I ಪತ್ರಕರ್ತರು ಸಾರ್ವಜನಿಕರ ಪ್ರೀತಿಗಳಿಸಬೇಕು I ತಮ್ಮ ವೃತ್ತಿಗೆ ಶೋಭೆ ತರಬೇಕು I ಟಿ.ವಿ.ಶಿವಾನಂದ ತಗಡೂರು I
ಶಿವಮೊಗ್ಗ, : ಪತ್ರಕರ್ತರು ಕಲ್ಪನ ಪತ್ರಿಕೋದ್ಯಮದಿಂದ ದೂರವಿದ್ದು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮದ ಕಡೆ ಗಮನಹರಿಸಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ೨೦೨೫-೨೮ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪತ್ರಿಕೋದ್ಯಮ ಇಂದು ಬದಲಾಗುತ್ತಿದೆ. ಕಾರ್ಯ ಮರೆತ ಪತ್ರಕರ್ತರೆಂದು ಸಂಘವನ್ನು ಲೇವಡಿ ಮಾಡಲಾಗುತ್ತಿತ್ತು. ಆದರೆ ಇದು ಬದಲಾಗಿದೆ. ಇಂತಹ ಲೇವಡಿಯನ್ನು ನಮ್ಮ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬದಲಾಯಿಸಿದ್ದಾರೆ. ಪತ್ರಕರ್ತರು ಇದನ್ನು ಅರಿತು ವಾಸ್ತವತೆಯತ್ತ ಬದಲಾಗಬೇಕಾಗಿದೆ ಎಂದರು.
ಪತ್ರಕರ್ತರಿಗೆ ಸಿಗಬೇಕಾದ ಸವಲತ್ತುಗಳು ಕೂಡ ಬದಲಾಗಬೇಕಾಗಿದೆ. ಹಾಲಿ ಪತ್ರಕರ್ತರು ಸೇರಿದಂತೆ ನಿವೃತ್ತ ಪತ್ರಕರ್ತರು ತುಂಬ ಸಂಕಷ್ಟದಲ್ಲಿದ್ದಾರೆ. ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳು ಇಲ್ಲ. ಅದರಲ್ಲೂ ನಿವೃತ್ತಿ ವೇತನ ಪಡೆಯಲು ನಿಯಮಗಳು ಕಠಿಣವಾಗಿವೆ. ಈ ನಿಯಮ ಬದಲಾಗಬೇಕಾಗಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ದಿಕ್ಸೂಚಿ ಭಾಷಣದಲ್ಲಿ ಹಲವು ಪತ್ರಕರ್ತರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಪತ್ರಕರ್ತರಿಗೆ ಕರೋನಾ ಸಂದರ್ಭದಲ್ಲಿ ೫ ಲಕ್ಷ ರೂ. ನೆರವು ನೀಡಿದ ಕೀರ್ತಿ ಬಿ.ಎಸ್.ವೈ.ಗೆ ಸೇರಬೇಕು. ಪತ್ರಕರ್ತರಿಗೆ ಹಲವು ಯೋಜನೆಗಳನ್ನು ಅವರು ಜಾರಿಗೆ ತಂದರು. ಅದೇ ಪ್ರೀತಿಯನ್ನು ಸಿದ್ದರಾಮಯ್ಯನವರು ಮುಂದುವರೆಸಿ ೪೫೦ಕ್ಕೂ ಹೆಚ್ಚು ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಿದ್ದಾರೆ. ಮಾಸಿಕ ವೇತನವನ್ನು ೧೫ ಸಾವಿರಕ್ಕೆ ಏರಿಸಿದ್ದಾರೆ. ಮಾನದಂಡ ಸರಳೀಕರಣಕ್ಕೆ ರಾಜ್ಯ ಸಂಘ ಸರ್ಕಾರಕ್ಕೆ ಒತ್ತಡ ಏರುತ್ತಿದೆ. ಶಿವಮೊಗ್ಗ ಜಿಲ್ಲಾ ಸಂಘ ರಾಜ್ಯಮಟ್ಟದಲ್ಲೇ ಒತ್ತಮ ಸಂಘವಾಗಿದ್ದು, ಪತ್ರಕರ್ತರಿಗೆ ಗೌರವ ತಂದಿದೆ. ನನಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಶಿವಾನಂದ ತಗಡೂರು ನೇತೃತ್ವದಲ್ಲಿ ಮತ್ತೊಮ್ಮೆ ಸಂಘದ ಶತಮಾನೋತ್ಸವವನ್ನು ಅದ್ಧೂರಿಯಾಗಿ ನಡೆಸಬೇಕು ಎಂಬ ಆಸೆ ಇದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಸಾರ್ವಜನಿಕರ ಪ್ರೀತಿಗಳಿಸಬೇಕು. ತಮ್ಮ ವೃತ್ತಿಗೆ ಶೋಭೆ ತರಬೇಕು. ಸುದ್ಧಿಗಳ ಮಾಡುವಾಗ ಶಬ್ದದ ಬಳಿಕೆಯ ಬಗ್ಗೆ ಎಚ್ಚರವಿರಲಿ, ಸುದ್ಧಿಗಳನ್ನು ಯಾವತ್ತೂ ತಿರಚಿ ಬರೆಯಬಾರದು. ತಮ್ಮ ವೃತ್ತಿ ಗೌರವವನ್ನು, ಘನತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸಂಘ ಪ್ರಯತ್ನಿಸುತ್ತಲೆ ಇದೆ. ಉಚಿತ ಆರೋಗ್ಯ ವಿಮೆ ಇನ್ನೂ ಸಿಗಬೇಕಾಗಿದೆ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬತ್ತಾಗಿದೆ. ಉಚಿತ ಆರೋಗ್ಯ ವಿಮೆ, ಮಾನ್ಯತೆ ಪಡೆದ ಪತ್ರಕರ್ತರಿಗಲ್ಲದೆ ಎಲ್ಲ ಪತ್ರಕರ್ತರಿಗೂ ಸಿಗುವಂತಾಗಬೇಕು ಎಂದ ಅವರು, ನಕಲಿ ಪತ್ರಕರ್ತರನ್ನು ದೂರ ಇಡಬೇಕು ಎಂದರು.
ನಿರ್ಗಮಿತ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ರಾಜಕಾರಣಿಗಳ ಜೊತೆ ಸ್ನೇಹ ಇರಲಿ ಚೇಲಗಳಾಗಬೇಡಿ ಎಂದ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸಂಘ ಹೆಚ್ಚು ಕೆಲಸ ಮಾಡುತ್ತಿದ್ದು, ಈಗ ಒಂದು ಕೋಟಿಗೂ ಹೆಚ್ಚು ನಿಧಿ ಸಂಗ್ರಹವಾಗಿದೆ ಎಂದರು. ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ವೈದ್ಯನಾಥ್ ಮಾತನಾಡಿ, ಕಳೆದ ವರ್ಷಗಳಲ್ಲಿ ಪತ್ರಕರ್ತರ ಸಂಘ ಶಿವಮೊಗ್ಗದಲ್ಲಿ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ. ಒಂದು ಹಂತದಲ್ಲಿ ಸಂಘವೇ ಇಲ್ಲ ಎನ್ನುವಂತಾದಾಗ ಅದನ್ನು ಮತ್ತೆ ಗಟ್ಟಿಯಾಗಿ ನಿಲ್ಲಿಸಿದ್ದೇವೆ. ನನ್ನ ಅಧಿಕಾರಾವಧಿಯಲ್ಲಿ ಕೂಡ ಹೆಚ್ಚು ಹೆಚ್ಚು ಕೆಲಸ ಮಾಡುವೆ. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂಧಿಸುವೆ. ಪ್ರಶಸ್ತಿಗಳನ್ನು ನೀಡುವುದನ್ನು ಮುಂದುವರೆಸಲಾಗುವುದು. ನಗರದ ಆಸ್ಪತ್ರೆಗಳ ಸಹಕಾರದೊಂದಿಗೆ ಪತ್ರಕರ್ತರ ಆರೋಗ್ಯದ ಬಗ್ಗೆ ಕಾಲಕಾಲಕ್ಕೆ ತಪಾಸಣೆ ನಡೆಸಲಾಗುವುದು. ಮತ್ತು ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಗುವುದು ಎಂದರು.
