗ ತರುವ ಯಾವುದೇ ಹೇಳಿಕೆಗಳನ್ನು ನೀಡದೆ ಎಲ್ಲರಲ್ಲಿಯೂ ಒಂದಾಗುವ ಜೀವಪರ ನಿಲುವುಗಳನ್ನು ತಳೆದಿರುವುದರಿಂದ ಹಾಗೂ “ನಮ್ಮದು ವ್ಯಕ್ತಿ ಸಂಘಟನೆಯಲ್ಲ” ಎಂದು ಮಾತಿಗಷ್ಟೆ ಸೀಮಿತವಾಗಿರುವ ಸಂಘಪರಿವಾರದೊಳಗಿದ್ದರು ತಮ್ಮ ಆತ್ಮಾಭಿಮಾನ ಹೊತ್ತ ಅಜೆಂಡಾದ ಪ್ರತಿಪಾದನೆಯಲ್ಲಿ ಬಿ.ಎಸ್ ಯಡಿಯೂರಪ್ಪನವರು ಹಾಕಿಕೊಟ್ಟ ರಾಜಕೀಯ ನೆಲೆಗಟ್ಟನ್ನು ಎಂದಿಗೂ ಅಲುಗಾಡಿಸಲಾಗದು.


