I ಯುವಜನರು ಹಾಗೂ ವಿದ್ಯಾರ್ಥಿಗಳ I ಮಾನಸಿಕ ಆರೋಗ್ಯ ಸಂರಕ್ಷಣೆ ಅತೀ ಅಗತ್ಯ I ಮಂಜುನಾಥ ನಾಯಕ್ I
ಶಿವಮೊಗ್ಗ : ನಗರದ ಪೋಲಿಸ್ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಮಂಜುನಾಥ ನಾಯಕ್ ರವರು ಮಾನಸಿಕ ಆರೋಗ್ಯ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.

ಭಾರತದಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿದ್ದು ಕೇವಲ ಒಂದು ವದಲ್ಲಿ ೧೩,೯೦೦ ಕ್ಕಿಂತಲೂ ಹೆಚ್ಚು ಯುವಜನರು, ವಿದ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗಿರುವುದು ಆತಂಕಕಾರಿ ಎಂದರು. ವಿದ್ಯಾರ್ಥಿಗಳಿಗೆ ತಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ತರಬೇತಿ ಹಾಗೂ ಬೆಂಬಲದ ಅಗತ್ಯವಿದೆ ಎಂದು ಅವರು ತಿಳಿಸಿದರು. ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಶೈಕ್ಷಣಿಕ ಸಂಸ್ಥೆಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿರುವುದರ ಕುರಿತು ಮಾತನಾಡಿದ ಪ್ರಧಾನ ನ್ಯಾಯಾಧೀಶರು ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಎಲ್ಲಾ ತುರ್ತು ಸನ್ನಿವೇಶಗಳಲ್ಲಿ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳನ್ನು ಗುರುತಿಸಬೇಕು. ಮಾತ್ರವಲ್ಲದೆ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಹಾಗೂ ಇತರರ ಮಾನಸಿಕ ಆರೋಗ್ಯ ನಿರ್ವಹಣೆಯ ಸಂಧರ್ಭದಲ್ಲಿ ಕೇವಲ ಪೊಲೀಸ್ ಎಂದ ಅಲ್ಲದೆ ಮಾನವರಾಗಿ ಮನುರಂತೆ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಪೊಲೀಸ್ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ ಕುರಿತ ವಿಚಾರ ಸಂಕಿರಣ ಉಪಯುಕ್ತವಾಗಬಲ್ಲದು ಎಂದು ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಮಾನಸ ಸಂಸ್ಥೆಯ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಕ್ಲಿನಿಕ್ ಪ್ರಾರಂಭಿಸುವುದು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಏರ್ಪಡಿಸಿದ ಮಾನಸಿಕ ಆರೋಗ್ಯ ಜನ ಜಾಗೃತಿ ಜಾಥಾವನ್ನು ಮಂಜುನಾಥ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ರವರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಅವರು ಪೊಲೀಸ್ ಸಿಬ್ಬಂದಿಗಳು ತಮ್ಮ ಹಾಗೂ ತಮ್ಮ ಮಾನಸಿಕ ಆರೋಗ್ಯಸಂರಕ್ಷಿಸಿಕೊಳ್ಳಬೇಕಾದ ಅಗತ್ಯಗಳನ್ನು ಉದಾಹರಣೆಗಳೊಂದಿಗೆ ತಿಳಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಮಾನಸ ನರ್ಸಿಂಗ್ ಹೋಮ್‌ನ ಮನೋವೈದ್ಯರಾದ ಡಾ, ನವೀನ್‌ರವರು ವಿಪತ್ತು