I ಫ್ರೆಂಡ್ಸ್ ಸೆಂಟರ್ ನೇತ್ರದಾನ ಜಾಗೃತಿ ಕಾರ್ಯಕ್ರಮದಲ್ಲಿ I ರೋಟರಿ ಶಿವಮೊಗ್ಗ ಅಧ್ಯಕ್ಷರಾದ ಎನ್.ಗೋಪಿನಾಥ್ ಅಭಿಮತ I
ಶಿವಮೊಗ್ಗ : ನೇತ್ರದಾನವು ಅಂಧತ್ವ ನಿವಾರಣೆಗೆ ಅತ್ಯಂತ ಮಹತ್ವದ ಕೊಡುಗೆಯಾಗಿದ್ದು, ಪ್ರತಿಯೊಬ್ಬರೂ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ಮಧುರ ಪ್ಯಾರಡೈಸ್ ಮಾಲೀಕರು ಹಾಗೂ ರೋಟರಿ ಶಿವಮೊಗ್ಗ ಅಧ್ಯಕ್ಷರಾದ ಎನ್.ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು.
ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಬಂಡಾರ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ನೇತ್ರದಾನ ಪಕ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಮನೋಭಾವ ಮತ್ತು ಆದರ್ಶಮಯ ಬದುಕಿನ ಪ್ರತೀಕವಾಗಿರುವ ನೇತ್ರದಾನವು ಅಂಧತ್ವದಿಂದ ಬಳಲುತ್ತಿರುವವರಿಗೆ ಹೊಸ ಬೆಳಕನ್ನು ನೀಡುತ್ತದೆ ಎಂದರು. ಕಳೆದ 60 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಎಲ್ಲ ಸದಸ್ಯರ ಸೇವೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಮಲ್ಲಿಕಾರ್ಜುನ ಖಾನೂರ್ ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ನೇತ್ರದಾನ ಮತ್ತು ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 08 ರವರೆಗೆ ನಡೆಯುತ್ತಿರುವ ನೇತ್ರದಾನ ಪಕ್ಷಾಚರಣೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗವರ್ನರ್ ವಿಜಯ್ ಕುಮಾರ್ ಜಿ. ಅವರು, ನೇತ್ರದಾನದ ಮಹತ್ವವನ್ನು ವಿವರಿಸಿ, ಅಂಧತ್ವ ನಿವಾರಣೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ನೇತ್ರದಾನದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಫ್ರೆಂಡ್ಸ್ ಸೆಂಟರ್ ನೇತ್ರ ಹಾಗೂ ರಕ್ತ ಬಂಡಾರದ ಚೇರ್ಮನ್. ವಿ ನಾಗರಾಜ್ ಅವರು, ಸಂಸ್ಥೆಯ ನೇತ್ರದಾನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಿದೇವಿ ಗೋಪಿನಾಥ್, ರೋಟರಿ ಕಾರ್ಯದರ್ಶಿ ಶೈಲಿನ್ ಬಾಬು, ಡಿ.ಪಿ. ಮೋಹನ್, ಮಾಜಿ ಅಧ್ಯಕ್ಷ ಟಿ. ಅಶ್ವಥ್ ನಾರಾಯಣ್, ಯೋಗಗುರು ಬಾ.ಸು. ಅರವಿಂದ್, ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆ ಸುನಿತಾ ಮೋಹನ್, ಸದಾನಂದ, ಶ್ರೀಮತಿ ಸದಾನಂದ, ಸತ್ಯನಾರಾಯಣ ಹಾಗೂ ಮನೋಹರ್ ಆರ್. ಉಪಸ್ಥಿತರಿದ್ದರು.

