ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮಾತುಗಳನ್ನಾಡಿದರು.
ನನಗಿಂತ ಕಷ್ಟ ಪಟ್ಟವರು ಬಹಳ ಜನರಿದ್ದಾರೆ. ನಮ್ಮ ನೋವ ನುಂಗಿ ಕಂಡದ್ದು, ಉಂಡದ್ದು ಎಲ್ಲಾ ಸೇರಿ ಬದುಕಿನ ಭಾಷೆಯಲ್ಲಿ ಸಾಹಿತ್ಯದ ದ್ರವ್ಯವಾಗಿಸುವ ಕಲೆಯಿದ್ದರೆ ಶ್ರೇಷ್ಠವಾಗುತ್ತೆ . ಬದುಕು, ಭಾಷೆ, ನಂಬಿದ ಮ್ಯೌಲ್ಯಗಳು ಪಲ್ಲಟವಾಗುತ್ತಿವೆ. ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತಿದೆ. ನೆರೆಹೊರೆ, ಅಕ್ಕಪಕ್ಕದವರನ್ನೂ ಸಹಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದೇವೆ. ಆ ಕಾರಣವೆ ಇವತ್ತಿನ ಯುದ್ಧಗಳು, ಬೇರೆಯವರ ಜೀವ ನಗಣ್ಯವಾಗುವುದು ಸರಿಯಲ್ಲ. ಇದನ್ನೆಲ್ಲಾ ಸಾಹಿತ್ಯದ ಮೂಲಕ ಧ್ವನಿಪೂರ್ಣವಾಗಿ ಹೇಳಬೇಕು ಎಂದು ವಿವರಿಸಿದರು.
ನಮ್ಮ ಶಬ್ದಕೋಶ ಮೂಲ ಸತ್ವವನ್ನು ಕಳೆದು ಕೊಳ್ಳುತ್ತಿವೆ. ವಿದೇಶಿ ಪದಗಳು ಪ್ರಭಾವಿಸುತ್ತಿವೆ. ಬರಹಗಾರರು ಸವಾಲು ಸ್ವೀಕರಿಸುತ್ತಲೆ ದೇಶಿಯತೆ ಉಳಿಸಿಕೊಳ್ಳುವ ಅಗತ್ಯವಿದೆ. ನಮಗೆ ಇಷ್ಟವಾಗದವರ ಅಭಿಪ್ರಾಯ ವಿರೋಧಿಸುವಾಗಲೂ ನಾವು ಸಭ್ಯ ಭಾಷೆಯಲ್ಲಿ ಹೇಳಬೇಕು. ಅಸಭ್ಯ, ಇರಟುತನ ತೋರಿದರೆ ನಮ್ಮ ಪರಂಪರೆಯ, ಸಂಸ್ಕೃತಿಯ ಗೌರವ ಉಳಿಸಿದಂತೆ ಆಗದು ಎಂದು ಡಾ. ಎಸ್. ಪಿ. ಪದ್ಮಪ್ರಸಾದ್ ಹಿತನುಡಿದರು.
