ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಗುಳಿ ಚೆಲುವೆ I
ಬೈತಲೆ ಬಿಂದಿಗೆ, ಗುಳಿ ಕದಪಿನ ನೈದಿಲೆ
ಮೋಹಕ ನಯನದಿ ದಿಟ್ಟಿಸಿ
ಈ ಎದೆಯೊಳಗೆ ಭಾವ ಬಿತ್ತಿ
ಚಿಗುರೊಡೆಸದಿರು.
ರಮ್ಯದಿ ಘಮಿಸುವ ಪರಿಮಳ ಸ್ವಾದ
ನೀಳ ನವಿರಾದ ಕೇಶರಾಶಿಯ ಸಾಂಗತ್ಯ,
ಸೊಗಸಿನ ಮೊಗದಾವರೆಯ ಹೊಳಪು
ಕಪ್ಪು ಕಾಡಿಗೆ ರಹದಾರಿ, ಹಚ್ಚ ಹಸಿವಿನ ಮಕರಂದ.
ಜಗ ಮರೆಸುವ ಸುಕೋಮಲತೆ.
ಬಣ್ಣಿಸಲಾರದೇ ಸೊರಗಿ ಸುಣ್ಣವಾಗುವೆ
ನಿನ್ನ ಎದೆಸೂರಿಗೆ ಬಣ್ಣವಾಗುವೆ
ಚೆಲುವೆ, ಈ ಭಾವಗಳು ಬುಗ್ಗೆಗಳೆಬ್ಬಿಸಿವೆ
ಚಿತ್ತಾರದಿ ಹೊಂಗನಸುಗಳ ಹೆಣೆಯುತ್ತಿವೆ.
ಮೊದಲ ಸಲದಿ ಸುಳಿದ ನಿನ್ನ ಚಿತ್ರ ಫಲಕ
ಅಂತರಾಳದಿ ಲಗತ್ತಿಸಿದ್ದೇನೆ,
ವಿರಮಿಸದೇ ಚಿಗುರೊಡೆದ ಭಾವಗಳಿಗೆ ಅಂಕುಶವಾಗಿಸು
ನೀ ಮೌನದಿ ಮುಗಳ್ನಕ್ಕರೆ
ಬರೆವ ಸಾಲು ಮುಗಿಯದ ಮುಗಿಲಾದಿತು.
ಕೊನೆಯಿಲ್ಲದ ಎದೆಪುಟಗಳ ಹೊತ್ತಿಗೆಯಾದಿತು.

