ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಚಿತ್ತ ಸಮಾಜಕ್ಕೊಂದು ಸಂದೇಶಾತ್ಮಕ ಚಿತ್ರ “ಧೂಮಂ”
ಸಿನಿಮಾ ನೋಡುವ ಚಿತ್ತ ಸಮಾಜ ಏನನ್ನು ಬಯಸುತ್ತದೆ, ಬಯಸುವಂತೆ ಈ ದಿನಮಾನದ ಚಿತ್ರಗಳು ನಿರ್ಮಾಣವಾಗುತ್ತಿದಿಯಾ..?! ಅಥವಾ ಬಿಡುಗಡೆಯಾದ ಚಿತ್ರಗಳ ರಿವಿವ್ಸ್ ಗಳಿಗೆ ಒಬ್ಬರಿಗೊಬ್ಬರು ನೂಕು ನುಗ್ಗಲಿನಂತೆ ಮುಂದಡಿಯಾಗಿ ಅಭಿವ್ಯಕ್ತಿಸುವ ಸಿನಿ ಅಭಿರುಚಿಗಳು ಅವರವರ ಇಷ್ಟಾರ್ಥ ಎನ್ನಬಹುದೇ..? ಎಂದು ತಮ್ಮಗಳಲ್ಲಿ ತರ್ಕಿಸುತ್ತಾ ಈ ಟಿಪ್ಪಣಿಯನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ.
ಒಂದು ನ್ಯೂಸ್ ಪತ್ರಿಕೆ ಮುದ್ರಣಗೊಳ್ಳುವ ಹೊತ್ತಿಗೆ ಅದರಿಂದೆ ಯಾವ ಶ್ರಮಗಳಿವೆ, ತಾಂತ್ರಿಕತೆ, ಸುದ್ದಿ ರಚನಾತ್ಮಕತೆ, ಆರ್ಥಿಕ ಕ್ಷಮತೆ, ದಿನದ ಸಮಯ, ವರದಿಗಾರಿಕೆ, ಛಾಯಚಿತ್ರ, ಮುದ್ರಣ, ಹಂಚಿಕೆದಾರಿಕೆ ಇಂತಿವುಗಳ ನಿಭಾಯಿಸುವ ಓರ್ವ ಸಂಪಾದಕನ ವ್ಯಥೆಗಳ ಕತೆಗೆ ಸಂದ ಪ್ರತಿಫಲ ಏನು ಗೊತ್ತೇ..? ಬಹುತೇಕ ಓದುಗ ತೆಗೆದುಕೊಳ್ಳುವ ಸಮಯ ಕೇವಲ ಮೂವತ್ತು ಸೆಕೆಂಡ್ ಒಂದಡೆಯಾದರೆ ಇನ್ನೊಂದೆಡೆ ದಿನಪತ್ರಿಕೆಗಳ ಬೆಲೆ ಪೈಸೆ/ರೂಪಾಯಿ. ಈ ನಡುವೆ ಸಂಪಾದಕನ ಮೇಲೆ ದೋಷಾರೋಪಣೆ, ಇಂತಹ ವಿದ್ಯಾಮಾನಗಳಲ್ಲಿಯೂ ಪತ್ರಿಕಾ ಹಾದಿ ಗಟ್ಟಿಯಾಗಿಯೇ ಇದೆ, ಇಂತಹುದೇ ಸ್ಥಿತಿಯ ಸವಾಲಿನಲ್ಲಿ ಈ ಚಿತ್ರ ನಿರ್ಮಾಣವಿದೆ ಎನ್ನುವುದಕ್ಕೆ ಈ ವಾಸ್ತವವನ್ನು ಉದಾಹರಣೆಯಾಗಿ ತಿಳಿಸಿದ್ದೇನೆ.
