Sunday, August 2, 2026
Homeಸೂರ್ಯಗಗನ I ಹಕ್ಕುಗಳ ರಕ್ಷಣೆಗೆ ಒಂದಾದ 15 ಸಂಘಟನೆಗಳು I 'ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ' ಅಸ್ತಿತ್ವಕ್ಕೆ...

 I ಹಕ್ಕುಗಳ ರಕ್ಷಣೆಗೆ ಒಂದಾದ 15 ಸಂಘಟನೆಗಳು I ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ ಅಸ್ತಿತ್ವಕ್ಕೆ I

I ಹಕ್ಕುಗಳ ರಕ್ಷಣೆಗೆ ಒಂದಾದ ೧೫ ಸಂಘಟನೆಗಳು I ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ ಅಸ್ತಿತ್ವಕ್ಕೆ I

ಬೆಂಗಳೂರು: ದೇವದಾಸಿ ಮಹಿಳೆಯರ ಆತ್ಮಗೌರವ ಹಾಗೂ ನ್ಯಾಯಬದ್ಧ ಹಕ್ಕುಗಳ ಹೋರಾಟವನ್ನು ರಾಜ್ಯ ಮಟ್ಟದಲ್ಲಿ ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೧೫ಕ್ಕೂ ಹೆಚ್ಚು ದೇವದಾಸಿ ತಾಯಂದಿರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಒಗ್ಗೂಡಿ ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ವನ್ನು ಅಧಿಕೃತವಾಗಿ ಅಸ್ತಿತ್ವಕ್ಕೆ ತಂದಿವೆ.

ನಗರದ ಆಶೀರ್ವಾದ ತರಬೇತಿ ಕೇಂದ್ರದಲ್ಲಿ ಜುಲೈ ೭ ಮತ್ತು ೮ ರಂದು ‘ವಿಮುಕ್ತ ದೇವದಾಸಿ ಮಹಿಳಾ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ ‘ವಿಮುಕ್ತ ಸಂಗಮ’ ಎಂಬ ದೇವದಾಸಿ ಸಮುದಾಯದ ಹೋರಾಟಗಾರರ ಎರಡು ದಿನಗಳ ಸಮಾಲೋಚನಾ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಇದುವರೆಗೆ ಚದುರಿಹೋಗಿದ್ದ ದೇವದಾಸಿ ಸಮುದಾಯದ ಧ್ವನಿಗೆ ಏಕರೂಪದ ಬಲಿಷ್ಠ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ಲೇಖಕಿ ದು. ಸರಸ್ವತಿ, “ದೇವದಾಸಿ ತಾಯಂದಿರ ಬದುಕಿನ ನೈಜ ವಾಸ್ತವ, ನೋವು ಮತ್ತು ಹೋರಾಟಗಳನ್ನು ಅಧಿಕಾರದಲ್ಲಿರುವವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ದಲಿತರು ಮತ್ತು ದೇವದಾಸಿ ಮಹಿಳೆಯರ ಬಗ್ಗೆ ಆಡಳಿತ ವ್ಯವಸ್ಥೆಯಲ್ಲಿರುವ ತಾತ್ಸಾರ ಮನೋಭಾವ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಡ್ಡಿಯಾಗಿದೆ” ಎಂದು ವಿಷಾದಿಸಿದರು.

“ಜಾತಿ ವ್ಯವಸ್ಥೆ, ಧಾರ್ಮಿಕ ಮೌಢ್ಯ ಹಾಗೂ ಸಾಮಾಜಿಕ ಪ್ರಾಬಲ್ಯಗಳ ಸಂಚಿನಿಂದ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಜನರ ಮನಸ್ಸಿನಲ್ಲಿ ಅಜ್ಞಾನ ಮತ್ತು ಭಯ ತುಂಬಿ ಮಹಿಳೆಯರನ್ನು ಶೋಷಿಸಲಾಗುತ್ತಿದ್ದು, ಇದನ್ನು ನಿರ್ಮೂಲನೆ ಮಾಡಲು ಶಿಕ್ಷಣ ಮತ್ತು ಸಂಘಟಿತ ಹೋರಾಟವೊಂದೇ ಏಕೈಕ ಮಾರ್ಗ. ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಭೂಮಿಯ ಹಕ್ಕು, ಗೌರವಯುತ ಪುನರ್ವಸತಿ ಹಾಗೂ ಉದ್ಯೋಗದಲ್ಲಿ ಸಮಾನ ಅವಕಾಶ ಸಿಗುವವರೆಗೂ ಸಾಮಾಜಿಕ ನ್ಯಾಯ ಎಂಬುದು ಅಪೂರ್ಣ ಕನಸು” ಎಂದು ಅವರು ಪ್ರತಿಪಾದಿಸಿದರು.

ಸಿಪಿಎಂಎಲ್ ರೆಡ್ ಸ್ಟಾರ್ ಪಕ್ಷದ ಸ್ಥಾಪಕ ಆರ್. ಮಾನಸಯ್ಯ ಮಾತನಾಡಿ, “ರಾಜ್ಯದಲ್ಲಿದ್ದ ೪೬ ಸಾವಿರ ಮಾಜಿ ದೇವದಾಸಿ ಮಹಿಳೆಯರ ಸಂಖ್ಯೆಯನ್ನು ಮರುಸಮೀಕ್ಷೆಯಲ್ಲಿ ೨೩ ಸಾವಿರಕ್ಕೆ ಇಳಿಸಿರುವುದು ದೊಡ್ಡ ಅನ್ಯಾಯ. ಸರ್ಕಾರ ತಕ್ಷಣವೇ ಪಾರದರ್ಶಕ ಮರುಸಮೀಕ್ಷೆ ನಡೆಸಿ, ಪ್ರತಿಯೊಂದು ಮಾಜಿ ದೇವದಾಸಿ ಕುಟುಂಬಕ್ಕೂ ಭೂಮಿ ಹಕ್ಕು ನೀಡಿ, ಗೌರವಯುತ ಪುನರ್ವಸತಿ ಖಚಿತಪಡಿಸಬೇಕು” ಎಂದು ಒತ್ತಾಯಿಸಿದರು.

ದೇವದಾಸಿ ಸಮುದಾಯದ ಹೋರಾಟಗಾರ ಚಂದಾಲಿಂಗ ಕಲಲಾಬಂಡಿ ಮಾತನಾಡಿ, “ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಗೌರವಧನ ಹೆಚ್ಚಿಸಬೇಕು, ನಿವೇಶನ ನೀಡಬೇಕು ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗದಲ್ಲಿ ಆದ್ಯತೆ ಕಲ್ಪಿಸಬೇಕು. ಆರೋಗ್ಯ ವಿಮೆ ಹಾಗೂ ಕೌಶಲ್ಯ ತರಬೇತಿ ಒದಗಿಸುವ ಮೂಲಕ ಪುನರ್ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.

ಪ್ರಾಸ್ತವಿಕ ನುಡಿಗಳನ್ನಾಡಿದ ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಿ. ಎಸ್. ಶರಣು, “ದೇವದಾಸಿ ತಾಯಂದಿರಿಗೆ ಇಂದಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಆಡಳಿತ ವ್ಯವಸ್ಥೆಯ ತಾತ್ಸಾರ, ಧಾರ್ಮಿಕ ಮೌಢ್ಯಗಳು ಇಂದಿಗೂ ಅವರ ಬದುಕನ್ನು ಕತ್ತಲಲ್ಲಿಟ್ಟಿವೆ. ಈಗ ಅಸ್ತಿತ್ವಕ್ಕೆ ಬಂದಿರುವ ‘ವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟ’ವು ಕೇವಲ ವೇದಿಕೆಯಲ್ಲ, ಇದು ರಾಜ್ಯಾದ್ಯಂತ ಒಂದು ಮಹಾಕ್ರಾಂತಿಯನ್ನೇ ಮಾಡಲಿರುವ ಗಟ್ಟಿ ಧ್ವನಿ. ದೇವದಾಸಿ ತಾಯಂದಿರ ಕುಟುಂಬಗಳಿಗೆ ಭೂಮಿ, ವಸತಿ, ಗೌರವ ಮತ್ತು ಅವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವವರೆಗೂ ಒಕ್ಕೂಟ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಹೊಸದಾಗಿ ರಚನೆಗೊಂಡಿರುವ ಮಹಾಒಕ್ಕೂಟವು ಮುಂಬರುವ ದಿನಗಳಲ್ಲಿ ದೇವದಾಸಿ ತಾಯಂದಿರ ಕುಟುಂಬಗಳ ಸರ್ವತೋಮುಖ ಏಳಿಗೆಗಾಗಿ ಬೃಹತ್ ಕಾರ್ಯಸೂಚಿಯನ್ನು ರೂಪಿಸಿಕೊಂಡಿದೆ. ಇನ್ಮುಂದೆ ವಿವಿಧ ಜಿಲ್ಲೆಗಳ ಸಂಘಟನೆಗಳು ಬಿಡಿಬಿಡಿಯಾಗಿ ಹೋರಾಡುವ ಬದಲು, ಈ ಒಕ್ಕೂಟದ ಅಡಿಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿವೆ. ಸರ್ಕಾರದ ವಿಶೇಷ ಅನುದಾನಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಕಟ್ಟಕಡೆಯ ಮಹಿಳೆಗೆ ತಲುಪುವಂತೆ ಮಾಡುವುದು ಹಾಗೂ ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಮೇಲೆ ಜಂಟಿ ಒತ್ತಡ ಹೇರುವುದು ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ.

