ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದಲ್ಲಿರುವ ಅನಾಹುತಕಾರಿ I ಅಂಡರ್ವರ್ಲ್ಡ್ I
ಶಿವಮೊಗ್ಗದಲ್ಲಿ ಹೊಡೆದಾಟ, ಬಡಿದಾಟಗಳಾಗಿದೆ, ದೊಣ್ಣೆಗಳು, ಕಲ್ಲುಗಳನ್ನು ಪೊಲೀಸ್ ಮಹಜರ್ ನಡೆಸಿ ವಶಕ್ಕೆ ಪಡೆದು ಅದನ್ನು ಕೋರ್ಟಿನ ಕಲಾಪಗಳಿಗೆ ಸಾಕ್ಷ್ಯಾಧಾರಗಳಿಗಾಗಿ ತೋರಿಸಲಾಗುತಿತ್ತು, ಇದಾದ ತರುವಾಯ ಇತ್ತೀಚಿನ ದಶಕಗಳಲ್ಲಿ ಮಚ್ಚು, ಲಾಂಗ್, ಭರ್ಚಿ, ಚಾಕು ಮುಂತಾದ ಮಾರಕಾಸ್ತ್ರಗಳನ್ನು ಬಳಸಿದ ಕ್ರೈಂ ಹಿಸ್ಟರಿ ಫೈಲ್ಗಳಲ್ಲಿ ಕಾಣಿಸಿಕೊಳ್ಳುತ್ತಿವೆ, ಇನ್ನೂ ಇದೀಗ ಪ್ರಸ್ತುತ ದಿನಮಾನದೊಳು ಮ್ಯಾನ್ ಮೇಡ್ ಗನ್ಗಳು, ಅನಧಿಕೃತ ಗನ್ಗಳು, ಒಂದಷ್ಟು ಬೆಲೆಗೆ ಬಿಕರಿಗೊಳ್ಳುವ ಪರವಾನಿಗೆ ಇಲ್ಲದ ಏರ್ ಗನ್ಗಳನ್ನು ಬಳಸಿ ಕ್ರೈಂ ಘಟಿತ ಘಟನೆಗಳಿಗೆ ಬಳಸಿಕೊಳ್ಳಲಾಗುತ್ತಿರುವ ಪೊಲೀಸ್ ಕಡತದ ತಲೆಬರಹಗಳಾಗಿ ಬದಲುಗೊಂಡಿರುವುದು ಆಯಾ ಕಾಲಘಟ್ಟದ ಸೂಕ್ಷ್ಮತೆಗಳನ್ನು ಇಂದು ನಾಗರೀಕರಾದಿಯಾಗಿ, ಪೊಲೀಸರು ಅರ್ಥ್ಯೆಸಿಕೊಳ್ಳಬೇಕಾದ ಜರೂರಿಗಳಿವೆ,
ಹಾಗೆಯೇ ಈ ವರದಿಯ ವಾಸ್ತವತೆಯ ಮುಂದುವರೆದಂತೆ, ಮರ್ಡರ್ಗಳ ಬೀಕರತೆಗಳು ಶುರುವಾಗಿದ್ದು ಯಾವಾಗ..? ಯಾವ ಇಸವಿಯಲ್ಲಿ..? ಯಾತಕ್ಕಾಗಿ ಈ ಹತ್ಯೆಗಳು, ಎನ್ನುವ ಪೊಲೀಸರೇ ಆಗಲಿ, ಜನಪ್ರತಿನಿಧಿಗಳೇ ಆಗಲಿ ಅವಲೋಕಿಸಿಕೊಳ್ಳತಲಿ ಪೂರ್ವ ಕಾಲದಿ ಬೀದಿಯಲ್ಲಿ ಬಿದ್ದ ಹೆಣಗಳ ಹಿಂದಿನ ಅಸಲಿಯತ್ತಿನ ಬಾನಗಡಿಗಳು ತಿಳಿದುಕೊಳ್ಳುವ ಪ್ರಯತ್ನಗಳು ಮಾಡಿದರೆ ನಿಜಕ್ಕೂ ನಿಬ್ಬೆರಗಾಗುವಷ್ಟು ಊತಿ ಹೋಗಿದ್ದ, ಕುಣಿಯೊಳಗಿನ ಸ್ಟೋರಿಗಳ ಬುಗ್ಗೆಗಳು ಏಳುವುದಕ್ಕೆ ಶುರುವಿಡುತ್ತದೆ, ಈ ಸಂಗತಿಗೆ ಸರಿ ಹೊಂದುವಂತೆ ಕಳೆದ ಒಂದು ತಿಂಗಳ ಕೆಳಗೆ ಪತ್ರಿಕಾ ಕಛೇರಿಗೆ ಅನಾಮಧೆಯವಾಗಿ ದೌಡಾಯಿಸಿ ಬಂದಿದ್ದ ನಾಲ್ಕು ಪುಟಗಳ ಸಾಲಿನ ಸಗಟುಗಳು ಮತ್ತೊಂದು ಕಥೆಯನ್ನು ತೆರೆದಿಡುತ್ತಿದೆ, ಹೌದು ಈ ಅನಾಮಧೆಯ ಪತ್ರದಲ್ಲಿರುವಂತೆ ಬರೆಯುವ ಮೊದಲು, ಇದನ್ನು ಫ್ಯಾಕ್ಟ್ ಚೆಕ್ ಮಾಡುವುದು ನಿಜವಾದ ಅಭಿವ್ಯಕ್ತಿ ಎನ್ನುವ ಕಾರಣಕ್ಕೆ ಈ ಪೋಸ್ಟರ್ ಬಿಡುಗಡೆಯಾಗಿ ಈ ಮೊದಲ ಅಂಕಣ ಬರೆವ ಹೊತ್ತಿಗೆ ಸುಮಾರು ಒಂದು ಮಾಹೆ ಕಳೆದಿದೆ, ಅಷ್ಟರೊಳಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಈ ಪೋಸ್ಟ್ಗೆ ಇದು ಪ್ರಕಟವಾಗುವ ಈ ಹೊತ್ತಿಗೆ ಎಪ್ಪತ್ತನಾಲ್ಕು ಸಾವಿರ ವೀಕ್ಷಣೆ ಆಗಿದೆ ಎನ್ನುವುದು ಅಚ್ಚರಿ ತರಿಸಿದೆ.
ಈ ನಡುವೆ ಒಂದಷ್ಟು ಭೂಗತ ಅನುಯಾಯಿಗಳು ಪೋನಾಯಿಸಿದ್ದು ನೋಡಿದರೆ ಶಿವಮೊಗ್ಗದಲ್ಲಿ ನಡೆದ, ಪುಸ್ತಕ ವ್ಯಾಪಾರಿ ವೆಂಕಟೇಶ್ ಶೆಟ್ಟಿ ಅಪಹರಣ ಮತ್ತು ಹತ್ಯೆ ವೆಂಕಟೇಶ್ವರ ಸ್ವೀಟ್ ಹೌಸ್ ಮಾಲೀಕರಾದ ಮಂಜುನಾಥ್ ಐತಾಳ್, ದಂಪತಿಗಳ ಜೋಡಿ ಹತ್ಯೆಗಳು, ಸಿದ್ದಯ್ಯ ರಸ್ತೆಯಲ್ಲಿ ನಡೆದ ಅಂದಿನ ನಗರಸಭೆಯ ಸದಸ್ಯ ರಾಜಕುಮಾರ್ನ ಕೊಲೆ, ನವುಲೆ ಮೋಹನನ ಕೊಲೆ, ತಮಿಳು ಕುಮಾರನ ಎನ್ಕೌಂಟರ್, ಲವ-ಕುಶರೆಂಬ ಅವಳಿ ನಟೋರಿಯಸ್ಗಳ ಮರ್ಡರ್, ತುಳಸಿ ರಾಮನ ಕೊಲೆ, ಬಂಕ್ ಬಾಲು ಮರ್ಡರ್, ದೇವಳದಲ್ಲಿ ನಡೆದ ಮೆಂಟಲ್ ಸೀನನ ಮರ್ಡರ್, ಸಾಗರ ರಸ್ತೆಯಲ್ಲಿ ಅನಾಥವಾಗಿ ಬಿದ್ದ ಸ್ಪಾಟ್ ನಾಗನ ಹೆಣ, ಲ್ಯಾಂಡ್ ಲಿಟಿಗೇಶನ್ ನಟೋರಿಯಸ್ ಮಾರ್ಕೆಟ್ ಗಿರಿಯ ಕೊಲೆ, ವಿನೋಬಾನಗರದ ಪೊಲೀಸ್ ಚೌಕಿಯಲ್ಲಿ ನಡೆದ ಹಂದಿ ಅಣ್ಣಿಯ ಕೊಲೆ, ಫಿಶ್ ಮಾರ್ಕೆಟ್ ಬಳಿ ನಡೆದ ಯಾಸೀನ್ ಕುರೇಶಿಯ ಹತ್ಯೆ, ಮಾರ್ನಾಮಿಬೈಲಿನಲ್ಲಿ ನಡೆದ ಓ.ಸಿ ಬಿಡ್ಡರ್ ಷಣ್ಣೂ ಸಪೋರ್ಟರ್, ಪಾಲುದಾರ ಅಮ್ಜದ್ ಕೊಲೆ, ಇಂತಹ ಬೀಕರ ಕೊಲೆ ಹಾಗೂ ಸುಫಾರಿಗಳಲ್ಲಿ ಅಸಲಿ ವರಾತಗಳು ಬೇರೆಯೇ ಇವೆ, ಎನ್ನುವುದನ್ನು ಶಿವಮೊಗ್ಗದ ಜನಪ್ರತಿನಿಧಿಗಳು ತಿಳಿದುಕೊಂಡರೆ ಕೆಲ ವೈಟ್ ಕಾಲರ್ ಎಂದಿಗೂ ಕಪ್ಪು ಪಟ್ಟಿಗೆ ಸೇರುವುದಿಲ್ಲ ಎನ್ನುವ ಇರಾದೆಯೊಂದಿಗೆ ಶಿವಮೊಗ್ಗದಲ್ಲಿರುವ ಅನಾಹುತಕಾರಿ ಅಂಡರ್ವರ್ಲ್ಡ್ ಕುರಿತಾಗಿ ಫ್ಯಾಕ್ಟ್ ಚೆಕ್ ಮಾಡಿಕೊಳ್ಳಲೇ ಬೇಕಾಗಿದೆ,
ಇದಾಗದಿದ್ದೊಡೆ ಇತ್ತೀಚೆಗೆ ಮೋಸಸ್ ಎನ್ನುವ ಲ್ಯಾಂಡ್ ಲಿಟಿಗೇಟರ್ ಮೇಲೆ ನಡೆದ ಅಟ್ಯಾಕ್ ಪ್ರಕರಣ ಪೊಲೀಸರ ಕಣ್ಣಿಗೆ ಮಣ್ಣೆರೆಚುತ್ತಿರಲಿಲ್ಲ, ಬದಲಿಗೆ ಇದೊಂದು ಎಂಪೈರ್ ದರ್ಶುನೇ ಕಾರಣ ಎನ್ನುವ ಆತನೇ ಹೇಳಿಕೊಂಡ ಆಡಿಯೋ ಇದೆ, ಹೀಗಿದ್ದರೂ ಪೊಲೀಸರು ಕರ್ನಾಟಕ ಬ್ಯಾಂಕ್ ಟ್ರ್ಯಾನ್ಸಾಕ್ಷನ್ ಬಗ್ಗೆಯಾಗಲಿ, ಮೋಸಸ್ ಆರೋಪಿಸಿದಂತೆ ಎಂಪೈರ್ ದರ್ಶು ಗ್ಯಾಂಗ್ಗೆ ಕರೆಯಿಸಿ ವಿಚಾರಣೆ ನಡೆಸಲಿಲ್ಲ ಎನ್ನುವುದಕ್ಕೆ ಬೇರೊಂದು ಕಾರಣವೂ ಇದೆ, ಹೀಗಾಗಿ ಈ ಪ್ರಕರಣ ಮೋಸಸ್ ಸ್ನೇಹಿತರೆ ಗುಂಪುಗೂಡಿ ರಾಜಿ-ಪಂಚಾಯಿತಿ ನಡೆಸಿದ್ದರು, ಎಂಪೈರ್ ದರ್ಶು ಇದರಲ್ಲಿ ತನ್ನದೇನು ಪಾತ್ರವಿಲ್ಲ ಎಂದಿದ್ದರೂ ನಿಖರವಾಗಿ ಈತನೇ ಎಂದು ಮೌನದಿ ಮುದುಡಿಕೊಂಡಿರುವ ಮೋಸಸ್ಗೆ ಕೌಂಟ್ ಡೌನ್ ಶುರುವಾಗಿದಿಯಾ..?! ಎನ್ನುವಷ್ಟು ಕ್ರೈಂ ದನಿಗಳು ಲ್ಯಾಂಡ್ ಲಿಟಿಗೇಶನ್ ದುನಿಯಾದಲ್ಲಿ ರಾಚಿಕೊಳ್ಳುತ್ತಿದೆ,
ಇಂತಹ ಸಂಗತಿಗಳ ಮೇಲೆ ಬೆಳಕು ಚೆಲ್ಲಬೇಕಾದ ಹಾಗು ತನಿಖಿಸಬೇಕಾದ ಪೊಲೀಸರು ನೀರವತೆ ತಳೆದು ಕಪ್ಪು ಕಂಬಳಿ ಹೊದ್ದು ಕರೆನ್ಸಿ ನಿದುರೆ ಮಾಡುತ್ತಿದ್ದಾರೆಯೇ ಎನ್ನುವಂತೆ ಶಿವಮೊಗ್ಗದ ಕರ್ತವ್ಯ ಮೊಕ್ಕಾಂ ಹೂಡಿಕೊಂಡಿದೆ, ಈ ಮೇಲೆ ಹೇಳಿದಂತೆ ಶಿವಮೊಗ್ಗದ ಕ್ರೈಂ ಗಳು ಹೇಗೆ ಬದಲುಗೊಂಡಿವಿಯೋ ಹಾಗೆಯೇ ಅಕ್ಷರಶಃ ಕ್ರಿಮಿನಲ್ಸ್ಗಳು ಕೂಡ ಲ್ಯಾಂಡ್ ಡೆವಲಪರ್ ಹೆಸರಿನಲ್ಲಿ ವಿಥೌಟ್ ಜಿಎಸ್ಟಿ ವ್ಯಾಪಾರಿಗಳಾಗಿ ಬದಲುಗೊಂಡಿದ್ದಾರೆ, ಊರಿನ ಹೊರವಲಯದ ರಿಂಗ್ ರೋಡ್ನಿಂದ ಹಿಡಿದು ಒಂದಷ್ಟು ಏರಿಯಾಗಳಲ್ಲಿ ಹಾಡುಹಾಗಲೇ ಬೇಲಿ ಸುತ್ತುವುದು, ಕೆರೆಕಟ್ಟೆಗಳನ್ನು ಕಬಳಿಸುವುದು, ಜಾನುವಾರುಗಳಿಗೆ ಮೀಸಲಾದ ಭೂಮಿಗಳನ್ನು ಕಬ್ಜಾ ಮಾಡುವುದು, ಲಿಟಿಗೇಶನ್ ಮಾಡಿ ದುರ್ಬಲ ವರ್ಗದ ಜನರಿಗೆ ಒಕ್ಕಲೆಬ್ಬಿಸುವುದು, ಇಂತಹ ಅನೇಕತೆಯಲ್ಲಿ ಭರ್ಜರಿಯಾಗಿಯೇ ಬಹಿರಂಗವಾಗಿಯೇ ನೂರಾರು ಕೋಟಿಗಳಲ್ಲಿ ಸದ್ದು ಮಾಡುತ್ತಿದೆ,