ಸಮ್ಮೇಳನ ಸರ್ವಾಧ್ಯಕ್ಷರಾದ ವಿಜಯಶ್ರೀ ಮಾತನಾಡಿ, ಎಲ್ಲಾ ಗೋಷ್ಠಿಗಳು ಅರ್ಥಪೂರ್ಣವಾಗಿದ್ದವು. ಭಾಷೆಯ ಬೆಳವಣಿಗೆಗೆ, ನಾವೆಲ್ಲರೂ ಕನ್ನಡವನ್ನು ಬಳಸುವ ಮೂಲಕ ಉಳಿಸುವ ಕಾರ್ಯ ಮಾಡೋಣ. ಸಮ್ಮೇಳನ ಸರ್ವಾಧ್ಯಕ್ಷತೆಯ ಗೌರವವನ್ನು, ನನ್ನೆಲ್ಲಾ ಮಹಿಳೆಯರಿಗೆ ಅರ್ಪಿಸುತ್ತೇನೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಡಿವಿಎಸ್ ಮಾಜಿ ಅಧ್ಯಕ್ಷರಾದ ಕೊಳಲೆ ರುದ್ರಪ್ಪ ಮಾತನಾಡಿ, ನೀವು ನೀಡಿದ ಈ ಸನ್ಮಾನ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕನ್ನಡ ಭಾಷೆಯನ್ನು ಮೂಲ ಭಾಷಿಗರೆ ನಿರ್ಲಕ್ಷ ತೋರುವುದು ಸರಿಯಲ್ಲ. ನಮ್ಮ ಶಾಲೆಗಳು ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು. ಕನ್ನಡ ಪುಸ್ತಕ ಓದುವುದನ್ನು ಉತ್ತೇಜಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ. ಮಂಜುನಾಥ ಮಾತನಾಡಿ ಕನ್ನಡ ಉಳಿಸಿ, ಬೆಳೆಸಿ ಬಳಸುವುದರ ಜೊತೆಯಲ್ಲಿ ಪರಿಸರ ಉಳಿಸುವ, ಗಿಡನೆಡುವ ಸ್ವಶ್ಚತೆ ಕಾಪಾಡುವ ಸಂಕಲ್ಪ ಮಾಡೋಣ ಎಂದರು. ಡಾ. ಶ್ರೀಪತಿ ಹಳಗುಂದ ಸ್ವಾಗತಿಸಿ, ಮೋಹನ್ ಕುಮಾರ್, ಶ್ರೀಧರಗೌಡ ನಿರೂಪಿಸಿ, ಶ್ರೀನಿವಾಸ ನಗಲಾಪುರ ವಂದಿಸಿದರು.
ನಾಡು ನುಡಿ ಸೇವೆ ಸಲ್ಲಿಸಿದ ಮಹನೀಯರಿಗೆ ಅಭಿನಂದಿಸಲಾಯಿತು. ಆನವಟ್ಟಿಯ ಕಾರ್ತಿಕ್ ಸಾಹುಕಾರ್, ಡಿ.ವಿ.ಎಸ್. ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷರಾದ ಕೊಳಲೆ ರುದ್ರಪ್ಪಗೌಡರು, ದಾವಣಗೆರೆ ವಿ.ವಿ. ಕುಲಸಚಿವರಾದ ಪ್ರೊ ಸಿ. ಕೆ ರಮೇಶ್, ಭದ್ರಾವತಿಯ ಕಸಾಪ ಕಟ್ಟಡ ಸಮಿತಿ ಅಧ್ಯಕ್ಷರಾದ ಪ್ರೊ ವಿಜಯದೇವಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ರಿಪ್ಪನ್ ಪೇಟೆ ಎಂ. ಎಂ. ಪರಮೇಶ್, ಕೆ. ಎಸ್. ಶಶಿಕಲಾ, ಉಮೇಶ್ ಆರಾಧ್ಯ, ಡಾ. ಜಿ. ಕೆ. ಪ್ರೇಮಾ, ಬಿಇಓ ರಮೇಶ್, ಕೆ. ಎಸ್. ಹುಚ್ಚರಾಯಪ್ಪ, ಯು. ಮಧುಸೂದನ್ ಐತಾಳ್, ನಗರದ ಅಂಬ್ರಯ್ಯಮಠ, ಶಿಕಾರಿಪುರ ಎಂ. ಜಿ. ಪ್ರಕಾಶ್, ಛಲಗಾರ ನಾಗರಾಜ್, ಪುಟ್ಟಸ್ವಾಮಿ, ನಿಸಾರ್ ಖಾನ್, ವಿದೂಷಿ ಉಮಾ ದಿಲೀಪ್, ಶ್ರೀನಿವಾಸ ಬಿ. ಜಿ., ಉಮೇಶ್ ಹಿರೇನಲ್ಲೂರು, ಜಿ. ನಾಗೇಶ್, ಡಾ. ಪ್ರಕಾಶ್ ಕೆ. ನಾಡಿಗ್, ಪತ್ರಕರ್ತ ಆರುಂಡಿ ಶ್ರೀನಿವಾಸ, ಸಿದ್ದೇಶ್, ಸಿದ್ದಪ್ಪ ಅವರನ್ನು ಅಭಿನಂದಿಸಲಾಯಿತು.