ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕರುನಾಡಿನ ಯುವ ಕಥೆಗಾರ್ತಿ I ಶ್ವೇತಾ ನಿಹಾಲ್ ಜೈನ್ ರವರ I ನ್ಯಾನೋ ಕಥಾ ಹಂದರಗಳು I
ಸಾರಸ್ವತ ಲೋಕದೊಳು ತನ್ನೊಳಗಿರುವ ಅಸಮಾನ್ಯತೆಯನ್ನು ಬರಹದ ಮೂಲಕ ಸಾರುತ್ತಾರೆ, ಇದು ಅಭಿವ್ಯಕ್ತಿಯ ಪ್ರತಿಬಿಂಬವೂ ಹೌದು, ಈ ಅವಸರದಲ್ಲಿ ಬದುಕಿನ ವಾಸ್ತವ ಕಾಲಘಟ್ಟದ ಅರಿವಿನ ಅನಾವರಣವಾದಾಗಲೇ ಸಾಮಾಜಿಕ ಜಾಗೃತಿ ಎಂದಾಗುತ್ತದೆ,ಈ ನಿಟ್ಟಿನಲ್ಲಿ ಲೇಖನಿಯಲ್ಲಿ ಕಾಣಿಸುವ ಪ್ರತಿರೋದಗಳು,ಕಾಳಜಿಗಳು, ಸಂದೇಶಗಳು, ವಿವಿಧತೆಯ ಭಾವಗಳು ವ್ಯಕ್ತಗೊಂಡು ಬರಹದೊಂದಿಗೆ ಸಾಂಗತ್ಯಗೊಳಿಸುತ್ತದೆ, ಇಂತೆಲ್ಲವೂ ಈ ಸಂದರ್ಭದ ಟಿಪ್ಪಣಿಯನ್ನು ಮಂಗಳೂರಿನ ಯುವ ಲೇಖಕಿ ಶ್ವೇತಾ ನಿಹಾಲ್ ಜೈನ್ ರವರ ಕುರಿತಾಗಿ ವಿಸ್ತೃತಗೊಳಿಸುತ್ತಿದ್ದೇನೆ.
ಶ್ವೇತಾ ನಿಹಾಲ್ ಜೈನ್ ರವರು ಮೊದ ಮೊದಲು ಬರೆಯುವ ಮನದಿಂಗಿತಗೊಳಿಸಿದ್ದು ಕವಿತೆ ಕಟ್ಟುವ ಕೈಂಕರ್ಯದಲ್ಲಿ ತಾನೂ ಕೂಡ ಕಾವ್ಯ ಲೋಕದಲ್ಲಿ ವಿಹರಿಸಬೇಕೆನ್ನುವ ಅಚಲತೆ ಬಹಳವಾಗಿ ಬೇರೂರಿತ್ತು ಎನ್ನುವ ಏಕ ಮಾತ್ರದಿಂದಲೇ ಕರುನಾಡು ಗುರುತಿಸುವ ಮಟ್ಟಿಗೆ ಕಾವ್ಯದಿಂದ ಕಥಾ ಹಂದರದೆಣೆಯುವಿಕೆಯ ತನಕ ಮುಂದಡಿಯಿಕ್ಕಿದೆ, ಕಾವ್ಯದಲ್ಲಿ ಅದೆಷ್ಟು ಭಾವಮಯವನ್ನಾಗಿಸಿದರೋ ಅಷ್ಠೇ ಏಕಾಗ್ರತೆಯಿಂದಲೇ ಲೇಖನಿಯನ್ನು ಭಾವುಕತೆಗಾಗಿ,ಲೋಕದ ಜಡತ್ವಗಳ ಜಾಗೃತಿಯ ಸಾಮರಸ್ಯಕ್ಕಾಗಿ, ಬಳಸಿಕೊಂಡಿರುವುದು ಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ.
