I ಚಲನಚಿತ್ರ ಪೋಷಕ ಕಲಾವಿದರ I ಸಂಘದ ಚುನಾವಣೆಗೆ ನ್ಯಾಯಾಲಯದ ತಡೆ I
ಬೆಂಗಳೂರು, : ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದಲ್ಲಿ ಕಳೆದ ಮೂರು ವರ್ಷಗಳಿಂದ ಮುಂದುವರಿದಿರುವ ವಿವಾದಕ್ಕೆ ಸಂಬಂಧಿಸಿದಂತೆ, ಸಂಘದ ಚುನಾವಣೆಗೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಸಂಘದ ಅಧ್ಯಕ್ಷರಾಗಿ ಕಾನೂನುಬದ್ಧವಾಗಿ ಆಯ್ಕೆಯಾಗಿದ್ದ ಪದ್ಮಿನಿ ನಂದ ಅವರ ಸಂಘಕ್ಕೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ಮಾನ್ಯತೆ ನೀಡಿತ್ತು. ಆದರೆ, ಹಿಂದಿನ ಚುನಾವಣೆಯಲ್ಲಿ ಸೋತ ಮಾಜಿ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಕಾರ್ಯದರ್ಶಿ ನವನೀತಂ ಅವರ ಬಳಗವು, ಡಿಂಗ್ರಿ ನಾಗರಾಜ್ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಘೋಷಿಸಿ, ಉಳಿದ ಹುದ್ದೆಗಳಿಗಾಗಿ ಮಾರ್ಚ್ ೨೧, ೨೦೨೬ರಂದು ಚುನಾವಣೆ ನಡೆಸಲು ಪ್ರಕಟಿಸಿತ್ತು.
ಈ ಕ್ರಮವನ್ನು ಪ್ರಶ್ನಿಸಿ, ಚುನಾವಣೆಯು ಕಾನೂನುಬಾಹಿರವಾಗಿದೆ ಎಂದು ವಾದಿಸಿ, ಹಾಗೂ ಹಿಂದಿನ ಅವಧಿಯಲ್ಲಿ ನಡೆದಿದ್ದಂತೆ ಆರೋಪಿಸಲಾದ ಹಣಕಾಸಿನ ಅವ್ಯವಹಾರಗಳ ಕುರಿತು ಗಮನ ಸೆಳೆದು, ಪದ್ಮಿನಿ ನಂದ ಅವರ ಬಳಗ ನ್ಯಾಯಾಲಯದ ಮೊರೆ ಹೋಗಿತ್ತು.ಈ ಅರ್ಜಿಯನ್ನು ವಿಚಾರಿಸಿದ ಸಿಟಿ ಸಿವಿಲ್ ಕೋರ್ಟ್ (ಹಾಲ್ ನಂ. ೬೦) ನ್ಯಾಯಾಲಯವು, ಪ್ರತಿವಾದಿ ಸಂಖ್ಯೆ ೨ ಅವರಿಗೆ ಮಾರ್ಚ್ ೨೧, ೨೦೨೬ ಅಥವಾ ಯಾವುದೇ ಇತರ ದಿನಾಂಕದಲ್ಲಿ ಚುನಾವಣೆ ನಡೆಸದಂತೆ ತಾತ್ಕಾಲಿಕ ತಡೆ ಆದೇಶ ನೀಡಿದೆ.
ಇದಲ್ಲದೆ, ಸಾಮಾನ್ಯ ಸಭೆಯ ನೆಪದಲ್ಲಿ ಯಾರಾದರೂ ಚುನಾವಣೆ ನಡೆಸಲು ಮುಂದಾದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

