ಖಾಲಿ ಜೇಬು – ಅಂಕಣ, ಬರೆಯುತ್ತಾರೆ ಗಾರಾ.ಶ್ರೀನಿವಾಸ್..
I ಕಿಸೆಯಿಲ್ಲದ I ಗುರುವಿನ I ಹಾದಿಯೊಳು.. I
ಖಾಲಿ ಜೇಬು ಎನ್ನುವ ಅಂಕಣ ಬರೆಯುವುದಕ್ಕೂ ಕಾರಣವಿದೆ, ಈ ಖಾಲಿ ಜೇಬುವಿಗೂ ಈ ಬರಹದ ಬದುಕಿಗೂ ಅದ್ಯಾವ ಸಾಮ್ಯತೆಗಳಿಲ್ಲವಾಗಿದೆ, ಬರಹಗಳೆಂದಿಗೂ ಕಾಸಿಗೆ ಮಗ್ಗುಲಾಗುವುದಿಲ್ಲ, ಅದೊಂದು ಆತ್ಮ ನಿವೇದನೆಗಳ ಬರಪೂರತೆ, ಅಭಿವ್ಯಕ್ತಿಯೊಂದನ್ನು ಬಿತ್ತರಿಸಬೇಕು ಎನ್ನುವ ತವಕಗಳು ಬಿಗಿದಪ್ಪಿಕೊಂಡಿರುತ್ತದೆ, ಹೀಗಾಗಿ ಬಹುತೇಕ ಇಂತಹ ಸೂರುಗಳ ಬದುಕುಗಳು ಬರಹಗಳಿಗೆ ಅವಲಂಬಿತವಾಗಿರುತ್ತದೆ, ವಿನಃ ಕಾಸಿನ ಮೌಲ್ಯವನ್ನು ದಿಕ್ಕರಿಸುತ್ತದೆ, ಈ ಕಾರಣ ಮಾತ್ರದಿ ಕ್ಲಿಷ್ಟಕರತೆಗಳ ಹಾದಿಗಳು ಆಗಾಗ್ಗೆ ಕೆಣಕಿ ಅಣಕ ಮಾಡುತ್ತಲೇ ಇರುತ್ತದೆ ಎನ್ನುವ ಸತ್ಯಾಸತ್ಯಗಳ ತುಲನೆಯೊಳು, ಆಧ್ಯಾತ್ಮದ ಗುರುಗಳೊಬ್ಬರು ಕಿಸೆ ಇರಬಾರದು ಕಿಸೆ ಇದ್ದೊಡೆ ಮೌಲ್ಯಗಳ ಕುರಿತಾಗಿ ಮಾತಾಡಬಾರದು ಎನ್ನುವ ಉಪನ್ಯಾಸಗಳಲ್ಲಿ ಉವಾಚಿಸಿದ ಮಾತುಗಳು ಎಂತಹವರಿಗೂ ಸರಿ ಅನಿಸುತ್ತದೆ, ಹೀಗಾಗಿ ಮೊದಲಗೊಂಡು ಬರೆಯುತ್ತಿರುವ ಖಾಲಿ ಜೇಬು ಅರಿವು ನೀಡಿದ ಗುರುಗಳಿಗೆ ಸಮರ್ಪಿಸಿ, ಅವರು ಹೇಳಿದ ಮಾತುಗಳ ಸಂಗ್ರಹಿಸಿ ಇಲ್ಲಿ ಲಗತ್ತಿಸುತ್ತಿದ್ದೇನೆ, ಮುಂದೆ ಈ ಖಾಲಿ ಜೇಬುವಿನ ಪಯಣದ ಪುಟಗಳು ಕೃತಿಯಾಗದೇ ಇರಲಾರದು ಎಂದು ಅಂಬೋಣಿಸಿ ಖಾಲಿ ಜೀಬುವಿನ ಮೊದಲ ಅಂಕಣವನ್ನು ವಿಸ್ತೃತಗೊಳಿಸಲಾಗಿದೆ.

