ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಗೋಮಾಳಗಳ ಕಬಳಿಕೆಯಿಂದ I ಜಾನುವಾರು ಸಂತತಿ ನಾಶವಾಗುತ್ತಿದೆ…I
ಸರ್ಕಾರದ ಯೋಜನೆಗಳು ಜಾನುವಾರುಗಳ ಜೀವ ಸಂಕುಲಗಳ ಪೂರಕವಾಗಿಯೇ ಇರಬೇಕಲ್ಲವೇ.. ಭೂ ಕಂದಾಯ 1966 ನಿಯಮ 97 (1) ರನ್ವಯ ಪ್ರತಿ ಗ್ರಾಮದಲ್ಲಿ ಸರಿಸುಮಾರು 100 ಜಾನುವಾರುಗಳಿಗೆ 12 ಎಕರೆ ಭೂ ಪ್ರದೇಶ ಕಾಯ್ದಿರಿಸಬೇಕು ಎನ್ನುವ ಭೂ ಕಾನೂನುಗಳಿದ್ದರೂ ಲ್ಯಾಂಡ್ ಮಾಫಿಯಾದ ಕರಾಳ ನೆರಳಿನಲ್ಲಿ ಬಲಿಯಾಗುತ್ತಿರುವ ಗೋಮಾಳಗಳು ಉಳಿಯಲೇ ಬೇಕು ಅಲ್ಲವೇ,
ಗೋಮಾಳಗಳು ಉಳಿದರೆ ಜಾನುವಾರು ಜೀವ ಸಂಕುಲ ಉಳಿದಾತು..? ಜಾನುವಾರುಗಳ ಸಂಕುಲ ಅಳಿದೊಡೆ ಮಾನವ ಸಂಕುಲವು ಅಳಿದಾತು..? ಇದೊಂದು ಜೀವಸರಪಳಿ ಸಂಗತಿ ಕುರಿತಂತೆ ಈ ಹೊತ್ತಿನ ರಾಜಕಾರಣಿಗಳಿಗೆ ತುಸು ಮನವರಿಕೆಯೇ ಆಗುತ್ತಿಲ್ಲ, ಇದೊಂದು ಸಿವಿಲ್ ವ್ಯಾಜ್ಯಗಳು ಎನ್ನುವ ಬಿಡಾಡಿ ವ್ಯಕ್ತಿತ್ವಗಳಿಗೆ ಸ್ವಯಂ ಮಾರಣ ಹೋಮವಾಗುತ್ತಿದ್ದಾರೆ, ಒಂದೆಡೆ ಬಹುತೇಕ ಬಿಜೆಪಿಯ ಅಜೆಂಡಾದಲ್ಲಿರುವಂತೆ ಗೋ ಹತ್ಯೆ ನಿಷೇದ ಅಕ್ಷರಶಃ ಜಾರಿಗೆ ಬರಬೇಕು, ಗೋಹತ್ಯೆಗಳನ್ನು ಸಹಿಸುವ ಮಾತಿಲ್ಲ, ಗೋಹತ್ಯೆಗಳ ಕಸಾಯಿಗಳ ಮೇಲೆ ದಾಳಿ ಮಾಡಿ, ಅಕ್ರಮ ಗೋ ಸಾಗಣಿಕೆಯನ್ನು ತಡೆಯಿರಿ ಎನ್ನುವ ದನಿಗಳು ಮೊಳಗುತ್ತಲೇ ಇರುವುದು ಸಹಜವಾಗಿಯೇ ಇದೆ, ಅದೇ ರೀತಿ ನೀರಿನ ಜೀವಕಣಗಳಿಗೆ ತೊಂದರೆಯಾಗದಂತೆ ಅದನ್ನು ಉಳಿಸಿ ನೀರಿನ ಉತ್ಪತ್ತಿಗಳಿಗೆ ರಹದಾರಿಗಳು ಸೃಷ್ಠಿಯಾದರೆ ಅದೊಂದು ಕೊಳವಾಗಿ ಕೆರೆಕಟ್ಟೆಗಳಾಗಿ ಮಾರ್ಪಾಡು ಆಗುತ್ತದೆ, ಇದರಿಂದ ಪರಿಸರ ವೃದ್ದಿಯು ಆಗುತ್ತದೆ, ಅತೀವ ದಾಹದಿಂದ ಜೀವಹಾನಿ ಮಾಡಿಕೊಳ್ಳುವ ಬಿಡಾಡಿ ಹಾಗೂ ಸಾಕು ಜಾನುವಾರುಗಳಿಗೆ ಇಂತಹ ಕೆರೆಕಟ್ಟೆಗಳಲ್ಲಿ ಈ ಮೂಲಕ ನಾಲೆಗಳಲ್ಲಿ ಶೇಖರಣೆಯಾಗುವ ನೀರು ಕುಡಿವುದಕ್ಕೆ ಸಹಕಾರಿಯಾಗುತ್ತದೆ,
ಇಂತಹದೊಂದು ಕಾರಣ ಮಾತ್ರದಿ ಆ ಕಾಲಘಟ್ಟದ ಮನುಷ್ಯ ಮಾನವೀಯ ಮನಸುಗಳು ಕೆರೆಕಟ್ಟೆಗಳಿಗಾಗಿ, ಜಾನುವಾರುಗಳಿಗಾಗಿ ತಮ್ಮದೇ ಜಮೀನುಗಳನ್ನು ಬಿಟ್ಟುಕೊಡುತ್ತಿದ್ದರು, ಅಲ್ಲದೆ ಇರುವ ಕೆರೆಕಟ್ಟೆಗಳು ಹಾಗೂ ಗೋಮಾಳ ( ಗ್ರಾಮಠಾಣಾ ) ಜಮೀನು ಭೂ ಪ್ರದೇಶಗಳನ್ನು ರಕ್ಷಿಸಿಕೊಳ್ಳುತ್ತಿದ್ದರು, ಇದೀಗ ಏನಾಗಿದೆ..? ಜಾನುವಾರುಗಳು ಬೀದಿಯಲ್ಲಿ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿಯಾಗಿ ಉಸಿರೆಳೆಯುತ್ತಿದೆ, ಮನುಷ್ಯರು ತಿಂದು ಬಿಸಾಡಿದ ಪೇಪರ್‌ಗಳು, ಪ್ಲಾಸ್ಟಿಕ್‌ಗಳನ್ನು ತನ್ನ ಬರಿದಾದ ಹಸಿವಿಗಾಗಿ ಹಾತೊರೆದು ಇದನ್ನೆ ತನ್ನ ಆಹಾರವಾಗಿಸಿಕೊಳ್ಳುತ್ತಿದೆ, ಇದರಿಂದ ಜಾನುವಾರುಗಳ ಆರೋಗ್ಯ ಏರಾಪೇರಿಯಾಗಿ ಹೊಟ್ಟೆಯ ಕರುಳಿಗೆ ಸುತ್ತಿಕೊಂಡ ಪ್ಲಾಸ್ಟಿಕ್‌ಗಳಿಂದ, ಅನ್ಯ ತ್ಯಾಜ್ಯಗಳಿಂದ ಊದು ರೋಗಗಳಿಗೆ ತುತ್ತಾಗುತ್ತಿದೆ, ಸಾಲದಕ್ಕೆ ಸಂಚಾರಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿರುವ ಘಟನೆಗಳು ಎಲ್ಲೆಡೆ ಘಟಿಸುತ್ತಲೇ ಇವೆ, ಒಂದೆಡೆ ಪೂರ್ಣ ಬಿಡಾಡಿ ಜಾನವಾರುಗಳು, ಇನ್ನೊಂದೆಡೆ ಜಾನುವಾರುಗಳನ್ನು ಉಪಯೋಗಿಸಿಕೊಂಡು ಬೀದಿಗೆ ಅಟ್ಟಿಬಿಡುವ ಸಾಂದರ್ಭಿಕತೆಗಳಿಗೆಲ್ಲಾ, ಪ್ರತಿ ಗ್ರಾಮವಾರುಗಳಲ್ಲಿದ್ದ ಗ್ರಾಮಠಾಣಾ, ಗೋಮಾಳ, ಜಾನುವಾರುಗಳಿಗೆ ಬಿಟ್ಟಿದ್ದ ಮುಪತ್ತು ಜಮೀನುಗಳು ಇಂದು ಲ್ಯಾಂಡ್ ಮಾಫಿಯಾದ ಕರಾಳ ಅನಾಹುತಗಳಿಗೆ ಬಲಿಯಾಗುತ್ತಿದೆ, ಅಲ್ಲದೆ ಅಭಿವೃದ್ದಿಯ ಹೆಸರಿನಲ್ಲಿ ಕೆರೆಕಟ್ಟೆಗಳನ್ನು ಇದೇ ಭೂ ಪ್ರದೇಶಗಳನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ,
