I ಅವಳ ದನಿ..I
ನಾನಿಲ್ಲದಿದ್ದರೆ
ಪದ್ಯಗಳ ಸಾಲುಗಳೆಲ್ಲಿ..?
ಖಾಲಿ ಪುಟವಾಗಿಯೇ ಉಳಿದಿರುತಿತ್ತು..!
ನಿನ್ನೊಳಗೆ ನಾನೀಳಿದಾಗ
ಅವಶೇಷದ ಕೋಟೆಯಾಗಿತ್ತು.
ಬತ್ತಿ ಬಾಡಿದ ಹೂ ಬನವಿತ್ತು.
ನಗುವ ಸುಳಿವೇ ಇರಲಿಲ್ಲ..!
ಕೆಂಡದ ಅಘೋರಿಯಂತಿದ್ದೆ
ಸತ್ತಜೀವ-ಕಾಯದ ಮೇಲೆ ಆಸೀನನಾಗುತ್ತಿದ್ದೆ.
ಕಣ್ಣು ಮುಚ್ಚಿ ಧ್ಯಾನ ಎಂದಿದ್ದೆ..!
ಬರುಡು ಬವಣೆಗಳಲ್ಲಿಯೇ ಕೊಳೆಯುತ್ತಿದ್ದೆ.
ನೆನಪಿಸಿಕೋ..?
ಒಣ ಬರಹದ ಹಾದಿಗೆ ಜೀವ ನೀಡಲು ನಿಂದೆ.
ದಿನಮಾನಗಳೇ ಋತುಮಾನಗಳ ದೂಡಿತು.
ಭಾವಗಳ ಬಿತ್ತಿ ಬರೆಸಿದೆ.
ಪದ್ಯ ಲೋಕದೊಳಗೆ ಬಿಗಿದಪ್ಪಿ ನಡೆಸಿದೆ.
ಮೊಗೆದಷ್ಟು ಭಾವ, ಗುಟುಕಿದಷ್ಟು ದಾಹ.
ಉಸಿರನಸಿರಿನೊಳಗೆ ಬೆರೆತು ಹೋದೆ..!
ಹಸಿ-ಮಕರಂದಗಳ ಸ್ಪರ್ಶಿಸಿ ಚುಂಬಿಸೆಂದೆ.
ಬೆಸುಗೆಗಳ ಬಿಸಿ-ಭಾವಗಳಿಗೆ ಮರುಹುಟ್ಟು ನೀಡಿದೆ.!
ನೆನಪಿದಿಯಾ…?
ಗತ-ದಿನದ ಅವಶೇಷದ ಕೋಟೆ ಎಲ್ಲಿದೆ..?
ಭಾವ-ಬೆಳಕಿನರಮನೆಯಾಗಿ ಕಂಗೊಳಿಸುತ್ತಿದೆ.
ಸದಾ ಪದರಾಶಿಗಳ ನರ್ತಿಸುತ್ತಿದೆ.
ಹೂ-ಬನದ ಮೊಗ್ಗುಗಳರಳಿ ನಗುತಲಿದೆ.
ನಿತ್ಯ-ಮಿಥ್ಯಗಳ ಲೋಕದಲಿ,
ಕಾವ್ಯಗಳ ಕಾವಿಟ್ಟ ಬೆಸುಗೆಗಳ ಮರೆಯದಿರು.
ನಾನೀಗ ನಿನ್ನ ಸಂಕಲನಗಳಿಗೆ ಜನ್ಮವಿತ್ತಿದ್ದೇನೆ..!
ಮತ್ತೇ-ಮತ್ತೇ ಗರ್ಭವತಿಯಾಗುವೆ..
ಬಾ ದಿನವಿರುಳ ಸಾಂಗತ್ಯದಲಿ ವಿಹರಿಸು..!