ಈ ಹೊತ್ತಿನ ದಿನಮಾನದಲ್ಲಿ ಸನ್ಯಾಸ ಪರಂಪರೆಯ ಮೂಲ ಮೌಲ್ಯಗಳು ಕಾಣದಾಗಿ, ಖಾವಿ ತೊಟ್ಟವರೆಲ್ಲಾ ಸ್ವಾಮೀಜಿಗಳೆಂದು, ಮಹಾ ಗುರುಗಳೆಂದು, ಜಗದ್ಗುರು ವೆಂದು, ಬಣ್ಣಿಸಲ್ಪಟ್ಟು ಸದಾ ರಾಜಕೀಯ ಸಂಗತಿಗಳಲ್ಲಿ ಮಗ್ನರಾಗಿ ಹೈಟೆಕ್ ದುನಿಯಾ ಗುಂಗಿನಲ್ಲಿ ತಲ್ಲೀನತೆ ಹೊಂದುತ್ತಿರುವ ಅಪ್ರಬುದ್ದ, ಅಜ್ಞಾನಮಾರ್ಗಿಗಳ ಸಂತೆಯಲ್ಲೋರ್ವ ಬಟ್ಟೆ, ವರ್ಣದಲ್ಲಿ ಏನೀದೆ ಎಂದು ಸದಾ ಶ್ವೇತಾ ವರ್ಣದ ಬಟ್ಟೆ ತೊಟ್ಟು ಎಲ್ಲರೊಳಂದಾಗಿ ಮನುಷ್ಯ ಪ್ರೀತಿ, ನಿಸರ್ಗಮಯವಾದ ಆತ್ಮದಡಿ, ಅಧ್ಯಾತ್ಮದ ಪರಿಶುದ್ದತೆಯಲ್ಲಿ ಜ್ಞಾನದ ಕೃಷಿಕನಾಗಿ, ಜ್ಞಾನವನ್ನೇ ಬಿತ್ತಿ ಬೆಳೆದು ಇತರರಿಗೆ ಜ್ಞಾನದ ಸ್ವಾದವನ್ನು ರುಚಿಸುತ್ತಲಿ ಕಿಸೆಯಿಲ್ಲದ ಸಂತನೆಂದು ಭಾರತದ ಎರಡನೇ ಸ್ವಾಮಿ ವಿವೇಕನಾಂದರೆಂದು, ಜ್ವಾನಯೋಗಿಗಳೆಂದು ಹೀಗೆಯೇ ಬಗೆ, ಬಗೆಯ ನಾಮಾಂಕಿತಗಳಿಂದ ಕರೆಯಿಸಿಕೊಂಡವರೇ ಶ್ರೀ. ಸಿದ್ದೇಶ್ವರ ಮಹಾಸ್ವಾಮಿಜಿಗಳು.
ಹೌದು ಆಧ್ಯಾತ್ಮದ ಅಲೌಕಿಕ ಮಾರ್ಗೊನ್ಮುಖಿಯಾಗಿ ಒಟ್ಟು ಸಮಾಜದ ಹಿತ ಚಿಂತನೆ ಬಯಸಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ಮಾಡಿ ಸತ್ಪ್ರಜೆಗಳನ್ನಾಗಿ ರಾಷ್ಟ್ರಕ್ಕೆ ಬಳುವಳಿಯಾಗಿ ನೀಡಿದ ಶ್ರೀ. ಸಿದ್ದೇಶ್ವರ ಸ್ವಾಮಿಜಿಗಳು ನಿಸರ್ಗದೊಂದಿಗೆ ಮಾತನಾಡುತ್ತಿದ್ದರು, ಅದರ ಸಂಪರ್ಕ ಸಾಧಿತರಾಗಿ ಕೊನೆಯ ಗಳಿಗೆಯಲ್ಲಿ ತನ್ನಿಷ್ಟದಂತೆ ಇಚ್ಚಾಮರಣ ಹೊಂದಿದ ಶ್ರೀ ಸಿದ್ದೇಶ್ವರ ಗುರುಗಳು ಎಲ್ಲಾ ಮತ-ಪಂಥವನ್ನು ಮೀರಿದ್ದರು ಎನ್ನುವುದಕ್ಕೆ ಅವರ ಬಾಹ್ಯಮುಖಿಯ ವಿದಾಯದಲ್ಲಿ ದರ್ಶನಕ್ಕಾಗಿ ಲಕ್ಷಾಂತರ ಅನುಯಾಯಿಗಳೇ ಸಾಕ್ಷೀಕರಿಸಿದ್ದವು.
