ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಾವಿನ ಜಗಲಿಯೊಳು I ಲೈನ್‌ಮ್ಯಾನ್‌ಗಳ ಕರ್ತವ್ಯವೂ..I
ಲೈನ್ ಮ್ಯಾನ್ ಇಸ್ ಲೈಪ್ ಪವರ್ ಮ್ಯಾನ್” ಎನ್ನುವ ವಾಸ್ತವದ ಬುತ್ತಿ ಕಟ್ಟಿಕೊಂಡು ಬದುಕು ರೂಢಿಸಿಕೊಂಡಿರುವ ಈ ಹೊತ್ತಿನ ಕಾಲಮಾನದಲ್ಲಿ ಪವರ್ (ವಿದ್ಯುತ್) ಇಲ್ಲದೆಯೇ. ದಿನದ ಕೆಲಸಗಳು ಮುಂದು ಸಾಗದಾಗಿದೆ, ಅಂತಹದೊಂದು ಜನಜೀವನ ವ್ಯವಸ್ಥೆ ನಮ್ಮಗಳ ಮುಂದಡಿ ಇದೆ. ಒಂದು ತಲೆಮಾರಿನ ಕೆಳಗೆ ಪಚ್ಚಪ್ಪ, ಈರಣ್ಣ, ಮನ್ಸೂರ್ ನವರ ಸೌದೆ ಡಿಪೋಗಳು ಕಾಣೆಯಾಗಿ ಇದೀಗ ಅದರ ಕುರುಹುಗಳು ಇಲ್ಲದಾಗಿದೆ, ಬೆಚ್ಚನೇ ಬಿಸಿ ನೀರಿಗಾಗಿ ಪವರ್ ಬೇಕು, ಅಡುಗೆಗೂ ಕರೆಂಟ್, ನಿದ್ದೆಗೂ ಕರೆಂಟ್, ಮನರಂಜನೆಗೂ ಕರೆಂಟ್, ಕೆಲಸಕ್ಕೂ ಕರೆಂಟ್, ಓದುವುದಕ್ಕೂ ಕರೆಂಟ್ ಹೀಗೆ ಪವರ್ ಅನಿವಾರ್ಯತೆ ಇಂದು ಜನಜೀವನಗಳಲ್ಲಿ ಆವರಿಸಿಬಿಟ್ಟಿದೆ. ಅದೋ… ಬೆಳ್ಳಂ ಬೆಳಿಗ್ಗೆ ಎದ್ದು ಕಿಟ್ಟಪ್ಪನ ಬಣವೆಯಿಂದ ಕದ್ದಿದ್ದ ಒಂದು ಪೆಂಡಿ ಒಣ ಹುಲ್ಲಿಗೆ ಬೆಂಕಿಯಿಟ್ಟು ಸುತ್ತಾ ಕೈ, ಮೈ ಉಜ್ಜುತಲಿ ಬಿರುಸು ಚಳಿ-ಚಳಿಯನ್ನು ಕಾವಿಟ್ಟುಕೊಳ್ಳುವುದು ನೆನಪಾಗಿಯೇ ಉಳಿದಿದೆ,

ಹೌದು ಇಂತಹ ಆಧುನಿಕತೆಯ ಮಹಾಪರ್ವದಲ್ಲಿ “Power is Ultimate” ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ ಇರಲಿ ಪ್ರಾಕೃತಿಕ ವರದಾನ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಪವರ್ (ಕರೆಂಟ್)ನ್ನು ಅವುಚಿಕೊಂಡೇ ಸಾಗೋಣ. ಇದು ವಾಸ್ತವ ಟಿಪ್ಪಣಿ ಕೂಡ, ಆದರೆ ಇಂತಹ ಅನಿವಾರ್ಯತೆಯಲ್ಲಿ ಬದುಕು ನಾಗರೀಕರದ್ದಾದರೆ ಇನ್ನೂ “ಕರೆಂಟ್ ಸರಬರಾಜು ಒದಗಿಸುವ ಲೈನ್ ಮ್ಯಾನ್ ವೃತ್ತಿ” ಕುರಿತಾಗಿ ಚರ್ಚಿಸಿ ಅವಲೋಕಿಸುವುದಾದರೆ ಇದೊಂದು ಸಾಹಸವೇ ಸರಿ, ಈ ವೃತ್ತಿಯೇನು ಸುರಕ್ಷಿತವಾದುದ್ದಲ್ಲ, ಎಂತಹ ಅನಾಹುತವಾದರೂ ತಂದೊಡ್ಡಬಹುದು, ನಾಗರೀಕ ಅನಿವಾರ್ಯತೆಯನ್ನು ಪೂರೈಸುವ ಲೈನ್ ಮ್ಯಾನ್ ಹುದ್ದೆಗಳು ಯಾವ ಸಂಕಷ್ಟಗಳ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಶ್ರೀ ಸಾಮಾನ್ಯರ ಕಣ್ಣ ಸುಳಿಯಲ್ಲಿ ಸುಳಿದು ಸರಿಯುತ್ತಲೇ ಇರುತ್ತದೆ,
ಒಂದು ರೀತಿಯಲ್ಲಿ ಗಡಿ ಯೋಧರಂತೆ ಕಾಣುವ ಲೈನ್ ಮ್ಯಾನ್ ಗಳು ತಮ್ಮ ಸಾವನ್ನು ಹೆಗಲಲ್ಲಿಟ್ಟುಕೊಂಡೇ ತಮ್ಮ ವೃತ್ತಿಯಲ್ಲಿ ಮಗ್ನರಾಗುತ್ತಾರೆ ಇದು ಅಕ್ಷರಶಃ ಸತ್ಯ, ಇದಕ್ಕೆ ಜೀವಂತ ಉದಾಹರಣೆಗಳನ್ನು ವಿಸ್ತೃತಗೊಳಿಸುವ ಸರಕುಗಳು ಸಗಟುಗಳಾಗುತ್ತದೆ. ಸಬ್ ಸ್ಟೇಷನ್ ಗಳು, ಟ್ರಾನ್ಸ್ ಫಾರ್ಮರ್‌ಗಳು, ವಿದ್ಯುತ್ ಕಂಬಗಳು, ಪ್ರಾಕೃತಿಕ ವಿಕೋಪಕ್ಕೆ ಒಳಗಾದರೆ ಅಥವಾ ಲೈನ್ ಜಂಪ್ ಆದರೆ ಅಥವಾ ಶಾರ್ಟ್ ಸರ್ಕ್ಯೂಟ್ ಆದರೆ ಲೈನ್ ಮ್ಯಾನ್ ಅಲ್ಲಿಗೆ ಬಂದಿಳಿಯುತ್ತಾನೆ ಯಾವ ಸರಿ ಹೊತ್ತಾದರು ಅದನ್ನು ಸರಿಪಡಿಸುವ ನಿಟ್ಟಿನ ತನ್ನ ಕಾಯಕದಲ್ಲಿ ತೊಡಗಿದಾಗ ಕೆಲವೊಮ್ಮೆ ಕಂಬದಲ್ಲಿ ವಿದ್ಯುತ್ ಶಾಕ್ ಒಳಗಾಗಿ ಅಲ್ಲಿಯೇ ಸುಟ್ಟು ಹೋಗಿ ನೇತಾಡುವುದನ್ನು ನೋಡಿದ್ದೇವೆ, ತೀವ್ರತರ ಮಳೆಗಾಳಿ ಬೀಸಿ ಉರುಳಿ ಬೀಳುವ ಮರಗಳು ವಿದ್ಯುತ್ ತಂತಿಯ ಎಳೆದುಕೊಂಡೇ ಬೀಳುವ ಸ್ಥಿತಿಗಳು, ನಗರ-ಪಟ್ಟಣಗಳಲ್ಲಿ ನಡೆಯುತ್ತದೆ, ಅದಾಗ ಅರಿವಿಲ್ಲದೆ ನಾಗರೀಕ ಹೆಜ್ಜೆಗಳಿಗೆ ಜೀವಹಾನಿಯಾಗಬಹುದೆಂದು ಲೈನ್ ಮ್ಯಾನ್ ಇಂತಹ ಬಹುತೇಕ ಸಂದರ್ಭಗಳಲ್ಲಿ ತನ್ನ ಜೀವವನ್ನು ಮುಡಿಪಾಗಿಟ್ಟು ಕರ್ತವ್ಯಪರತೆಯನ್ನು ಮೆರೆಯಲು ಮುಂದಾಗುತ್ತಾನೆ.
