ಶಿವಮೊಗ್ಗ: ಬಾಲ್ಯ ವಿವಾಹದ ವಿರುದ್ಧ ತಳಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಆಶ್ರಿತ ಸಂಸ್ಥೆಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ಹನುಮಂತಪ್ಪ ಎಸ್. ಹೇಳಿದರು.
ಜಿಲ್ಲಾ ಆಶ್ರಿತ ಸಂಸ್ಥೆ ವತಿಯಿಂದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೇಚೆಗೆ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯ ವಿವಾಹ, ಬಾಲ್ಯಾವಸ್ಥೆಯಲ್ಲಿನ ಹಾಗೂ ಬಲವಂತದ ವಿವಾಹಗಳ ನಿರ್ಮೂಲನೆಗಾಗಿ ನವೆಂಬರ್ 27ನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಘೋಷಿಸುವ ವಿಶ್ವಸಂಸ್ಥೆಯ ನಿರ್ಧಾರವು ಐತಿಹಾಸಿಕವಾಗಿದೆ. ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (JRC) ಜಾಲದ ನಿರಂತರ ಪ್ರಯತ್ನಗಳಿಗೆ ಇದರಿಂದ ಜಾಗತಿಕ ಮಾನ್ಯತೆ ದೊರೆತಂತಾಗಿದೆ ಎಂದರು.
2024ರ ನವೆಂಬರ್ 27ರಂದು ಭಾರತದಲ್ಲಿ ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನ ಆರಂಭಿಸಲಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ ದಿನವೊಂದನ್ನು ಘೋಷಿಸಿರುವುದು ಸಂತಸದ ವಿಷಯವಾದರೂ, ಬಾಲ್ಯ ವಿವಾಹ ಸಂಪೂರ್ಣ ನಿರ್ಮೂಲನೆಯಾಗುವವರೆಗೆ ಹೋರಾಟ ಮುಂದುವರಿಯಬೇಕು ಎಂದರು.
ಶಾಲೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ನಡೆಸುವುದು, ಬಾಲ್ಯ ವಿವಾಹದ ವಿರುದ್ಧ ಪ್ರತಿಜ್ಞೆ ಕೈಗೊಳ್ಳುವಂತೆ ಪ್ರೇರೇಪಿಸುವುದು, ಅಪಾಯದಲ್ಲಿರುವ ಆರ್ಥಿಕವಾಗಿ ದುರ್ಬಲ ಕುಟುಂಬಗಳನ್ನು ಸರ್ಕಾರಿ ಯೋಜನೆಗಳಿಗೆ ಸಂಪರ್ಕಿಸುವುದು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
JRC ಸಂಸ್ಥಾಪಕ ಭುವನ್ ರಿಭು ಅವರು ವಿಶ್ವಸಂಸ್ಥೆಯಲ್ಲಿ ಬಾಲ್ಯ ವಿವಾಹ ನಿರ್ಮೂಲನೆಗೆ ಮೀಸಲಾದ ಜಾಗತಿಕ ದಿನ ಘೋಷಿಸುವಂತೆ ಒತ್ತಾಯಿಸಿದ್ದರು. ಸಿಯೆರಾ ಲಿಯೋನ್ ಸೇರಿದಂತೆ ಹಲವು ರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಣಯ ಮಂಡನೆಯಾಗಿದ್ದು, ಸೆ.4ರಂದು ವಿಶ್ವಸಂಸ್ಥೆ ಅದನ್ನು ಅಂಗೀಕರಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಶಾಲಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಮಾತನಾಡಿ, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಆಶ್ರಿತ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಾಮಾಜಿಕ ಸಮುದಾಯ ಕಾರ್ಯಕರ್ತೆ ಸವಿತಾ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲೆ ಎಸ್.ಸಿ. ಪಂಕಜ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಹ ಶಿಕ್ಷಕರಾದ ಅಶೋಕ್ ಬಿ., ಚಿದಾನಂದ ಎಸ್.ಎಂ., ಪವಿತ್ರ ಎ., ಸ್ಮಿತಾ ರಾವ್, ಎಸ್.ಎಲ್. ಶೇಖರ್ ನಾಯಕ್, ವಸಂತ್ ಕುಮಾರ್ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಆರ್., ಸಹ ಶಿಕ್ಷಕಿ ನಿರ್ಮಲಾ ಬಿ., ಶೋಭಾ ಬಿ. ಉಪಸ್ಥಿತರಿದ್ದರು.