ಜ್ಞಾನ ನೀಡುತ್ತಲಿ ಎಲ್ಲರೊಳಗು ಬೆಳಕಿನ ಪ್ರಜ್ವಲತೆಯನ್ನು ಗುರುತಿಸಿ ಕತ್ತಲ ಅಂದಣವನ್ನು ಸರಿಸುತ್ತಿದ್ದರು, ಹೀಗಾಗಿಯೇ ಶ್ರೀ ಸಿದ್ದೇಶ್ವರ ಗುರುಗಳು ವಿದ್ಯಾರ್ಥಿಯಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಅವಲತ್ತು ಬಂದಿದ್ದರು, ನಂತರ ಮಲ್ಲಿಕಾರ್ಜುನ ಸ್ವಾಮಿಗಳ ಜೊತೆ, ಜೊತೆಯಲ್ಲಿ ನಡೆದರು ಕೊನೆಗೊಮ್ಮೆ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸನ್ಯಾಸತ್ವದ ದೀಕ್ಷೆಯನ್ನು ಸ್ವೀಕರಿಸಿ ಸ್ವಾಮಿಜಿಗಳಾಗಿ ಜನಜೀವನದ ನಡುವೆ ಲಕ್ಷಾಂತರ ಪ್ರವಚನದ ಮೂಲಕ ಆಲಿಸುವ ಮನಸುಗಳ ಎದೆಮಾನಸಕ್ಕಿಳಿದು ಜ್ಞಾನಧಾರೆಯಲ್ಲಿ ಸೆಳೆದು ಲೋಕದ ಚಿತ್ತದತ್ತ ತಿರುವಾಗಿಸಿ ಮನುಷ್ಯ ಮಾನವೀಯತೆಯನ್ನು ಅರಳಿಸುತ್ತಿದ್ದರು ಎನ್ನುವುದು ಬಹುಬೇಗವೇ ವ್ಯಾಪಿಸಿತು, ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದ್ದ ಶ್ರೀ ಸಿದ್ದೇಶ್ವರ ಗುರುಗಳು ಕಾಲಕ್ರಮೇಣ ಭಗವಂತನಾಗಿ ದರ್ಶಿಸಿಕೊಂಡರು.
