I ಅವಳ ಒಡಲು I
ಒಬ್ಬಂಟಿಯಾದಾಗಲೆಲ್ಲ
ಗೊಣಗುತ್ತಲೇ ಇರುತ್ತಾಳೆ ಅಮ್ಮ,
ಅದೆಷ್ಟು ಮಾತಿತ್ತೋ ಅವಳೊಳಗೆ
ಬೈಯುವಾಗಲೆಲ್ಲ ಮಮತೆಯ ಹೆಸರಲಿ
ಬಂಧಿಸಿದಳು ಬೈಗುಳಗಳನು
ಮುದ್ದು ಹೆಚ್ಚಾಗಿ ಕೆಟ್ಟಿತೆಂದು
ಕಣ್ಣಲ್ಲೇ ಹೆದರಿಸಿದಳು ಆಗಾಗ…
ಅದೇನೇನು ಮುಚ್ಚಿಟ್ಟಳೋ
ಖಾಲಿಯಾದ ಅನ್ನದ ಪಾತ್ರೆಯೊಂದಿಗೇ
ತನ್ನ ಹಸಿವೆಯನ್ನೂ,
ಅನೇಕ ಸುಟ್ಟ ಗಾಯಗಳನ್ನು
ಅವಮಾನ, ಅಸಹಾಯಕತೆ, ಕಣ್ಣೀರು
ರೆಕ್ಕೆ ಬಂದ ಹಕ್ಕಿಗಳು
ಗೂಡು ಮರೆತ ದುಃಖವನ್ನೂ…
ಎಳೆತನದಿ ಅವಳೇ ಪ್ರಪಂಚವಾದಾಗ
ಅವಳೊಡನೆ ಮಾತಿತ್ತು ನೂರು
ಬೆಳೆದಾಗ ಹೊರಗಿನ ಕುತೂಹಲದ ನಡುವೆ
ಶೂನ್ಯವಾದಳವಳು,
ಏನೇನೂ ಅರಿಯದ ದಡ್ಡಿಯಾದಳು
ಮಕ್ಕಳ ಮನವರಿಯದ ಮುಗ್ಧೆಯಾದಳು…
ಆಲಿಸು ಗೊಣಗಾಟವ
ಅದೆಷ್ಟು ನೋವು ಹತಾಶೆ
ಶಬ್ಧವಾಗಲು ಸೋತು ಮಲಗಿವೆ
ಪದಗಳಿಗಾಗಿ ತಡಕುತ್ತಾಳೆ,
ಕೇಳುವ ಕಿವಿಗಾಗಿ ಹುಡುಕುತ್ತಾಳೆ
ಶಬ್ಧವಾಗು ಆ ನೀರವ ಲೋಕಕೆ
ಬೆಳಕಾಗು ತಮವ ತುಂಬಿದ ಮನಕೆ…
-ರಶ್ಮಿ ಶಮಂತ್, ಹೊಸನಗರ


ಚಲಿಸುವ ಮೋಡಗಳು