ಸರ್ಕಾರದ ಯೋಜನೆಗಳು ಜಾನುವಾರುಗಳ ಜೀವ ಸಂಕುಲಗಳ ಪೂರಕವಾಗಿಯೇ ಇರಬೇಕಲ್ಲವೇ.. ಭೂ ಕಂದಾಯ 1966 ನಿಯಮ 97 (1) ರನ್ವಯ ಪ್ರತಿ ಗ್ರಾಮದಲ್ಲಿ ಸರಿಸುಮಾರು 100 ಜಾನುವಾರುಗಳಿಗೆ 12 ಎಕರೆ ಭೂ ಪ್ರದೇಶ ಕಾಯ್ದಿರಿಸಬೇಕು ಎನ್ನುವ ಭೂ ಕಾನೂನುಗಳಿದ್ದರೂ ಲ್ಯಾಂಡ್ ಮಾಫಿಯಾದ ಕರಾಳ ನೆರಳಿನಲ್ಲಿ ಬಲಿಯಾಗುತ್ತಿರುವ ಗೋಮಾಳಗಳು ಉಳಿಯಲೇ ಬೇಕು ಅಲ್ಲವೇ, ಆಡಳಿತ ವ್ಯವಸ್ಥೆಗಳು ಅತೀ ಜಾಗರೂಕವಾಗಿ, ಜವಾಬ್ದಾರಿಯುತವಾಗಿ ಯೋಜನೆಗಳನ್ನು ಕಾಯಕಲ್ಪಗೊಳಿಸಬೇಕಿದೆ, ಹಾಗೆಯೇ ಲ್ಯಾಂಡ್ ಲಿಟಿಗೇಶನ್ ಎನ್ನುವ ಪೋರ್ಜರಿಸ್ಟ್‌ಗಳನ್ನು ಗಡಿಪಾರು ಮಾಡುವ ಜರೂರತ್ತಿದೆ, ಈಗಾಗಲೇ ಸುಳ್ಳು ದಾಖಲೆಗಳ ಮುಖೇನ ಕಬಳಿಸಿಕೊಂಡಿರುವ ನೂರಾರು ಎಕರೆ ಇಂತಹ ಜಾನುವಾರು ಮೀಸಲು ಭೂಮಿಗಳನ್ನು ಪ್ರತಿ ಜಿಲ್ಲಾಡಳಿತ ಮರು ವಶಕ್ಕೆ ಪಡೆದು ಜಾನುವಾರುಗಳಿಗೆ ನೀರು, ಮೇವಿನ ಕೊರತೆಯನ್ನು ನೀಗಿಸುವಂತೆ ನೋಡಿಕೊಳ್ಳುವ ದಿನಮಾನ ಇದಾಗಿದೆ, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳು ಗುರುದತ್ ಹೆಗಡೆಯವರು ಯೋಚಿಸಿ ಕಟಿಬದ್ದವಾದ ಹೆಜ್ಜೆಗಳಿಟ್ಟರೆ ಇದು ಅಸಾಧ್ಯವಾದ ಕೆಲಸವೇನು ಅಲ್ಲವಾಗಿದೆ,
ಹೀಗಾದೊಡೆ ಯಾವ ಜಾನುವಾರುಗಳು ಬಿಡಾಡಿಯಾಗಿ ರಸ್ತೆ ಬದಿನಲ್ಲಿರುವುದಿಲ್ಲ, ಹಲವು ಪ್ರಾಣಿ ರೋಗಗಳಿಗೆ ತುತ್ತಾಗಿ ನರಳುವುದೂ ಇಲ್ಲ, ಅವುಗಳ ಅಹಾರವು ಅಲ್ಲಿಯೇ ಸ್ವಾಭಾವಿಕವಾಗಿ ವೃದ್ದಿಯಾಗಿ ಜಾನುವಾರು ಸಂಕುಲ ಉಳಿದಾತು ಎನ್ನುವುದು ಈ ಲೇಖನದ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರದ ಗಮನಕ್ಕೆ ತರಬಯಸುವ ಇರಾದೆ ಇದಾಗಿದೆ, ಗೋಹತ್ಯೆಗಳ ಬಗ್ಗೆ ಮಾತಾಡುವ ರಾಜಕೀಯ, ಸಂಘಟಿತ ಮನಸುಗಳಿಗೇಕೆ… ಗೋಮಾಳಗಳು ಉಳಿಯಬೇಕು, ಕೆರೆಕಟ್ಟೆಗಳು ಉಳಿಯಬೇಕು, ನೀರು-ಮೇವುಗಳಿಗಾಗಿ ಈ ಭೂ ಪ್ರದೇಶಗಳು ಮೀಸಲಾಗಿರಬೇಕು ಎನ್ನುವ ಸಣ್ಣದೊಂದು ದನಿಗಳಲ್ಲಿ ಇದುವರೆಗೂ ಎಲ್ಲಿಯಾದರೂ ಧ್ವನಿಗೂಡಿಸದೇ ಇರುವುದು ಅಚ್ಚರಿ ಕೂಡ ಆಗಿದೆ, ಇದಕ್ಕೆ ಅಸಲಿ ಕಾರಣಗಳು ಇವೆ, ಇಂತಹ ಭೂ ಪ್ರದೇಶಗಳು ಕಬಳಿಕೆಯಾಗಿರುವುದು ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಪೋಷಕ ಪಟಾಲಂಗಳಿಂದಲೇ ಹೊರತು ಶ್ರೀ ಸಾಮಾನ್ಯರಿಂದಲ್ಲವಾಗಿದೆ, ಇಂತಹ ಇಬ್ಬಗೆಯ ಮನಸ್ಥಿತಿಗಳು ಯಾರಿಗೂ ಇರಬಾರದು ಅಲ್ಲವೇ..?
ಕೇವಲ ಮತ್ತೊಂದು ಧರ್ಮದವರು ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂದು ಹಲ್ಲೆ ನಡೆಸುವ ಮಂದಿಗಳು ಇತ್ತಕಡೆಯು ಚಿತ್ತವರಿಸಬೇಕಲ್ಲವೇ..? ಗೋವುಗಳನ್ನು ಹತ್ಯೆ ಮಾಡುವವರು ದ್ರೋಹಿಗಳು ಹೌದು, ಏಕೆಂದರೆ ಗೋವು ಮನುಷ್ಯನಿಗೆ ಬಹು ಉಪಕಾರಿಯಾಗಿ ಬದುಕುತ್ತದೆ, ಯಾವಾಗ ಅದು ನಿಷ್ಕ್ರೀಯೆಗೊಳ್ಳುತ್ತದೋ ಅದಾಗ ಕಸಾಯಿಗಳಿಗೆ ಮಾರಾಟ ಮಾಡುವ ಮನಸ್ಥಿತಿಗಳು ಕೂಡ ದ್ರೋಹಿಯೇ ಹೌದು, ಇನ್ನೊಂದೆಡೆ ಗೋವಿನಂತಹ ಜಾನುವಾರುಗಳಿಗಾಗಿ ಹಿಂದಿನವರು ಕಾಯ್ದಿರಿಸಿದ ಭೂಮಿಗಳನ್ನು ಪೋರ್ಜರಿಗಳ ಮೂಲಕ ಕಬಳಿಕೆ ಮಾಡುವವರು ಕೂಡ ಸಮಾಜದ ವಿದ್ರೋಹಿಗಳೇ ಆಗಿದ್ದಾರೆ ಎನ್ನುವುದು ದರ್ಶಿಸಿಕೊಳ್ಳಬೇಕಿದೆ,
ಒಟ್ಟಿನಲ್ಲಿ ಶಿವಮೊಗ್ಗದ ಗೋಮಾಳಗಳು, ಕೆರೆಕಟ್ಟೆಗಳು, ಜಾನುವಾರು ಮುಪತ್ತು ಭೂಮಿಗಳು, ಮೇವಿಗಾಗಿ ನೀರಿಗಾಗಿ ಉಳಿಯಲು ಸ್ಥಳೀಯ ಶಾಸಕರುಗಳು, ಸಂಸದರು, ಗ್ರಾಮಾ ಪಂಚಾಯ್ತಿಗಳು ಒಕ್ಕರೊಲಿನಿಂದ ಬೀದಿಗೆ ಇಳಿದು ಜಾನುವಾರು ಸಂರಕ್ಷಣೆಗೆ ಅದರ ಜೀವ ಸಂಕುಲ ಉಳಿವಿಗಾಗಿ ಹೋರಾಟ ನಡೆಸಬೇಕಾದ ತುರ್ತುಗಳಿವೆ ಎನ್ನುವುದು ನನ್ನಯ ಅಂಬೋಣ.