ಸ್ವಾಮಿಜಿಗಳೆಂದರೆ ಭಯ ಹುಟ್ಟಿಸುತ್ತಿರುವ ಈ ಹೊತ್ತಿನಲ್ಲಿ ಆಚಾರ ವಿಚಾರಗಳಲ್ಲಿ ಸರಳತೆಯನ್ನು ತೋರುತ್ತ ಜನರ ಎದೆಜಗಲಿಗಳಿಗೆ ತಲುಪಿ ವಿಶ್ವಮಾನವತೆಯನ್ನು ಸಾರಿದ್ದರು ಅವರ ಅನುಯಾಯಿಗಳ ಮಾತಿನಂತೆ ಅವರಿಗೆ ಪ್ರವಾಸ ಮಾಡುವ ಹವ್ಯಾಸವಿತ್ತು, ಒಮ್ಮೆ ಅಮೇರಿಕಾ ದೇಶ ನಾಗರೀಕರೊಂದಿಗೆ ಮಾತಾನಾಡಿಸಬೇಕೆಂದು ಇಂಗಿತವನ್ನು ವ್ಯಕ್ತಪಡಿಸುವಾಗ ಅವರಿಗೆ ಪಾಸ್‌ಪೋರ್ಟ್ ಬೇಕಿತ್ತು, ಆದರೆ ಪಾಸ್‌ಪಾರ್ಟ್ ಅವಧಿ ಮುಗಿದು ಹೋಗಿತ್ತು ನವೀಕರಣ ಮಾಡಿಸುವಾಗ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಓಟರ್ ಐಡಿ, ರೇಷನ್ ಕಾರ್ಡ್ ಅಗತ್ಯತೆ ಇತ್ತು, ಆದರೆ ಇವ್ಯಾವು ಅವರ ಬಳಿ ಇರಲಿಲ್ಲ, ನವೀಕರಣ ಅಗತ್ಯತೆ ಇತ್ತು ಹೀಗಿದ್ದರಿಂದ ವಿಜಯಪುರದ ಜಿಲ್ಲಾರಕ್ಷಣಾಧಿಕಾರಿಯವರನ್ನು ಮಾತಾನಾಡಿಸಿ ಇರುವ ವಾಸ್ತವ ಹೇಳಿದಾಗ ಅವರು ಲೇಟರ್‌ನಲ್ಲಿ ಶ್ರೀ.ಸಿದ್ದೇಶ್ವರ ಸ್ವಾಮೀಜಿಗಳು ಜ್ಞಾನಯೋಗಾಶ್ರಮದಲ್ಲಿದ್ದಾರೆ ಎಂದು ವಿವರಿಸಿ ಕೊಟ್ಟಿದ್ದರು ಅದನ್ನು ಇಟ್ಟುಕೊಂಡು ಬೆಂಗಳೂರಿನ ಲಾಲ್‌ಬಾಗ್‌ನ ಹತ್ತಿರದಲ್ಲಿದ್ದ ಪಾಸ್‌ಪಾರ್ಟ್ ಕಛೇರಿಗೆ ಹೋದಾಗ ಅಲ್ಲಿಯು ಯಾವುದೇ ತಗಾದೆಗಳಿಲ್ಲದೆ ಪಾಸ್‌ಪೋರ್ಟ್ ನವೀಕರಣ ಆಗಿದ್ದು ಕೂಡ ಪವಾಡ ಎಂದೇ ಭಾವಿಸುತ್ತೇನೆ ಎಂದು ವಿವರಿಸುವಾಗ ಅವರ ಏಕಾಗ್ರತೆ, ಸನ್ಯಾಸ ಮೌಲ್ಯಗಳು ಅವರು ಮೈಗೂಡಿಸಿಕೊಂಡಿದ್ದರಿಂದಲೇ ಸಾಧ್ಯವಾಗಿದೆ ಎನ್ನಬಹುದು.