ಶ್ವೇತಾ ನಿಹಾಲ್ ಜೈನ್ ಈಗಾಗಲೇ ಹದಿನಾಲ್ಕು ಸಂಕಲನಗಳ ಅನಾವರಣಗೊಳಿಸಿದ ಲೇಖಕಿ, ಹಾಗೂ ಪತ್ರಕರ್ತೆ,ಬರಹವನ್ನು ಲೋಕಾರ್ಪಿತಗೊಳಿಸಿ ಓದುಗರು ಅದನ್ನು ಓದಿ ಅರ್ಥೈಸಿಕೊಂಡು ಅಭಿಪ್ರಾಯಿಸುವಾಗ ನಿಜಕ್ಕೂ ಶ್ವೇತಾ ನಿಹಾಲ್ ಜೈನ್ ತನ್ನ ಬದುಕಿನ ಧನ್ಯತೆಯ ಅನುಭವಿತ ಕ್ಷಣಗಳನ್ನು ಅನುಭವಿಸದೇ ಇರಲಾರರು. ಅವರ ಪ್ರತಿ ಬರಹಳ ಅವಲೋಕಿತ ಹೆಜ್ಜೆಗಳಲ್ಲಿ ವಿಶೇಷತೆಗಳು ಅಧ್ಯಯನಕ್ಕೆ ತಮ್ಮ, ತಮ್ಮ ಬದುಕಿನ ಶ್ರೇಷ್ಠತೆಗೆ, ಜ್ಞಾನದ ಅರಿವಿನ ಜಗತ್ತನ್ನು ಪರಿಚಯಿಸುವಂತೆ ಮಾಡುತ್ತದೆ ಎಮದರೇ ತಪ್ಪಾಗಲಾರದು, ಹೀಗೆ ಅವರ ಬರಹದ ಪುಸ್ತಕಗಳಲ್ಲಿ ಅಭಿವ್ಯಕ್ತಿಗೊಳಿಸಿರುವ ಶ್ವೇತಾ ನಿಹಾಲ್ ಜೈನ್ ರವರು ಸದ್ಯದಲ್ಲೇ ಬಿಡುಗಡೆಗೊಳಿಸುತ್ತಿರುವ ‘ನ್ಯಾನೋ ಕಥಾ ಹಂದರ’ ಓದಿ ಸ್ವಾದಿಸುವ ಸಾರಸ್ವತಾ ಲೋಕ ಅತ್ಯಂತ ಬೇಡಿಕೆಯ ಪುಸ್ತಕವಾಗಿ ಎತ್ತಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲವಾಗಿದೆ.
ನ್ಯಾನೋ ಕಥೆಗಳು ಹೀಗೆಯೇ ಕಟ್ಟಿ ಸಾಗಿರುವ ಶ್ವೇತಾ ನಿಹಾಲ್ ಜೈನ್ ಒಂದು ಸಣ್ಣ ಸಣ್ಣ ಕಥೆಗಳ ಕಥಾ ಸಂಕಲನಕ್ಕೆ ನಾನೂರರ ಕಥೆಯನ್ನೆ ಹೆಣೆದಿರುವುದು ಒಂದು ಸಾಹಸವೇ ಸರಿ, ಒಂದೇ ವಿಷಯದ ಆಧಾರಿತವಾಗಿ ಪುಸ್ತಕಗಳ ಸಂಪನ್ನಗೊಳಿಸುವುದು ಸಾಮಾನ್ಯವಾದರೇ…ನಾನೂರರ ಗಡಿ ಮುಟ್ಟಿಸುವ ವಿಷಯಗಳಿಗೆ ಕಥಾ ರೂಪಕವನ್ನು ಕೊಟ್ಟಿದ್ದಾರೆ,
