ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಗಾರಾ ಎನ್ನುವ ಜೀವಭಾವ I
ಸತ್ತನೆಂದು ತಿಳಿದ ಹಣ
ಮುಕ್ಕಳಿಸಿ ನಗುವ ಬಿಕ್ಕಿತು,
ಬರಹದ ಬುಡಕೆ ಕಂದಲಿ ನಾಟಿಸಿತ್ತು,
ಮರದ ರೆಂಬೆ-ಕೊಂಬೆಗಳೊಟ್ಟಿ,
ವಿಕೃತದ ವಿಸ್ತೃತದಿ ಚಿತೆಯ ಕಟ್ಟಿತ್ತು,
ಬರಹವೊಮ್ಮೆ ಧ್ಯಾನಿಸಿತು,
ಸುತ್ತಲು ಹುತ್ತ ಕಟ್ಟಲೆಂದಿತು,
ವಿಷದ ಹಾವು ಬುಸುಗುಡಲೆಂದಿತು,
ಅದರೊಳ ವಿಷವೊಮ್ಮೆ ಕುಕ್ಕೆಂದಿತು,
ಬರಹವೋ..? ನಿನ್ನ ಹಣವೋ..?
ಲೆಕ್ಕದ ತರ್ಕದಿ ತೂಗು ತೂಗೆಂದಿತು,
ಧ್ಯಾನದ ಬರಹ ಮತ್ತಷ್ಟು ಪ್ರಜ್ವಲಿಸಿತು,
ವಿಕೃತ ನಡೆಗಳೊಮ್ಮೆ ನಲುಗಿ ನಶಿಸಿತು,
ಎನ್ನ ಬರಹಕೆ ಜೀವ ಭಯಗಳಿಲ್ಲ,
ಯಾರ ಪರಮಾವಧಿಗಳ ಪರಾಕಾಷ್ಠೆಗಳಿಲ್ಲ,
ತುಸು ಮಿಥ್ಯಗಳಣದ ವ್ಯಾಮೋಹಗಳಿಲ್ಲ,
ನಿರುಮ್ಮಳತೆ, ನಿಚ್ಚಳತೆಗೆ ಕೊರತೆಗಳಿಲ್ಲ,
ಕೋಟೆ ಕಟ್ಟಿ ಆಳಿದವರು ಅಳಿದಿದ್ದಾರೆ
ಅಳಿದುಳಿದ ಪಳೆಯುಳಿಕೆಗಳ ಶಾಸನಗಳಿದೆ,
ನಾ ಬಹುತ್ವದಿ ಹೊರಟಿದ್ದು ಶಾಸನಕ್ಕಾಗಿ,
ಗಾರಾ ಎನ್ನುವ ಹೆಸರಿನ ಶಾಶ್ವತಕ್ಕಾಗಿ,