ಇನ್ನೂ ಹಳ್ಳಿಗಾಡು, ಅರಣ್ಯ ಪ್ರದೇಶ ಇತರೆಡೆ ಕರ್ತವ್ಯ ನಿರ್ವಹಿಸಲು ತೆರಳುವ ಲೈನ್ ಮ್ಯಾನ್ ಗಳಿಗೆ ನಿಜಕ್ಕೂ ಕುಡಿಯುವುದಕ್ಕೆ ನೀರು ಕೂಡ ಸಿಗುವುದಿಲ್ಲ, ಹಸಿವಿನ ಒಣ-ಬಣದ ಹೊಟ್ಟೆಯತ್ತ ಗಮನಹರಿಸದೇ ಪವರ್ ಲೈನ್ ಸರಿಪಡಿಸುವ ನಿಟ್ಟಿನಲ್ಲಿ ಸಿಡಿಲು-ಮಳೆ- ಬರಬಿಸಿಲಿನ ತಾಪಕ್ಕೂ ಮೈಯೊಡ್ಡಿ ಕೆಲಸ ಮಾಡುವ ಲೈನ್ ಮ್ಯಾನ್ ಗಳಿಗೆ ನಾವು ಯೋಧರಿಗೆ ಗೌರವಿಸಿ ಸೆಲ್ಯೂಟ್ ಮಾಡುವಂತೆ ಲೈನ್ ಮ್ಯಾನ್ ಗಳಿಗೂ ಅದೇ ಭಾವದಿಂದ ಸೆಲ್ಯೂಟ್ ಮಾಡಬೇಕಾಗಿದೆ.
ಇನ್ನೂ… ಯಾವ ಊರ ಹಬ್ಬವಾದರೇನು-ಜಾತ್ರೆಯಾದರೇನು ಲೈನ್ -ಮ್ಯಾನ್ ಡ್ಯೂಟಿಯಲ್ಲಿರಬೇಕು ಇಂತಹದೊಂದು ಸಂದಿಗ್ಧತೆಯಲ್ಲಿ ಕರ್ತವ್ಯ ನಿರ್ವಹಿಸುವ ಲೈನ್ ಮ್ಯಾನ್ ಗಳನ್ನು ಬಹುತೇಕ ನಾಗರೀಕ ಸಮುದಾಯ ನಡೆಸಿಕೊಳ್ಳುವುದಾದರು ಹೇಗೆ..? ಅದು ದುರ್ವರ್ತನೆಯ ಪರಮಾವಧಿಯನ್ನು ಮೀರಿಸುತ್ತದೆ ಇಂತಹ ಅಮಾನವೀಯ ಮನಸುಗಳು ನಾಗರೀಕ ವಲಯದ್ದಾಗಿರಬಾರದು ನಿಜ,
ಆದರೆ ಈ ದಿನಮಾನಗಳಲ್ಲಿ ಪವರ್ (ಕರೆಂಟ್) ನಂಬಿಕೊಂಡೇ ಬದುಕುತ್ತಿರುವ ನಾಗರೀಕ ಬವಣೆಗಳು ಕೇವಲ ವೃತ್ತಿಗಾಗಿ, ವಿದ್ಯಭ್ಯಾಸಕ್ಕಾಗಿ, ಮನರಂಜನೆಗಾಗಿ, ಅಡುಗೆಗಾಗಿ, ಬೆಚ್ಚನೆ ಬಿಸಿ ನೀರಿಗಾಗಿ ಮಾತ್ರದಿ ಅಲ್ಲದೆ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ನಾಗರೀಕನಿಗೆ ಅಗತ್ಯ ಪವರ್ ಬೇಕಾಗಿರುತ್ತದೆ, ಮನೆಯಲ್ಲಿ ವೃದ್ದಾಪ್ಯದವರೋ..? ಕೆಲಸಕ್ಕೆಂದು ಸರಂಜಾಮಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳು ಆನ್ ನಲ್ಲಿಯೇ ಇರುತ್ತೇವೆ ಎನ್ನುವ ಕಾರಣಕ್ಕೋ..? ಅಥವಾ ರೋಗಿಯ ಉಪಚಾರಕ್ಕೋ..? ಅಥವಾ ಕಗ್ಗತ್ತಲಿನಲ್ಲಿ ಕಳೆದ ಬದುಕುಗಳ ರಕ್ಷಣೆಗೋ..? ಈ ಪವರ್ ಅನಿವಾರ್ಯತೆಗಳು ಕಾಣುತ್ತೇವೆ,
ಯಾಕೆಂದರೆ ಮನುಷ್ಯ ಜೀವಿ ತನ್ನ ಜೀವನಕ್ಕಾಗಿ ಮೂಲ ಪರಂಪರೆಯನ್ನು ಮರೆತು ಎಲ್ಲಾ ಕಾಲಕ್ಕೂ ವಿದ್ಯುತ್ ಬೇಕೆ, ಬೇಕು ಎಂದು ಅಮರಿಕೊಂಡಿರುವುದರಿಂದಲೇ ಈ ಹೊತ್ತಿನ ಕೆಲ ಜಟಾಪಟಿ ಘಟಾನುವಳಿಗಳಿಗೂ ಕಾರಣವಾಗಿದೆ, ಇಂತಿವ ತುರ್ತು ಅನಿವಾರ್ಯತೆಗಳ ನಡುವೆ ಲೈನ್ ಮ್ಯಾನ್ ವೃತ್ತಿಗಳು ಅದ್ಯಾಗೆ ವೃತ್ತಿಯನ್ನು ನಿಭಾಯಿಸಬೇಕು ಎನ್ನುವುದನ್ನು ಅವರು ಅರ್ಥೈಸಿಕೊಳ್ಳಬೇಕು ಹಾಗೂ ಪರಿಸ್ಥಿತಿಯನ್ನು ವಿಕೋಪಕ್ಕೆ ತರುವಂತೆ ನಾಗರೀಕನು ವ್ಯಥಾ ಹೋಗಬಾರದು ಎಲ್ಲಾ ರಂಗಗಳಲ್ಲಿಯೂ ಇರುವಂತೆ ಒಂದಿಷ್ಟು ಮಾನಸೀಕತೆ ಎಲ್ಲೆಡೆ ಇದ್ದೇ ಇರುತ್ತಾರೆ, ಯಾವ ರಂಗವನ್ನು ಅವರು ಬಿಟ್ಟಿಲ್ಲ ಈ ಕಾರಣಕ್ಕಾಗಿ ಅವರ ವೃತ್ತಿಯನ್ನು ಅಲ್ಲಗಳೆದು ಇರುವ ಪ್ರಮಾಣಿಕತೆ ಹಾಗೂ ಕರ್ತವ್ಯ ಸಾರ್ವಜನಿಕ ಪಾಲನೆಯಲ್ಲಿ ತೊಡಗಿಸಿಕೊಂಡಿರುವವರನ್ನು ನಿಂದಿಸಿದರೆ ಅದು ತರವಲ್ಲವಾಗಿದೆ.