ರಾಜ್ಯ ಚುನಾವಣಾಧಿಕಾರಿಯಾಗಿದ್ದ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಸಂಘದ ಚುನಾವಣೆಯನ್ನು ನ್ಯಾಯ ಬದ್ಧವಾಗಿ ಮಾಡಲಾಗಿದೆ. ಒಟ್ಟು ಒಳಗೊಳ್ಳುವಿಕೆಯನ್ನು ಪತ್ರಕರ್ತರ ಸಂಘ ಮಾಡಬೇಕಾಗಿದೆ. ಇದು ಸಂಕ್ರಮಣ ಕಾಲ ಪತ್ರಕರ್ತರಿಗೆ ಭದ್ರತೆ ಇಲ್ಲ. ಅವರ ಕಲ್ಯಾಣಕ್ಕಾಗಿ ನಮ್ಮ ಸಂಘ ಯಾವತ್ತೂ ಸಿದ್ಧವಾಗಿದೆ ಎಂದರು. ಇದಕ್ಕೂ ಮೊದಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಶಿವಮೂರ್ತಿ ವೃತ್ತದಿಂದ ಪತ್ರಿಕಾ ಭವನದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕಲಾ ತಂಡ ಭಾಗವಹಿಸಿದ್ದು, ಪತ್ರಕರ್ತರು ಸಾಂಪ್ರದಾಯಿಕ ಉಡುಗೆ ತೊಟ್ಟು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಗೊಂಡ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು ಮತ್ತು ಪ್ರಮಾಣ ಪತ್ರ ನೀಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವೈದ್ಯನಾಥ್ ಕಾರ್ಯದರ್ಶಿ ಹಾಲಸ್ವಾಮಿ ಅವರಿಗೆ ನಿಗರ್ಮಿತ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಅರುಣ್ ಅಧಿಕಾರ ಹಸ್ತಾಂತರಿಸಿದರು. ಚುನಾವಣಾಧಿಕಾರಿಗಳಾಗಿದ್ದ ಟಿ.ವಿ.ಶ್ರೀನಿವಾಸ್, ಹಾಸನ ಕೆ.ಯು.ಡಬ್ಲ್ಯೂ.ಜೆ. ಅಧ್ಯಕ್ಷರಾದ ಜೆ.ಆರ್.ಕೆಂಚೆಗೌಡ, ಯಾದಗಿರಿ ಸಂಘದ ಅಧ್ಯಕ್ಷ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಧನಂಜಯ ಸರ್ಜಿ, ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಜವಳಿ ನಿಗಮದ ಅಧ್ಯಕ್ಷ ಚೇತನ್, ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್, ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ್‌ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಎಂ.ಶ್ರೀಕಾಂತ್, ಒಕ್ಕಲಿಗರ ಸಂಘ, ಶಾಶ್ವತಿ ಮಹಿಳಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ, ಕರಾವೇ, ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು, ಸಂಘಟನೆಗಳ ಪ್ರಮುಖರು ಮತ್ತು ಸದಸ್ಯರು ಭಾಗವಹಿಸಿ ಶುಭ ಕೋರಿದರು.
ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ರವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ (ಟೆಲೆಕ್ಸ್), ಜಿಲ್ಲಾ ಚುನಾವಣಾಧಿಕಾರಿಗಳು, ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ್ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಗೌರವಿಸಲಾಯಿತು. ೨೦೨೫-೨೮ರ ಸಾಲಿನ ನಿಯೋಜಿತ ಅಧ್ಯಕ್ಷ ಹೆಚ್.ಯು. ವೈದ್ಯನಾಥ್(ವೈದ್ಯ), ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ಆರ್. ನಂಜುಂಡಪ್ಪ, ಉಪಾಧ್ಯಕ್ಷರಾದ ಕೆಎಸ್ ಹುಚ್ರಾಯಪ್ಪ,ಕೆ ಸತ್ಯನಾರಾಯಣ್, ದೇಶಾದ್ರಿ ಹೊಸ್ಮನಿ, ಕಾರ್ಯದರ್ಶಿ ದೀಪಕ್ ಸಾಗರ್, ಕೆ.ಆರ್, ಸೋಮನಾಥ್, ಖಜಾಂಚಿ ರೋಹಿತ್, ಸಂಘಟನಾ ಕಾರ್ಯದರ್ಶಿಗಳಾದ ಗಾರಾ ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ ಇತರರು ಇದ್ದರು, ಪದಗ್ರಹಣ ಸಮಾರಂಭದಲ್ಲಿ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನೇತಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