ಇನ್ನೂ ಸಿನಿಮಾ ಕಟ್ಟುವ ಚಿತ್ರಕತೆ ಈ ಕಥೆಯನ್ನಾಧರಿಸಿ ನಡೆಸುವ ಜಬರದಸ್ತ್ ಕಸರತ್ತಿನ ಅನಾವರಣಗಳಾದರೆ ಬಹುಷ್ಯಃ ಚಿತ್ರ ಬಿಡುಗಡೆಯಾಗುವ ಮುನ್ನವೇ ಅಥವಾ ನಂತರದ ದಿನವೇ ಚಿತ್ರ ಕುರಿತು ಅತ್ಯಂತ ಕೆಟ್ಟದಾಗಿ, ಅಸಹ್ಯಕರವಾಗಿ, ತಮ್ಮೊಳಗಿನ ಗುರುತರವಾದ ಭಾವಗಳನ್ನು ಏಕಪಕ್ಷೀಯವಾಗಿ ವಾಚಮಗೋಚರವಾಗಿ ತೆಗಳುವುದು, ಅಂತಿಮವಾಗಿ ನಿರ್ಧರಿಸಿ ಅಭಿವ್ಯಕ್ತಿಸುವುದು ತರವಲ್ಲವಾಗಿದೆ, ಏಕೆಂದರೆ ರಿವಿವ್ಸ್ ಎಂದರೆ ಯಾವುದೇ ಕಲಾತಂಡಗಳಿಗೆ, ತಾಂತ್ರಿಕ ಶ್ರಮಗಳಿಗೆ ಅವಮಾನಕರವಾಗಿರಬಾರದು, ಸೆಲಿಬ್ರಿಟಿ ಎನ್ನುವ ವಿಷಮತೆಯಲ್ಲಿ ಓಲೈಸಿ ಬೆಂಬಲಿಸುವುದಕ್ಕೂ ತೆರಳದೆ ಅದೊಂದು ಪೂರಕವಾದ ವಾತಾವರಣವನ್ನು ಸೃಷ್ಠಿಸುವ ಸಾತ್ವಿಕತೆ ರಿವಿವ್ಸ್ ಗಳದ್ದಾಗಿರಬೇಕು ಎನ್ನುವುದು ವಾದವೂ ಹೌದು, ಅಭಿಪ್ರಾಯವೂ ಹೌದು.
ಇಂತಹದೊಂದು ವಿಸ್ತೃತತೆಯಲ್ಲಿ “ಧೂಮಂ” ಎನ್ನುವ ಕುತೂಹಲ ಚಿತ್ರವನ್ನು ಬೆಂಗಳೂರಿನಲ್ಲಿ ನಟ ರಘುರಾಜ್ ಮಲ್ನಾಡ್ ಜೊತೆ ಹೋಗಿ ನೋಡಿದ್ವಿ, ಚಿತ್ರಕತೆಯನ್ನು ಚಿತ್ತ ಸಮಾಜ ಪರಿಪೂರ್ಣತೆಯಲ್ಲಿ ಆಸ್ವಾದಿಸಿಕೊಳ್ಳುವತ್ತ ಮನವರಿಸಬೇಕು, ಏಕೆಂದರೆ ಇದೊಂದು ಬರೀಯು ಹೊಗೆಯಿಂದ ಕೂಡಿದ ಚಿತ್ರವಲ್ಲ, ನಟನೆಯಲ್ಲ, ನಾಗರೀಕ ಸಮಾಜ, ಪ್ರಬುದ್ದಮಾರ್ಗಿಯಾಗಿ ಚಿಂತನೆ ನಡೆಸಬೇಕಾದ ಜರೂರತ್ತುಗಳನ್ನು ಕಟ್ಟಿ ಕೊಟ್ಟಿದೆ ಈ “ಧೂಮಂ” ಚಿತ್ರ.