ಸನ್ನಿವೇಶಗಳ ಮಾನಸಿಕ ಸ್ಥಿತಿಗತಿಗಳನ್ನು ವಿವರಿಸಿ ಸಾರ್ವಜನಿಕ ಸೇವೆಯಲ್ಲಿ ಇರುವವರ ಜವಾಬ್ದಾರಿ ಹಾಗೂ ಕೌಶಲ್ಯ ಗಳ ಕುರಿತು ಉಲ್ಲೇಖಿಸಿದರು. ಮಾನಸಿಕ ಆರೋಗ್ಯ ಸೇವೆ ಕುಟುಂಬ ಹಾಗೂ ನೆರೆಹೊರೆಯ ಜನರ ಬೆಂಬಲ ಹಾಗೂ ಸಾಂತ್ವನದಿಂದ ಪ್ರಾರಂಭವಾಗುತ್ತದೆ. ಎರಡನೇ ಹಂತ ವಿವಿಧ ಇಲಾಖೆ ಹಾಗೂ ಸಂಸ್ಥೆಗಳದ್ದು. ಮೂರನೆಯ ಹಂತ ಮಾನಸಿಕ ಆರೋಗ್ಯ ತಜ್ಞರದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಏ.ಜಿ ಕಾರಿಯಪ್ಪ, ರಮೇಶಕುಮಾರ್, ಮಾನಸ ಸಂಸ್ಥೆ ಆಡಳಿತಾಧಿಕಾರಿ ಪ್ರೊ ರಾಮಚಂದ್ರ ಬಾಳಿಗಾ, ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ., ಡಾ, ಮಲ್ಲಿಕಾರ್ಜುನ್, ಅರ್ಚನಾ ಭಟ್, ಡಾ,ಹರಿಹರನ್, ಉಪಸ್ಥಿತರಿದ್ದರು. ಪ್ರಸ್ತಾವಿಕ ನುಡಿಗಳನ್ನಾಡಿದ ಡಾ. ಸಂಧ್ಯಾ ಕಾವೇರಿಯವರು ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ೭ ದಿನಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಸಂರಕ್ಷಣೆಯ ಕುರಿತು ಸಾರ್ವಜನಿಕ ಗಮನ ಸೆಳೆಯಲು ದಿನಾಂಕ ೧೧ ರಂದು ಸಿಟಿ ಸೆಂಟರ್ ಮಾಲ್‌ನಲ್ಲಿ ಸಂಜೆ ೫ ಗಂಟೆಗೆ ನೃತ್ಯ ರೂಪಕ ನಡೆಯಲಿದೆ. ಎರಡು ದಿನಗಳ ಕಾಲ ವೆಬಿನರ್ ನಡೆಯಲಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಪ್ತ ಎಂಬ ಸಮಾಲೋಚನಾ ಕೇಂದ್ರ ಉದ್ಘಾಟನೆ ಆಗಲಿದೆ.
ರಸಪ್ರಶ್ನೆ ಹಾಗೂ ವಿಡಿಯೋ ಸ್ಪರ್ಧೆ ನಡೆಯಲಿದೆ. ವಿವಿಧ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಸಪ್ತಾಹ ಕಾರ್ಯಕ್ರಮಗಳ ಸಮಾರೋಪವು ದಿನಾಂಕ ೧೭ರಂದು ನಗರದ ಗೋಪಿ ವೃತ್ತದಲ್ಲಿ ಮನೋ ಸಾಮಾಜಿಕ ಸಂರಕ್ಷಣೆಯ ಪ್ರತಿಜ್ಞಾ ವಿಧಿಯ ಮೂಲಕ ನಡೆಯಲಿದೆ. ಸಾಯಂಕಾಲ ೫.೩೦ ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಸವಿತಾ ನಾಗಭೂಣ್ ಅವರು ಪ್ರತಿಜ್ಞಾ ವಿಧಿ ಬೋಧಿಸಲಿ, ನ್ಯಾಯಾಧೀಶರಾದ ಸಂತೋಷ್ ಅವರು, ಡಾ, ರಜನಿ ಪೈ, ರಾಜೇಂದ್ರ ಚೆನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು. ತದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಮನಶಾಸ್ತ್ರಜ್ಞರಾದ ಶ್ರೀದೇವಿ ಹಾಗೂ ಜಡಿ ಶ್ವೇತಾ ರವರು, ಒಟ್ಟು Clinical Psychology ಪ್ರಶಿಕ್ಷಣಾರ್ಥಿಗಲಾದ ದೃಶ್ಯ ಮತ್ತು ಚೇತನ ಒತ್ತಡ ನಿರ್ವಹಣೆ ಕುರಿತು ಅಧಿವೇಶನಗಳನ್ನು ನಡೆಸಿದರು. ಡಾ. ರಾಜೇಂದ್ರ ಚೆನ್ನಿರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಇಂದು ಸಣ್ಣ ಸಣ್ಣ ಸನ್ನಿವೇಶಗಳು ವಿಪತ್ತು ಹಾಗೂ ಸಂಕಷ್ಟಗಳಂತೆ ಕಂಡುಬರುತ್ತದೆ. ಆದುದರಿಂದ ಮಾನಸಿಕ ಬೆಂಬಲ ಎಲ್ಲರಿಗೂ ಅಗತ್ಯ ಮತ್ತು ಅನಿವಾರ್ಯ ಎಂದರು.