ಇದೊಂದು ಕಥೆ ಎಂದರೇ ಬರೀಯ ಕಥೆಯಲ್ಲ, ಈ ಕಥೆಯಲ್ಲಿನ ಜೀವಾಳಗಳನ್ನು ಹುಡುಕುವ ಅಗತ್ಯತೆಯೂ ಇಲ್ಲ, ಒಮ್ಮೆಲೆ ಕಥೆಗಳ ಸಾಲುಗಳನ್ನು ಓದುವತ್ತ ಮುಂದಾದರೇ ಸಾಕು ಅಲ್ಲಿರುವ ಸಾಮಾಜಿಕ ಸಂದೇಶ, ಒಳಿತು-ಕೆಟ್ಟದರ ಅರಿವು,ನೀತಿಗಳು,ಬದುಕಿನ ವಾಸ್ತವದ ಕಾಲಘಟ್ಟಗಳು, ಜೀವಿತ ಕ್ಷಣಗಳ ಬೆಲೆ-ನೆಲೆಗಳು, ಎಲ್ಲವುದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಬಹಳ ಜವಾಬ್ದಾರಿಯುತವಾಗಿ ಶ್ವೇತಾ ನಿಹಾಲ್ ಜೈನ್ ಅರಿತೇ ಈ ನ್ಯಾನೂ ಕಥೆಗಳನ್ನು ಪುಟಿದೇಳಿಸಿದ್ದಾರೆ.
ಮುಂದುವರೆದಂತೆ ನ್ಯಾನೋ ಕಥೆಗಳು ಕೇವಲ ನಾಲ್ಕೈದು ಸಾಲುಗಳಲ್ಲಿ ಹೆಚ್ಚೆಂದರೇ ಹತ್ತು ಸಾಲುಗಳಲ್ಲಿದೆ ಎಂತಹ ಓದುಗನು ಇಂತಹದೊಂದು ಚುಟುಕ ಕಥಾ ಗಣಿಯಲ್ಲಿ ಹೊಕ್ಕಿ ನಿಂದರೇ ಅದರ ಅನುಭವವನ್ನು ಸ್ವಾದಿಸದೇ ಇರಲಾರನು, ಇಲ್ಲಿರುವ ಕಥೆಗಳನ್ನು ಕಟ್ಟಿರುವ ಕಥೆಗಾರ್ತಿ ಶ್ವೇತಾ ನಿಹಾಲ್ ಜೈನ್ ವಾಸ್ತವ ತಳಹದಿಯ ಮೇಲೆ ಕಥಾ ಸೌಧವೊಂದನ್ನು ಬಹಳ ಸುಂದರವಾಗಿ ಕಟ್ಟಿ ವಿವಿಧತೆಯ ಸಂದೇಶಗಳನ್ನು ಅಲಂಕರಿಸಿದ್ದಾರೆ ಉದಾಹರಿತವಾಗಿ ಇಲ್ಲಿ ಯಾವ ಕಥೆಗಳನ್ನು ಹೇಳಿ ಅಲ್ಲಿಗೆ ಸೀಮಿತಗೊಳಿಸದೇ ಎಲ್ಲರೂ ಓದಲೇಬೇಕಾದ ಹೊಸ ಅವತರಣಿಯ ಕಥಾ ಸಂಕಲನವಾಗಿದೆ ಈ ಸಂಕಲನಕ್ಕೆ ಶುಭ ಹಾರೈಕೆಯನ್ನು ಸಲ್ಲಿಸಿ ಲೇಖಕಿ ಶ್ವೇತಾ ನಿಹಾಲ್ ಜೈನ್ ರವರಿಗೆ ಇನ್ನೂ ಹೆಚ್ಚಿನ ಬರಹದ ಸಾಧನೆಯನ್ನು ಸಾರಸ್ವತಾ ಲೋಕದಲ್ಲಿ ವಿರಾಜಮಾನನಾಗಿಸುವ ಆತ್ಮ ದೃಡತೆ ಸದಾ ಇರಲಿ ಎನ್ನುವ ಅಂಬೋಣದೊಂದಿಗೆ.