ಈ ತಲೆಮಾರುಗಳಲ್ಲಿ ಮೂವರು ಸ್ವಾಮೀಜಿಗಳ ಬಗ್ಗೆ ಬಹಳವಾಗಿ
ದೇವರಾಗಿ ಜೀವಂತವಾಗಿ ದರ್ಶಿಸಿಕೊಂಡಿದ್ದು ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿಗಳು, ಹಾಗೂ ಕಿಸೆಯಿಲ್ಲದ ಸಂತ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಮಾತ್ರ ಎನ್ನಬಹುದಾಗಿದೆ, ಸಂಗೀತಧಾರೆಗಳ ಮೂಲಕ ಭಕ್ತ ಸಮೂಹವನ್ನು ತಲುಪಿ ಭಗವಂತನಾದ ಶ್ರೀ ಪುಟ್ಟರಾಜ ಗವಾಯಿಗಳು, ಅನ್ನದಾಸೋಹ ಜ್ಞಾನದಾಸೋಹಗಳಿಂದ ಲಕ್ಷಾಂತರ ವಿದ್ಯಾರ್ಥಿ ಜೀವನ ಕಲ್ಪಿಸಿದ ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮೀಜಿ, ಜ್ಞಾನದಾಸೋಹದ ಮೂಲಕ ಸರಳತೆಯನ್ನು ಸಾರುತ್ತಲಿ ವಿವೇಕವನ್ನು ಎದೆಚರಿಗೆಗಳಿಗೆ ತುಂಬಿದ ನಡೆದಾಡುವ ದೇವರೆಂದು ಕರೆಯಿಸಿಕೊಂಡ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳೆಂದು ಮತ ಪಂಥವನ್ನು ಮೀರಿದ ಮನುಷ್ಯ ಮನಸುಗಳು ಆರಾಧಿಸುತ್ತಿರುವುದು ನಿಜಕ್ಕೂ ಇದು ಪುಣ್ಯಭೂಮಿ ಎಂದೇ ಭಾವಿಸಬಹುದಾಗಿದೆ.
ಒಂದು ಮಾಹಿತಿಯಂತೆ ಶ್ರೀ ಸಿದ್ದೇಶ್ವರ ಗುರುಗಳು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿಯೇ ಕೃತಿ ರಚಿಸಿದ್ದರು, ಈ ಮೂಲಕ ನಿತ್ಯ ಅಧ್ಯಾತ್ಮವನ್ನು ಅಭ್ಯಾಸಿಸುತ್ತಿದ್ದರು ಇಲ್ಲಿಗೆ ಲಕ್ಷಾಂತರ ಪ್ರವಚನ ನೀಡಿದ ಲೆಕ್ಕವಿದ್ದರು ಎಂದಿಗೂ ಪ್ರಚಾರದ ಪ್ರಭಾವಕ್ಕೆ ಒಳಗಾಗಿರಲಿಲ್ಲ, ನಡೆದಂತೆ ನುಡಿದು ನುಡಿದಂತೆ ನಡೆದು ಅದ್ಯಾತ್ಮದ ಬದುಕು ಕಟ್ಟಿಕೊಂಡು ಸಮಾಜಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದಲೇ ಅವರನ್ನು ಮಹಾಗುರುಗಳೆಂದು ಭಕ್ತಸಮೂಹ ಉವಾಚಿಸುತ್ತಾರೆ, ಒಂದರ್ಥದ ಪ್ರಕಾರ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳುವಂತೆ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಸಾಲುಗಳನ್ನು ಶ್ರೀ ಸಿದ್ದೇಶ್ವರ ಗುರುಗಳು ಅಕ್ಷರಶಃ ಪಾಲಿಸಿದ್ದರು, ಅವರು ತಮ್ಮ ಜೀವಿತಾವಧಿಯಲ್ಲಿಯೇ ಬರೆದಿಟ್ಟಂತೆ ಅವರ ಚಿತಾ ಬಸ್ಮವನ್ನು ತ್ರಿವೇಣಿ ಸಂಗಮದ ನಿಸರ್ಗದಡಿ ಲೀನಗೊಳಿಸಲಾಯಿತು,
