I ನನ್ನ ಹಾಡು I
ಬರೆಯುತ್ತೇನೆ ಹಾಡೊಂದನ್ನು
ಜನಮನದಲ್ಲಿ ಉಳಿಯುವಂತೆ
ಜಗವು ಪ್ರೀತಿಯಿಂದೆತ್ತಿ ಅಪ್ಪುವಂತೆ
ಮೂಗನೂ ಗುನುಗುವಂತೆ
ಪ್ರಾಣಿ ಪಕ್ಷಿಗಳೂ ಉಲಿಯುವಂತೆ
ಸಂತಸದ ಬಿಂದುವೊಂದು ಆವರಿಸಿ
ಜಗದ ದುಃಖವನ್ನೆಲ್ಲ ಮರೆಸುವಂತೆ
ಕಂಬನಿಯು ಜಾರುವುದ ಮರೆವಂತೆ
ಕಲ್ಪನೆಯೆಲ್ಲ ಧರೆಗಿಳಿದಂತೆ
ಕನಸುಗಳೆಲ್ಲ ರೆಕ್ಕೆ ಬಲಿತು ಹಾರುವಂತೆ
ಕೇಳಿದೊಡನೆ ಸುಖದಿ ತೇಲಿದಂತೆ
ಬದುಕು ಚಂದಗಾಣಿಸುವಂತೆ
ನೆಮ್ಮದಿಯ ಅಲೆಯೊಂದು ಮೂಡಿ
ನಂಜು ಕಾರುವೆದೆಯಲಿ ಪ್ರೀತಿ ಮೊಳೆತು
ಎಲ್ಲರೆದೆಯಲಿ ಹೂ ಬಿರಿಯುವಂತೆ
ಒಪ್ಪಿ ಅಪ್ಪುವ ಚಂದದ ಹಾಡು
ಪ್ರಾಸಗಳನು ಮೀರಿ
ಉಪಮೆ, ಅಲಂಕಾರಗಳ ಬೇಲಿ ಹಾರಿ
ನಿನ್ನೆದೆಯ ದುಃಖಕೆ ಮುಲಾಮಾಗುವುದು
ಜಗದ ನೋವುಗಳೆಲ್ಲ ಕೊನೆಗಾಣುವುದು
ಕುವೆಂಪು ಮಾಸ್ತಿಯಂತಲ್ಲದಿದ್ದರೂ
ಭಾವನೆಗಳ ಬಿಡುಗಡೆಗಾಗಿ
ಎಲ್ಲರೆದೆಗೆ ತಂಪ ಹರಿಸಿ
ಅಕ್ಷರದ ಲೋಕವೇ ಸೃಷ್ಟಿಯಾದಂತೆ
ಕನ್ನಡದ ಕಂಪು ಪಸರಿಸುವಂತೆ
-ರಶ್ಮಿ ಶಮಂತ್ ಹೊಸನಗರ