I ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ I ಕಿಮ್ಮನೆ ರತ್ನಾಕರ್ I
ಶಿವಮೊಗ್ಗ:’ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಕಾಡು ಪ್ರಾಣಿಗಳು ಬದುಕಬೇಕು, ಮನುಷ್ಯರು ಸಾಯಬೇಕು ಎನ್ನುವ ಯೋಜನೆ ಸರಿಯಲ್ಲ. ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ. ಮೊದಲು ಮನುಷ್ಯನಿಗೆ ಬದುಕಲು ಅವಕಾಶ ನೀಡಿ, ಬಳಿಕ ಪರಿಸರದ ಬಗ್ಗೆ ಯೋಚಿಸಬೇಕು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,’ ಮನುಷ್ಯರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುವ ಯೋಚನೆ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲಿ ಕಸ್ತೂರಿ ರಂಗನ್ ಅವರು ಪರಿಸರ ತಜ್ಞರಲ್ಲ, ಅವರು ಶಿಕ್ಷಣ ತಜ್ಞರಾಗಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸರದ ಜೊತೆಗೆ ಮನುಷ್ಯನ ಅಸ್ತಿತ್ವವೂ ಉಳಿಯಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.
1900ರಲ್ಲಿ ದೇಶದ ಜನಸಂಖ್ಯೆ 20 ಕೋಟಿ ಇತ್ತು. ಪ್ರಸ್ತುತ ಭಾರತದಲ್ಲಿ 140 ಕೋಟಿ ಜನಸಂಖ್ಯೆಯಿದೆ. ಜನಸಂಖ್ಯೆ ನಿರಂತರವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಜನರು ನೀರಿನಲ್ಲಿ, ಗಾಳಿಯಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ದೇಶದಲ್ಲಿ 30 ಕೋಟಿ ಜನ ಬಡವರಿದ್ದು, ಅವರಲ್ಲಿ ಹಲವರಿಗೆ ಸರಿಯಾದ ಸೂರು ಹಾಗೂ ಉದ್ಯೋಗವೂ ಇಲ್ಲ. ಆದ್ದರಿಂದ ಈ ರೀತಿಯ ಯೋಜನೆ ಜಾರಿಗೊಳಿಸುವ ಮುನ್ನ ಯೋಚಿಸಬೇಕು ಎಂದರು.
ಕಸ್ತೂರಿ ರಂಗನ್ ವರದಿಯನ್ನು ರದ್ದುಪಡಿಸಬೇಕು ಅಥವಾ ಅಧಿಸೂಚನೆಯನ್ನು ಹಿಂಪಡೆಯಬೇಕು. ಹಿಂದಿನಿಂದಲೂ ಈ ವರದಿಯನ್ನು ವಿರೋಧಿಸುತ್ತಲೇ ಬರಲಾಗುತ್ತಿದೆ. ಇದೀಗ ಮತ್ತೊಮ್ಮೆ ವರದಿ ಜಾರಿ ಕುರಿತು ಕರಡು ಪ್ರಕಟವಾಗಿದ್ದು, ಈ ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆಯಲಾಗಿದ್ದು, ಮೂರು ದಿನದ ಅಧಿವೇಶನದಲ್ಲಿ ಒಂದು ದಿನ ಈ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ, ಶಿವಣ್ಣ, ಹಾಲಪ್ಪ, ಶಿವಾನಂದ, ಅಮರ್ ನಾಥ, ಗಾಜನೂರು ಗಣೇಶ್ ಇದ್ದರು.
- ಸೆ.7ರಂದು ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಗೆ ಪಾದಯಾತ್ರೆ: ಕಿಮ್ಮನೆ
ಸೆ.7ರಂದು ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಗಡೆ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಬಳಿ ಸಾರ್ವಜನಿಕ ಸಭೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಪಾದಯಾತ್ರೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಬೇಕಿರುವುದರಿಂದ, ಇತರ ಪಕ್ಷಗಳಲ್ಲಿದ್ದು ವರದಿಯನ್ನು ವಿರೋಧಿಸುವವರೂ ಭಾಗವಹಿಸಬಹುದು ಎಂಬ ಉದ್ದೇಶದಿಂದ ಕರಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೇಳಿದರು. ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ನಡೆಸುವ ಬದಲು ಕೇಂದ್ರಕ್ಕೆ ತೆರಳಿ ವರದಿ ಹಿಂಪಡೆಯುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಯ ಹಿಂದೆ ಮತ್ತೊಂದು ಕಾರಣವೂ ಇದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು 25 ವರ್ಷಗಳಿಂದ ಶಾಸಕರಾಗಿದ್ದು, 40 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಬಿಜೆಪಿಯವರನ್ನು ಹೊರತುಪಡಿಸಿ ಬೇರೆ ಯಾರೂ ಮನುಷ್ಯರಲ್ಲ ಎಂಬ ಭಾವನೆ ಅವರಲ್ಲಿದೆ. ಇದನ್ನು ಅವರಿಗೆ ಮನವರಿಕೆ ಮಾಡುವ ಉದ್ದೇಶದಿಂದಲೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