ಇದರೊಂದಿಗೆ ಶಿವಮೊಗ್ಗದ ಕಾರ್ಡ್ಸ್ ಅಡ್ಡೆಗಳು, ಹನಿಟ್ರ್ಯಾಪರ್ಸ್ಗಳ ಮಸಾಜ್ ಸೆಂಟರ್ಗಳು, ಡ್ರಗ್ಸ್ ಮಾಫಿಯಾ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಇಡೀ ನೆರೆ ರಾಜ್ಯಗಳಿಂದ ಹಿಡಿದು ನೆರೆ ರಾಷ್ಟ್ರಗಳ ತನಕ ಗಾಂಜಾ- ಅಫೀಮು ಸರಬರಾಜು ಮಾಡುವ ಹೆಡ್ ಕ್ವಾರ್ಟರ್ ಎನ್ನುವ ನಿಖರ ಸಂಗತಿಗಳು, ಶಿವಮೊಗ್ಗ ನಗರದಿಂದ ಶುರುವಾದ ಲ್ಯಾಂಡ್ ಲಿಟಿಗೇಶನ್ ಮಾಫಿಯಾ ಪಕ್ಕದ ತಾಲ್ಲೂಕುಗಳಿಗೆ ಹಾಗೂ ರಿಪ್ಪನ್ಪೇಟೆ ಎಂಬುವ ಹೋಬಳಿ ಮಟ್ಟದಲ್ಲಿ ಹರಡಿಕೊಂಡಿರುವುದಕ್ಕೆ, ಹಾಗೂ ಮರಳು- ಕಲ್ಲುಕ್ವಾರಿಗಳ ಬಿಡ್ಡರ್ಗಳನ್ನು ಒಟ್ಟುಗೂಡಿಸಿ ನಡೆಸುವ ಕೋಟಿ ಕಂತೆಗಳ ರಿಂಗ್ ಮೀಟಿಂಗ್ಗಳಿಗೆ ಯಾರು ಕಾರಣರು ಗೊತ್ತೇ..?! ಇನ್ನೂ ಶಿವಮೊಗ್ಗದಿಂದ ಬೆಂಗಳೂರಿನಲ್ಲಿ ಫಿಲ್ಡ್ ಮಾಡುತ್ತಿರುವ ಭೂಗತ ಲೋಕಕ್ಕೆ ಹುಡುಗರನ್ನು ಸಪ್ಲೆ ಮಾಡುವ ಗುತ್ತಿಗೆ ಗ್ಯಾಂಗ್ ಬಗ್ಗೆ ತನಿಖಿಸುವ ಅಗತ್ಯತೆ ಇದೆ, ಇಂತಹ ನಮೂನೆಯಾಗಿ ಕ್ರಿಮಿನಲ್ಸ್ಗಳು, ನಟೋರಿಯಸ್ಗಳು, ಬದಲುಗೊಂಡ ಕ್ರೈಂ ವ್ಯಾಪಾರಿಗಳು ಎನ್ನುವುದನ್ನು ತಿಳಿದುಕೊಳ್ಳುವ ಅವಸರಗಳಿವೆ,
ಇಂತಹ ಬಹುತೇಕತೆಗಳ ಮೇಲೆ ಬೆಳಕು ಚೆಲ್ಲಿ, ವಾಸ್ತವದ ಸಂಗತಿಯೊಂದಿಗೆ ಹೋರಾಟದ ನಗರಿ ಹಾಳುಗೆಡುವುತ್ತಿರುವುದರಿಂದ ಉಳಿಸಿ ಎನ್ನುವ ಈ ವರದಿ ಹಂತ-ಹಂತವಾಗಿ ಎಲ್ಲವನ್ನು ಬಟ್ಟಾ ಬಯಲು ಮಾಡುತ್ತದೆ ಎನ್ನುವುದು ಮೊದಲ ಹಂತದ ಅಂಬೋಣ.