ನೆರವು ಕೇಳಿ ಬಂದವರಿಗೆ, ನೋವಿನ ಭಾರ ಹೊತ್ತುಕೊಂಡು ಬಂದವರಿಗೆ, ಅಷ್ಟೆ ಸರಳವಾಗಿ ಬಲುಭಾರವನ್ನು ಇಳಿಸಿ ಕಳುಹುತ್ತಿದ್ದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮಾತಿನಲ್ಲಿಯೇ ಪವಾಡ ಸದೃಶ್ಯದ ಮಾಂತ್ರಿಕತೆಯಿತ್ತು, ನಿಸ್ವಾರ್ಥತೆ, ಸ್ವಚ್ಚಂಧತೆ, ಸರ್ವರಲ್ಲೂ ಸಮಾನತೆ, ವಿಶ್ವಾಸದಿ ಕಾಣುತ್ತಿದ್ದ ಇವರನ್ನು ಪ್ರೀತಿಯಿಂದಲೇ ಅಪ್ಪಾಜಿ ಎಂದು ಜನಸಮೂಹ ಕರೆದಿತ್ತು ಎಂದರೆ ಅನ್ಯ ಸ್ವಾಮಿಜಿಗಳ ಕುರಿತಾಗಿ ಸಾಮ್ಯತೆ ತಿಳಿ ಹೇಳುವುದಕ್ಕೆ ಹೊರಡದೆ, ಭಾರತೀಯ ನೆಲ ತಪಸ್ವಿಗಳ ನೆಲವೆನ್ನುವ ಅವಸರಗಳು ಇಂತಹ ಮೂರು ಸ್ವಾಮಿಜಿಗಳಿಂದಲೇ ಉಳಿದಿದೆ, ಜಾತಿಗೊಂದು ಮಠ ಮಾನ್ಯಗಳ ರಚಿಸಿಕೊಂಡು ಖಾವಿಯಲ್ಲಿ ಸನ್ಯಾಸತ್ವವನ್ನು ಹುದುಗಿಟ್ಟುಕೊಂಡು ಅಯಾಷಿ ಬದುಕಿನೆಡೆ ಪಾದಪೂಜೆಗಳಿಗಾಗಿ, ಆಚಾರವಿಲ್ಲದ ನಾಲಿಗೆಗಳನ್ನು ಹರಿಬಿಟ್ಟುಕೊಂಡು ಅವಿವೇಕತನದಿ ತಾರತಮ್ಯ, ಬೇದಗಳ ಬುಟ್ಟಿಯನ್ನು ಕವುಚಿಕೊಂಡು ಅವಿವೇಕತನದಿ ವರ್ತಿಸುತ್ತಲಿ ರಾಜಕೀಯಗೈದು ಮೂಲ ಸನ್ಯಾಸತ್ವವನ್ನೆ ಮರೆತು ಹೋದ ಬಹುತೇಕ ಸ್ವಾಮಿಜಿಗಳ ನಡುವೆ ನಡೆದಾಡುವ ದೇವರಾಗಿ ಶಾಶ್ವತವಾಗಿ ಶಾಸನವಾದ ಶ್ರೀ ಸಿದ್ದೇಶ್ವರ ಗುರುಗಳು ವಿಶ್ವಕ್ಕೆ ಮಾದರಿಯಾಗಿದ್ದರಲ್ಲದೆ ಮನುಕುಲದ ಸಂತನಾಗಿ ಅಲೌಕಿಕವಾಗಿ ಉಳಿದಿದ್ದಾರೆ.
ಗುರುಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದಾರೆ.
ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರ ಪ್ರವಚನದುದ್ದಕ್ಕೂ ಸೇರಿದ ಜನತೆಯ ತನ್ಮಯತೆ ಹೇಳತಿರದಾಗಿರುತ್ತದೆ, ಅವರ ಭಾಷೆ,ಧಾಟಿ,ಪ್ರದಪ್ರಯೋಗ,ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸಿ ಕಲ್ಲು,ಮಣ್ಣು,ಗಿಡ,ಮರ,ಹೂ,ಹಕ್ಕು,ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ವಿವರಿಸುವ ರೀತಿ ಗಮನಾರ್ಹವಾದುದ್ದಾಗಿದೆ.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಜ್ಞಾನಯೋಗಿಗಳು ಶ್ರೀ ಸಿದ್ದೇಶ್ವರರಾಗಿದ್ದಾರೆ.