ಲೈನ್ ಮ್ಯಾನ್ ಹುದ್ದೆ ಅತೀವ ಸಾವು-ಸಂಕಟಗಳ ನಡುವೆ ಇದ್ದು ನಮ್ಮಗಳ ಮನೆ-ಮನ ಬೆಳಕಿಗಾಗಿ ಅವರುಗಳು ಎದುರಿಸುವ ನಿಜದ ಸ್ಥಿತಿಗಳನ್ನು ಮನಗಂಡು ಆತ್ಮಪೂರ್ವಕವಾಗಿ ಶ್ರೀ-ಸಾಮಾನ್ಯ ಸೆಲ್ಯೂಟ್ ಮಾಡಬೇಕಾಗಿದೆ, ಆದರೆ ಇದನ್ನು ಮರೆತ ಮಾನಸೀಕತೆಯ ಬೆರಳಣಿಕೆಯಷ್ಟು ಮಂದಿಗಳು ದುರುಪಯೋಗ ಮಾಡಿಕೊಂಡವರಿಗೆ ಈ ಸಾಲು ಅಲ್ಲವಾಗಿದೆ, ಎಕೆಂದರೆ ನಾಗರೀಕ ಅನಿವಾರ್ಯಗಳ ಕಾರಣಗಳಿಗಾಗಿ ಲೈನ್ ಮ್ಯಾನ್ ವೇಷದಲ್ಲಿ ನಾಗರೀಕ ಪೀಡಕರಾಗಿರುವುದು ಸಾರ್ವಜನಿಕರಿಗೆ ತಿಳಿದ ವಿಷಯವೇ ಆಗಿದೆ, ಅಂತಹವರ ಮಾತು, ದರ್ಪ, ನೇರವಾಗಿ ಅಪಮಾನಿಸುವಂತೆ ಮೀಟರ್ ಬೋರ್ಡಿಗೆ ಕೈ ಹಾಕಿ ಕರೆಂಟ್ ತೆಗೆಯುವುದು, ಮಾತಾಡಿದರೆ ಮೀಟರ್ ಕಿತ್ತುಕೊಂಡೇ ಹೋಗುವುದಾಗಿ ಬೆದರಿಸುವುದು, ನೋಡಿದರೆ ದುರ್ವರ್ತನೆಗಳ ಮೇರೆ ಮೀರಿದ ವರ್ತನೆಗಳು ಕಣ್ಣಾರೆ ನೋಡಿಯೂ ಮೌನವಹಿಸುವ ದುರ್ಗತಿಗಳಿವೆ,
ಇಂತಹ ಅನೇಕ ಘಟನಾವಳಿಗಳನ್ನು ಸಾರ್ವಜನಿಕ ವಲಯದಲ್ಲಾಗಿದೆ ಇದನ್ನು ಬದಿಗೊತ್ತಿ ಸಾವಿನ ಸರಸದಲ್ಲಿ ಕರ್ತವ್ಯ ಪಾಲನೆಯಲ್ಲಿ ತೊಡಗುವ ಎಲ್ಲಾ ಲೈನ್ ಮ್ಯಾನ್ ಗಳಿಗೆ ನಮ್ಮ ಎದೆಗುಡಿಯಿಂದಲೇ ನಮಿಸಬೇಕಾಗಿದೆ ಹಾಗೂ ಬರಪೂರತೆಯಿಂದ ಗೌರವಿಸಬೇಕಾಗಿದೆ, ವಿದ್ಯುತ್ ಬಿಲ್ ಬಾಕಿಯಿದೆ ಕಟ್ಟಿ ಎಂದು ಹೇಳುವುದು ಅವರ ಕರ್ತವ್ಯವೂ ಆಗಿದೆ, ಬಾಕಿಯಿರುವ ಬಿಲ್ ಪಾವತಿಗಳಿಗೆ ಟಾರ್ಗೆಟ್‌ಗಳು ಇರುತ್ತವೆ, ಇನ್ನೊಮ್ಮೆ ಕಟ್ಟುತ್ತೇವೆ ಎಂದು ಸಹಜ ಸ್ಥಿತಿಯಲ್ಲಿ ಹೇಳಿ ಕಳುಹಿಸಿರುವ ಸಾರ್ವಜನಿಕ ಸ್ಪಂದನೆಗಳೂ ಇವೆ, ಹೀಗಾಗಿ ಸಾರ್ವಜನಿಕರು ಹಾಗೂ ಅವರ ಕರ್ತವ್ಯದ ಅನಾಹುತಗಳನ್ನು ಮನಗಂಡು ಅವರಿಗೆ ಸಜ್ಜನಿಕೆಯಿಂದಲೇ ವರ್ತಿಸುವುದು ಮನುಷ್ಯತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಂಬೋಣಿಸುತ್ತಾ ಜನಜೀವನದ ಜಗಲಿಗಳಿಗೆ ಬೆಳಕನರಿಸುವ ಲೈನ್ ಮ್ಯಾನ್‌ಗಳ ಕರ್ತವ್ಯವನ್ನು ನಾಗರೀಕ ಸಮುದಾಯ ಶ್ಲಾಘಿಸುವ ಜರೂರತ್ತಿದೆ.

