I ಬಾಲ್ಯದ ನೆನಪುಗಳು ಮರೆಯಲಾಗದ ಕ್ಷಣಗಳು I ಸಚಿವ ಮಧು ಬಂಗಾರಪ್ಪ I
46 ವರ್ಷಗಳ ನಂತರ ಬಾಲ್ಯ ಸ್ನೇಹಿತರೊಟ್ಟಿಗೆ ಸ್ನೇಹ ಸಮ್ಮಿಲನ
ಶಿವಮೊಗ್ಗ: ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ನೆನ್ನೆ ಭಾನುವಾರ ಬೆಳಗ್ಗೆ 12:30 ಗಂಟೆಗೆ ಸ್ನೇಹಿತರೊಂದಿಗೆ ಭೇಟಿ ನೀಡಿ ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.

ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ,1972 ರಿಂದ 1979 ರವರೆಗೆ 5ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡರು.
ಹಳೇ ಶಾಲೆಯಲ್ಲಿ ಗದ್ದಲದಿಂದ ತುಂಬಿದ ಕಾರಿಡಾರ್ ಗಳು, ತರಗತಿ ಕೊಠಡಿಗಳಲ್ಲಿ ನಾವೆಲ್ಲ ಕುಳಿತು ಪಾಠ ಕೇಳಿದ ಬೆಂಚುಗಳು, ಕಪ್ಪುಹಲಗೆಯ ಮೇಲೆ ಸೀಮೆ ಸುಣ್ಣದಲ್ಲಿ ಬರೆದ ನೆನಪುಗಳು ಇಂದಿಗೂ ಮರುಕಳಿಸುತ್ತಿವೆ. ಇದು ಕೇವಲ ಭೇಟಿಯಾಗಿರಲಿಲ್ಲ, ಬದಲಿಗೆ ಕಾಲವನ್ನು ಬಾಲ್ಯಕ್ಕೆ ಕೊಂಡೊಯ್ದ ಒಂದು ಅದ್ಭುತ ಕ್ಷಣವಾಗಿತ್ತು ಎಂದು ಮೆಲುಕು ಹಾಕಿದರು.
ಪ್ರಾಥಮಿಕ ಶಾಲಾ ಶಿಕ್ಷಣವು ಶಿಕ್ಷಣದ ಮೊದಲ ಹಂತವಾಗಿದ್ದು, ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಮೂಲ್ಯವಾದ ಮೌಲ್ಯಗಳನ್ನು ನೀಡುವ ಜೊತೆಗೆ ಗಟ್ಟಿಯಾದ ನೆಲೆ ಕಲ್ಪಿಸುತ್ತವೆ. ಈ ವೇಳೆ ನನ್ನ ಗುರುಗಳು ಮತ್ತು ಪ್ರೀತಿಯ ಸ್ನೇಹಿತರೊಂದಿಗಿನ ಈ ಭೇಟಿಯು ಮತ್ತಷ್ಟು ಖುಷಿ ತಂದಿದೆ. ಇಂತಹ ಭೇಟಿಗಳು ಜೀವನದಲ್ಲಿ ಸಂತೋಷ, ತೃಪ್ತಿ ನೀಡುತ್ತವೆ ಮತ್ತು ನಮ್ಮ ಜೀವನದ ಪಯಣದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.
ಈ ಶಾಲೆಯ ವಿದ್ಯಾರ್ಥಿಯಾಗಿ ಇಂದು ಶಾಲಾ ಶಿಕ್ಷಣ ಸಚಿವ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮತ್ತೆ ಇದೇ ಶಾಲೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ಎನ್ನಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ಗುರುಗಳಿಗೆ, ಸ್ನೇಹಿತರಿಗೆ ಹಾಗೂ ಶಾಲೆಯ ಸಿಬ್ಬಂದಿಗಳಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಗೃಹ ಇಲಾಖೆ ಕಾರ್ಯದರ್ಶಿಗಳಾದ ಡಾಕ್ಟರ್ ಶರತ್ ಚಂದ್ರ ದಯಾನಂದ ಎಸ್.ಕೆ ಡಾ. ಸುರೇಶ್ ಚಾವಾಣ್, ಡಾಕ್ಟರ್ ಪ್ರಕಾಶ್ ನಾಯಕ್, ವಿಜಯ್ ಕುಮಾರ್, ಜಾನ್ ಪೌಲ್, ನಾಗೇಶ್, ಪಿ.ಕೆ ಅರವಿಂದ್, ಡಾ.ವಿಜಯಾನಂದ, ಡಾ. ರವಿಕುಮಾರ್, ರೂಪಾ ಶೆಟ್ಟಿ, ಶೀಲಾ ಮರಿಯ, ಎಂ.ಪ್ರವೀಣ್, ಸತ್ಯ ಕುಮಾರ್, ಆರ್ ರಮೇಶ , ಮೊಹಮ್ಮದ್ ಸಲೀಂ, ಮೊಹಮ್ಮದ್ ಅನ್ವರ್, ಸಮಿಉಲ್ಲಾ ,ಸಚೀಂದ್ರ, ಎಸ್.ಎಂ ಚಂದ್ರಶೇಖರ್ , ಎನ್.ಡಿ ಅನೀಲ್ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.