ಚಿತ್ರದ ತಾರಾಬಳಗದ ಪಾತ್ರಗಳು ನಿಜಕ್ಕೂ ಜೀವದುಂಬಿದೆ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ರೋಶನ್ ಮ್ಯಾಥ್ಯೂ, ವಿನೀತ್, ಅಚ್ಯುತ್ ಕುಮಾರ್, ಅನು ಮೋಹನ್ ಇನ್ನೀತರರ ನಟನೆಗಳು ವೀಕ್ಷಕರನ್ನು ಅಧ್ಯಯನಕ್ಕಿಳಿಸಿ ಅವಲೋಕಿಸುವಂತೆ ಮಾಡುತ್ತದೆ, ಏಕೆಂದರೆ “ನಿಕೋಟಿನ್” ಎನ್ನುವ ಆತಂಕಕಾರಿಯನ್ನು ಸಮಾಜವೆಷ್ಟು ಫ್ಯಾಶನ್ ಆಗಿ, ಅತಿರಂಜನೆಗಾಗಿ ಬಳಸಿಕೊಳ್ಳುತ್ತಿದೆ ಎನ್ನುವುದನ್ನು ಹಾಗೆಯೇ ತೆರೆದಿಟ್ಟಿದೆ. ದಿನದಿಂದ ದಿನಕ್ಕೆ “ಧೂಮಪಾನ” ಎನ್ನುವ ಬಲೆಗಳಿಗೆ ಯುವ ಸಮುದಾಯ ಹೇಗೆಲ್ಲಾ ಬಲಿಯಾಗುತ್ತಿದೆ ಎಂಬುದನ್ನು ಕಣ್ಣಾರೆ ನಾವುಗಳೇ ನಿತ್ಯ ದರ್ಶಿಸುತ್ತೇವೆ, ಅಂತಹದೊಂದು ಸಂದೇಶವನ್ನು ಸಮಾಜಕ್ಕೆ ರವಾನಿಸುವುದರಲ್ಲಿ ಚಿತ್ರತಂಡ ಯಶಸ್ಸು ಸಾಧಿಸಿದೆ.
ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಧೂಮಂ” ಗೆ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಅವಿನಾಶ್ ಎನ್ನುವ ಕಥಾ ಕೇಂದ್ರಬಿಂದು ಪಾತ್ರದಲ್ಲಿ ಕಾಣಿಸಿರುವ ಫಹಾದ್ ಫಾಸಿಲ್ ಸಹಜ ನಟನೆಯಿಂದಲೇ ಗಮನಸೆಳೆದಿದ್ದಾರೆ, ಸಾಮಾನ್ಯವಾಗಿ ಉದ್ಯೋಗವನ್ನು ಬಯಸಿ ಬರುವ ಈ ಪಾತ್ರ ಒಂದು ಸಿಗರೇಟ್ ಕಂಪನಿ “ಲೈಕ್ಸ್” ಮಾರ್ಕೆಂಟಿಂಗ್ ಜವಾಬ್ದಾರಿ ಹೋಂದಿರುತ್ತದೆ,
ಈ ಕಂಪನಿಯ ಸಿಇಓ ಸಿದ್ದು ಯಾನೇ ರೋಶನ್ ಮ್ಯಾಥ್ಯೂ ನಡುವಿನ ದೋಸ್ತಿ, ಮಾರ್ಕೆಟಿಂಗ್ ಮ್ಯಾಜಿಕ್ ನಲ್ಲಿ ಮಿಂದು ಹೋಗುತ್ತದೆ, ಹೀಗೆ ತರಾವರಿ ಟ್ರಿಕ್ಸ್ ಗಳಿಗೆ ನಿಕೋಟಿನ್ ಪ್ರಮಾಣ ಹೆಚ್ಚಾಗಿಸಿ ಅನೇಕರ ಆರೋಗ್ಯಕ್ಕೆ ಹಾನಿಕಾರವಾಗುವ ಇವರ ವಹಿವಾಟು ಕೋಟಿ ಕಂತೆಗಳಲ್ಲಿ ಅಭಿವೃದ್ದಿಯ ಪಥದತ್ತ ಸಾಗುತ್ತದೆ, ಇನ್ನೂ ಹೆಚ್ಚಿನ ಮಾರ್ಕೆಟಿಂಗ್ ಹುಚ್ಚಿನಲ್ಲಿ ಚೀನಾ ದೇಶದಲ್ಲಿ ರದ್ದಾದ ಸೂತ್ರವನ್ನು ಬಳಸಲು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಂಪನಿ ಪ್ರಯತ್ನಗಳಿಗೆ ಮುಖ್ಯಪಾತ್ರಧಾರಿ ಅಡ್ಡಲಾಗುತ್ತಾನೆ ಅಷ್ಟರೊಳಗೆ ಅವನೊಳಗಿನ ಮಾನವೀಯ ಮೌಲ್ಯಗಳು ಪ್ರಶ್ನಿಸುವುದಕ್ಕೆ ಶುರು ಮಾಡುತ್ತದೆ.
ಇಲ್ಲಿ ತಿರುವ ಪಡೆವ ಕಥೆ ಒಂದೊಳ್ಳೆಯ ಸಂದೇಶಾತ್ಮಕತೆಯನ್ನು ವಿಭಿನ್ನ ಶೈಲಿಯಲ್ಲಿ ಜನರಿಗೆ ತಲುಪಿಸಿದೆ ಎನ್ನುವುದು ಒಮ್ಮೆ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಿ ಖಚಿತಪಡಿಸಿಕೊಳ್ಳಬಹುದಾಗಿದೆ. ಮರ್ಡರ್, ಮಾರ್ಕೆಟಿಂಗ್, ಕತೆಯನ್ನು ಪ್ರಸ್ತುತ ಪಡಿಸುವ ಹಂತಗಳು, ತನಿಖೆಗೆ ಬರುವ ಅಚ್ಯತಣ್ಣನ ಪೊಲೀಸ್ ಖದರ್, ಹೇಗೆ ಪೊಲೀಟಿಕಲ್ ಬಾಣಕ್ಕೆ ಬೆಂಡಾಗಿ ಹೋಗುತ್ತದೆ, ಸಿಇಓ ಎನ್ನುವ ಪಾತ್ರಧಾರಿ ಖಳನಟನೇ ಅಥವಾ ಬ್ಯಾಕ್ ರೌಂಡ್ ದನಿಯಲ್ಲಿ ಬರುವ ನಿಗೂಢ ಪಾತ್ರಧಾರಿಯೇ..? ಹೀಗೆಲ್ಲಾ ನಡುವೆ ಇವರ ಮಾರ್ಕೆಟಿಂಗ್ ಸ್ಕಿಲ್ ಗಳಿಂದ ಮಕ್ಕಳಿಗೂ ತಲುಪುವ ಸಿಗರೇಟ್ ಎನ್ನುವ ಧೂಮಂ ನಿಂದ ತಪ್ಪಿಸಬೇಕೆನ್ನುವ ಮುಖ್ಯಪಾತ್ರಧಾರಿಯ ಪ್ರಯತ್ನಗಳೇ ಮುಂದಿನ ಭಾಗಕ್ಕೆ ಮುಂದಡಿಯಾಗಿದೆ.
ಒಟ್ಟಿನಲ್ಲಿ ಸಿಗರೇಟ್ ಎನ್ನುವ ಫ್ಯಾಶನ್ ಹವ್ಯಾಸಗಳು ಹೇಗೆ ಅವರನ್ನೇ ಕೊಲ್ಲುತ್ತದೆ, ಹೀಗಿದ್ದರು ಸರಕಾರಗಳ ಯೋಜನೆಗಳನ್ನು ಸಹಿಸಿಕೊಳ್ಳುವ ಧೂಮಪಾನ ಹಾನಿಕಾರ ಎನ್ನುವ ಜಾಹಿರಾತುಗಳ ಕಟು ಸತ್ಯಗಳು ನಾಗರೀಕ ಸಮಾಜವನ್ನು ಬಡಿದೆಬ್ಬಿಸುವಂತೆ ಮಾಡಿದೆ ಈ “ಧೂಮಂ” ಸಿನಿಮಾ ನೀವು ಕೂಡ ಒಮ್ಮೆ ನೋಡಿ ಚಿತ್ರದ ಜೀವೋನ್ಮುಖಿಗೆ ಹಾರೈಸಿ.
-ಗಾರಾ.ಶ್ರೀನಿವಾಸ್