ಒಕ್ಕೂಟ ರಚನೆ ಸಂದರ್ಭದಲ್ಲಿ ಪ್ರೊ. ವೈ. ಜೆ. ರಾಜೇಂದ್ರ, ಜನಕವಿ ದಾನಪ್ಪ ನಿಲೋಗಲ್, ಎಂ. ಆರ್. ಭೇರಿ, ವೇದಿಕೆಯ ಗೌರವ ಅಧ್ಯಕ್ಷೆ ಪಡಿಯಮ್ಮ ಕ್ಯಾದಗುಂಪಿ, ಗೌರವ ಸಲಹೆಗಾರ ಚಂದಾಲಿಂಗ ಕಲಲಾಬಂಡಿ, ಅಧ್ಯಕ್ಷೆ ಮಹಾನಂದ ದೊಡ್ಡಮನಿ, ರಾಯಚೂರು ಜಿಲ್ಲಾ ಸಂಚಾಲಾಕಿ ರತ್ನಾ ಮಸ್ಕಿ, ಉಪಾಧ್ಯಕ್ಷ ಪಂಪಾಪತಿ ಬಳ್ಳಾರಿ, ಸ್ನೇಹ ಸಂಸ್ಥೆಯ ಎನ್ ಆರ್ ನೇತ್ರಾವತಿ, ಮುಕ್ತ ಒಕ್ಕೂಟದ ಶೋಭಾ, ಅಮ್ಮ ಪೌಂಡೇಶನ್ ಸದಸ್ಯ ಸಾವಿತ್ರಿ ತಾಳಗೇರಿ, ಮಹಿಳಾ ಧ್ವನಿಯ ವಿರುಪಮ್ಮ, ಸಿಪಿಐ ಸದಸ್ಯ ಕೆ ರೇಣುಕಾ, ರಾಜ್ಯ ಮಹಿಳಾ ಒಕ್ಕೂಟದ ಮೋಕ್ಷಮ್ಮ, ಅಕ್ಕಮ್ಮ ಹನುಮೇಶ್, ಸಮತಾ ಗ್ರಾಮೀಣ ಟ್ರಸ್ಟ್ ನ ಸದಸ್ಯೆ ಶಶಿಕಲಾ ಹಿರೇಸಿಂದೋಗಿ, ಗೋಕಾಕ್ ಶಕ್ತಿ ಸಂಘದ ಮೈಲಾವ್ವ, ಜಾಗೃತ ಮಹಿಳಾ ಸಂಘದ ರೇಣುಕಾ, ದಲಿತ ಬಹುಜನ ಚಳುವಳಿಯ ರಮೇಶ್ ಕೋಳೂರ್, ಅಂಬೇಡ್ಕರ್ ವಿಚಾರ ವೇದಿಕೆಯ ಚನ್ನಬಸುವ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I